Monday, 25th November 2024

IND vs BAN 1st T20: ಅರ್ಷದೀಪ್‌ ಬೌಲಿಂಗ್‌ ದಾಳಿಗೆ ತತ್ತರಿಸಿದ ಬಾಂಗ್ಲಾ; ಭಾರತಕ್ಕೆ 7 ವಿಕೆಟ್‌ ಜಯ

ಗ್ವಾಲಿಯರ್‌: ಆರಂಭದಲ್ಲಿ ಎಡಗೈ ವೇಗಿ ಅರ್ಷದೀಪ್‌ ಸಿಂಗ್‌(14ಕ್ಕೆ 3) ಹಾಗೂ ಮಿಸ್ಟರಿ ಸ್ಪಿನ್ನರ್‌ ವರುಣ್‌ ಚರ್ಕವರ್ತಿ(31 ಕ್ಕೆ 3) ಜೋಡಿಯ ಉತ್ಕೃಷ್ಟ ಮಟ್ಟದ ಬೌಲಿಂಗ್‌ ದಾಳಿ, ಆ ಬಳಿಕ ಹಾರ್ದಿಕ್‌ ಪಾಂಡ್ಯ(39) ಅವರ ಅಬ್ಬರದ ಬ್ಯಾಟಿಂಗ್‌ ನೆರವು ಪಡೆದ ಭಾರತ, ಪ್ರವಾಸಿ ಬಾಂಗ್ಲಾದೇಶ(IND vs BAN 1st T20) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ1-0 ಮುನ್ನಡೆ ಕಾಯ್ದುಕೊಂಡಿದೆ. ದ್ವಿತೀಯ ಪಂದ್ಯ ಅ.9, ಬುಧವಾರ ನವದೆಹಲಿಯ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಭಾನುವಾರ ಇಲ್ಲಿನ ಶ್ರೀಮಂತ್​ ಮಾಧವ್​ರಾವ್​ ಸಿಂಧಿಯಾ ಸ್ಟೇಡಿಯಂನಲ್ಲಿ 14 ವರ್ಷಗಳ ಬಳಿಕೆ ನಡೆದ ಈ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆದ ಬಾಂಗ್ಲಾದೇಶ ನಾಟಕೀಯ ಕುಸಿತ ಕಂಡು19.5 ಓವರ್‌ಗಳಲ್ಲಿ 127 ರನ್‌ಗೆ ಕುಸಿಯಿತು. ಜವಾಬಿತ್ತ ಭಾರತ ಈ ಅಲ್ಪ ಮೊತ್ತವನ್ನು 11.5  ಓವರ್‌ಗಳಲ್ಲಿ 3 ವಿಕೆಟ್‌ಗೆ 132 ರನ್‌ ಬಾರಿಸಿ ಗೆಲುವು ದಾಖಲಿಸಿತು.

ಚೇಸಿಂಗ್‌ ವೇಳೆ ಆರಂಭಿಕರಾದ ಅಭಿಷೇಕ್‌ ಶರ್ಮಾ ಮತ್ತು ಸಂಜು ಸ್ಯಾಮ್ಸನ್‌ ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸುವ ಮೂಲಕ ಉತ್ತಮ ಆರಂಭ ಒದಗಿಸಿದರು. ಆದರೆ ಈ ಜೋಡಿಯ ಆಟ ಹೆಚ್ಚು ಹೊತ್ತು ಸಾಗಲಿಲ್ಲ. ಬಡಬಡನೆ 2 ಬೌಂಡರಿ ಮತ್ತು ಒಂದು ಸಿಕ್ಸರ್‌ ಬಾರಿಸಿದ ಅಭಿಷೇಕ್‌ ಇಲ್ಲದ ರನ್‌ ಕದಿಯುವ ಯತ್ನದಲ್ಲಿ ರನೌಟ್‌ ಬಲೆಗೆ ಬಿದ್ದರು. ಅವರ ಗಳಿಕೆ 7 ಎಸೆತಗಳಿಂದ 16 ರನ್‌.

ಆ ಬಳಿಕ ಆಡಲಿಳಿದ ಸೂರ್ಯಕುಮಾರ್‌ ತಮ್ಮ ಎಂದಿನ ಶೈಲಿಯಂತೆ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿ ಗಮನಸೆಳೆದರು. ಕೇವಲ 14 ಎಸೆತಗಳಿಂದ 29 ರನ್‌ ಚಚ್ಚಿದರು. ಸಿಡಿದದ್ದು 3 ಸಿಕ್ಸರ್‌ ಮತ್ತು 2 ಬೌಂಡರಿ. ಸೂರ್ಯ ಮತ್ತು ಸಂಜು ಸೇರಿಕೊಂಡು ದ್ವಿತೀಯ ವಿಕೆಟ್‌ಗೆ 40 ರನ್‌ಗಳ ಅಮೂಲ್ಯ ಜತೆಯಾಟ ನಡೆಸಿದರು. ಪವರ್‌ ಪ್ಲೇಯಲ್ಲಿ 2 ವಿಕೆಟ್‌ಗೆ 71 ರನ್‌ ದಾಖಲಾಯಿತು. ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿದ್ದ ಸಂಜು ಕೂಡ 29ರನ್‌ಗೆ ವಿಕೆಟ್‌ ಕೈಚೆಲ್ಲಿದರು. ಅಂತಿಮ ಹಂತದಲ್ಲಿ ಸಿಡಿದು ನಿಂತ ಹಾರ್ದಿಕ್‌ ಪಾಂಡ್ಯ ಕೇವಲ 16 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿ ಅಜೇಯ 39 ರನ್‌ ಕಲೆಹಾಕಿದರು. ನಿತೇಶ್‌ ರೆಡ್ಡಿ (16) ರನ್‌ ಬಾರಿಸಿ ಅಜೇಯರಾಗಿ ಉಳಿದರು. ಬಾಂಗ್ಲಾ ಪರ ಮುಸ್ತಾಫಿಜುರ್ ಮತ್ತು ಮೆಹಿದಿ ಹಸನ್ ತಲಾ ಒಂದು ವಿಕೆಟ್‌ ಕಿತ್ತರು.

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶಕ್ಕೆ ಎಡಗೈ ವೇಗಿ ಅರ್ಷದೀಪ್‌ ಸಿಂಗ್‌ ಅವಳಿ ಆಘಾತವಿಕ್ಕಿದರು. ಮೊದಲ ಓವರ್‌ನಲ್ಲಿ ಲಿಟ್ಟನ್‌ ದಾಸ್‌(4) ವಿಕೆಟ್‌ ಕಿತ್ತರೆ, ತಾನೆಸೆದ ದ್ವಿತೀಯ ಓವರ್‌ನಲ್ಲಿ ಪರ್ವೇಜ್‌ ಹೊಸೈನ್‌(8) ವಿಕೆಟ್‌ ಬೇಟೆಯಾಡಿದರು. 14 ರನ್‌ಗೆ 2 ವಿಕೆಟ್‌ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ನಾಯಕ ನಜ್ಮಲ್‌ ಹೊಸೈನ್‌ ಶಾಂಟೊ ತಾಳ್ಮೆಯುತ ಬ್ಯಾಟಿಂಗ್‌ ಮೂಲಕ ನೆರವಾಗುವ ಸೂಚನೆ ನೀಡಿದರೂ ಕೂಡ ಅವರ ಆಟ 27 ರನ್‌ಗೆ ಕೊನೆಗೊಂಡಿತು. ಈ ವಿಕೆಟ್‌ ವಾಷಿಂಗ್ಟನ್‌ ಸುಂದರ್‌ ಪಾಲಾಯಿತು.

ನಾಯಕನ ವಿಕೆಟ್‌ ಪತನಗೊಳ್ಳುತ್ತಿದಂತೆ ಬಾಂಗ್ಲಾ ಕುಸಿತವೂ ಆರಂಭವಾಯಿತು. ಬಳಿಕ ಬಂದ ತೌಹಿದ್‌ ಹೃದಯ್‌(12), ಅನುಭವಿ ಮಹಮುದುಲ್ಲಾ(1), ಜಾಕೀರ್‌ ಅಲಿ(11) ಅಗ್ಗಕ್ಕೆ ವಿಕೆಟ್‌ ಕೈಚೆಲ್ಲಿ ಪೆವಿಲಿಯನ್‌ ಪರೇಡ್‌ ನಡೆಸಿದರು. 2021ರ ಟಿ 20 ವಿಶ್ವಕಪ್‌ಗೆ ಆಯ್ಕೆಯಾಗಿ ನಿರೀಕ್ಷಿತ ನಿರ್ವಹಣೆ ತೋರುವಲ್ಲಿ ವಿಫಲವಾಗಿದ್ದ ತಮಿಳುನಾಡಿನ ಮಿಸ್ಟರಿ ಸ್ಪಿನ್ನರ್‌ ವರುಣ್‌ ಚರ್ಕವರ್ತಿ 3 ವಿಕೆಟ್‌ ಕಿತ್ತು ಗ್ರೇಟ್‌ ಕಮ್‌ಬ್ಯಾಕ್‌ ಮಾಡಿದರು.

ಮಯಾಂಕ್-ನಿತೇಶ್‌ ಪದಾರ್ಪಣೆ

ಕಳೆದ ಐಪಿಎಲ್‌ನಲ್ಲಿ ಪ್ರತಿ ಗಂಟೆಗೆ 150 ಕಿಲೋಮೀಟರ್​ಗಿಂತ ವೇಗದಲ್ಲಿ ಚೆಂಡೆಸೆದು ಸಂಚಲನ ಮೂಡಿಸಿದ್ದ 22 ವರ್ಷದ ಮಯಾಂಕ್​ಯಾದವ್‌ ಮತ್ತು ಹೈದರಾಬಾದ್‌ ತಂಡದಲ್ಲಿ ಆಲ್‌ರೌಂಡರ್‌ ಪ್ರದರ್ಶನ ತೋರಿದ್ದ ನಿತೀಶ್‌ ರೆಡ್ಡಿ ಈ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಮಯಾಂಕ್‌ ಒಂದು ವಿಕೆಟ್‌ ಕಿತ್ತರೆ, ನಿತೀಶ್‌ ರೆಡ್ಡಿ ಎರಡು ಓವರ್‌ ಬೌಲಿಂಗ್‌ ನಡೆಸಿದರೂ ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ. ಉಳಿದಂತೆ ಆಲ್‌ರೌಂಡರ್‌ಗಳಾದ ವಾಷಿಂಗ್ಟನ್‌ ಸುಂದರ್‌ ಮತ್ತು ಹಾರ್ದಿಕ್‌ ಪಾಂಡ್ಯ ತಲಾ 1 ವಿಕೆಟ್‌ ಪಡೆದರು.