Sunday, 6th October 2024

Dodda Ganesh: ನನ್ನ ಕುರಿತು ಸತ್ಯವನ್ನೇ ತಿಳಿಸಿ; ಮಾಧ್ಯಮಗಳಿಗೆ ದೊಡ್ಡ ಗಣೇಶ್ ಮನವಿ

Dodda Ganesh

ಬೆಂಗಳೂರು: ಕೀನ್ಯಾ ರಾಷ್ಟ್ರೀಯ ಕ್ರಿಕೆಟ್‌(Cricket Kenya) ತಂಡದ ಪ್ರಧಾನ ಕೋಚ್‌(kenya cricket coach) ಆಗಿ ಆಯ್ಕೆಯಾಗಿದ್ದ ಮಾಜಿ ವೇಗಿ, ಕನ್ನಡಿಗ ದೊಡ್ಡ ಗಣೇಶ್‌(Dodda Ganesh) ಅವರನ್ನು ಕೀನ್ಯಾ ಕ್ರಿಕೆಟ್‌ ಮಂಡಳಿ ಆಯ್ಕೆಯಾದ ಒಂದೇ ತಿಂಗಳಲ್ಲಿ ವಜಾಗೊಳಿಸಿದೆ ಎಂದು ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಇದೀಗ ಈ ವಿಚಾರವಾಗಿ ದೊಡ್ಡ ಗಣೇಶ್ ಸುದೀರ್ಘ ಟ್ವೀಟ್‌ ಮೂಲಕ ತನ್ನ ವಿಚಾರದಲ್ಲಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ದೊಡ್ಡ ಗಣೇಶ್. ಭಾರತ ಟೆಸ್ಟ್ ತಂಡದ ಮಾಜಿ ಆಟಗಾರ. ಇತ್ತೀಚಿಗಷ್ಟೆ ಕೆಲ ಮಾಧ್ಯಮಗಳು ನನ್ನ ಬಗ್ಗೆ ಏನೇನೋ ಸುದ್ದಿ ಪ್ರಸಾರ ಮಾಡುತ್ತಿವೆ. ದಯವಿಟ್ಟು ಸತ್ಯಾಂಶವನ್ನ ತಿಳಿದುಕೊಂಡು, ಪ್ರಸಾರ ಮಾಡಿ.

ಕಳೆದ ಕೆಲ ದಿನಗಳ ಹಿಂದೆ, ಕೀನ್ಯಾ ನ್ಯಾಷನಲ್ ಟೀಮ್ ಕೋಚ್ ಆಗಿ, ನನ್ನನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕೆಲ ಕಾರಣಗಳಿಂದ ನಾನು, ಕೀನ್ಯಾ ತಂಡದ ಕೋಚ್ ಹುದ್ದೆಯಿಂದ ಕೆಳಗಿಳಿಯಬೇಕಾಯಿತು. ಕೀನ್ಯಾ ಕ್ರಿಕೆಟ್ ಮಂಡಳಿಯಲ್ಲಿನ ಎರಡು ಗುಂಪುಗಳ ನಡುವಿನ ಮನಸ್ಥಾಪವೇ, ಇದಕ್ಕೆಲ್ಲಾ ಕಾರಣವಾಗಿದೆ. ಆದರೆ, ಒಬ್ಬ ಭಾರತ ತಂಡದ ಮಾಜಿ ಆಟಗಾರನಾಗಿ, ನನಗೆ ಸಿಗಬೇಕಾದ ಗೌರವ ಇಲ್ಲಿ ಸಿಗುತ್ತಿದೆ. ನನ್ನನ್ನ ಯಾರೂ ವಜಾ ಮಾಡಲಿಲ್ಲ. ಹೀಗಾಗಿ ವಜಾ ಅನ್ನೋ ಪದವನ್ನ ದಯವಿಟ್ಟು ಬಳಸಬೇಡಿ. ಕೀನ್ಯಾ ಕ್ರಿಕೆಟ್ ಮಂಡಳಿ, ಕೆಲ ದಿನಗಳ ಕಾಲ ಕಾಲಾವಾಕಾಶ ಕೋರಿ, ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಹಾಗಾಗಿ ನಾನು ಇನ್ನೂ ಕೀನ್ಯಾದ ನೈರೋಬಿಯಲ್ಲೇ, ಉಳಿದುಕೊಂಡಿದ್ದೇನೆ.

ನೋಡೋಣ, ಕೀನ್ಯಾ ಕ್ರಿಕೆಟ್ ಮಂಡಳಿ ಏನು ನಿರ್ಧಾರ ತೆಗೆದುಕೊಳ್ಳುತ್ತೆ ಅಂತ..! ಅವರು ಏನೇ ನಿರ್ಧಾರ ತೆಗೆದುಕೊಂಡರೂ, ನನಗೆ ಖುಷಿ. ಅವರು ಮನವಿ ಮಾಡಿಋುವ ಕಾರಣ ನಾನು ಇನ್ನೂ ಇಲ್ಲೇ ಇದ್ದೇನೆ. ಹಾಗಾಗಿ ಮಾಧ್ಯಮಗಳಿಗೆ ನಾನು ಹೇಳೋದು ಇಷ್ಟೆ.! ಸತ್ಯವನ್ನ, ಇರೋ ವಿಚಾರವನ್ನ ಜನರಿಗೆ ತಿಳಿಸಿ.. ಇದು ನಿಮ್ಮೆಲ್ಲರಿಗೂ ನನ್ನ ಕಳಕಳಿಯ ಮನವಿ..! ಎಂದು ದೊಡ್ಡ ಗಣೇಶ್‌ ಬರೆದುಕೊಂಡಿದ್ದಾರೆ.

ಇದನ್ನೂ ಓದಿ IPL Auction: ಐಪಿಎಲ್‌ ಮೆಗಾ ಹರಾಜು ಪ್ರಕ್ರಿಯೆ ತಾಣ ಅಂತಿಮ

ಕೆಲವು ದಿನಗಳ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶದಲ್ಲಿಯೂ ತನ್ನನ್ನು ವಜಾ ಮಾಡಿಲ್ಲ ಎಂದು ಹೇಳಿದ್ದರು. ಆದರೂ ಕೂಡ ಅವರನ್ನು ವಜಾ ಮಾಡಲಾಗಿದೆ ಎಂದು ವರದಿಯಾಗುತ್ತಲೇ ಇತ್ತು. ಇದೀಗ ಎಲ್ಲ ಮಾಧ್ಯಮಗಳಿಗೂ ತಿಳಿಯುವಂತೆ ಅವರು ಟ್ವೀಟ್‌ ಮೂಲಕ ಸ್ಪಷ್ಟನೆ ಜತೆಗೆ ಸುಳ್ಳು ಸುದ್ದಿ ಹರಡದಂತೆ ಮನವಿ ಮಾಡಿದ್ದಾರೆ. ಆಗಸ್ಟ್​ 13ರಂದು ದೊಡ್ಡ ಗಣೇಶ್ ಕೀನ್ಯಾ ತಂಡದ ಮುಖ್ಯ ಕೋಚ್​ ಆಗಿ ನೇಮಕಗೊಂಡಿದ್ದರು.

50 ವರ್ಷದ ದೊಡ್ಡ ಗಣೇಶ್ ನೇರ ನುಡಿಗಳಿಂದಲೇ ಹೆಸರುವಾಸಿ. 1997ರಲ್ಲಿ ಭಾರತ ಪರ 4 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 104 ಪಂದ್ಯಗಳಿಂದ 365 ವಿಕೆಟ್​ ಪಡೆದಿದ್ದಾರೆ. ಭಾರತ ತಂಡದ ಪರ 6 ವಿಕೆಟ್​ ಕಿತ್ತಿದ್ದಾರೆ. ಲಿಸ್ಟ್​ ‘ಎ’ ಕ್ರಿಕೆಟ್​ನಲ್ಲಿ 89 ಪಂದ್ಯಗಳನ್ನಾಡಿ 128 ವಿಕೆಟ್​ ಪಡೆದಿದ್ದಾರೆ. ಬ್ಯಾಟಿಂಗ್​ನಲ್ಲಿಯೂ ಉತ್ತಮ ದಾಖಲೆ ಹೊಂದಿರುವ ಇವರು ಲಿಸ್ಟ್​ ‘ಎ’ ಮತ್ತು ಪ್ರಥಮ ದರ್ಜೆ ಕ್ರಿಕೆಟ್​ ಸೇರಿ ಒಟ್ಟು 2,548 ರನ್​ ಬಾರಿಸಿದ್ದಾರೆ. 6 ಬಾರಿ 10 ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ. 90ರ ದಶಕದಲ್ಲಿ ಭಾರತ ಮತ್ತು ಕರ್ನಾಟಕ ರಣಜಿ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದ ಹೆಗ್ಗಳಿಕೆ ಇವರದ್ದು.