Friday, 22nd November 2024

Viral News: ಮಾಲ್ಡೀವ್ಸ್‌ಗೆ ಸಹಾಯಹಸ್ತ ಚಾಚಿದ ಭಾರತ; ನಾವು ಭಿಕಾರಿಗಳು ಎಂದಿದ್ದೇಕೆ ಪಾಕಿಸ್ತಾನದ ವ್ಯಕ್ತಿ?

Viral News

ಇಸ್ಲಾಮಾಬಾದ್‌: ಅಧಿಕೃತ ಭಾರತ ಪ್ರವಾಸಕ್ಕೆ ಆಗಮಿಸಿರುವ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಹತ್ವದ ಮಾತುಕತೆ ನಡೆಸಿದ್ದಾರೆ. ಮೊಹಮ್ಮದ್ ಮುಯಿಝು ಅವರು ಬಿಗಡಾಯಿಸಿರುವ ತಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಭಾರತದ ಧನಸಹಾಯ ಯಾಚಿಸಲಿದ್ದಾರೆ. ಭಾರತ ಸಹಾಯದ ವಾಗ್ದಾನ ನೀಡಿದೆ. ಆರ್ಥಿಕ ನೆರವು, ಯುಪಿಐ ಏಕೀಕರಣ (UPI integration) ಮತ್ತು ರಕ್ಷಣಾ ಬೆಂಬಲ ಸೇರಿದಂತೆ ಹಲವು ಕ್ಷೇತ್ರಗಳ ನೆರವಿಗೆ ಭಾರತ ಸಮ್ಮತಿಸಿದೆ. ಸದ್ಯ ಈ ಬಗ್ಗೆ ಪಾಕಿಸ್ತಾನಿಯರ ಪ್ರತಿಕ್ರಿಯೆ ಕುತೂಹಲ ಕೆರಳಿಸಿದೆ (Viral News).

ಮಾಲ್ಡೀವ್ಸ್‌ನ ಅಗತ್ಯತೆಗಳ ಪ್ರಕಾರ, 400 ಮಿಲಿಯನ್ ಡಾಲರ್ ಮತ್ತು 3,000 ಕೋಟಿ ರೂ.ಗಳ ಕರೆನ್ಸಿ ವಿನಿಮಯ ಒಪ್ಪಂದಕ್ಕೆ ಪ್ರಧಾನಿ ಮೋದಿ ಸಹಿ ಹಾಕಿದ್ದಾರೆ. ʼʼನಾವು ಯಾವಾಗಲೂ ಮಾಲ್ಡೀವ್ಸ್ ಜನರ ಅವಶ್ಯಕತೆಗಳಿಗೆ ಆದ್ಯತೆ ನೀಡುತ್ತೇವೆ. ಈ ವರ್ಷ, ಎಸ್‌ಬಿಐ ಮಾಲ್ಡೀವ್ಸ್‌ನ ಖಜಾನೆ ಬೆಂಚ್‌ನ 100 ಮಿಲಿಯನ್ ಡಾಲರ್‌ಗಳ ರೋಲ್‌ಓವರ್ ಮಾಡಿದೆʼʼ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಇನ್ನುಮುಂದೆ ದ್ವೀಪರಾಷ್ಟ್ರ ಮಾಲ್ಡೀವ್ಸ್‌ನಲ್ಲೂ ಭಾರತದಲ್ಲಿ ಬಲು ಜನಪ್ರಿಯವಾಗಿರುವ ಯುಪಿಐ (ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌) ಸೇವೆ ದೊರೆಯಲಿದೆ. ಇದರಿಂದ ಡಿಜಿಟಲ್‌ ಪಾವತಿ ಕ್ಷೇತ್ರದಲ್ಲಿ ಕ್ರಾಂತಿ ಉಂಟಾಗಲಿದೆ. ಪಾಕಿಸ್ತಾನವು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಸಹಜವಾಗಿಯೇ ಈ ಬೆಳವಣಿಗೆಗಳು ಅಲ್ಲಿನ ನಾಗರಿಕರ ಮೇಲೆ ಪ್ರಭಾವ ಬೀರಿದೆ.

ನಾವು ಬಡವರು

ಪಾಕಿಸ್ತಾನಿದ ಯೂಟ್ಯೂಬರ್‌ ಸನಾ ಅಜ್‌ಮದ್‌ ತಮ್ಮ ವಿಡಿಯೊದಲ್ಲಿ ಭಾರತವು ಆರ್ಥಿಕವಾಗಿ ಕಂಗೆಟ್ಟಿರುವ ಮಾಲ್ಡೀವ್ಸ್‌ಗೆ ಸಹಾಯ ಹಸ್ತ ಚಾಚುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಕೆಲವು ಪಾಕಿಸ್ತಾನದ ಪ್ರಜೆಗಳು ಪ್ರತಿಕ್ರಿಯಿಸಿದ ರೀತಿ ವೈರಲ್‌ ಆಗಿದೆ. “ನಾವು ನಮ್ಮ ದೇಶಕ್ಕಾಗಿ ಏನು ಮಾಡುತ್ತಿದ್ದೇವೆ ಎನ್ನುವುದನ್ನು ಮೊದಲು ನೋಡಬೇಕು. ನಾವು ನಮ್ಮ ಸ್ವಂತ ದೇಶದ ಬಗ್ಗೆ ಯೋಚಿಸಿದಾಗ ಇತರ ದೇಶಗಳೊಂದಿಗೆ ಹೋಲಿಸುವುದು ಸುಲಭವಾಗುತ್ತದೆ. ಪಾಕಿಸ್ತಾನವು ಭಾರತವನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಈ ನಡೆ ನಮ್ಮ ಅತಿದೊಡ್ಡ ಮೂರ್ಖತನ” ಎಂದು ಒಬ್ಬರು ಹೇಳಿದ್ದಾರೆ.

ಭಾರತವು ಪಾಕಿಸ್ತಾನವನ್ನು ಏಕೆ ಒಪ್ಪಿಕೊಳ್ಳುತ್ತಿಲ್ಲ? ಎನ್ನುವ ಸನಾ ಅಜ್‌ಮದ್‌ ಅವರ ಪ್ರಶ್ನೆಗೆ ಉತ್ತರಿಸಿದ ಆ ವ್ಯಕ್ತಿ, “ಭಾರತವು ಪಾಕಿಸ್ತಾನವನ್ನು ಏಕೆ ಒಪ್ಪಿಕೊಳ್ಳುತ್ತದೆ? ನಾವು ಭಿಕ್ಷುಕರು. ಆ ದೇಶ ತಮ್ಮವರನ್ನು ಪಾಕಿಸ್ತಾನದಂತೆ ಭಿಕ್ಷುಕರನ್ನಾಗಿ ಮಾಡಿಕೊಳ್ಳುವುದಿಲ್ಲ. ನಾವು ನಿಂತಿರುವ ಮಟ್ಟದಲ್ಲಿ ಯಾವುದೇ ದೇಶವು ನಮ್ಮೊಂದಿಗೆ ನಿಲ್ಲುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Mohamed Muizzu India visit: ಬಿರುಕುಬಿಟ್ಟ ಬಾಂಧವ್ಯಕ್ಕೆ ತೇಪೆ ಹಾಕಲು ಭಾರತಕ್ಕೆ ಬಂದಿಳಿದ ಮಾಲ್ದೀವ್ಸ್‌ ಅಧ್ಯಕ್ಷ ಮುಯಿಝು

ಕೆಲವು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದಿದ್ದಕ್ಕೆ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ನ ಪ್ರವಾಸೋದ್ಯಮಕ್ಕೆ ಬಳಿಕ ಭಾರಿ ಹೊಡೆತ ಬಿದ್ದಿತ್ತು. ಭಾರತ ಹಾಗೂ ಮೋದಿ ಕುರಿತು ಮಾಲ್ಡೀವ್ಸ್‌ ಅಸಮಾಧಾನದ ಹೇಳಿಕೆ ನೀಡಿದ ಬಳಿಕ ದೇಶದಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಶುರುವಾದ ಕಾರಣ ಅಲ್ಲಿಗೆ ತೆರಳುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತವಾಗಿತ್ತು. ಇದೀಗ ಭಾರತ ನೆರವಿನ ಹಸ್ತ ಚಾಚಲು ಮುಂದಾಗಿದೆ.