ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 11 ಶುರುವಾಗಿ ಒಂದು ವಾರ ಕಳೆದಿದೆ. ಕಿಚ್ಚನ ಮೊದಲ ಪಂಚಾಯಿತಿ ಕೂಡ ಮುಕ್ತಾಯಗೊಂಡಿದ್ದು, ಸ್ಪರ್ಧಿಗಳಿಗೆ ಹೇಳಬೇಕಾಗಿದ್ದನ್ನ ತಮ್ಮದೆ ಶೈಲಿಯಲ್ಲಿ ಹೇಳಿ ಮನವರಿಕೆ ಮಾಡಿದ್ದಾರೆ. ಮುಖ್ಯವಾಗಿ ಜಗದೀಶ್ ಅವರಿಗೆ ನಗುತ್ತಲೇ ಖಾರವಾಗಿ ಬಿಸಿ ಮುಟ್ಟಿಸಿದ್ದಾರೆ. ಇದರ ನಡುವೆ ಬಿಗ್ ಬಾಸ್ ನಿಯಮದಂತೆ ಮೊದಲ ವಾರ ಮನೆಯಿಂದ ಓರ್ವ ಸ್ಪರ್ಧಿ ಹೊರಬಂದಿದ್ದಾರೆ. ಆದರೆ, ಇದು ಶಾಕಿಂಗ್ ಎಲಿಮಿನೇಷನ್ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಹೆಚ್ಚು ಸೌಂಡ್ ಮಾಡಿದ್ದು, ಜಗದೀಶ್, ಉಗ್ರಂ ಮಂಜು ಮತ್ತು ಯಮುನಾ ಶ್ರೀನಿಧಿ. ಹೆಚ್ಚಾಗಿ ಕಾಣಿಸಿಕೊಂಡಿದ್ದು ಕೂಡ ಇವರೇ. ಇವರಲ್ಲಿ ನಾಮಿನೇಟ್ ಆಗಿದ್ದ ಜಗದೀಶ್ ಮತ್ತು ಯಮುನಾ ಸೇಫ್ ಆಗಲಿದ್ದಾರೆ ಎಂದು ನಂಬಲಾಗಿತ್ತು. ಆದರೆ, ಶಾಕಿಂಗ್ ಎಂಬಂತೆ ಯಮುನಾ ಮೊದಲ ವಾರವೇ ಮನೆಯಿಂದ ಔಟ್ ಆಗಿದ್ದಾರೆ.
ಶನಿವಾರ ನಡೆದ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಸುದೀಪ್ ಅವರು ಮೂವರು ಸ್ಪರ್ಧಿಗಳನ್ನು ಎಲಿಮಿನೇಷನ್ನಿಂದ ಪಾರು ಮಾಡಿದ್ದರು. ಮಾನಸಾ, ಗೌತಮಿ ಮತ್ತು ಭವ್ಯಾ ಅವರನ್ನು ಸೇಫ್ ಮಾಡಲಾಗಿತ್ತು. ಶಿಶಿರ್, ಯಮುನಾ ಶ್ರೀನಿಧಿ, ಹಂಸಾ, ಲಾಯರ್ ಜಗದೀಶ್, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಅವರುಗಳು ಉಳಿದುಕೊಂಡಿದ್ದರು. ಇದೀಗ ಭಾನುವಾರದ ಎಪಿಸೋಡ್ನಲ್ಲಿ ಯಮುನಾ ಮನೆಯಿಂದ ಹೊರಬಂದಿದ್ದಾರೆ. ಈ ಮೂಲಕ ಒಂದೇ ವಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ಇವರು ತಮ್ಮ ಪ್ರಯಾಣವನ್ನು ಕೊನೆಗೊಳಿಸಿದ್ದಾರೆ.
ಯಮುನಾ ಅವರು ಮೊದಲ ಮೂರು ದಿನ ಉತ್ಸಾಹದಿಂದಲೇ ಬಿಗ್ಬಾಸ್ ಮನೆಯಲ್ಲಿದ್ದರು. ಆದರೆ, ನಂತರ ಕೆಲವರು ಆಡಿದ ಮಾತು ಅವರಿಗೆ ಇಷ್ಟವಾಗದಂತೆ ಕಂಡುಬಂತು. ಮಂಜು ಮತ್ತು ಜಗದೀಶ್ ಜೊತೆ ಜಗಳ ಆಡಿದ್ದರು. ಇವರ ವ್ಯಕ್ತಿತ್ವ ಕೂಡ ಬಿಗ್ಬಾಸ್ ಮನೆಯಲ್ಲಿ ಕೆಲವರಿಗೆ ಇಷ್ಟವಾಗಲಿಲ್ಲ. ಅಲ್ಲದೆ ಇವರ ಜೋರು ಧ್ವನಿ, ಹಾವ ಭಾವ, ವ್ಯಕ್ತಿತ್ವ ಬಹುಷಃ ಜನರಿಗೆ ಇಷ್ಟವಾಗಲಿಲ್ಲವೆಂದು ತೋರುತ್ತದೆ. ಹೀಗಾಗಿ ಜನರು ಇವರನ್ನು ಉಳಿಸಿಕೊಳ್ಳದೆ ಎಲಿಮಿನೇಟ್ ಮಾಡಿದ್ದಾರೆ.
ಎಲಿಮಿನೇಟ್ ಆದ ಬಳಿಕ ಯಮುನಾ ಅವರು ಹೊರಗೆ ಬಂದು ಕಿಚ್ಚನ ಮುಂದೆ ಹೊರಬಂದಿದ್ದಕ್ಕೆ ಗರಂ ಆಗಿದ್ದಾರೆ. ಒಂದೇ ವಾರಕ್ಕೆ ಹೊರಗೆ ಬರುವ ಕಳಪೆ ಸ್ಪರ್ಧಿ ನಾನಲ್ಲ, ಸ್ವಲ್ಪ ದಿನ ಈ ಮನೆಯಲ್ಲಿ ಇರುವಂತಹ ಅರ್ಹತೆ ನನಗಿತ್ತು ಎಂದಿದ್ದಾರೆ. ಇದೇವೇಳೆ ಮುಂದಿನ ವಾರ ಎಲಿಮಿನೇಟ್ ಆಗುವವರು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಯಮುನಾ ಅವರು, ಐಶ್ವರ್ಯಾ ಅಥವಾ ಮೋಕ್ಷಿತಾ ಎಂದು ಹೇಳಿದ್ದಾರೆ. ಟಾಪ್ 3 ಯಲ್ಲಿ ಯಾರ ಇರಬಹುದು ಎಂಬುದಕ್ಕೆ ಉತ್ತರಿಸಿದ ಇವರು ಶಿಶಿರ್, ಧರ್ಮಾ ಹಾಗೂ ತ್ರಿವಿಕ್ರಂ ಎಂದಿದ್ದಾರೆ.
ಮೂಲತಃ ಮೈಸೂರಿನವಾರದ ಯಮುನಾ ಶ್ರೀನಿಧಿ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಇವರು ಕನ್ನಡ ಧಾರಾವಾಹಿ ಅಶ್ವಿನಿ ನಕ್ಷತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಕನ್ನಡ ಚಿತ್ರರಂಗದ ಪ್ರಮುಖ ನಟರೊಂದಿಗೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 10ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಇಷ್ಟೇ ಅಲ್ಲದೆ ಅಮೆರಿಕದಲ್ಲಿ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದಾರೆ. ವಿದೇಶದಲ್ಲಿ ಒಂದಷ್ಟು ವರ್ಷ ವಾಸವಾಗಿದ್ದ ಇವರು 2012 ರಲ್ಲಿ ಭಾರತಕ್ಕೆ ಮರಳಿದ್ದರು.
ಮನೆಯ ನಿಯಮ ಮೀರಿದ ಕ್ಯಾಪ್ಟನ್ಗೆ ಕಿಚ್ಚನ ಕ್ಲಾಸ್: ಮೊದಲ ಪಂಚಾಯಿತಿಯಲ್ಲಿ ಏನೆಲ್ಲ ಆಯಿತು?