Friday, 25th October 2024

Abhishek-Aishwarya Fight: ಸಾರ್ವಜನಿಕವಾಗಿಯೇ ಕಿತ್ತಾಡಿಕೊಂಡ ಅಭಿಷೇಕ್‌ ಬಚ್ಚನ್‌-ಐಶ್ವರ್ಯಾ ರೈ

Abhishek-Aishwarya Fight

ಮುಂಬೈ: ಬಾಲಿವುಡ್‌ನ ಸ್ಟಾರ್‌ ದಂಪತಿ ಅಭಿಷೇಕ್‌ ಬಚ್ಚನ್‌ (Abhishek Bachchan) ಮತ್ತು ಐಶ್ವರ್ಯಾ ರೈ ಬಚ್ಚನ್‌ (Aishwarya Rai Bachchan) ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ತಮ್ಮ ನಡುವೆ ಯಾವುದೇ ವೈಮನಸ್ಸು ಇಲ್ಲ, ಚೆನ್ನಾಗಿಯೇ ಇದ್ದೇವೆ ಎಂದು ದಂಪತಿ ಆಗಾಗ ಪರೋಕ್ಷವಾಗಿ ಸ್ಪಷ್ಟನೆ ನೀಡಿದರೂ ಈ ವದಂತಿಗೆ ಸಂಪೂರ್ಣ ಬ್ರೇಕ್‌ ಬಿದ್ದಿಲ್ಲ. ಈ ಮಧ್ಯೆ ಅಭಿಷೇಕ್‌ ಮತ್ತು ಐಶ್ವರ್ಯಾ ಸಾರ್ವಜನಿಕವಾಗಿ ಮಾತಿನ ಚಕಮಕಿ ನಡೆಸುತ್ತಿರುವ ಹಳೆ ವಿಡಿಯೊ ಈಗ ವೈರಲ್‌ ಆಗಿದೆ (Abhishek- Aishwarya Fight).

ಇದು ಕೆಲವು ವರ್ಷಗಳ ಹಿಂದಿನ ವಿಡಿಯೊ. ಪ್ರೋ ಕಬಡ್ಡಿ ಪಂದ್ಯ ನಡೆಯುವಾಗ ಐಶ್ವರ್ಯಾ ರೈ ಅವರು ತಮ್ಮ ಕುಟುಂಬ ಸಮೇತ ಗ್ಯಾಲರಿಯಲ್ಲಿ ಕುಳಿತಿದ್ದರು. ಅವರ ಪಕ್ಕದಲ್ಲಿ ಪತಿ ಅಭಿಷೇಕ್​ ಬಚ್ಚನ್​, ಮಗಳು ಆರಾಧ್ಯಾ ಬಚ್ಚನ್​, ಅಭಿಷೇಕ್‌ ಸಹೋದರಿ ನವ್ಯಾ ನವೇಲಿ ನಂದಾ ಮುಂತಾದವರು ಇದ್ದರು. ಈ ವೇಳೆ ಯಾವುದೋ ವಿಚಾರಕ್ಕೆ ಐಶ್ವರ್ಯಾ ರೈ ಮತ್ತು ಅಭಿಷೇಕ್​ ಬಚ್ಚನ್​ ಮಧ್ಯೆ ಚರ್ಚೆ ಆರಂಭವಾಗಿದೆ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಅಭಿಷೇಕ್​ ಬಚ್ಚನ್​ ಮಾತಿನಿಂದ ಕೋಪಗೊಂಡ ಐಶ್ವರ್ಯಾ ರೈ ಮುಖ ತಿರುಗಿಸಿಕೊಳ್ಳುತ್ತಾರೆ. ಬಳಿಕ ನವ್ಯಾ ನವೇಲಿ ನಂದಾ ಕೂಡ ಏನನ್ನೋ ಹೇಳಲು ಪ್ರಯತ್ನಿಸಿ ಸುಮ್ಮನಾಗುತ್ತಾರೆ. ಸದ್ಯ ಈ ವಿಡಿಯೊ ಮತ್ತೊಮ್ಮೆ ವೈರಲ್‌ ಆಗುತ್ತಿದೆ. ಅಭಿಷೇಕ್‌ ಮತ್ತು ಐಶ್ವರ್ಯಾ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎನ್ನುವ ವದಂತಿಯ ಹಿನ್ನಲೆಯಲ್ಲಿ ಈ ವಿಡಿಯೊ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.

ಒಂದೂವರೆ ದಶಕಗಳ ದಾಂಪತ್ಯ

ಪರಸ್ಪರ ಪ್ರೀತಿಸುತ್ತಿದ್ದ ಐಶ್ವರ್ಯಾ ರೈ ಮತ್ತು ಅಭಿಷೇಕ್‌ ಬಚ್ಚನ್‌ 2007ರಲ್ಲಿ ಮದುವೆಯಾಗಿದ್ದರು. ಇವರ ದಾಂಪತ್ಯಕ್ಕೆ ಈಗ ಸುಮಾರು 17 ವರ್ಷ. ಇಷ್ಟು ವರ್ಷಗಳಾದ ಬಳಿಕ ಯಾಕೆ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಸ್ಪಷ್ಟವಾಗಿಲ್ಲ. ಐಶ್ವರ್ಯಾ ರೈ ಮತ್ತು ಅವರ ಅತ್ತೆ ಜಯಾ ಬಚ್ಚನ್‌ ಅವರಿಗೆ ಮೊದಲಿನಿಂದಲೂ ಆಗಿ ಬರುತ್ತಿರಲಿಲ್ಲ. ಅಲ್ಲದೆ ನವ್ಯಾ ನವೇಲಿ ಅವರೊಂದಿಗೂ ಐಶ್ವರ್ಯಾ ರೈ ಅವರ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಆದರೆ ಡಿವೋರ್ಸ್‌ ಬಗ್ಗೆ ಅಧಿಕೃತವಾಗಿ ಯಾರೂ ಬಾಯಿ ಬಿಟ್ಟಿಲ್ಲ.

ಇತ್ತೀಚೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರ ವಿವಾಹದ ಸಮಾರಂಭದಲ್ಲಿ ಇಡೀ ಬಚ್ಚನ್ ಕುಟುಂಬವು ಒಟ್ಟಿಗೆ ಕಾಣಿಸಿಕೊಂಡಿತು. ಆದರೆ ಐಶ್ವರ್ಯಾ ಮತ್ತು ಅವರ ಮಗಳು ಆರಾಧ್ಯಾ ಪ್ರತ್ಯೇಕವಾಗಿ ಆಗಮಿಸಿದ್ದು ಹಲವಾರು ವದಂತಿಗಳನ್ನು ಹುಟ್ಟುಹಾಕಿತ್ತು. ಇತ್ತೀಚೆಗೆ ಐಶ್ವರ್ಯಾ ಮಾತ್ರ ಆರಾಧ್ಯಾ ಅವರೊಂದಿಗೆ ಐಐಎಫ್ಎ 2024 ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನೂ ಓದಿ: Thalapathy 69: ದಳಪತಿ ವಿಜಯ್‌ ಅಭಿನಯದ ಕೊನೆ ಸಿನಿಮಾಕ್ಕೆ ನಾಯಕಿಯಾಗಿ ಕನ್ನಡತಿ ಆಯ್ಕೆ

50 ವರ್ಷವಾದರೂ ಅದೇ ಚಾರ್ಮ್‌ ಉಳಿಸಿಕೊಂಡಿರುವ ಐಶ್ವರ್ಯಾ ಸದ್ಯ ಅಳೆದೂ ತೂಗಿ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇತ್ತ ಅಭಿಷೇಕ್‌ ಸದ್ಯ ʼಬಿ ಹ್ಯಾಪಿʼ, ಶೂಜಿತ್‌ ಸರ್ಕಾರ್‌ ಅವರ ಮುಂದಿನ ಚಿತ್ರ, ʼಹೌಸ್‌ಫುಲ್‌ 5ʼ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.