ಮುಂಬೈ: ಬಿಗ್‍ಬಾಸ್ ಶೋ ಹೆಚ್ಚು ಜನಪ್ರಿಯವಾಗಿರುವ ಟಿವಿ ಶೋ ಆಗಿದೆ. ಇದು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬರುತ್ತಿದೆ. ಈಗಾಗಲೇ ಕನ್ನಡ ಬಿಗ್‍ಬಾಸ್ ಶೋ ಶುರುವಾಗಿ 2 ವಾರ ಕಳೆದಿದೆ. ಇದೀಗ ಅಕ್ಟೋಬರ್ 6ರಿಂದ ಹಿಂದಿ ಬಿಗ್‍ಬಾಸ್ ಶೋ ಶುರುವಾಗಿದೆ. ಕನ್ನಡದಲ್ಲಿ ನಟ ಸುದೀಪ್ ಅವರು ಬಿಗ್‍ಬಾಸ್ ಶೋ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಹಾಗೇ ಹಿಂದಿಯಲ್ಲಿ ನಟ ಸಲ್ಮಾನ್ ಖಾನ್ (Actor Salman Khan )ನಿರೂಪಣೆ ಮಾಡುತ್ತಿದ್ದಾರೆ. ಈ ನಡುವೆ ಬಿಗ್‍ಬಾಸ್ 18 ರ ನಿರೂಪಕರಾದ ಸಲ್ಮಾನ್ ಖಾನ್ ಕಳೆದ ಸೀಸನ್‍ಗಿಂತ ತಮ್ಮ ವೇತನವನ್ನು ಹೆಚ್ಚಿಸಿದ್ದಾರೆ. ಅವರು ಪಡೆಯುವ ಸಂಭಾವನೆ ಬಾಹುಬಲಿ 2, ಜೈಲರ್ ಸಿನಿಮಾ ಬಜೆಟ್‌ಗಿಂತಲೂ ಹೆಚ್ಚು ಎಂಬುದಾಗಿ ತಿಳಿದುಬಂದಿದೆ.
ಹೌದು. ನಟ ಸಲ್ಮಾನ್ ಖಾನ್ ಅವರು ಈ ಬಾರಿ ನಡೆಯುವ ಬಿಗ್‍ಬಾಸ್ ಶೋ ಪ್ರತಿ ಎಪಿಸೋಡ್‍ಗೆ 60 ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ. ಹಾಗಾಗಿ 15 ವಾರಗಳ ಕಾಲ ನಡೆಯುವ ಬಿಗ್‍ಬಾಸ್ ಶೋ 18ನೇ ಆವೃತ್ತಿ ಮುಗಿಯುವ ವೇಳೆಗೆ ಅವರು ಸುಮಾರು 250 ಕೋಟಿ ರೂ.ಗಳನ್ನು ಗಳಿಸುತ್ತಾರೆ ಎನ್ನಲಾಗಿದೆ.
ಕಳೆದ ಸೀಸನ್‍ನಲ್ಲಿ, ನಟ ಪ್ರತಿ ಎಪಿಸೋಡ್‍ಗೆ 12 ಕೋಟಿ ರೂ.ಗಳನ್ನು ಪಡೆಯುತ್ತಿದ್ದರು. ಹಾಗಾಗಿ ಒಟ್ಟು ತಿಂಗಳಿಗೆ 50 ಕೋಟಿ ರೂ. ಗಳಿಸುತ್ತಿದ್ದರು. ಆದರೆ ಈ ಬಾರಿ ಸುಮಾರು 250 ಕೋಟಿ ರೂ.ಗಳನ್ನು ಗಳಿಸಲಿದ್ದು, ಈ ಸಂಭಾವನೆಯನ್ನು ಹಂತ ಹಂತವಾಗಿ ಸಲ್ಮಾನ್ ಖಾನ್‌ಗೆ ನೀಡಲಾಗುತ್ತದೆ ಎಂದು ವರದಿಗಳು ಹೇಳುತ್ತಿವೆ.
ಸಲ್ಮಾನ್ ಖಾನ್ ಒಂದು ದಶಕದಿಂದ ಬಿಗ್‍ಬಾಸ್ ಅನ್ನು ನಿರೂಪಣೆ ಮಾಡುತ್ತಿದ್ದಾರೆ. ಆರಂಭದಲ್ಲಿ ಬಿಗ್‍ಬಾಸ್‍ನಲ್ಲಿ ಅರ್ಷದ್ ವಾರ್ಸಿ ಮತ್ತು ಅಮಿತಾಭ್ ಬಚ್ಚನ್ ನಿರೂಪಕರಾಗಿದ್ದರು. ಆದರೆ ಸಲ್ಮಾನ್ ಅವರ ನಿರೂಪಣೆಯ ನಂತರ ಬಿಗ್‍ಬಾಸ್ ಶೋ ಭಾರಿ ಯಶಸ್ಸನ್ನು ಗಳಿಸಿದೆ. ಹಾಗಾಗಿ ಅವರು ಬಿಗ್‍ಬಾಸ್ ಅನ್ನು ಬಹಳ ಉತ್ತಮವಾಗಿ ನಡೆಸಿಕೊಡುತ್ತಿರುವುದರಿಂದ ನಿರ್ಮಾಪಕರು ಪ್ರತಿವರ್ಷ ಅವರ ಸಂಭಾವನೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ರೈಲಿನಲ್ಲಿ ವಿಡಿಯೊ ಮಾಡುತ್ತಿದ್ದ ಹುಡುಗನ ಮೊಬೈಲ್ ಎಗರಿಸಿದ ಚಾಲಾಕಿ ಕಳ್ಳ; ವಿಡಿಯೊ ವೈರಲ್
ಬಾಹುಬಲಿ 2 ಸಿನಿಮಾ ಬಜೆಟ್ ಮೊತ್ತ 180 ಕೋಟಿ ರೂಪಾಯಿ, ಜೈಲರ್ ಸಿನಿಮಾ ಬಜೆಟ್ 200 ಕೋಟಿ ರೂಪಾಯಿ ಆಗಿತ್ತು. ಆದರೆ ಈ ಎಲ್ಲಾ ಸಿನಿಮಾ ಬಜೆಟ್ ಮೊತ್ತಕ್ಕಿಂತ ಸಲ್ಮಾನ್ ಖಾನ್ ಅವರ ಬಿಗ್‍ಬಾಸ್ ಸಂಭಾವನೆ ಸಂಭಾವನೆ ಹೆಚ್ಚಾಗಿದೆ. ಈ ಮೂಲಕ ನಟ ಸಲ್ಮಾನ್ ಖಾನ್ ಅವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಟಿವಿ ನಿರೂಪಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.