Friday, 22nd November 2024

Haryana Election Results 2024: ಬಿಜೆಪಿ 20 ಸ್ಥಾನ ಗೆದ್ದರೆ ಹೆಸರು ಬದಲಾಯಿಸುತ್ತೇನೆ; ಟ್ರೋಲ್‌ಗೆ ಗುರಿಯಾಯ್ತು ಕಾಂಗ್ರೆಸ್‌ ನಾಯಕಿಯ ಸವಾಲು

Haryana Election Results 2024

ಚಂಡೀಗಢ: ಲೋಕಸಭಾ ಚುನಾವಣೆಯ ಬಳಿಕ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣದಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿತ್ತು. ಇದೀಗ ಫಲಿತಾಂಶ ಹೊರ ಬಿದ್ದಿದ್ದು, ಚುನಾವಣೋತ್ತರ ಸಮೀಕ್ಷೆಗಳನ್ನೆಲ್ಲ ತಲೆಕೆಳಗೆ ಮಾಡಿ ಹರಿಯಾಣದಲ್ಲಿ ಬಿಜೆಪಿ ಮತ್ತೆ ಜಯಭೇರಿ ಮೊಳಗಿಸಿದೆ (Haryana Election Results 2024). ಆ ಮೂಲಕ ಸತತ ಮೂರನೇ ಬಾರಿ ಅಧಿಕಾರಕ್ಕೇರಿ ಐತಿಹಾಸಿಕ ಸಾಧನೆ ಮಾಡಿದೆ. 90 ಕ್ಷೇತ್ರಗಳ ಪೈಕಿ 48 ಸೀಟುಗಳನ್ನು ಗೆದ್ದು ಸರಳ ಬಹುಮತ ಪಡೆದುಕೊಂಡಿದೆ. ಈ ಮಧ್ಯೆ ಹರಿಯಾಣದಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದರೆ ಹೆಸರನ್ನೇ ಬದಲಾಯಿಸುವುದಾಗಿ ಸವಾಲು ಹಾಕಿದ್ದ ಕಾಂಗ್ರೆಸ್‌ ನಾಯಕಿಯ ವಿಡಿಯೊ ಇದೀಗ ವೈರಲ್‌ ಆಗಿದೆ. ಟ್ರೋಲಿಗರಿಗೆ ಆಹಾರವಾಗಿದ್ದಾರೆ (Viral Video).

ಚಾನಲ್‌ ಒಂದರ ಚರ್ಚೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನಾಟೆ (Supriya Shrinate) ಅವರು ಬಿಜೆಪಿಗೆ ಸವಾಲು ಹಾಕಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಈ ಬಾರಿ 20 ಸ್ಥಾನಗಳನ್ನು ಗೆದ್ದುಕೊಂಡರೆ ತಮ್ಮ ಹೆಸರನ್ನೇ ಬದಲಾಯಿಸುವುದಾಗಿ ಅವರು ಹೇಳಿರುವ ವಿಡಿಯೊ ಸಖತ್‌ ಟ್ರಂಡಿಂಗ್‌ನಲ್ಲಿದೆ. ಇಂಟರ್‌ನೆಟ್‌ನಲ್ಲಿ ಸದ್ಯ ಈ ವಿಡಿಯೊವೇ ಸದ್ದು ಮಾಡುತ್ತಿದೆ.

ಸುಪ್ರಿಯಾ ಶ್ರೀನಾಟೆ ಹೇಳಿದ್ದೇನು?

ನ್ಯೂಸ್‌ 24 (News 24) ಚಾನಲ್‌ನ ಸಭೆಯಲ್ಲಿ ಭಾಗವಹಿಸಿದ್ದ ಅವರು, ʼʼಒಂದುವೇಳೆ ಬಿಜೆಪಿ 20 ಕಡೆ ಗೆಲುವು ಸಾಧಿಸಿದ್ದೇ ಆದರೆ ನನ್ನ ಹೆಸರನ್ನೇ ಚೇಂಜ್‌ ಮಾಡುತ್ತೇನೆ. ಬಿಜೆಪಿ 15-20 ಸ್ಥಾನಗಳಲ್ಲಿ ಜಯ ಗಳಿಸಬಹುದು. ಬಹುಶಃ ಅದಕ್ಕಿಂತ ಕಡಿಮೆ ಸೀಟು ಸಿಗಬಹುದೇ ಹೊರತು ಹೆಚ್ಚು ಬರಲು ಸಾಧ್ಯವಿಲ್ಲʼʼ ಎಂದು ಹೇಳಿದ್ದರು. ಎಬಿಪಿ ನ್ಯೂಸ್‌ (ABP News)ಗೆ ನೀಡಿದ ಸಂದರ್ಶನದಲ್ಲಿಯೂ ಅವರು ಇದೇ ರೀತಿಯ ಹೇಳಿಕೆ ನೀಡಿದ್ದರು. ʼʼಬಿಜೆಪಿ 20 ಹೆಚ್ಚು ಸೀಟು ಗಳಿಸಿದರೆ ಅದನ್ನು ನಾನು ಅತ್ಯುತ್ತಮ ಎನ್ನುವುದಾಗಿ ಪರಿಗಣಿಸುತ್ತೇನೆʼʼ ಎಂದಿದ್ದರು.

ಕಾಂಗ್ರೆಸ್‌ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದ ನಾಯಕಿ

ಇದೇ ವೇಳೆ ಅವರು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎನ್ನುವ ವಿಸ್ವಾಸ ವ್ಯಕ್ತಪಡಿಸಿದ್ದರು. ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳೂ ಇದನ್ನೇ ಊಹಿಸಿದ್ದವು. ಈ ಬಗ್ಗೆ ಮಾತನಾಡಿದ್ದ ಅವರು ಸಮೀಕ್ಷೆಗಿಂತಲೂ ಹೆಚ್ಚಿನ ಸೀಟನ್ನು ಕಾಂಗ್ರೆಸ್‌ ಗೆಲ್ಲಲಿದೆ ಎಂದಿದ್ದರು. ಹರಿಯಾಣದಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ತಲೆಕೆಳಗಾದ ಲೆಕ್ಕಾಚಾರ

ಎಕ್ಸಿಟ್‌ ಪೋಲ್‌ ಸಮೀಕ್ಷೆಯಂತೆಯೇ ಮತ ಎಣಿಕೆಯ ಆರಂಭದಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿತ್ತು. ಬಿಜೆಪಿ ಹ್ಯಾಟ್ರಿಕ್‌ ಕನಸು ನುಚ್ಚುನೂರಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ಮರಳಲಿದೆ ಎಂದೇ ಹೇಳಲಾಗಿತ್ತು. ಆದರೆ ಕೆಲ ಹೊತ್ತಿನಲ್ಲೇ ಚಿತ್ರಣ ಸಂಪೂರ್ಣ ಬದಲಾಯಿತು. ಈ ಬಾರಿಯೂ ಮತದಾರರು ಬಿಜೆಪಿ ಕೈ ಹಿಡಿದಿರುವುದು ಸ್ಪಷ್ಟವಾಗಿದೆ. ಹರಿಯಾಣದಲ್ಲಿ ಕಾಂಗ್ರೆಸ್‌ 37 ಕಡೆ ಜಯ ದಾಖಲಿಸಿದೆ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಬಿಜೆಪಿ ಉತ್ತಮ ಸಾಧನೆ ಮಾಡಿದ್ದು, 29 ಸ್ಥಾನಗಳನ್ನು ಗೆದ್ದುಕೊಂಡಿದೆ. ಇಲ್ಲಿ ಕಾಂಗ್ರೆಸ್‌, ನ್ಯಾಷನಲ್‌ ಕಾನ್ಫರೆನ್ಸ್‌ ಮೈತ್ರಿಕೂಟ 49 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿ ಅಧಿಕಾರಕ್ಕೆ ಬಂದಿದೆ.

ಈ ಸುದ್ದಿಯನ್ನೂ ಓದಿ: Haryana Election Result : ಹರಿಯಾಣದಲ್ಲಿ ಆಡಳಿತ ವಿರೋಧಿ ಅಲೆ ಮೀರಿ ಬಿಜೆಪಿ ಗೆದ್ದರೂ 8 ಸಚಿವರಿಗೆ ಸೋಲು!