Friday, 22nd November 2024

Viral Video: ಇನ್‌ ಶರ್ಟ್ ಮಾಡಿಲ್ಲವೆಂದು ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕನಿಗೆ ಬಿತ್ತು ಗೂಸಾ!

Viral Video

ಪುಣೆ: ವಿದ್ಯಾರ್ಥಿಗಳು ತರಗತಿಯಲ್ಲಿ ಏನಾದರೂ ತಪ್ಪು ಕೆಲಸ ಮಾಡಿದರೆ ಶಿಕ್ಷಕರಿಗೆ ಅವರನ್ನು ಶಿಕ್ಷಿಸುವ ಅಧಿಕಾರವಿದೆ ನಿಜ. ಅಂದಮಾತ್ರಕ್ಕೆ ವಿದ್ಯಾರ್ಥಿಗಳಿಗೆ ಭೀಕರವಾಗಿ ಹೊಡೆದು ಅವರ ಜೀವಕ್ಕೆ ಆಪತ್ತು ತರುವುದು ಎಷ್ಟು ಸರಿ? ಇತ್ತೀಚೆಗೆ ಇಂತಹದೊಂದು ಘಟನೆ ಪುಣೆಯ ಶಾಲೆಯೊಂದರಲ್ಲಿ ನಡೆದಿದೆ. ಕಂಪ್ಯೂಟರ್ ತರಗತಿಗೆ ಇನ್‌ ಶರ್ಟ್ ಮಾಡಿಕೊಂಡು ಬಂದಿಲ್ಲ ಎಂಬ ಕಾರಣಕ್ಕೆ 11 ವರ್ಷದ ವಿದ್ಯಾರ್ಥಿಯ ಮೇಲೆ ಶಿಕ್ಷಕನೊಬ್ಬ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಸೆಪ್ಟೆಂಬರ್ 27ರಂದು ಈ ಘಟನೆ ನಡೆದಿದ್ದು, ಶಿಕ್ಷಕ ಹೊಡೆದ ಏಟಿಗೆ ವಿದ್ಯಾರ್ಥಿಯ ಮೂಗು ಮತ್ತು ಕಿವಿಗಳಿಂದ ರಕ್ತಸ್ರಾವವಾಗಿದೆ. ಇದಕ್ಕೆ ಸಂಬಂಧಪಟ್ಟ ಸಿಸಿಟಿವಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಈ ಬಗ್ಗೆ ವಿದ್ಯಾರ್ಥಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ಶಿಕ್ಷಕ ಸಂದೇಶ್ ಭೋಸಲೆ (26) 6ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಇನ್‌ ಶರ್ಟ್ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ  ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಪೊಲೀಸ್ ವರದಿಯ ಪ್ರಕಾರ ಶಿಕ್ಷಕನು ಬಾಲಕನಿಗೆ ಅನೇಕ ಬಾರಿ ಹೊಡೆದಿದ್ದಾನೆ. ಇದರಿಂದಾಗಿ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.

ವಿದ್ಯಾರ್ಥಿ ತನ್ನ ತಾಯಿಗೆ ಈ ವಿಚಾರ ತಿಳಿಸಿದ ಮರುದಿನ, ವಿದ್ಯಾರ್ಥಿಯ ಕುಟುಂಬವು ಈ ವಿಷಯದ ಬಗ್ಗೆ ವಿಚಾರಿಸಲು ಶಾಲೆಗೆ ಹೋಗಿದ್ದಾರೆ. ಆದರೆ ಶಾಲಾ ಆಡಳಿತವು ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರಾಕರಿಸಿದೆ. ಹಾಗಾಗಿ ಹತಾಶೆಗೊಂಡ ವಿದ್ಯಾರ್ಥಿಯ ಕುಟುಂಬವು ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್ಎಸ್) ಕಾರ್ಯಕರ್ತರ ಸಹಾಯದಿಂದ  ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಬ್ ಇನ್ಸ್ಪೆಕ್ಟರ್ ಈ ಪ್ರಕರಣದ ಮೇಲ್ವಿಚಾರಣೆ ತೆಗೆದುಕೊಂಡು ನಂತರ ಶಾಲೆಗೆ ಭೇಟಿ ನೀಡಿ ಘಟನೆಯ ದಿನದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.  ಅದರಲ್ಲಿ ವಿದ್ಯಾರ್ಥಿಯ ಮೇಲೆ  ಕ್ರೂರ ಹಲ್ಲೆ ನಡೆಸಿರುವುದು ರೆಕಾರ್ಡ್ ಆಗಿತ್ತು.  ಈ ಬಗ್ಗೆ ಭೋಸಲೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ:ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಿದ ವ್ಯಕ್ತಿಗೆ ಬಿತ್ತು ಗೂಸಾ; ವಿಡಿಯೊ ವೈರಲ್

ಈ ಘಟನೆಯಿಂದ  ಕೋಪಗೊಂಡ ಎಂಎನ್ಎಸ್ ಕಾರ್ಯಕರ್ತರು ಮತ್ತು ವಿದ್ಯಾರ್ಥಿಯ ಕುಟುಂಬದವರು ಶಾಲೆಯಲ್ಲಿ ಪೊಲೀಸರ ಮುಂದೆಯೇ ಶಿಕ್ಷಕನನ್ನು ಥಳಿಸಿದ್ದಾರೆ. ಆತನ ಕಪಾಳಕ್ಕೆ ಬಾರಿಸಿದ್ದಾರೆ. ವಿದ್ಯಾರ್ಥಿ ಮೇಲೆ ಹಲ್ಲೆ ಘಟನೆಯು ಪೋಷಕರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ಆತಂಕವನ್ನು ಹುಟ್ಟುಹಾಕಿದೆ.  ಅವರು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಪ್ರಶ್ನಿಸುತ್ತಿದ್ದಾರೆ. ಅಧಿಕಾರಿಗಳು ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ.