Monday, 25th November 2024

Tirupati Laddu: ಬೆಂಗಳೂರಿನಲ್ಲಿ ತಿರುಪತಿ ಲಡ್ಡು ವಿತರಣೆ ತಾತ್ಕಾಲಿಕ ಸ್ಥಗಿತ

Tirupati Laddu Row

ಬೆಂಗಳೂರು: ಬೆಂಗಳೂರಿನ (Bengaluru news) ವೈಯಾಲಿಕಾವಲ್​​ನಲ್ಲಿರುವ ತಿರುಪತಿ ಶ್ರೀನಿವಾಸ (Tirupati Temple) ದೇವಸ್ಥಾನದಲ್ಲಿ (TTD) ಲಡ್ಡು ಪ್ರಸಾದ (Tirupati Laddu) ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬೆಂಗಳೂರಿಗೆ ತಿರುಪತಿಯಿಂದ ಬರುತ್ತಿದ್ದ ಲಡ್ಡು ಪ್ರಸಾದವನ್ನು ಟಿಟಿಡಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ತಿರುಪತಿಯಲ್ಲಿ ಬ್ರಹ್ಮೋತ್ಸವ ಹಿನ್ನೆಲೆಯಲ್ಲಿ ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ, ಬೆಟ್ಟದಿಂದ ಲಡ್ಡು ಪೂರೈಸುವ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಅಕ್ಟೋಬರ್​​​ 12ರವರೆಗೆ ಬೆಂಗಳೂರಿನ ತಿರುಪತಿ ದೇವಸ್ಥಾನಕ್ಕೆ ಟಿಟಿಡಿ ಆಡಳಿತ ಮಂಡಳಿ ಲಡ್ಡು ಸರಬರಾಜು ಮಾಡುವುದಿಲ್ಲ.

ತನಿಖೆಗೆ ಹೊಸ ಸಿಐಟಿ

ತಿರುಪತಿಯಲ್ಲಿ ಕಳಪೆ ತುಪ್ಪ, ಪ್ರಾಣಿಗಳ ಕೊಬ್ಬು ಬೆರೆಸಿದ ಲಡ್ಡು ವಿತರಿಸಲಾಗುತ್ತಿದ್ದ ಬಗ್ಗೆ ತನಿಖೆ ನಡೆಸಲು ಸಿಬಿಐನ ಇಬ್ಬರು ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ತಂಡವನ್ನು ರಚಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ.‌ ವಿಶೇಷ ತನಿಖಾ ತಂಡದಲ್ಲಿ (ಎಸ್‌ಐಟಿ) ಆಂಧ್ರಪ್ರದೇಶ ಪೊಲೀಸ್‌ನ ಇಬ್ಬರು ಅಧಿಕಾರಿಗಳು, ಒಬ್ಬ ಎಫ್‌ಎಸ್‌ಎಸ್‌ಎಐನ ಹಿರಿಯ ಅಧಿಕಾರಿ ಇರಲಿದ್ದಾರೆ. ಎಸ್‌ಐಟಿ ತನಿಖೆಯನ್ನು ಸಿಬಿಐ ನಿರ್ದೇಶಕರು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಪೀಠ ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್‌ ಅವರಿದ್ದ ಪೀಠವು, ‘ಈ ವಿಚಾರಕ್ಕೆ ನ್ಯಾಯಾಲಯವನ್ನು ರಣರಂಗವಾಗಿ ಬಳಸಿಕೊಳ್ಳಲು ಅವಕಾಶ ಕೊಡುವುದಿಲ್ಲ. ದೇವರಲ್ಲಿ ನಂಬಿಕೆ ಹೊಂದಿರುವ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆಯಾಗುವುದನ್ನು ತಪ್ಪಿಸಲು ಎಸ್‌ಐಟಿ ರಚನೆ ಮಾಡಲಾಗಿದೆʼ ಎಂದು ಹೇಳಿತು. ಈ ಹಿಂದೆ ಇದರ ತನಿಖೆಗಾಗಿ ರಾಜ್ಯ ಸರಕಾರ ಒಂದು ಎಸ್‌ಐಟಿ ರಚಿಸಿತ್ತು. ಅದು ಈಗ ರದ್ದಾಗಿದೆ.

ಇದನ್ನೂ ಓದಿ: Tirupati Laddu Row: ತಿರುಪತಿ ಲಡ್ಡು ವಿವಾದ; ಹೊಸ SIT ರಚಿಸಿ ಸುಪ್ರೀಂ ಮಹತ್ವದ ಆದೇಶ