Sunday, 6th October 2024

Muda Case: ಮುಡಾ ಕಡತ ನಾಪತ್ತೆ ಆರೋಪ, ಸಚಿವ ಬೈರತಿ ಸುರೇಶ್ ಮೇಲೂ ಸ್ನೇಹಮಯಿ ಕೃಷ್ಣ ದೂರು

snehamayi krishna

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (MUDA Case) ನಡೆದ ಹಗರಣಕ್ಕೆ ಸಂಬಂಧಿಸಿದ ಕಡತಗಳು (MUDA Scam) ನಾಪತ್ತೆಯಾದ ಹಿನ್ನೆಲೆಯಲ್ಲಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಅವರು ಸಚಿವ ಬೈರತಿ ಸುರೇಶ್‌ (Byrathi Suresh) ಅವರ ಮೇಲೆ ದೂರು ದಾಖಲಿಸಿದ್ದಾರೆ. ಈಗಾಗಲೇ ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ದೂರು ದಾಖಲಿಸಿ ಕೋರ್ಟ್‌ನಲ್ಲಿ ಹೋರಾಡುತ್ತಿದ್ದಾರೆ.

ಸಚಿವ ಬೈರತಿ ಸುರೇಶ್ ಮತ್ತು ಹಿಂದಿನ ಲೋಕಾಯುಕ್ತ ಎಸ್. ​​ಪಿ. ಸಜಿತ್ ವಿರುದ್ಧ ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್​​ ಮೋಹನ್​​ ಅವರಿಗೆ ದೂರು ನೀಡಿದ್ದಾರೆ.

ಲೋಕಾಯುಕ್ತ ನೀಡಿದ್ದ ಸರ್ಚ್​ ವಾರಂಟ್​ ಆಧರಿಸಿ ಜು.26ರಂದು ಮುಡಾ ಕಚೇರಿ ಮೇಲೆ ದಾಳಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ದಾಳಿ ವಿಚಾರವನ್ನು ಮೈಸೂರು ಲೋಕಾಯುಕ್ತದ ಅಂದಿನ ಅಧೀಕ್ಷಕ ಸಜಿತ್ ಅವರು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಬೈರತಿ ಸುರೇಶ್ ಬೆಂಗಳೂರಿನಿಂದ ಮೈಸೂರಿಗೆ ಹೆಲಿಕ್ಯಾಪ್ಟರ್‌ನಲ್ಲಿ ಆಗಮಿಸಿ‌ 26-7-2024 ರಂದು ಮುಡಾದ ದಾಖಲೆಗಳನ್ನ ಕೊಂಡೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿಗಳು ಅದೇ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಸಚಿವರು ದಾಖಲೆಗಳನ್ನು ತೆಗೆದುಕೊಂಡು‌ ಹೋಗಲು ಲೋಕಾಯುಕ್ತ ಎಸ್ಪಿ ಸಹಕರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Muda Case: ಸಿಎಂ ಪತ್ನಿ ನಿವೇಶನ ವಾಪಸ್ ಪಡೆದ‌ ಮುಡಾ ಆಯುಕ್ತರನ್ನು ಬಂಧಿಸಬೇಕು: ಎಚ್‌ಡಿಕೆ ಆಗ್ರಹ