Friday, 22nd November 2024

Haryana Election Result : ರಾಹುಲ್ ಗಾಂಧಿ ಮನೆಗೆ 1 ಕೆ.ಜಿ ಜಿಲೇಬಿ ಕಳುಹಿಸಿಕೊಟ್ಟ ಹರಿಯಾಣ ಬಿಜೆಪಿ

Haryana Election Results

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಹರಿಯಾಣ ಚುನಾವಣೆಯ (Haryana Election Result) ಗೋಹಾನಾ ರ್ಯಾಲಿಯಲ್ಲಿ ಸ್ಥಳೀಯ ಸಿಹಿತಿಂಡಿ ಜಿಲೇಬಿ ಅಂಗಡಿಯ ಬಗ್ಗೆ ನೀಡಿದ ಹೇಳಿಕೆಗಳು ಕಾಂಗ್ರೆಸ್ ಸೋಲಿನ ಬಳಿಕ ವೈರಲ್ ಆಗಿದೆ. ಅನಿರೀಕ್ಷಿತ ಗೆಲುವಿನ ಹಿನ್ನೆಲೆಯಲ್ಲಿ ಸಂಭ್ರಮದಲ್ಲಿದ್ದ ಬಿಜೆಪಿ, ರಾಹುಲ್ ಗಾಂಧಿ ಮನೆಗೆ ಒಂದು ಕೆ.ಜಿ ಜಿಲೇಬಿ ಕಳುಹಿಸಿಕೊಟ್ಟಿದೆ. ಜಿಲೇಬಿಯನ್ನೇ ಹಿಡಿದುಕೊಂಡು ಬಿಜೆಪಿ ರಾಹುಲ್ ಗಾಂಧಿಯನ್ನು ಟ್ರೋಲ್ ಮಾಡುವ ಜತೆಗೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ಜಿಲೇಬಿ ಕಳುಹಿಸಿಕೊಡುವ ಮೂಲಕ ರಾಜಕೀಯ ಸೇಡು ತೀರಿಸಿಕೊಂಡಿದೆ.

ಹರಿಯಾಣದಲ್ಲಿ ಬಿಜೆಪಿ ಅದ್ಭುತ ಮತ್ತು ಆಶ್ಚರ್ಯಕರ ವಿಜಯವನ್ನು ದಾಖಲಿಸುತ್ತಿದ್ದಂತೆ ಪಕ್ಷದ ರಾಜ್ಯ ಘಟಕವು ರಾಹುಲ್ ಗಾಂಧಿ ಅವರ ಮನೆಗೆ ಜಿಲೇಬಿ ಪೊಟ್ಟಣ ಆರ್ಡರ್ ಮಾಡಿದೆ. ದೆಹಲಿಯ ಕನೌಟ್‌ ಪ್ಲೇಸ್‌ನ ಸ್ವೀಟ್‌ ಅಂಗಡಿಯಿಂದ ಅಕ್ಬರ್ ರಸ್ತೆಯಲ್ಲಿರುವ ನಿವಾಸಕ್ಕೆ 1 ಕೆ.ಜಿ ಡೀಪ್ ಫ್ರೈಡ್ ಜಿಲೇಬಿ ಆರ್ಡರ್ ಮಾಡಲಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: Narendra Modi : ಭಾರತ ವಿರುದ್ಧದ ಅಂತಾರಾಷ್ಟ್ರೀಯ ಪಿತೂರಿಯಲ್ಲಿ ಕಾಂಗ್ರೆಸ್‌ ಭಾಗಿ; ಮೋದಿ ಆರೋಪ

“ಹರಿಯಾಣದ ಎಲ್ಲಾ ಕಾರ್ಯಕರ್ತರ ಪರವಾಗಿ ಜಿಲೇಬಿಯನ್ನು ರಾಹುಲ್ ಗಾಂಧಿ ಅವರ ಮನೆಗೆ ಕಳುಹಿಸಲಾಗಿದೆ” ಎಂದು ಹರಿಯಾಣ ಬಿಜೆಪಿ ತಿಳಿಸಿದೆ.

ಸಕ್ಕರೆ ಪಾಕದಲ್ಲಿ ಅದ್ದಿರುವ ಸುರುಳಿ ಸಿಹಿ ಹಿಟ್ಟಿನ ಜಿಲೇಬಿಯನ್ನು ಹರಿಯಾಣ ರಾಜಕೀಯಕ್ಕೆ ಎಳೆದು ತಂದವರು ರಾಹುಲ್ ಗಾಂಧಿ. ಆದರೀಗ ಬಿಜೆಪಿ ಈ ಜನಪ್ರಿಯ ಸಿಹಿ ತಿಂಡಿಯನ್ನು ರಾಹುಲ್ ಗಾಂಧಿಗೆ ತಿನ್ನಿಸುತ್ತಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಹರ್ಯಾಣ ಕಾಂಗ್ರೆಸ್ ನಾಯಕ ದೀಪೇಂದರ್ ಸಿಂಗ್ ಹೂಡಾ ಅವರು ರಾಹುಲ್ ಗಾಂಧಿಗೆ ಮಥುರಾಮ್ ಜಿಲೇಬಿ ಉಡುಗೊರೆಯಾಗಿ ನೀಡಿದ್ದರು. ಈ ವೇಳೆ ರಾಹುಲ್‌ ಇದು 54 ವರ್ಷಗಳಲ್ಲಿ ತಾವು ತಿಂದ “ಅತ್ಯುತ್ತಮ ಜಿಲೇಬಿ” ಎಂದು ಹೇಳಿಕೊಂಡರು. ಅಲ್ಲಿಗೆ ನಿಲ್ಲದ ಅವರು ಪ್ರತಿಯೊಬ್ಬರೂ ಈ ಜಿಲೇಬಿಗಳನ್ನು ತಿನ್ನುವ ದಿನಗಳು ದೂರವಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಲೇಬಿಗಳನ್ನು ಕಾರ್ಖಾನೆ ಮಟ್ಟದಲ್ಲಿ ಉತ್ಪಾದಿಸುತ್ತೇವೆ. ಹೊಸ ಉದ್ಯೋಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದರು. ಹೀಗಾಗಿ ಜಿಲೇಜಿ ಹರಿಯಾಣ ಚುನಾವಣಾ ಕಣದ ಆಕರ್ಷಕ ಸಂಗತಿಯಾಯಿತು.

ರಾಹುಲ್ ಗಾಂಧಿ ಹೇಳಿದ್ದೇನು?

ಮಥುರಾಮ್‌ ಜಿಲೇಬಿಯ ರುಚಿಯನ್ನು ನೋಡಿದ್ದೇನೆ. ಇಂದು ನಾನು ನನ್ನ ಜೀವನದ ಅತ್ಯುತ್ತಮ ಜಿಲೇಬಿ ತಿಂದೆ. ನನ್ನ ಸಹೋದರಿ ಪ್ರಿಯಾಂಕಾಗೆ ಈ ಖುಷಿಯ ಸಂದೇಶ ಹಂಚಿಕೊಂಡಿದ್ದೇನೆ. ನಾನು ನಿಮಗೂ ಒಂದು ಬಾಕ್ಸ್ ಜಿಲೇಬಿ ತರುವೆ. ಗೋಹಾನಾದ ಜಿಲೇಬಿ ಭಾರತದ ಮತ್ತು ವಿಶ್ವದ ಎಲ್ಲಾ ಮೂಲೆಗಳನ್ನು ತಲುಪಬೇಕು ಎಂದು ಹರಿಯಾಣ ಕಾಂಗ್ರೆಸ್ ನಾಯಕರಿಗೆ ಹೇಳಿದ್ದೇನೆ ಎಂದು ಅವರು ಹೇಳಿದ್ದರು.

“ಈ ಜಿಲೇಬಿ ದೇಶ ಮತ್ತು ವಿದೇಶಗಳಿಗೆ ಹೋದರೆ, ಬಹುಶಃ ಅವರ ಅಂಗಡಿಗಳು ಕಾರ್ಖಾನೆಯಾಗಿ ಬದಲಾಗುತ್ತವೆ. ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತದೆ” ಎಂದು ರಾಹುಲ್ ಹೇಳಿದ್ದರು. ಹರಿಯಾಣ ಚುನಾವಣಾ ಫಲಿತಾಂಶಕ್ಕೆ ಮೂರು ದಿನಗಳ ಮೊದಲು, ರಾಹುಲ್ ಗಾಂಧಿ ರುಚಿಕರವಾದ ಮಥುರಾಮ್ ಜಿಲೇಬಿಯನ್ನು ಚರ್ಚಿಸುವ ಇನ್ಸ್ಟಾಗ್ರಾಮ್ ವೀಡಿಯೊ ಕೂಡ ಪೋಸ್ಟ್ ಮಾಡಿದ್ದರು.