Friday, 22nd November 2024

IAS Transfers: ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೇರಿದಂತೆ ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ

vidhana_soudha

ಬೆಂಗಳೂರು: ರಾಜ್ಯ ಸರ್ಕಾರ (Karnataka Government) ಆಡಳಿತ ಯಂತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದು, ಐಎಎಸ್ (IAS) ಮತ್ತು ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆ (IAS Transfers) ಮಾಡಿ ಆದೇಶವನ್ನು ಹೊರಡಿಸಿದೆ. ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಬಿ. ಬಿ. ಕಾವೇರಿ ಅವರನ್ನು ವರ್ಗಾವಣೆ ಮಾಡಿ, ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಅದೇ ರೀತಿ ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿದ್ದ ತ್ರಿಲೋಕ್ ಚಂದ್ರ ಅವರನ್ನು ವರ್ಗಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಕಾವೇರಿ ಅವರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಯಾಗಿ ಹೊಣೆಗಾರಿಕೆಯನ್ನೂ ಕೂಡ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಟಿ. ಮಾಲತೇಶ್, ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ & ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-1) ಆದೇಶವನ್ನು ಹೊರಡಿಸಿದ್ದಾರೆ.

ನವೆಂಬರ್ 2023 ರಲ್ಲಿ ಸಿಎಂ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೊದಲು, ತ್ರಿಲೋಕ್ ಅವರು ಬಿಬಿಎಂಪಿ ವಿಶೇಷ ಆಯುಕ್ತರಾಗಿ (ಆರೋಗ್ಯ ಮತ್ತು ಐಟಿ) ಸೇವೆ ಸಲ್ಲಿಸಿದ್ದರು.

ಶನಿವಾರವಷ್ಟೇ ಸರ್ಕಾರ 14 ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಿ ಆದೇಶವನ್ನು ಹೊರಡಿಸಿತ್ತು. ಕಂದಾಯ ಇಲಾಖೆಯ ಸ್ಥಳ ನಿರೀಕ್ಷಣೆಯಲ್ಲಿರುವ ಹಾಗೂ ಸ್ಥಳ ನಿರೀಕ್ಷಣೆಗೆ ಬರಲಿರುವ ತಹಶೀಲ್ದಾರ್ ವೃಂದದ ಅಧಿಕಾರಿಗಳನ್ನು ಅವರುಗಳ ಹೆಸರುಗಳ ಮುಂದೆ ನಮೂದಿಸಲಾದ ಹುದ್ದೆಗಳಿಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ ಎಂದು ಹೇಳಿದೆ.

ಕಳೆದ ಒಂದು ವಾರದಿಂದ ಸರ್ಕಾರ ವಿವಿಧ ಇಲಾಖೆಗಳ ಅಧಿಕಾರಿಗಳಗಳನ್ನು ವರ್ಗಾವಣೆ ಮಾಡುತ್ತಿದೆ. ಪೊಲೀಸ್, ಜಲಸಂಪನ್ಮೂಲ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಕೆಲವು ಕೆಎಎಸ್ ಅಧಿಕಾರಿಗಳನ್ನು ಸಹ ವರ್ಗಾವಣೆಗೊಳಿಸಿ ಆದೇಶಿಸಲಾಗಿತ್ತು. ಶನಿವಾರ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ.

ಇದನ್ನೂ ಓದಿ: 23 ಐಎಎಸ್ ಅಧಿಕಾರಿಗಳ ವರ್ಗಾವಣೆ