Sunday, 17th November 2024

Physical Abuse : ಅತ್ಯಾಚಾರ ಕೇಸ್‌ ವಾಪಸ್‌ ಪಡೆಯದ್ದಕ್ಕೆ ಸಂತ್ರಸ್ತೆಯ ಅಜ್ಜನನ್ನೇ ಗುಂಡು ಹಾರಿಸಿ ಕೊಂದ ಆರೋಪಿ

Physical Abuse

ಭೋಪಾಲ್: ಅತ್ಯಾಚಾರ ಎಸಗಿದ ಆರೋಪಿಯೊಬ್ಬ ಅತ್ಯಾಚಾರಕ್ಕೊಳಗಾದ (Physical Abuse) ಸಂತ್ರಸ್ತೆಯ ಅಜ್ಜನನ್ನು ಕೊಲೆ ಮಾಡಿದ ಒಂದು ದಿನದ ಬಳಿಕ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆದರೆ ಆತ ಆತ್ಮಹತ್ಯೆ ಮಾಡಿಕೊಳ್ಳುವ ಕೆಲವೇ ಗಂಟೆಗಳ ಮೊದಲು, ತಾನು ನಿರಪರಾಧಿ ಎಂದು ಹೇಳಿಕೊಂಡು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾನೆ. ಇದು ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಆರೋಪಿಯನ್ನು ಭೋಲಾ ಅಹಿರ್ವಾರ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಸದಸ್ಯರು ತನ್ನ ವಿರುದ್ಧ ನೀಡಿದ ದೂರನ್ನು ಹಿಂಪಡೆಯಲು ನಿರಾಕರಿಸಿದ ಕಾರಣ ಅವನು ಸಂತ್ರಸ್ತೆಯ ಕುಟುಂಬದವರ ಮೇಲೆ ಗುಂಡು ಹಾರಿಸಿದ್ದಾನೆ. ಆದರೆ ಈ ಘಟನೆಯಲ್ಲಿ ಸಂತ್ರಸ್ತೆ  ಮತ್ತು ಆಕೆಯ ಚಿಕ್ಕಪ್ಪನಿಗೆ ಗುಂಡು ತಗುಲಿದ್ದು, ಆಕೆಯ ಅಜ್ಜ ಮೃತಪಟ್ಟಿದ್ದಾರೆ. ಈ ಘಟನೆಯ ನಂತರ ಆರೋಪಿ ತಾನು ಅತ್ಯಾಚಾರ ಮಾಡಿಲ್ಲ ಮತ್ತು ಇಡೀ ಗ್ರಾಮವೇ ಇದಕ್ಕೆ ಸಾಕ್ಷಿ. ತನ್ನನ್ನು ಪೋಕ್ಸೊ ಅಡಿಯಲ್ಲಿ ಸಿಲುಕಿಸಲಾಗಿದೆ ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾನೆ.  

ಆರೋಪಿ  ಭೋಲಾ ಅಹಿರ್ವಾರ್ ಅಪ್ರಾಪ್ತಳಾದ ಸಂತ್ರಸ್ತೆಯ ಮನೆಗೆ ನುಗ್ಗಿ, ಆಕೆಯ ಮೇಲೆ ಹಲ್ಲೆ ನಡೆಸಿ, ತನ್ನ ವಿರುದ್ಧದ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹೇರಿದ್ದಾನೆ. ಆಗ ಸಂತ್ರಸ್ತೆಯ 65 ವರ್ಷದ ಅಜ್ಜ ಆತನನ್ನು ತಡೆಯಲು ಪ್ರಯತ್ನಿಸಿದಾಗ, ಭೋಲಾ ಅವರ ಎದೆಗೆ ಗುಂಡು ಹಾರಿಸಿದ ಪರಿಣಾಮ ಅಜ್ಜ  ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಸಂತ್ರಸ್ತೆಯ ಹೊಟ್ಟೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಆದರೆ ಭೋಲಾ ಮನೆಯಿಂದ ಹೊರಬರುತ್ತಿದ್ದಂತೆ, ಅವನಿಗೆ ಸಂತ್ರಸ್ತೆಯ 23 ವರ್ಷದ ಚಿಕ್ಕಪ್ಪ ಎದುರಿಗೆ ಬಂದ ಕಾರಣ  ಪರಾರಿಯಾಗುವ ಮೊದಲು ಅವರ ಮೇಲೂ ಗುಂಡು ಹಾರಿಸಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ತಲೆಮರೆಸಿಕೊಂಡಿರುವ  ಸ್ಥಳವನ್ನು ಪತ್ತೆಹಚ್ಚುತ್ತಿದ್ದಂತೆ, ಆತ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಆಗ ಭಯಬೀತನಾದ ಆರೋಪಿ ಭೋಲಾ ತನ್ನ ತಲೆಗೆ ತಾನೇ ಗುಂಡು ಹಾರಿಸಿಕೊಂಡು  ಸ್ಥಳದಲ್ಲೇ ಸಾವನಪ್ಪಿದ್ದಾನೆ. ಸಾವಿಗೆ ಕೆಲವೇ ಗಂಟೆಗಳ ಮೊದಲು, ಭೋಲಾ ಸೋಶಿಯಲ್ ಮೀಡಿಯಾದಲ್ಲಿ ತಾನು ತಪ್ಪು ಮಾಡಿಲ್ಲ ಎಂದು ಹೇಳಿಕೊಂಡು ಮಾಡಿದ ಪೋಸ್ಟ್ ವೈರಲ್ ಆಗಿದೆ.

ಇದನ್ನೂ ಓದಿ: 1 ವರ್ಷದ ಕಂದನಿಗೆ ಕಪಾಳಮೋಕ್ಷ ಮಾಡಿದ ದುಷ್ಟ ಅರೆಸ್ಟ್

ಆದರೆ ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಪ್ರಾಥಮಿಕ ವರದಿಯನ್ನು ಸಲ್ಲಿಸಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸಂತ್ರಸ್ತ ಬಾಲಕಿಯ ಕುಟುಂಬ ಆರೋಪಿಸಿದ್ದಾರೆ. ದೂರು ದಾಖಲಿಸಲು ಪ್ರಯತ್ನಿಸಿದಾಗ ಪೊಲೀಸರು 10,000 ರೂ.ಗಳನ್ನು ಕೇಳಿದ್ದಾರೆ. ಆದರೆ ಕೊನೆಗೆ  5,000 ರೂ.ಗಳನ್ನು ತೆಗೆದುಕೊಂಡಿದ್ದಾರೆ ಆದರೆ ಸರಿಯಾದ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಸಂತ್ರಸ್ತೆಯ ಸಹೋದರಿ ಹೇಳಿದ್ದಾಳೆ. ಈ ಸ್ಫೋಟಕ ಬೆಳವಣಿಗೆಯು ಪೊಲೀಸರ ನಿರ್ಲಕ್ಷ್ಯ ಮತ್ತು ಪ್ರಕರಣವನ್ನು ಅವರು ನಿರ್ವಹಿಸಿದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ, ಮತ್ತು ಇದು ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.