Monday, 25th November 2024

Prof R G Hegde Column: ವ್ಯಕ್ತಿತ್ವ ವಿಕಸನದ ವಿಭಿನ್ನ ಆಯಾಮಗಳು

ನಿಜಕೌಶಲ

ಪ್ರೊ.ಆರ್‌.ಜಿ.ಹೆಗಡೆ

ವ್ಯಕ್ತಿತ್ವ ವಿಕಸನವೆಂದರೆ, ವ್ಯಕ್ತಿಯೊಬ್ಬ ತನ್ನೊಳಗನ್ನು, ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಿಚ್ಚಿಕೊಳ್ಳಲು ಕಲಿಯುವ, ತನ್ನ ಚೈತನ್ಯದ ಪೂರ್ಣಶಕ್ತಿಯನ್ನು ಬಳಸಲು ಅರಿಯುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ದಕ್ಕುವ ಸಿದ್ಧಿಯನ್ನು ಖ್ಯಾತ ವ್ಯಕ್ತಿತ್ವ ವಿಕಸನ ತಜ್ಞ ಸ್ಟೀವನ್ ಕವೀ ‘ವೈಯಕ್ತಿಕ ಗೆಲುವು’ ಎಂದು ಕರೆಯುತ್ತಾನೆ. ಆತ ಹೇಳುವಂತೆ, ಹೀಗೆ ವೈಯಕ್ತಿಕ ಗೆಲುವು ಸಾಧಿಸಿದಾತನು ವೃತ್ತಿಯಲ್ಲಿ ಮತ್ತು ಸಮಾಜದಲ್ಲಿ ಗೆಲ್ಲುತ್ತಾನೆ. ಡೇಲ್
ಕಾರ್ನೆಗಿ ಎಂಬ ಇನ್ನೊಬ್ಬ ತಜ್ಞನ ಪ್ರಕಾರ, ಸಾಧಾರಣ ವ್ಯಕ್ತಿ ಜೀವನದುದ್ದಕ್ಕೂ ಬಳಸುವುದು ಮಿದುಳಿನ ಕೇವಲ ಶೇಕಡ ಎಂಟೋ, ಒಂಬತ್ತೋ ಭಾಗವನ್ನು. ದೊಡ್ಡ ವಿಜ್ಞಾನಿ ಅಥವಾ ಸಾಧಕನಲ್ಲಿ ಅದು ಬಳಕೆಯಾಗುವುದು ಹೆಚ್ಚೆಂದರೆ ಶೇ.೩೫ ರಷ್ಟು ಇರಬಹುದು.

ಹೀಗಾಗಿ ಸಾಧಾರಣ ವ್ಯಕ್ತಿಯ ಅಪಾರ ಚೈತನ್ಯ-ಸಾಮರ್ಥ್ಯ ಹೊರಬರದೇ ವ್ಯರ್ಥವಾಗುತ್ತದೆ. ಮನುಷ್ಯನ ಶಾರೀರಿಕ, ಬೌದ್ಧಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ವಿಕಾಸವೇ ವ್ಯಕ್ತಿತ್ವ ವಿಕಸನದ ಗುರಿ. ಒಳ್ಳೆಯ ಆರೋಗ್ಯವು ವ್ಯಕ್ತಿಯೊಬ್ಬನಿಗೆ ಪ್ರಾಥಮಿಕ ಅವಶ್ಯಕತೆಯಾಗುತ್ತದೆ. ಅದಿಲ್ಲದಿದ್ದರೆ ಏನನ್ನೂ ಸಾಧಿಸಲಾಗುವುದಿಲ್ಲ.
ಆರೋಗ್ಯವಾಗಿರುವುದು ಎಂದರೆ ಕಾಯಿಲೆಗಳಿಲ್ಲದ ಸ್ಥಿತಿಯಲ್ಲ; ಬದಲಿಗೆ, ಶಕ್ತಿ-ಲವಲವಿಕೆ-ಚೇತನ ತುಂಬಿದ
ಶಾರೀರಿಕ ಮತ್ತು ಮಾನಸಿಕ ಸ್ಥಿತಿ.

ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಶರೀರಕ್ಕೆ ಪೌಷ್ಟಿಕ ಆಹಾರ, ಸಾಕಷ್ಟು ನೀರು ಮತ್ತು ವ್ಯಾಯಾಮದ
ಅವಶ್ಯಕತೆ ಇರುತ್ತದೆ. ಜತೆಗೆ ಶರೀರದ ಸ್ವಚ್ಛತೆಯ ಕುರಿತೂ ಅರಿವಿರಬೇಕು. ಸ್ವಾರಸ್ಯವೆಂದರೆ, ಆರೋಗ್ಯವಾಗಿ ಬದುಕಲು ಏನು ಮಾಡಬೇಕು ಎಂಬುದರ ಕುರಿತು ಗಾಂಧೀಜಿ ಆಳವಾಗಿ ಅವಲೋಕಿಸಿದ್ದರು, ಆಹಾರದ ಖರ್ಚನ್ನು ಕಡಿಮೆಯಾಗಿಸುವುದು ಹೇಗೆ ಎಂದೂ ಯೋಚಿಸಿದ್ದರು.

ನೆಲಗಡಲೆ ಮತ್ತು ಆಡಿನ ಹಾಲನ್ನು ತಮ್ಮ ಮೆನುವಿನಲ್ಲಿ ಸೇರಿಸಿಕೊಂಡಿದ್ದರು. ಅವರು ತಮ್ಮ ಶರೀರವನ್ನು ನಿರ್ಲಕ್ಷಿಸಿದ್ದಿಲ್ಲ. ಶರೀರ ನಮ್ಮ ಕೆಲಸದ ಮಾಧ್ಯಮ ಎಂಬ ಅರಿವನ್ನು ಮಕ್ಕಳ ಮನದಲ್ಲಿ ಚಿಕ್ಕಂದಿನಿಂದಲೇ ತುಂಬಬೇಕು. ಅಂತೆಯೇ ಮಾನಸಿಕ ಆರೋಗ್ಯವೂ ಅವಶ್ಯಕ. ಆದರೆ, ನಮ್ಮ ದೇಶದಲ್ಲಿ ಮಾನಸಿಕ ಆರೋಗ್ಯದ ಕಡೆಗೆ ಲಕ್ಷ್ಯವಿಡುವ, ಮನಸ್ಸನ್ನು ಆಹ್ಲಾದಕರವಾಗಿ ಇಟ್ಟುಕೊಳ್ಳುವ ಸಂಸ್ಕೃತಿ ಕಮ್ಮಿ. ಆದ್ದರಿಂದ ಮಕ್ಕಳ ಮನಸ್ಸಿನಲ್ಲಿ ಸಂತೋಷ, ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆಗಳು ತುಂಬುವಂತೆ ಮಾಡುವುದು ಹೇಗೆಂಬುದರ
ಬಗ್ಗೆ ಪಾಲಕರು, ಶಾಲಾ-ಕಾಲೇಜುಗಳು ಆಲೋಚಿಸಬೇಕು.

ಆಟೋಟಗಳಲ್ಲಿ ಭಾಗವಹಿಸುವಿಕೆ, ಒಳ್ಳೆಯ ಓದು, ಮನರಂಜನೆ, ಪ್ರವಾಸ, ಜನರೊಡನೆ ಬೆರೆಯುವಿಕೆ,
ಪ್ರೀತಿಸು ವಿಕೆ, ಭಾವನೆಗಳನ್ನು ಹಂಚಿಕೊಳ್ಳುವಿಕೆ, ಒಂದೆರಡು ಆರೋಗ್ಯಕರ ಹವ್ಯಾಸಗಳು, ಯೋಗ, ಧ್ಯಾನ ಇವೆಲ್ಲವೂ ಮನಸ್ಸನ್ನು ಆರೋಗ್ಯಕರವಾಗಿಡುವ ಮಾರ್ಗೋಪಾಯಗಳು. ದುಶ್ಚಟಗಳಿಗೆ ಬಲಿಯಾಗದಂತೆ, ಅವೇ ವ್ಯಕ್ತಿತ್ವವನ್ನು ನುಂಗದಂತೆ ನೋಡಿಕೊಳ್ಳುವುದೂ ಮಹತ್ವದ ಬಾಬತ್ತೇ.

ಶಾಲೆಗಳು ವರ್ಷಕ್ಕೊಮ್ಮೆ ಮನಶ್ಶಾಸ್ತ್ರಜ್ಞರಿಂದ ವಿದ್ಯಾರ್ಥಿಗಳ ತಪಾಸಣೆ ನಡೆಸುವುದೂ ಒಳ್ಳೆಯದೇ. ಆಹ್ಲಾದಕರ, ಸ್ವಚ್ಛ ಹಾಗೂ ಗಟ್ಟಿ ಮನಸ್ಸಿನ ಬೆಳವಣಿಗೆಯಲ್ಲಿ ನೈತಿಕತೆಯ ಪಾತ್ರ ಮಹತ್ತರವಾದುದು. ಅಂದರೆ, ವ್ಯಕ್ತಿಯೊಬ್ಬ ಒಂದಷ್ಟು ಸಾರ್ವಕಾಲಿಕ ಮೌಲ್ಯಗಳಿಗೆ ಬದ್ಧನಾಗಿ ಜೀವನ ನಡೆಸುವಿಕೆ.

ಉದಾಹರಣೆಗೆ, ಸುಳ್ಳು, ವಂಚನೆ, ಅನೈತಿಕ ಚಟುವಟಿಕೆಗಳಿಂದ ದೂರವಿರುವುದು ಬಹಳ ಮುಖ್ಯ. ಏಕೆಂದರೆ ಇವೆಲ್ಲವೂ ವ್ಯಕ್ತಿತ್ವವನ್ನು ಹಾಳುಮಾಡಿಬಿಡುತ್ತವೆ. ವ್ಯಕ್ತಿಯೊಬ್ಬನ ಇಂಥ ಅವಗುಣಗಳು ಬೇರೆಯವರಿಗೆ ಅರ್ಥವಾಗಿಬಿಡುತ್ತವೆ, ಹೀಗಾಗಿ ಅಂಥವನನ್ನು ಅವರು ದೂರವಿಡುತ್ತಾರೆ. ‘ವ್ಯಕ್ತಿಯೊಬ್ಬ ನೈತಿಕವಾಗಿ ಅಥವಾ ಕಾನೂನಾತ್ಮಕವಾಗಿ ತಿಳಿದೂ ತಿಳಿದೂ ತಪ್ಪು ಮಾಡಕೂಡದು; ಏಕೆಂದರೆ ತಪ್ಪು ಮಾಡದಿರುವ ಈ ಗುಣವು ಆತನಿಗೆ ಅಪಾರ ಆತ್ಮಶಕ್ತಿಯನ್ನು ನೀಡುತ್ತದೆ. ಅಂಥ ಶಕ್ತಿಯನ್ನು ಹೊಂದಿದಾತ ಧೈರ್ಯವಂತ, ಕರುಣಾಮಯಿ, ವಿಶಾಲಹೃದಯಿ ಆಗಿರುತ್ತಾನೆ. ಬೇರೆಯವರ ಚಿಕ್ಕ ಪುಟ್ಟ ತಪ್ಪುಗಳನ್ನು ಕ್ಷಮಿಸುವ ಸಾಮರ್ಥ್ಯ ಅವನಲ್ಲಿರುತ್ತದೆ.

ಪ್ರತೀಕಾರದ ಭಾವನೆ ಇರುವುದಿಲ್ಲ’ ಎನ್ನುತ್ತಾರೆ ಡಾ.ಎಂ.ವಿ.ಪೈಲಿ. ಡೇಲ್ ಕಾರ್ನೆಗಿ ಹೇಳುವಂತೆ, ತನ್ನಿಂದ ತಪ್ಪಾ
ಗಿದೆ ಎಂದು ತಿಳಿದಾಗ ವ್ಯಕ್ತಿಯೊಬ್ಬನು ಆ ಕುರಿತು ಕ್ಷಮೆ ಕೇಳಲು ಹಿಂದು-ಮುಂದು ನೋಡಬಾರದು; ಏಕೆಂದರೆ,
ತಪ್ಪೊಪ್ಪಿಗೆಯು ವ್ಯಕ್ತಿಯೊಬ್ಬನಲ್ಲಿ ಮಾನಸಿಕ ಶಕ್ತಿಯನ್ನು ತುಂಬುತ್ತದೆ. ವ್ಯಕ್ತಿತ್ವ ವಿಕಸನವಿರುವುದೇ ಮಾನಸಿಕ ಶಕ್ತಿಯ ಅಭಿವೃದ್ಧಿಯಲ್ಲಿ.

ದುಶ್ಚಟಗಳಿಗೆ ಒಡ್ಡಿಕೊಂಡಾತ, ತನ್ನ ವ್ಯಕ್ತಿತ್ವ ಬೇರೆಯವರಿಗೆ ಕಾಣಿಸುವುದಿಲ್ಲವೆಂದೇ ಭಾವಿಸುತ್ತಾನೆ. ಆದರೆ ಗಮನಿಸಬೇಕಾದ ಸಂಗತಿಯೆಂದರೆ, ದುಶ್ಚಟಗಳು ವ್ಯಕ್ತಿಗೊಂದು ರೆಸ್ಟ್‌ಲೆಸ್‌ನೆಸ್ ತಂದುಬಿಡುತ್ತವೆ, ಮನಸ್ಸು ಕದಡಿಹೋಗುತ್ತದೆ, ಮುಖದ ಕಾಂತಿ ಬತ್ತುತ್ತದೆ. ಸಂಜೆಯಾದೊಡನೆಯೇ ಬೇಕೆನಿಸುವ ಕುಡಿತ ಸೇರಿದಂತೆ ಧೂಮಪಾನ, ಮಾದಕವಸ್ತು ಸೇವನೆ ಇತ್ಯಾದಿ ಚಟಗಳು ಆತನ ವ್ಯಕ್ತಿತ್ವವನ್ನು, ಅವನ ಒಳಗಿನ ಹೂರಣವನ್ನು ಹಾಳುಮಾಡಿಬಿಡುತ್ತವೆ.

ಪ್ರಾಮಾಣಿಕತೆ, ಸನ್ನಡತೆ, ಸದ್ವಿಚಾರ, ಸುಳ್ಳು ಹೇಳದಿರುವಿಕೆ ಮುಂತಾದವು ವ್ಯಕ್ತಿಯೊಬ್ಬನಿಗೆ ಅತಿಮುಖ್ಯ ವಾದಂಥವು. ಹಾಗೆ ಬದುಕಿದ, ಬದುಕುವ ವ್ಯಕ್ತಿಗೆ ಒಂದು ವಿಶೇಷ ಶಕ್ತಿ, ಶ್ರೇಷ್ಠತೆ ಪ್ರಾಪ್ತಿಯಾಗುತ್ತದೆ. ಹಾಗಾಗಿ, ಜನರ ಜತೆ ದೊಡ್ಡ ಪ್ರಮಾಣದಲ್ಲಿ ವ್ಯವಹಾರದಲ್ಲಿ ತೊಡಗಿದಾಗಲೂ ಅವನಿಗೆ ‘ತಂತ್ರಗಾರಿಕೆ’ಯ ಅಗತ್ಯ ಬೀಳುವುದೇ ಇಲ್ಲ. ಇಂಥ ವ್ಯಕ್ತಿಯಲ್ಲಿ ಆಳವಾಗಿ ಬೇರೂರಿರುವ ನೈತಿಕತೆಯೇ ಈ ಕೆಲಸಕ್ಕೆ ಸಾಕು. ಇದಕ್ಕೊಂದು ಉದಾಹರಣೆ ನೀಡುತ್ತೇನೆ. ನಮ್ಮ ಊರಿನಲ್ಲಿದ್ದ ಒಬ್ಬ ದಿನಸಿ ಅಂಗಡಿಯವ ಅಪ್ಪಟ ಪ್ರಾಮಾಣಿಕ. ಅವನಲ್ಲಿ ಮೋಸ, ಸುಳ್ಳುಗಳಿಗೆ ಆಸ್ಪದವಿರಲಿಲ್ಲ. ‘ಅವಶ್ಯವಿಲ್ಲ ದಿದ್ದರೆ ಈ ದಿನಸಿಯನ್ನು ಇವತ್ತು ಒಯ್ಯಬೇಡಿ, ಮುಂದಿನ ವಾರ ರೇಟು ಕಡಿಮೆಯಾಗುತ್ತದೆ; ಯಾಕೆ ಸುಮ್ಮನೆ ದುಡ್ಡು ಹಾಳುಮಾಡಿಕೊಳ್ಳುತ್ತಿರಿ?’ ಎನ್ನುತ್ತಿದ್ದ ಆತ.

ಕೆಲವೊಮ್ಮೆಯಂತೂ, ‘ಇಷ್ಟೆಲ್ಲ ಸಾಮಾನು ಯಾಕೆ?’ ಎನ್ನುತ್ತಿದ್ದ. ಐದು ಕೆ.ಜಿ. ಕೇಳಿದರೆ ಬೈದು ಮೂರು ಕೆ.ಜಿ. ಕೊಡುತ್ತಿದ್ದ. ಹಾಗಂತ ಬಡವರಾದರೆ, ‘ಮದುವೆಗೆ ಈಗ ಬೇಕಾದರೆ ಒಯ್ಯಿ, ಅನುಕೂಲ ಆದಾಗ ದುಡ್ಡು ತಂದುಕೊಡು’ ಎನ್ನುತ್ತಿದ್ದ. ಇಂಥ ಕಠೋರ ಪ್ರಾಮಾಣಿಕತೆಯ ಫಲವಾಗಿ ಆತನಲ್ಲಿ ತೇಜಸ್ಸು ತುಂಬಿಕೊಂಡಿತ್ತು. ಅವನ ಅಂಗಡಿಯಲ್ಲಿ ಜನರು ಯಾವಾಗಲೂ ಕಿಕ್ಕಿರಿದಿರುತ್ತಿದ್ದರು. ಆತ ಯಶಸ್ವಿ ವ್ಯವಹಾರಸ್ಥನೂ, ಶ್ರೇಷ್ಠ ವ್ಯಕ್ತಿಯೂ ಆಗಿಬಿಟ್ಟ.
ಬದ್ಧತೆಯು ಇಂಥ ಇನ್ನೊಂದು ಮಹತ್ವದ ಗುಣ. ವ್ಯಕ್ತಿಯೊಬ್ಬನು ಮತ್ತೊಬ್ಬರಿಗೆ, ತನ್ನ ಕುಟುಂಬಕ್ಕೆ, ತನ್ನ
ಮಾತುಗಳಿಗೆ ಹೀಗೆ ವಿವಿಧ ಆಯಾಮಗಳಲ್ಲಿ ಬದ್ಧತೆಯನ್ನು ತೋರಬೇಕಾಗುತ್ತದೆ. ಕೆಲವರು ಯಾವುದೋ ಗಳಿಗೆಯಲ್ಲಿ ದಾರಿತಪ್ಪಿ, ತಮ್ಮ ಜೀವನವನ್ನೇ ಅಸ್ತವ್ಯಸ್ತಗೊಳಿಸಿಕೊಳ್ಳುವುದಿದೆ. ಕೌಟುಂಬಿಕ ನೆಮ್ಮದಿಯ ಅಗತ್ಯವು ವಯಸ್ಸಾಗುತ್ತಾ ಹೋದಂತೆ ಅರಿವಿಗೆ ಬರುತ್ತದೆ. ಅದೇ ಬದ್ಧತೆಯೇ ಮನಸ್ಸಿಗೆ ಶಾಂತಿ, ನೆಮ್ಮದಿ, ಶಕ್ತಿಯನ್ನು ನೀಡಬಲ್ಲದು. ವ್ಯಕ್ತಿಯೊಬ್ಬನು- ಆತ ವೈದ್ಯನಿರಲಿ, ಪ್ರಾಧ್ಯಾಪಕನಿರಲಿ, ವ್ಯವಹಾರಸ್ಥನಿರಲಿ ಅಥವಾ ರಾಜಕಾರಣಿಯೇ ಇರಲಿ- ತನ್ನ ಹೊಣೆಗಾರಿಕೆಗೆ, ವೃತ್ತಿಗೆ ಸಂಪೂರ್ಣ ಬದ್ಧನಾಗಿರಬೇಕು. ಹೀಗೆ ಬದ್ಧತೆಯೊಂದಿಗೆ ನಿಷ್ಠೆಯಿಂದ ದುಡಿಯುತ್ತಾ ಹೋದಂತೆ ಆತನಿಗೆ ತನ್ನ ಕಾರ್ಯಕ್ಷೇತ್ರದ ಕುರಿತು ಆಳವಾದ ಅರಿವು
ಉಂಟಾಗತೊಡಗುತ್ತದೆ. ಆ ಅರಿವು ಆತನ ವೈಯಕ್ತಿಕ ಸಾಮರ್ಥ್ಯವನ್ನು ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಮತ್ತಷ್ಟು ಚೆನ್ನಾಗಿ ಕೆಲಸ ಮಾಡಲು ಅದು ಇಂಧನವಾಗಿ ಪರಿಣಮಿಸುತ್ತದೆ. ಅಪ್ಪಟ ಪ್ರತಿಭೆಯಿರುವಾತನನ್ನು ಯಾರೂ ಹಾಳುಮಾಡಲಾಗದು, ಕಾರ್ಯಕ್ಷೇತ್ರದಲ್ಲಿನ ಯಾವ ರಾಜಕೀಯವೂ ಆತನನ್ನು ಅಲುಗಾಡಿಸಲಾಗದು. ಹೀಗಾಗಿ ಆತನ ಶಕ್ತಿ ಅಪಾರವಾಗಿ ಬೆಳೆಯುತ್ತದೆ. ಉದಾಹರಣೆಗೆ ಓರ್ವ ಅನುಭವಿ ಮತ್ತು ಸಮರ್ಥ ವೈದ್ಯನು ರೋಗಿಯನ್ನು ಹಾಗೇ ಸುಮ್ಮನೆ ನೋಡುತ್ತಿದ್ದಂತೆಯೇ ಅವನ ವಿಷಯವನ್ನು/ ಸಮಸ್ಯೆಯನ್ನು ಊಹಿಸಬಲ್ಲವನಾಗಿರುತ್ತಾನೆ; ಅದು ಆತನಿಗೆ ಹೇಗೋ ತಿಳಿದುಬಿಡುತ್ತದೆ. ಇಂಥವರನ್ನೇ ‘ಸಾಧಕರು’ ಎಂದು ಕರೆಯುವುದು. ಸಂಗೀತಗಾರರೂ ಹೀಗೆಯೇ.

ಒಟ್ಟಾರೆ ಹೇಳುವುದಾದರೆ, ವ್ಯಕ್ತಿಯು ಸಾಧನೆಯ ಹಾದಿಯಲ್ಲಿ ಗಟ್ಟಿಹೆಜ್ಜೆಗಳನ್ನಿಡುತ್ತಾ ಹೋದಂತೆ ಆತನಲ್ಲಿ ಒಂದು ಮಾಂತ್ರಿಕ ಶಕ್ತಿ ಮೈಗೂಡುತ್ತಾ ಹೋಗುತ್ತದೆ, ಹೀಗೆ ವ್ಯಕ್ತಿತ್ವವು ಪಕ್ವವಾಗುತ್ತಾ ಆಗುತ್ತಾ ಆತ ಸಿದ್ಧಿಪುರುಷ ನಾಗುತ್ತಾನೆ. ಪ್ರಾಧ್ಯಾಪಕರಾಗಿದ್ದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ನಮ್ಮ ದೇಶದ ರಾಷ್ಟ್ರಪತಿಯಾಗಿದ್ದು, ಹೋಟೆಲ್‌ನಲ್ಲಿ ದುಡಿಯುತ್ತಿದ್ದ ಕಾಮತ್ ಅವರು ‘ಕಾಮತ್ ಗ್ರೂಪ್ ಆಫ್ ಹೋಟೆಲ್ಸ್’ನ ರೂವಾರಿ ಎನಿಸಿ ಕೊಂಡಿದ್ದು, ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಧೀರೂಬಾಯಿ ಅಂಬಾನಿಯವರು ರಿಫೈನರಿಗಳನ್ನು ಆರಂಭಿಸಿದ್ದು, ಸಾಧಾರಣ ಕಾರ್ಯಕರ್ತರಾಗಿದ್ದ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿದ್ದು ಇವೆಲ್ಲವೂ ಕೆಲಸದ ಕುರಿತಾದ ಶ್ರದ್ಧೆ- ಬದ್ಧತೆ-ಪ್ರೀತಿಯಿಂದಾಗಿ ವ್ಯಕ್ತಿತ್ವವು ಔನ್ನತ್ಯಕ್ಕೆ ಏರುವುದರ ಒಂದಷ್ಟು ನಿದರ್ಶನಗಳು. ಅಂದರೆ ಈ ವಿಶಿಷ್ಟ ಗುಣ-ಲಕ್ಷಣಗಳನ್ನು ಮೈಗೂಡಿಸಿಕೊಂಡರೆ ಸಾಮಾನ್ಯ ವ್ಯಕ್ತಿ ಅಸಾಮಾನ್ಯ ನಾಗುತ್ತಾನೆ, ಮಾನವ ವ್ಯಕ್ತಿತ್ವವನ್ನು ಕಳಚಿಟ್ಟು ಮಾಂತ್ರಿಕನಾಗುತ್ತಾನೆ, ಘನವಂತನಾಗುತ್ತಾನೆ, ಸಮಾಜದಲ್ಲಿ ಸಮರಸದೊಂದಿಗೆ ಬದುಕುತ್ತಾನೆ, ಯಶಸ್ವಿ ಜೀವನ ಸಾಗಿಸುತ್ತಾನೆ.

ಭಾವನಾತ್ಮಕ ವಿಕಾಸವೆಂದರೆ, ವ್ಯಕ್ತಿಯೊಬ್ಬ ಭಾವನೆಗಳನ್ನು ಅನುಭವಿಸಬಲ್ಲ, ಆದರೆ ಅವೆಲ್ಲವನ್ನೂ ಸಮತೋಲನದಿಂದ ನೋಡಬಲ್ಲ ಶಕ್ತಿಯ ವಿಕಸನ. ಬಹುತೇಕ ಮನುಷ್ಯರು ತಾರ್ಕಿಕ ವ್ಯಕ್ತಿಗಳಲ್ಲ, ಭಾವನಾತ್ಮಕ ಜೀವಿಗಳು. ವ್ಯಕ್ತಿಯೊಬ್ಬನು ಪ್ರೀತಿ- ಸಹನೆ, ಉಪಕಾರ ಸ್ಮರಣೆಯಂಥ ಭಾವನೆಗಳನ್ನು ಬೆಳೆಸಿಕೊಳ್ಳುತ್ತಲೇ ಬದುಕುವುದನ್ನು ಮರೆಯಬಾರದು. ಪಾರಮಾರ್ಥಿಕ ಬೆಳವಣಿಗೆಯು ಸಹಜವಾಗಿಯೇ ವ್ಯಕ್ತಿತ್ವ ವಿಕಸನದ ಪ್ರಮುಖ ಉದ್ದೇಶಗಳಲ್ಲೊಂದು.

ವ್ಯಕ್ತಿಯು ತನ್ನ ಯಶಸ್ಸಿಗಾಗಿ ಚೈತನ್ಯವನ್ನು ಬಳಸಿಕೊಳ್ಳುವುದು, ಯಶಸ್ಸಿಗಾಗಿ ಹೋರಾಡುವುದು ಮುಖ್ಯ. ಆಟದಲ್ಲಿ ಗೆಲ್ಲಲು ಯತ್ನಿಸಲೇಬೇಕು, ಅದು ವ್ಯಕ್ತಿಯ ಧರ್ಮ ಕೂಡ ಹೌದು. ಆದರೆ, ಅದೇ ಸಂದರ್ಭದಲ್ಲಿ, ಸೋಲನ್ನು ಸ್ವೀಕರಿಸುವುದನ್ನೂ ಆತ ಕಲಿತುಕೊಳ್ಳಬೇಕಾಗುತ್ತದೆ. ಸೋಲನ್ನು ವಿನಯದಿಂದಲೂ, ಗೆಲುವನ್ನು ಗರ್ವವಿಲ್ಲದೆಯೂ ಸ್ವೀಕರಿಸುವ ಗುಣದ ಬೆಳವಣಿಗೆಯು ವ್ಯಕ್ತಿಯನ್ನು ಪಾರಮಾರ್ಥಿಕ ನೆಲೆಯತ್ತ ಕೊಂಡೊ ಯ್ಯುತ್ತದೆ. ದೈಹಿಕ-ಮಾನಸಿಕ ವಿಕಸನವು ವ್ಯಕ್ತಿಯೊಬ್ಬನಿಗೆ ಗೆಲುವಿನ ದಾರಿಯನ್ನು ಹುಡುಕಿಕೊಟ್ಟರೆ, ಭಾವನಾ ತ್ಮಕತೆ- ಪಾರಮಾರ್ಥಿಕತೆಯ ವಿಕಸನವು ಆತನಿಗೆ ನಯ, ವಿನಯ ಮತ್ತು ಸಮಚಿತ್ತವನ್ನು ಕಲಿಸುತ್ತದೆ. ವ್ಯಕ್ತಿತ್ವ ವಿಕಸನದಲ್ಲಿ ಇವೆಲ್ಲವೂ ಸೇರಿವೆ.

(ಲೇಖಕರು ಮಾಜಿ ಪ್ರಾಂಶುಪಾಲರು ಮತ್ತು ಸಂವಹನಾ
ಸಲಹೆಗಾರರು)

ಇದನ್ನೂ ಓದಿ: Prof R G Hegde Column: ಪಕ್ವವಾದ ವ್ಯಕ್ತಿತ್ವವೇ ಸಂವಹನ ಕಲೆಯ ಮೂಲ