Friday, 22nd November 2024

SBI Recruitment 2024: ಎಸ್‌ಬಿಐಯಿಂದ ಶೀಘ್ರದಲ್ಲೇ 10,000 ಹುದ್ದೆಗಳ ಭರ್ತಿ

SBI Recruitment 2024

ನವದೆಹಲಿ: ದೇಶದ ಅತಿ ದೊಡ್ಡ ಸರಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್‌ ಬ್ಯಾಂಕ್ (State Bank of India) ತನ್ನ ಸಾಮಾನ್ಯ ಬ್ಯಾಂಕಿಂಗ್ ಅಗತ್ಯಗಳನ್ನು ಪೂರೈಸಲು ಮತ್ತು ತನ್ನ ತಾಂತ್ರಿಕ ಸಾಮರ್ಥ್ಯಗಳನ್ನು ಹೆಚ್ಚಿಸಲು ಈ ಹಣಕಾಸು ವರ್ಷದಲ್ಲಿ ಸುಮಾರು 10,000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ (SBI Recruitment 2024).

ತಡೆರಹಿತ ಗ್ರಾಹಕ ಸೇವೆಯನ್ನು ಖಚಿತಪಡಿಸಿಕೊಳ್ಳಲು, ಡಿಜಿಟಲ್‌ ಮತ್ತು ನೆಟ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಸುಧಾರಿಸಲು ಬ್ಯಾಂಕ್ ತಂತ್ರಜ್ಞಾನದಲ್ಲಿ ಗಣನೀಯ ಹೂಡಿಕೆ ಮಾಡಲೂ ಎಸ್‌ಬಿಐ ಮುಂದಾಗಿದೆ.

“ನಾವು ತಂತ್ರಜ್ಞಾನ ಮತ್ತು ಸಾಮಾನ್ಯ ಬ್ಯಾಂಕಿಂಗ್‌ನ ಕಾರ್ಯಪಡೆಯನ್ನು ಬಲಪಡಿಸುತ್ತಿದ್ದೇವೆ. ಈಗಾಗಲೇ 1,500 ತಂತ್ರಜ್ಞರ ನೇಮಕಾತಿಯನ್ನು ಘೋಷಿಸಿದ್ದೇವೆ ” ಎಂದು ಎಸ್‌ಬಿಐ ಅಧ್ಯಕ್ಷ ಚಲ್ಲ ಶ್ರೀನಿವಾಸಲು ಸೆಟ್ಟಿ (C.S. Setty) ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. “ನಮ್ಮ ತಂತ್ರಜ್ಞಾನ ನೇಮಕಾತಿಯು ಡೇಟಾ ಸೈಂಟಿಸ್ಟ್‌, ಡೇಟಾ ಆರ್ಕಿಟೆಕ್ಟ್ಸ್‌, ನೆಟ್‌ವರ್ಕ್‌ ಆಪರೇಟರ್‌ಗಳನ್ನೂ ಒಳಗೊಂಡಿದೆ. ತಂತ್ರಜ್ಞಾನದ ವಿವಿಧ ಆಯಾಮಗಳಲ್ಲಿ ನೇಮಕಾತಿ ನಡೆಯಲಿದೆ. ಒಟ್ಟಿನಲ್ಲಿ ಈ ವರ್ಷ ಸುಮಾರು 8,000ರಿಂದ 10,000 ಹುದ್ದೆಗಳ ನೇಮಕಾತಿ ನಡೆಯಲಿದೆʼʼ ಎಂದು ಹೇಳಿದ್ದಾರೆ.

ಈಗಿನ ಉದ್ಯೋಗಿಗಳ ಸಂಖ್ಯೆ

2024ರ ಮಾರ್ಚ್‌ ವೇಳೆಗೆ ಎಸ್‌ಬಿಐಯಲ್ಲಿದ್ದ ಒಟ್ಟು ಉದ್ಯೋಗಿಗಳ ಸಂಖ್ಯೆ 2,32,296. ಈ ಪೈಕಿ 1,10,116 ಮಂದಿ ಅಧಿಕಾರಿಗಳು. ಗ್ರಾಹಕರ ಉದಯೋನ್ಮುಖ ಅಗತ್ಯಗಳನ್ನು ಪೂರೈಸಲು ಬ್ಯಾಂಕ್ ಅಸ್ತಿತ್ವದಲ್ಲಿರುವ ಉದ್ಯೋಗಿಗಳ ಕೌಶಲ್ಯವನ್ನು ಹೆಚ್ಚಿಸುತ್ತದೆ ಎಂದು ಸೆಟ್ಟಿ ತಿಳಿಸಿದ್ದಾರೆ. “ಗ್ರಾಹಕರ ನಿರೀಕ್ಷೆಗಳು ಬದಲಾಗುತ್ತಿದೆ. ತಂತ್ರಜ್ಞಾನ ಬದಲಾಗುತ್ತಿದೆ. ಡಿಜಿಟಲೀಕರಣವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗಿದೆ. ಜತೆಗೆ ನಾವು ಎಲ್ಲ ಹಂತಗಳಲ್ಲಿ ನಮ್ಮ ಉದ್ಯೋಗಿಗಳ ಕೌಶಲ್ಯ ಹೆಚ್ಚಿಸಲು ಶ್ರಮಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ʼʼನೆಟ್‌ವರ್ಕ್‌ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶಾದ್ಯಂತ 600 ಶಾಖೆಗಳನ್ನು ತೆರೆಯಲು ಎಸ್‌ಬಿಐ ಚಿಂತನೆ ನಡೆಸುತ್ತಿದೆ. 2024ರ ಮಾರ್ಚ್ ಹೊತ್ತಿಗೆ ಎಸ್‌ಬಿಐ ದೇಶಾದ್ಯಂತ 22,542 ಶಾಖೆಗಳನ್ನು ಹೊಂದಿದೆʼʼ ಎಂದಿದ್ದಾರೆ. ʼʼಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ಶಾಖೆ ವಿಸ್ತರಿಸಲು ಯೋಜನೆ ರೂಪಿಸಿದ್ದೇವೆ. ಈ ವರ್ಷ ದೇಶಾದ್ಯಂತ ಸುಮಾರು 600 ಬ್ರ್ಯಾಂಚ್‌ಗಳನ್ನು ತೆರೆಯಲು ಚಿಂತನೆ ನಡೆಸಿದ್ದೇವೆʼʼ ಎಂದು ಸೆಟ್ಟಿ ವಿವರಿಸಿದ್ದಾರೆ.

ವಿವಿಧ ಶಾಖೆಯ ಹೊರತಾಗಿ ಎಸ್‌ಬಿಐ ತನ್ನ ಗ್ರಾಹಕರಿಗೆ 65,000 ಎಟಿಎಂ ಮತ್ತು 85,000 ಬ್ಯುಸಿನೆಸ್‌ ಕರೆಸ್ಪಾಂಡೆಂಟ್‌ ಮೂಲಕ ಸೇವೆ ನೀಡುತ್ತಿದೆ. “ನಾವು ಸುಮಾರು 50 ಕೋಟಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದ್ದೇವೆ ಮತ್ತು ನಾವು ಪ್ರತಿಯೊಬ್ಬ ಭಾರತೀಯನ ಬ್ಯಾಂಕ್‌ ಎಂದು ಹೇಳಲು ಹೆಮ್ಮೆ ಪಡುತ್ತೇವೆ. ನಾವು ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಶಾಖೆಗಳನ್ನು ಹೊಂದಿದ್ದೇವೆ. ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದೇ ನಮ್ಮ ಮೊದಲ ಆದ್ಯತೆʼʼ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ಎಸ್‌ಬಿಐ ಸುಮಾರು 137 ಬ್ರ್ಯಾಂಚ್‌ಗಳನ್ನು ತೆರೆದಿದೆ. ಇದು 59 ಗ್ರಾಮೀಣ ಶಾಖೆಗಳನ್ನೂಒಳಗೊಂಡಿದೆ.

ಈ ಸುದ್ದಿಯನ್ನೂ ಓದಿ: PMs Internship Scheme: ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ ಜಾರಿ; ವರ್ಷಕ್ಕೆ 60,000 ರೂ. ಪಡೆಯುವ ಅವಕಾಶ!