Saturday, 23rd November 2024

Nitin Gadkari: ಸ್ವಪಕ್ಷ ನಾಯಕರ ವಿರುದ್ಧ ಗಡ್ಕರಿ ಮತ್ತೆ ಅಸಮಾಧಾನ; ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಗೈರು

Nitin Gadkari

ನಾಗ್ಪುರ: ಲೋಕಸಭೆ ಚುನಾವಣೆಗೂ ಮುನ್ನ ಮತ್ತು ಫಲಿತಾಂಶದ ಬಳಿಕ ತಮಗೆ ಅನೇಕ ಬಾರಿ ಪ್ರಧಾನಮಂತ್ರಿ ಆಗುವ ಆಫರ್‌ ಬಂದಿತ್ತು ಎಂದು ಹೇಳುವ ಮೂಲಕ ಬಾಂಬ್‌ ಸಿಡಿಸಿದ್ದ ಕೇಂದ್ರ ಸಚಿವ ನಿತಿನ್‌ ಗಡ್ಕರಿ(Nitin Gadkari) ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಆ ಮೂಲಕ ಮತ್ತೆ ಸ್ವಪಕ್ಷ ನಾಯಕರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಪೊಹರಾದೇವಿಯಲ್ಲಿರುವ ಜಗದಂಬಾ ಮಾತಾ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ ಮೋದಿ, ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರು ಸಂತ ಸೇವಾಲಾಲ್ ಮಹಾರಾಜ್ ಮತ್ತು ಸಂತ ರಾಮರಾವ್ ಮಹಾರಾಜ್ ಅವರ ಸಮಾಧಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಪೋಹರಾದೇವಿಯಲ್ಲಿ ಗೌರವ ಸಲ್ಲಿಸಿದರು.

ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ ಬಾವಾಂಕುಲೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕರು ಶನಿವಾರ ಪೊಹರಾದೇವಿಯಲ್ಲಿ ಉಪಸ್ಥಿತರಿದ್ದರೆ, ಗಡ್ಕರಿ ಅವರು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯಲ್ಲಿ ನಿರತರಾಗಿದ್ದರು. ಬಳಿಕ ಅವರು ನಾಗ್ಪುರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು. ಆ ಮೂಲಕ ಪ್ರಧಾನಿ ಮೋದಿ ಭೇಟಿ ವೇಳೆ ಶಿಷ್ಟಾಚಾರವನ್ನೂ ಲೆಕ್ಕಿಸದೇ ಗೈರಾಗುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಗಡ್ಕರಿ ಅವರು 2014 ರಿಂದ ನಾಗ್ಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು ವಿದರ್ಭದ ಹಿರಿಯ ಬಿಜೆಪಿ ನಾಯಕರಾಗಿದ್ದಾರೆ. ಮಾಜಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರೂ ಆಗಿರುವ ಅವರು ಕಳೆದ ತಿಂಗಳು ಶಿಂಧೆ ಮತ್ತು ಫಡ್ನವಿಸ್ ಅವರ ಸಮ್ಮುಖದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮಹಿಳಾ ಸ್ಟಾರ್ಟ್‌ಅಪ್ ಅನ್ನು ಪ್ರಾರಂಭಿಸಿದಾಗ ಮೋದಿಯವರ ವಾರ್ಧಾ ಸಭೆಯಿಂದ ಕಾಣೆಯಾಗಿದ್ದರು. ಸೆಪ್ಟೆಂಬರ್ 24 ರಂದು ನಾಗ್ಪುರದಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಭೆಯನ್ನು ಬಿಜೆಪಿಯ ಹಿರಿಯ ನಾಯಕರು ಬಿಟ್ಟುಬಿಟ್ಟರು, ನಂತರ ಅವರು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದರು.

ಹಿರಿಯ ನಾಯಕರಿಂದ ಗಡ್ಕರಿ ಅಂತರ

ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಹಿರಿಯ ನಾಯಕರ ಸಭೆಗಳಿಗೆ ಗೈರಾಗುವ ಮೂಲಕ ಗಡ್ಕರಿ ಅವರು ಅಂತರ ಕಾಯ್ದುಕೊಂಡು ಬರುತ್ತಿದ್ದಾರೆ. ಅಷ್ಟೇ ಅಲ್ಲದೇ ಪಕ್ಷದ ನಾಯಕರು ಮತ್ತು ಬಿಜೆಪಿ ನೇತೃತ್ವದ ಸರ್ಕಾರವನ್ನು ಗುರಿಯಾಗಿಸುವ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಭಾರೀ ಸುದ್ದಿ ಮಾಡುತ್ತಿದ್ದಾರೆ. ನಿನ್ನೆ ನಡೆದ ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ ಪ್ರಧಾನಿ ಮೋದಿಯವರ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ. ಆತ್ಮ ನಿರ್ಭರ್‌ ಭಾರತ್‌, ಆರ್ಥಿಕ ಪ್ರಗತಿ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ದೊಡ್ಡ ದೊಡ್ಡದಾಗಿ ಮಾತನಾಡುತ್ತಾರೆ. ಅದಕ್ಕೂ ಮುನ್ನ ನಾವು ನಮ್ಮೊಳಗೆ ಕೆಲವೊಂದು ಬದಲಾವಣೆಗಳನ್ನು ತರಬೇಕಿದೆ ಎಂದಿ ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Nitin Gadkari ಪ್ರತಿಪಕ್ಷ ನಾಯಕರಿಂದ ಹಲವು ಬಾರಿ ಪ್ರಧಾನಿಯಾಗುವ ಆಫರ್‌ ಬಂದಿತ್ತು- ಮತ್ತೆ ಬಾಂಬ್‌ ಸಿಡಿಸಿದ ಗಡ್ಕರಿ