ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ranjithHoskere@gmail.com
ಯಾವುದೇ ರಾಜಕೀಯ ಪಕ್ಷಕ್ಕೆ ಒದಗುವ ಕೆಲ ಹಿನ್ನಡೆಗಳು ಅದರ ಮುಂದಿನ ಭವಿಷ್ಯಕ್ಕೆ ನಾಂದಿ. ಚುನಾವಣೋತ್ತರ ಸಮೀಕ್ಷೆಗಳನ್ನೂ ಮೀರಿ ಬಿಜೆಪಿ ಗೆಲ್ಲುವುದೋ ಅಥವಾ ಸಮೀಕ್ಷೆಗಳಂತೆ ದಶಕದ ಬಳಿಕ ಕಾಂಗ್ರೆಸ್ ಗದ್ದುಗೆ ಯೇರುವುದೋ ಎನ್ನುವುದು ಇಂದು ಸ್ಪಷ್ಟವಾಗಲಿದೆ.
ಮೇಲಿದ್ದವನು ಕೆಳಗಿಳಿಯಬೇಕು, ಕೆಳಗಿದ್ದವನು ಮೇಲೇರಬೇಕು’ ಇದು ಜಗದ ನಿಯಮ. ಯಾವುದೇ
ಕ್ಷೇತ್ರ ದಲ್ಲಾದರೂ, ಈ ಚಕ್ರ ಒಂದಿಲ್ಲೊಂದು ದಿನ ಬದಲಾವಣೆಯಾಗುವುದು ಸರ್ವೇಸಾಮಾನ್ಯವಾಗಿರುತ್ತದೆ. ರಾಜಕೀಯದಲ್ಲಿಯೂ ಕೆಲ ವರ್ಷಗಳಿಗೊಮ್ಮೆ ಕಾಲಚಕ್ರ ತಿರುಗುವುದು ಸಾಮಾನ್ಯ. ಚೀನಾ, ಉತ್ತರ ಕೊರಿಯಾದಂಥ ಸರ್ವಾಧಿಕಾರಿ ಪ್ರಭುತ್ವದ ರಾಷ್ಟ್ರಗಳನ್ನು ಹೊರತುಪಡಿಸಿ, ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿರುವ ಬಹುತೇಕ ರಾಷ್ಟ್ರಗಳಲ್ಲಿ ಇಂದು ಆಡಳಿತ ಪಕ್ಷದಲ್ಲಿದವನು, ನಾಳೆ ಪ್ರತಿಪಕ್ಷಕ್ಕೆ ಹೋಗುವುದು ಸಾಮಾನ್ಯ. ಅದರಲ್ಲಿಯೂ ಭಾರತದಂಥ ವಿಭಿನ್ನ ರಾಜಕೀಯ ಮನಸ್ಥಿತಿಯ ದೇಶದಲ್ಲಿ
ಇದೊಂದು ಸಹಜ ಪ್ರಕ್ರಿಯೆ.
ಕಳೆದ ಒಂದು ಒಂದೂವರೆ ದಶಕದ ಈಚೆಗೆ ಭಾರತದಲ್ಲಿ ಬಿಜೆಪಿ ಬೆಳೆದ ಪರಿಯನ್ನು ಸೂಕ್ಷ್ಮವಾಗಿ ಗಮನಿಸಿದ
ಅನೇಕರನ್ನು ‘ಪ್ರಜಾಪ್ರಭುತ್ವ ವ್ಯವಸ್ಥೆಯ ಈ ಕಾಲಚಕ್ರಕ್ಕೆ ವಿರುದ್ಧವಾಗಿ ಭಾರತದ ಚುನಾವಣೆಗಳು ನಡೆಯುತ್ತಿ
ವೆಯೇ?’ ಎನ್ನುವ ಅನುಮಾನ ಕಾಡಿತ್ತು. ಈ ಅನುಮಾನಗಳಿಗೆ ಪೂರಕವಾಗಿ ವರ್ಷದಿಂದ ವರ್ಷಕ್ಕೆ ರಾಷ್ಟ್ರಮಟ್ಟದ
ವ್ಯಾಪ್ತಿಯಲ್ಲಿ ಬಿಜೆಪಿ ವಿರುದ್ಧ ‘ಆಡಳಿತ ವಿರೋಧಿ’ ಅಲೆ ಹೆಚ್ಚಾಗುವ ಯಾವುದೇ ಸೂಚನೆಗಳು ಕಾಣಿಸಿ ಕೊಂಡಿರಲಿಲ್ಲ.
ಕೆಲವೊಂದಷ್ಟು ರಾಜ್ಯಗಳನ್ನು ಕಳೆದುಕೊಂಡರೂ ಅವುಗಳಿಗೆ ಸ್ಥಳೀಯ ನಾಯಕತ್ವದ ಸಮಸ್ಯೆ ಕಾರಣ ಎನ್ನುವುದು ಸಾಬೀತಾಗಿತ್ತು. ಈ ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಮತದಾರನಿಗೆ ‘ಬಿಜೆಪಿಯ ಮೋದಿ ವರ್ಸಸ್ ಯಾರು’ ಎನ್ನುವ ಪ್ರಶ್ನೆ ಬಂದಾಗ ಬಿಜೆಪಿಯೇತರ ಪಕ್ಷಗಳು ‘ನಾಯಕ’ನನ್ನು ತೋರಿಸುವಲ್ಲಿ ವಿಫಲವಾಗಿದ್ದು ಇದಕ್ಕೆ ಪ್ರಮುಖ ಕಾರಣ ಎಂದರೆ ತಪ್ಪಾಗುವುದಿಲ್ಲ.
೨೦೨೪ರ ಲೋಕಸಭಾ ಚುನಾವಣೆಯಲ್ಲಿಯೂ ಎಲ್ಲಿಯೂ ಬಹಿರಂಗವಾಗಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆಯಿರಲಿಲ್ಲ. ಆದರೆ ‘ಗುಪ್ತಗಾಮಿನಿ’ಯಾಗಿದ್ದ ಆಡಳಿತ ವಿರೋಧಿ ಅಲೆ ಬಹಿರಂಗವಾಗಿದ್ದು ಫಲಿತಾಂಶದ
ಸಮಯದಲ್ಲಿಯೇ. ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿ ಇತಿಹಾಸವನ್ನು ಎನ್‌ಡಿಎ ನಿರ್ಮಿಸಿದರೂ,
ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿಲ್ಲ.
ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಹಲವು ನಾಯಕರು ಹೇಳಿದ್ದ ಸ್ಪಷ್ಟ ಬಹುಮತವನ್ನು ದೇಶದ ಜನ ನೀಡಲಿಲ್ಲ. ಬಿಜೆಪಿಯ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕುವಲ್ಲಿ ಮೂರನೇ ಬಾರಿಯೂ ಕಾಂಗ್ರೆಸ್ ವಿಫಲ ವಾಯಿತು ಎನ್ನುವುದು ಎಷ್ಟು ಸತ್ಯವೋ, ಎರಡು ಬಾರಿ ಅಧಿಕೃತ ಪ್ರತಿಪಕ್ಷವಿಲ್ಲದಂತೆ ನೋಡಿಕೊಂಡ ಬಿಜೆಪಿಗೆ ಈ ಬಾರಿ ಎಲ್ಲವನ್ನು ‘ಅಳೆದು ತೂಗಿ’ ತೀರ್ಮಾನಿಸಬೇಕಾದ ಪರಿಸ್ಥಿತಿ ಎದುರಾಗಿರುವುದೂ ಅಷ್ಟೇ ಸತ್ಯ.
ಇದೀಗ ಜಮ್ಮು ಕಾಶ್ಮೀರ, ಹರಿಯಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ಹಿನ್ನಡೆ ಯಾಗುವ ಸಾಧ್ಯತೆಯಿದೆ ಎನ್ನು ವುದನ್ನು ಚುನಾಣೋತ್ತರ ಸಮೀಕ್ಷೆಗಳು ತೋರಿಸಿರುವುದು ರಾಜಕಾರಣದ ಕಾಲಚಕ್ರ ‘ತಿರುಗಲು’ ಆರಂಭವಾಗಿದೆಯೇ ಎನ್ನುವ ಅನುಮಾನ ಮೂಡಿಸಿದೆ.
ಹಾಗೆ ನೋಡಿದರೆ, ಮೂರು ದಶಕಗಳ ಹಿಂದೆ ದೇಶದಲ್ಲಿ ಬಿಜೆಪಿಯಿದ್ದ ಪರಿಸ್ಥಿತಿಗೆ ಹೋಲಿಸಿದರೆ, ಇಡೀ ದೇಶದಲ್ಲಿ
ಸಂಘಟನೆಯನ್ನು ವಿಸ್ತರಿಸುವ, ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯುವ ಯಾವ
ಲಕ್ಷಣಗಳೂ ಪಕ್ಷಕ್ಕೆ ಇರಲಿಲ್ಲ. ಆದರೆ ಕಾಂಗ್ರೆಸ್‌ನಲ್ಲಿನ ನಾಯಕತ್ವದಲ್ಲಿ ಹಲವು ಬದಲಾವಣೆ, ಸತತ ಎರಡು ಬಾರಿ
ಅಧಿಕಾರ ನಡೆಸಿದ ಯುಪಿಎ ಸರಕಾರದ ವಿರುದ್ಧವಿದ್ದ ‘ಆಡಳಿತ ವಿರೋಧಿ’ ಅಲೆ, ‘ಸ್ವಚ್ಛ ಆಡಳಿತ’ದ ಹಣೆಪಟ್ಟಿ ಯೊಂದಿಗೆ ಅಖಾಡಕ್ಕಿಳಿದ ಮೋದಿ ‘ಮೇನಿಯಾ’ದಿಂದ ಕಾಂಗ್ರೆಸ್ ಎಚ್ಚೆತ್ತುಕೊಳ್ಳುವ ವೇಳೆಗೆ ‘ಚುನಾವಣಾ
ಮೂಡ್’ ಅನ್ನು ಬಿಜೆಪಿಗರು ಸಜ್ಜುಗೊಳಿಸಿ ಕೂತಿದ್ದರು.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗರು ಸಜ್ಜುಗೊಳಿಸಿದ್ದ ಮೂಡ್ ಅನ್ನು ಅರ್ಥಮಾಡಿಕೊಂಡು
ಅದಕ್ಕೆ ಕೌಂಟರ್ ಕೊಡುವ ವೇಳೆಗಾಗಲೇ ಕಾಂಗ್ರೆಸ್ ಸೋತಿತ್ತು. ಈ ಸೋಲಿನಿಂದ ಎಚ್ಚೆತ್ತುಕೊಳ್ಳದ ಕಾಂಗ್ರೆಸ್
2019ರ ವೇಳೆಗೆ ‘ಗಟ್ಟಿ ನಾಯಕತ್ವ’ದ ಕೊರತೆಯಿಂದಾಗಿ ಚುನಾವಣೆಯನ್ನು ಬಿಟ್ಟುಕೊಟ್ಟಿತ್ತು. ಆದರೆ ಈ 10
ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಮಾಡಿದ ಎಡವಟ್ಟಿನಿಂದ, ರಾಹುಲ್ ನಾಯಕತ್ವದ ಬಾಲಿಶತನದಿಂದ ಎಚ್ಚೆತ್ತು ಕೊಂಡು 2024ರ ಚುನಾವಣೆಯನ್ನು ಏಕಾಂಗಿಯಾಗಿ ಹೋರಾಡುವುದಕ್ಕಿಂತ ‘ಇಂಡಿಯ’ ಮೈತ್ರಿಕೂಟ ದೊಂದಿಗೆ ಸ್ಪರ್ಧಿಸಿತು.
ಹಲವು ಸೀಟುಗಳನ್ನು ಬಿಟ್ಟುಕೊಂಡು ‘ತಾನು ಗೆಲ್ಲದಿದ್ದರೂ ಪರವಾಗಿಲ್ಲ. ಬಿಜೆಪಿ ಗೆಲ್ಲಬಾರದು’ ಎನ್ನುವ ಮನಸ್ಥಿತಿ
ಯಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸಿತು. ಇಷ್ಟಾದರೂ 400+ ಸ್ಥಾನದ ನಿರೀಕ್ಷೆಯಲ್ಲಿ ಬಿಜೆಪಿಯಿತ್ತು.
ಆದರೆ ದಶಕದ ಆಡಳಿತಕ್ಕೆ ದೇಶದಲ್ಲಿದ್ದ ‘ಅಂಡರ್ ಕರೆಂಟ್’ ಅನ್ನು ಅರ್ಥೈಸಿಕೊಳ್ಳುವಲ್ಲಿ ಬಿಜೆಪಿ ವಿಫಲ ವಾಗಿದ್ದ ರಿಂದ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಾರದಿದ್ದರೂ, ಎನ್‌ಡಿಎ ಮೈತ್ರಿಯ ಸಹಾಯದೊಂದಿಗೆ ಸರಕಾರದ ರಚನೆ ಮಾಡಬೇಕಾಯಿತು (ಭಾರತದಂಥ ದೇಶದಲ್ಲಿ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿರಕ್ಕೆ ಬರುವುದು ಸಣ್ಣ ಮಾತಲ್ಲ ಎನ್ನುವುದು ಬೇರೆ ವಿಷಯ). ಹಾಗೆ ನೋಡಿದರೆ, 2014ರಲ್ಲಿ ಮೋದಿ ಆಂಡ್ ಟೀಂ ಬಿಜೆಪಿಯ ಚುಕ್ಕಾಣಿಯನ್ನು ಹಿಡಿಯುತ್ತಿದ್ದಂತೆ ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ‘ಸಾಮಾಜಿಕ ಜಾಲತಾಣ’ಗಳು. ಮೋದಿ ಸೇರಿದಂತೆ ಬಿಜೆಪಿಯ ಅನೇಕರು ಫೇಸ್‌ಬುಕ್, ಟ್ವಿಟರ್
ಮೂಲಕ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಮಯದಲ್ಲಿ ಕಾಂಗ್ರೆಸ್‌ನ ಅನೇಕ ಪ್ರಮುಖ ನಾಯಕರಿಗೆ ಸಾಮಾಜಿಕ
ಜಾಲತಾಣವೆಂದರೆ ಏನು ಎನ್ನುವುದು ತಿಳಿದಿರಲಿಲ್ಲ.
2019ರಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡುವಂತೆ ಕಾಂಗ್ರೆಸಿಗರು ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟರೂ, ಸಡ್ಡು
ಹೊಡೆಯಲು ಸಾಧ್ಯವಾಗಲಿಲ್ಲ. ಆದರೆ 2024ರ ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿಯನ್ನು ಮೀರಿಸುವಂಥ
ಸಾಮಾಜಿಕ ಜಾಲತಾಣ ತಂಡವನ್ನು ಕಾಂಗ್ರೆಸಿಗರು ಕಟ್ಟಿಕೊಂಡಿದ್ದರು. ಆದರೆ, ಸಾಮಾಜಿಕ ಜಾಲತಾಣದ
ಮಹತ್ವವನ್ನು ಕಾಂಗ್ರೆಸಿಗರು ಅರಿಯುವಷ್ಟರಲ್ಲಿ ಎರಡು ಚುನಾವಣೆಗಳು ಮುಗಿದು ಹೋಗಿದ್ದವು ಎನ್ನುವುದು
ವಿಪರ್ಯಾಸ!
ಯಾವುದೇ ಪಕ್ಷಕ್ಕೆ ಸೋಲು ಹಿನ್ನಡೆಯಲ್ಲ. ಆದರೆ ಸೋತು ಪ್ರತಿಪಕ್ಷ ಸ್ಥಾನದಲ್ಲಿ ಕೂತಾಗ ಪಕ್ಷದ ಸಂಘಟನೆ ಯನ್ನು ಯಾವ ರೀತಿ ಮಾಡುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಕಾಂಗ್ರೆಸಿಗರನ್ನು ದೇಶದ ಜನ ಒಂದೆರೆಡು ಚುನಾವಣೆಯ ಬಳಿಕ ಒಪ್ಪಲಿಲ್ಲ. ಇಡೀ ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ತೆಗೆಯುವುದಕ್ಕೆ ಹೋರಾಡಿದ್ದ ಬಿಜೆಪಿ ಚಳವಳಿ ಮೂಲಕ ಬಂದ ಜನತಾ ಪಕ್ಷವನ್ನು ಜನರು ಕಣ್ಣು ಮುಚ್ಚಿ ಒಪ್ಪಲಿಲ್ಲ. ಹೀಗಿರುವಾಗ ಯಾವುದೇ ಒಂದು ಪಕ್ಷವೂ ‘ಕಣ್ಣು ಮುಚ್ಚಿ’ ದಶಕಗಳ ಕಾಲ ಆಡಳಿತ ನಡೆಸುವುದು ಸುಲಭವಲ್ಲ.
ಈಗಲೂ ದಕ್ಷಿಣ ಭಾರತ ಹೊರತುಪಡಿಸಿದರೆ ಉತ್ತರ ಭಾರತದಲ್ಲಿ ಬಿಜೆಪಿಯ ಪ್ರಾಬಲ್ಯ ಹೆಚ್ಚಿದೆ. ದೇಶದ 14
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ‘ಇಂಡಿಯ’ ಒಕ್ಕೂಟ ಅಧಿಕಾರದ ಗದ್ದುಗೆ ಹಿಡಿದಿದ್ದರೆ, 17 ರಾಜ್ಯದಲ್ಲಿ
ಎನ್‌ಡಿಎ ನೇತೃತ್ವದ ಸರಕಾರವಿದೆ. ಅದರಲ್ಲಿಯೂ 10ಕ್ಕೂ ಹೆಚ್ಚು ರಾಜ್ಯದಲ್ಲಿ ಬಿಜೆಪಿಯೇ ರಾಜ್ಯಗಳ ಆಡಳಿತದ
ಚುಕ್ಕಾಣಿಯನ್ನು ಹಿಡಿದಿದೆ. ಆದರೆ ಇತ್ತೀಚಿಗೆ ನಡೆದ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ
ಕಾಂಗ್ರೆಸ್ ಅಥವಾ ‘ಇಂಡಿಯ’ ಮೈತ್ರಿಕೂಟ ಗೆದ್ದು ಅಧಿಕಾರವನ್ನು ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ.
ಒಂದು ವೇಳೆ ಇದು ಆರಂಭವಾದರೆ, ಮುಂದಿನ ದಿನದಲ್ಲಿ ಎದುರಾಗಲಿರುವ ಸಾಲು ಸಾಲು ಚುನಾವಣೆಯಲ್ಲಿ
ಬಿಜೆಪಿಗೆ ಎಚ್ಚರಿಕೆಯ ಗಂಟೆ ಕಟ್ಟಿಟ್ಟಬುತ್ತಿ. ಆದರೆ ಈ ಪ್ರಜಾಪ್ರಭುತ್ವದ ಕಾಲಚಕ್ರ ಉರುಳುವುದಕ್ಕೆ ಇಡೀ ದೇಶದ ಮತದಾರರು ಭಾಗಿಯಾಗುತ್ತಾರೆ ಎಂದಲ್ಲ. ಏಕೆಂದರೆ ಆಡಳಿತ ಪಕ್ಷವಿರಲಿ, ಪ್ರತಿಪಕ್ಷವಿರಲಿ ಅದಕ್ಕೆ ಅದರದ್ದೇ ಆದ ಕಾರ್ಯಕರ್ತರ ಹಾಗೂ ಸಾಂಪ್ರದಾಯಿಕ ಮತದಾರರ ಬಲವಿದ್ದೇ ಇರುತ್ತದೆ. ಉದಾಹರಣೆಗೆ ಬಿಜೆಪಿ ಸಂಘಟನೆಯೇ ಇಲ್ಲ ಎನ್ನುವ ತಮಿಳುನಾಡು, ಕೇರಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿಯ ಪ್ರಮುಖ ನಾಯಕರು ಹೋದರೆ ಲಕ್ಷಾಂತರ ಮಂದಿ ಸೇರುತ್ತಾರೆ. ಅದೇ ರೀತಿ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಗುಜರಾತ್‌ಗೆ ರಾಹುಲ್ ಗಾಂಧಿ ಹೋದರೂ ಲಕ್ಷಾಂತರ ಜನ ಸೇರುತ್ತಾರೆ (ದುಡ್ಡು ಕೊಟ್ಟು ಸೇರಿಸುತ್ತಾರೆ ಎನ್ನುವ ವಾದ ಬೇರೆ). ಅದನ್ನು ಮೀರಿ ಎಲ್ಲ ಪಕ್ಷಗಳಿಗೂ ಎಲ್ಲೆಡೆ ಅವುಗಳದ್ದೇ ಆಗಿರುವ ಸಾಂಪ್ರದಾಯಿಕ ಮತಗಳಿರುತ್ತವೆ.
ಆ ಮತಗಳು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ. ಆದರೆ ಇಡೀ ಚುನಾವಣೆಯಲ್ಲಿ ನಿರ್ಣಾಯಕವಾಗುವುದು
‘ಹೊಯ್ದಾಟದಲ್ಲಿರುವ ಮತದಾರರು’. ಅವರ ಪ್ರಮಾಣ ಶೇ.8ರಿಂದ 10ರಷ್ಟು ಇರುತ್ತದೆ. ಈ 8ರಿಂದ 10ರಷ್ಟು
ಮತದಾರರು ಯಾವ ಪಕ್ಷಕ್ಕೆ ಮತ ಹಾಕುತ್ತಾರೆ ಎನ್ನುವುದರ ಮೇಲೆಯೇ ಇಡೀ ಚುನಾವಣೆಯಿರುತ್ತದೆ. ಇವರು ಯಾರ ಪರವಾಗಿ ನಿಲ್ಲಬೇಕು ಎನ್ನುವುದಕ್ಕೆ ಹತ್ತು ಹಲವು ಕಾರಣಗಳಿರುತ್ತವೆ. ಚುನಾವಣೆಯಿಂದ ಚುನಾವಣೆಗೆ
ಬದಲಾಗುವ ಕಾಲಚಕ್ರವೂ ಈ ಮತದಾರರ ಮೇಲೆಯೇ ನಿಂತಿರುತ್ತದೆ ಎನ್ನುವುದು ವಾಸ್ತವ. ಹಾಗೆ ನೋಡಿದರೆ, ಯಾವುದೇ ರಾಜಕೀಯ ಪಕ್ಷಕ್ಕೆ ಒದಗುವ ಕೆಲವೊಂದು ಹಿನ್ನಡೆಗಳು ಅದರ ಮುಂದಿನ ಭವಿಷ್ಯಕ್ಕೆ ನಾಂದಿ ಎನ್ನುವ ಮಾತಿದೆ. ಚುನಾವಣೆ ನಡೆದಿರುವ ರಾಜ್ಯಗಳಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟಗೊಂಡಿರು ತ್ತದೆ.
ಈ ಹಿಂದಿನ ಹಲವು ಉದಾಹರಣೆಯಂತೆ ಚುನಾವಣೋತ್ತರ ಸಮೀಕ್ಷೆಗಳನ್ನೂ ಮೀರಿ ಬಿಜೆಪಿ ಗೆಲುವು ಸಾಧಿಸು ವುದೋ ಅಥವಾ ಸಮೀಕ್ಷೆಗಳಂತೆ ಕಾಂಗ್ರೆಸ್ ದಶಕದ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯುವುದೋ ಎನ್ನುವುದು ಸ್ಪಷ್ಟವಾಗಲಿದೆ. ಒಂದು ವೇಳೆ ಸಮೀಕ್ಷೆಯಂತೆ ಜಮ್ಮು ಕಾಶ್ಮೀರ ಹಾಗೂ ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದರೆ, ‘ಮಾನಸಿಕ’ ಸ್ಥೈರ್ಯದೊಂದಿಗೆ ರಾಜಕೀಯ ಬಲ ಹೆಚ್ಚುವುದರೊಂದಿಗೆ ಮುಂದಿನ ದಿನದಲ್ಲಿ ಎದುರಾಗುವ ವಿಧಾನಸಭಾ ಚುನಾವಣೆಗಳಿಗೆ ಎಲ್ಲ ರೀತಿಯ ‘ಶಕ್ತಿ’ ಬರುವುದು ಖಚಿತ.
ಆದರೆ ಚುನಾವಣೋತ್ತರ ಸಮೀಕ್ಷೆಗಳನ್ನೆಲ್ಲ ಹಲವು ಬಾರಿ ಬುಡಮೇಲು ಮಾಡಿರುವ ಬಿಜೆಪಿ ಈ ಬಾರಿಯೂ ಇದರಲ್ಲಿ ಯಶ ಕಾಣುವುದೋ ಇಲ್ಲವೋ ಎನ್ನುವ ಫಲಿತಾಂಶ ಇಂದು ಮಧ್ಯಾಹ್ನದ ವೇಳೆಗೆ ಜನರ ಮುಂದಿರಲಿದೆ.
ಇದನ್ನೂ ಓದಿ: Ranjith H Ashwath Column: ದೂರುಗಳು ರಾಜಕೀಯ ಅಸ್ತ್ರವಾಗದಿರಲಿ