Sunday, 6th October 2024

INDW vs PAKW: ಪಾಕಿಸ್ತಾನವನ್ನು ಬಗ್ಗುಬಡಿದು ಗೆಲುವಿನ ಖಾತೆ ತೆರೆದ ಭಾರತ

INDW vs PAKW

ದುಬೈ: ಸರ್ವಾಂಗೀಣ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡ(INDW vs PAKW) ಟಿ20 ವಿಶ್ವಕಪ್‌ ಟೂರ್ನಿಯಲ್ಲಿ(Women’s T20 WC 2024) ಗೆಲುವಿನ ಖಾತೆ ತೆರೆದಿದೆ. ಬದ್ಧ ಎದುರಾಳಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಬಗ್ಗು ಬಡಿದಿದೆ. ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಹೀನಾಯ ಸೋಲು ಕಂಡಿದ್ದ ಹರ್ಮನ್‌ಪ್ರೀತ್‌ ಕೌರ್‌ ಬಳಗ, ಈ ಪಂದ್ಯದಲ್ಲಿ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗಗಳೆರಡರಲ್ಲೂಅಮೋಘ ಪ್ರದರ್ಶನ ನೀಡಿತು. ಗೆಲುವಿನೊಂದಿಗೆ ಸೆಮಿ ಫೈನಲ್‌ಗೇರುವ ಕನಸನ್ನು ಭಾರತ ಜೀವಂತವಾಗಿರಿಸಿಕೊಂಡಿದೆ.

ಭಾನುವಾರ ದುಬೈ ಇಂಟರ್‌ನ್ಯಾಶನಲ್‌ ಸ್ಟೇಡಿಯಂನಲ್ಲಿ ನಡೆದ ದಿನದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ತಾನ 8 ವಿಕೆಟ್‌ಗೆ 105 ರನ್‌ ಬಾರಿಸಿದರೆ, ಭಾರತ18.5  ಓವರ್‌ಗಳಲ್ಲಿ4 ವಿಕೆಟಿಗೆ 106 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು. ಪಾಕ್‌ ತಂಡಕ್ಕೆ ಎದುರಾದ ಮೊದಲ ಸೋಲು ಇದಾಗಿದೆ. ಉದ್ಘಾಟನ ಪಂದ್ಯದಲ್ಲಿ ಏಷ್ಯಾಕಪ್‌ ಚಾಂಪಿಯನ್‌ ಶ್ರೀಲಂಕಾಗೆ ಸೋಲುಣಿಸಿ ಶುಭಾರಂಭ ಮಾಡಿತ್ತು.

ಚೇಸಿಂಗ್‌ ವೇಳೆ ಭಾರತ ಕೂಡ ಆರಂಭಿಕ ಆಘಾತಕ್ಕೆ ಸಿಲುಕಿತು. ಮಂದಗತಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಮಂಧಾನ 16 ಎಸೆತಗಳಿಂದ 7ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡರು. ಡ್ಯಾಶಿಂಗ್‌ ಬ್ಯಾಟರ್‌ ಶಫಾಲಿ ವರ್ಮ ಈ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬ್ಯಾಟ್‌ ಬೀಸಿದರು. ಹೀಗಾಗಿ ಪವರ್‌ ಪ್ಲೇಯಲ್ಲಿ ಕೇವಲ 25 ರನ್‌ ಒಟ್ಟುಗೂಡಿತು. ಪವರ್‌ ಪ್ಲೇ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಲು ಮುಂದಾಗಿ ಶಫಾಲಿ ಕೂಡ ವಿಕೆಟ್‌ ಕೈಚೆಲ್ಲಿದರು. ಅವರ ಗಳಿಕೆ 32 ರನ್‌ (35 ಎಸೆತ, 3 ಬೌಂಡರಿ). ಜೆಮಿಮಾ 23 ರನ್‌ ಗಳಿಸಿದರು. ಈ ವಿಕೆಟ್‌ ಪತನದ ಬಳಿಕ ಆಡಲಿಳಿದ ರಿಚಾ ಘೋಷ್‌ ಮೊದಲ ಎಸೆತದಲ್ಲೇ ಶೂನ್ಯ ಸುತ್ತಿ ವಾಪಸಾದರು. ಗೆಲುವಿಗೆ 2 ರನ್‌ ಬೇಕಿದ್ದಾಗ ಹರ್ಮನ್‌ಪ್ರೀತ್‌ ಕೌರ್‌(29) ಕತ್ತು ನೋವಿನಿಂದ ರಿಟರ್ಡ್‌ ಹರ್ಟ್‌ ಆಗಿ ಮೈದಾನ ತೊರೆದರು. ಅಂತಿವಾಗಿ ದೀಪ್ತಿ ಶರ್ಮಾ ಅಜೇಯ 7 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಾಕಿಸ್ತಾನ ಪರ ನಾಯಕಿ ಫಾತಿಮಾ ಸನಾ 2 ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನಕ್ಕೆ ಯೋಜನೆಯಂತೆ ಆಡಲು ಸಾಧ್ಯವಾಗಲಿಲ್ಲ. ಭಾರತದ ಬಿಗಿಯಾದ ಬೌಲಿಂಗ್‌ ದಾಳಿಗೆ ರನ್‌ ಗಳಿಸಲು ಪರದಾಡಿತು. ಕನ್ನಡತಿ ಶ್ರೇಯಾಂಕಾ ಪಾಟೀಲ್‌(12ಕ್ಕೆ 2), ಅರುಂಧತಿ ರೆಡ್ಡಿ(19 ಕ್ಕೆ 3) ಯಶಸ್ವಿ ಬೌಲಿಂಗ್‌ ನಡೆಸಿ ಭರ್ಜರಿ ಕಡಿವಾಣ ಹಾಕಿದರು. ಉಳಿದಂತೆ ದೀಪ್ತಿ ಶರ್ಮ, ರೇಣುಕಾ ಸಿಂಗ್‌ ಠಾಕೂರ್‌ ಮತ್ತು ಆಶಾ ಶೋಭನಾ ಸೇರಿಕೊಂಡು ತಲಾ ಒಂದೊಂದು ವಿಕೆಟ್‌ ಕಿತ್ತರು.

ಇದನ್ನೂ ಓದಿ Dodda Ganesh: ನನ್ನ ಕುರಿತು ಸತ್ಯವನ್ನೇ ತಿಳಿಸಿ; ಮಾಧ್ಯಮಗಳಿಗೆ ದೊಡ್ಡ ಗಣೇಶ್ ಮನವಿ

ಪಂದ್ಯದ ಮೊದಲ ಓವರ್‌ನಲ್ಲಿಯೇ ರೇಣುಕಾ ಸಿಂಗ್‌ ಪಾಕಿಸ್ತಾನ ಕುಸಿತಕ್ಕೆ ನಾಂದಿ ಹಾಡಿದರು. ತಂಡದ ಮೊತ್ತ ಒಂದು ರನ್‌ ಗಳಿಸಿದ್ದ ವೇಳೆ ಗುಲ್ ಫಿರೋಜಾ(0) ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. ಇದರ ಬೆನ್ನಲ್ಲೇ ಸಿದ್ರಾ ಅಮೀನ್(8) ಮತ್ತು ಒಮೈಮಾ ಸೊಹೈಲ್(3) ಕೂಡ ಅಗ್ಗಕ್ಕೆ ವಿಕೆಟ್‌ ಕಳೆದುಕೊಂಡರು. ಈ ಆಘಾತದಿಂದ ಪಾಕ್‌ ಚೇತರಿಸಿಕೊಳ್ಳಲೇ ಇಲ್ಲ. 28 ರನ್‌ ಗಳಿಸಿದ ಮಾಜಿ ನಾಯಕಿ ನಿದಾ ದಾರ್‌ ಅವರದೇ ಹೆಚ್ಚಿನ ಗಳಿಕೆ. ಆರಂಭಿಕ ಆಟಗಾರ್ತಿ ಮುನೀಬಾ ಅಲಿ(17) ಕೊಡುಗೆ ಸಲ್ಲಿಸಿದರು. ಹೀಗಾಗಿ ತಂಡದ ಮೊತ್ತ ನೂರರ ಗಡಿ ದಾಟಿತು. ಪಾಕ್‌ ಸರದಿಯಲ್ಲಿ ಎರಡಂಕೆಯ ಸ್ಕೋರ್‌ ದಾಖಲಿಸಿದ ಮತ್ತಿಬ್ಬರು ಆಟಗಾರ್ತಿಯರೆಂದರೆ ನಾಯಕಿ ಫಾತಿಮಾ ಸನಾ(13) ಮತ್ತು ಸೈಯದಾ ಅರೂಬ್ ಶಾ(14*). ಇಬ್ಬರು ರನ್‌ ಖಾತೆ ತೆರೆಯಲು ವಿಫ‌ಲರಾದರು.