ಭಾನುವಾರ ತಡರಾತ್ರಿ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ನ(CPL 2024) 12ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ಮಾಲೀಕತ್ವದ ಸೇಂಟ್ ಲೂಸಿಯಾ ಕಿಂಗ್ಸ್(Saint Lucia Kings) ಚಾಂಪಿಯನ್ ಪಟ್ಟ ಅಲಂಕರಿಸಿತು. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ತಂಡ 6 ವಿಕೆಟ್ ಅಂತರದಿಂದ ಗಯಾನಾ ಅಮೆಝಾನ್ ವಾರಿಯರ್ಸ್ಗೆ(Guyana Amazon Warriors) ಸೋಲುಣಿಸಿತು. ಕಪ್ ಎತ್ತಿ ಹಿಡಿಯಿವ ವೇಳೆ ಸೇಂಟ್ ಲೂಸಿಯಾ ತಂಡದ ಆಟಗಾರರು ಸಂಭ್ರಮಿಸಿದ ವಿಡಿಯೊ ವೈರಲ್ ಆಗಿದೆ.
2022 ಕತಾರ್ನಲ್ಲಿ ನಡೆದ ಫಿಫಾ ಫುಟ್ಬಾಲ್ ವಿಶ್ವ ಕಪ್(Fifa World Cup 2022) ರೋಮಾಂಚನಕಾರಿ ಫೈನಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ(Lionel Messi) ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್ ತಂಡವನ್ನು ಮಣಿಸಿ 36 ವರ್ಷಗಳ ಬಳಿಕ ವಿಶ್ವ ಚಾಂಪಿಯನ್ ಆಗಿ ಹೊರಮೊಮ್ಮಿತ್ತು. ಲಿಯೋನೆಲ್ ಮೆಸ್ಸಿ ಅವರು ವಿಭಿನ್ನ ಶೈಲಿಯಲ್ಲಿ ಬಂದು ಕಪ್ ಎತ್ತಿ ಹಿಡಿಯುವ ಮೂಲಕ ಫೋಟೊಗೆ ಫೋಸ್ ಕೊಟ್ಟಿದ್ದರು. ಅಂದಿನಿಂದ ಯಾವುದೇ ಟೂರ್ನಿ ನಡೆದರೂ ಚಾಂಪಿಯನ್ ತಂಡ ಮೆಸ್ಸಿ ಮತ್ತು ತಂಡದ ಆಟಗಾರರ ಸಂಭ್ರಮಿಸಿದ ಶೈಲಿಯಲ್ಲೇ ಸಂಭ್ರಮಾಚರಣೆ ಮುಂದುವರಿಸಿದ್ದಾರೆ.
ಇದನ್ನೂ ಓದಿ Viral Video: ಮೂಗಿನ ಕೂದಲು ಕೀಳುವುದು ಆಗುವ ನಷ್ಟವೇನು? ವಿಡಿಯೊದಲ್ಲಿದೆ ಎಲ್ಲ ವಿವರ
ಇತ್ತೀಚೆಗೆ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಕೂಡ ಮೆಸ್ಸಿಯ ಶೈಲಿಯಲ್ಲೇ ವಿಶ್ವಕಪ್ ಎತ್ತಿ ಸಂಭ್ರಮಿಸಿದ್ದರು. ಇದೀಗ ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಸಹ ಆಟಗಾರರು ಇದೇ ರೀತಿ ಸಂಭ್ರಮಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಐಪಿಎಲ್ ಇತಿಹಾಸದಲ್ಲಿ ಒಮ್ಮೆಯೂ ಟ್ರೋಫಿ ಗೆಲ್ಲದ ಪಂಜಾಬ್ ಕಿಂಗ್ಸ್, ಕೆರಿಬಿಯನ್ ಲೀಗ್ನಲ್ಲಿ ಕಪ್ ಗೆಲ್ಲುವ ಮೂಲಕ ಚೊಚ್ಚಲ ಕಪ್ ಒಂದನ್ನು ಗೆದ್ದ ಸಾಧನೆ ಮಾಡಿದೆ. ಗಯಾನದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಗಯಾನಾ ಅಮೆಝಾನ್ ವಾರಿಯರ್ಸ್ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ ಕೇವಲ 138 ರನ್ ಗಳಿಸಲಷ್ಟೇ ಶಕ್ತವಾಯಿತು. ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಸೇಂಟ್ ಲೂಸಿಯಾ ಕಿಂಗ್ಸ್ 18.1 ಓವರ್ಗಳಲ್ಲಿ 4 ವಿಕೆಟ್ಗೆ 139 ರನ್ ಬಾರಿಸಿ ಗೆಲುವು ಸಾಧಿಸಿತು.