Wednesday, 23rd October 2024

Haryana Election Result : ಹರಿಯಾಣದಲ್ಲಿ ಆಡಳಿತ ವಿರೋಧಿ ಅಲೆ ಮೀರಿ ಬಿಜೆಪಿ ಗೆದ್ದರೂ 8 ಸಚಿವರಿಗೆ ಸೋಲು!

Haryana Election Results

ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ (Haryana Election Result) ಬಿಜೆಪಿ ಅಚ್ಚರಿಯ ಗೆಲುವು ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸುವಲ್ಲಿ ಸೋತಿರಬಹುದು. ಆದರೆ ಪ್ರಸ್ತುತ ನಯಾಬ್ ಸಿಂಗ್ ಸೈನಿ ಸರ್ಕಾರದಲ್ಲಿ ಎಂಟು ಸಚಿವರು ಮತ್ತು ವಿಧಾನಸಭಾ ಸ್ಪೀಕರ್ ಗ್ಯಾನ್ ಚಂದ್ ಗುಪ್ತಾ ಸೋಲನ್ನು ಅನುಭವಿಸಿರುವುದು ಆಡಳಿತ ವಿರೋಧಿ ಅಲೆಗೆ ಕೆಲವು ಸಾಕ್ಷಿಗಳಾಗಿವೆ. ಈ ಚುನಾವಣೆಯಲ್ಲಿ ಸೋತ ಸಚಿವರಲ್ಲಿ 2019-2024ರವರೆಗೆ ಹರಿಯಾಣದ ವಿದ್ಯುತ್ ಸಚಿವರಾಗಿ ಸೇವೆ ಸಲ್ಲಿಸಿದ ರಂಜಿತ್ ಸಿಂಗ್ ಕೂಡ ಒಬ್ಬರು. ಹರಿಯಾಣದ ರಾನಿಯಾ ಕ್ಷೇತ್ರದಲ್ಲಿ ಮಾಜಿ ಸಂಸದ ಮೂರನೇ ಸ್ಥಾನ ಪಡೆದಿದ್ದಾರೆ. ಅವರ ವಿರುದ್ಧ ಭಾರತೀಯ ರಾಷ್ಟ್ರೀಯ ಲೋಕದಳದ ಅರ್ಜುನ್ ಚೌಟಾಲಾ ಗೆದ್ದಿದ್ದಾರೆ.

ಪ್ರಸ್ತುತ ಸರ್ಕಾರದಲ್ಲಿ ಅನೇಕ ಖಾತೆಗಳನ್ನು ನಿರ್ವಹಿಸಿದ ಮತ್ತು 2014-2019 ರವರೆಗೆ ಹರಿಯಾಣ ವಿಧಾನಸಭಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ ಕನ್ವರ್ ಪಾಲ್ ಗುಜ್ಜರ್ ಜಗಾದ್ರಿಯಲ್ಲಿ ಸೋತಿದ್ದಾರೆ. ಅವರು ಕಾಂಗ್ರೆಸ್ ನ ಅಕ್ರಂ ಖಾನ್ ವಿರುದ್ಧ ಸುಮಾರು 7,000 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಥಾನೇಸರ್ ಕ್ಷೇತ್ರದಲ್ಲಿ ಸುಭಾಷ್ ಸುಧಾ, ಲೋಹಾರುದಿಂದ ಜೈ ಪ್ರಕಾಶ್ ದಲಾಲ್, ನಂಗಲ್‌ನಲ್ಲಿ ಅಭೇ ಸಿಂಗ್ ಯಾದವ್, ನುಹ್‌ನಲ್ಲಿ ಸಂಜಯ್ ಸಿಂಗ್, ಹಿಸಾರ್‌ನಲ್ಲಿ ಕಮಲ್ ಗುಪ್ತಾ ಮತ್ತು ಅಂಬಾಲಾ ನಗರದಲ್ಲಿ ಅಸೀಮ್ ಗೋಯೆಲ್ ಈ ಚುನಾವಣೆಯಲ್ಲಿ ಬಿಜೆಪಿಯ ಅಚ್ಚರಿಯ ಗೆಲುವಿನ ನಡುವೆ ಸೋಲನ್ನು ಅನುಭವಿಸಿದ ಇತರ ಮಂತ್ರಿಗಳು. ಈ ಪೈಕಿ ಸಂಜಯ್ ಸಿಂಗ್ ಮತ್ತು ಕಮಲ್ ಗುಪ್ತಾ ಮೂರನೇ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: Narendra Modi : ಭಾರತ ವಿರುದ್ಧದ ಅಂತಾರಾಷ್ಟ್ರೀಯ ಪಿತೂರಿಯಲ್ಲಿ ಕಾಂಗ್ರೆಸ್‌ ಭಾಗಿ; ಮೋದಿ ಆರೋಪ

2014 ಮತ್ತು 2019 ರಲ್ಲಿ ಪಂಚಕುಲ ವಿಧಾನಸಭಾ ಸ್ಥಾನ ಗೆದ್ದಿದ್ದ ಹರಿಯಾಣ ವಿಧಾನಸಭಾ ಸ್ಪೀಕರ್ ಗ್ಯಾನ್ ಚಂದ್ ಗುಪ್ತಾ ಈ ಬಾರಿ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಅವರ ಪುತ್ರ ಕಾಂಗ್ರೆಸ್ನ ಚಂದರ್ ಮೋಹನ್ ವಿರುದ್ಧ ಸೋತಿದ್ದಾರೆ. ಆದಾಗ್ಯೂ, ಮುಖ್ಯಮಂತ್ರಿ ಸೈನಿ ಲಾಡ್ವಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳು ಮತ್ತು ಆಡಳಿತ ವಿರೋಧಿ ಸಿದ್ಧಾಂತಗಳನ್ನುಮೀರಿ ಬಿಜೆಪಿ ಇಂದು ಹರಿಯಾಣದಲ್ಲಿ 90 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಅತ್ಯುತ್ತಮ ಚುನಾವಣಾ ಪ್ರದರ್ಶನ ನೀಡಿದೆ. ಕಾಂಗ್ರೆಸ್‌ ನಿರಾಸೆಗೆ ಒಳಗಾಗಿದೆ.

ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಹೀಗಾಗಿ ಪಕ್ಷದ ಬೆಂಬಲಿಗರು ಸಂಭ್ರಮಿಸಲು ಆರಂಭಿಸಿದರು. ನಂತರದಲ್ಲಿ ಬಿಜೆಪಿಯದ್ದೇ ಆಟವಾಯಿತು.