Sunday, 24th November 2024

MLA Pradeep Eshwar: ನಮ್ಮೂರಿಗೆ ನಮ್ಮ ಶಾಸಕ ೨ನೇ ಕಂತು: ನಂದಿ ಗ್ರಾಮದಲ್ಲಿ ಜನರ ಸಮಸ್ಯೆಗೆ ಕಣ್ಣಾದ ಶಾಸಕ ಪ್ರದೀಪ್ ಈಶ್ವರ್        

ಚಿಕ್ಕಬಳ್ಳಾಪುರ: ನಮ್ಮೂರಿಗೆ ನಮ್ಮ ಶಾಸಕರು ಕಾರ್ಯಕ್ರಮದ ೨ನೇ ಕಂತಿನಲ್ಲಿ ತಾಲೂಕಿನ  ನಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಐದು  ಗ್ರಾಮಗಳಿಗೆ ಸೋಮವಾರ  ಶಾಸಕ ಪ್ರದೀಪ್ ಈಶ್ವರ್ ತಾಲೂಕು ಆಡಳಿತದ ಆಧಿಕಾರಿಗಳೊಂದಿಗೆ  ಭೇಟಿ ನೀಡಿ ಜನಸಾಮಾನ್ಯರ ಅಹವಾಲು ಆಲಿಸಿ ಪರಿಹಾರ ಕಾಣಿಸಬಹುದಾದ ಅರ್ಜಿಗಳಿಗೆ ಸ್ಥಳದಲ್ಲಿಯೇ  ಪರಿಹಾರ ಕಾಣಿಸಿದ ಶಾಸಕ ಕಾಲಾವಕಾಶ ಬೇಡುವ ಅರ್ಜಿಗಳಿಗೆ ಆದಷ್ಟು ಬೇಗ ಪರಿಹಾರ ತೋರಿಸುವ ಬಗ್ಗೆ ತಿಳಿಸಿ ಜನಪ್ರೀತಿಗೆ ಪಾತ್ರವಾದರು.

ಬೆಳ್ಳಂ ಬೆಳಗ್ಗೆ ತಾಲ್ಲೂಕು ಪಂಚಾಯತಿ, ಆರೋಗ್ಯ, ಕಂದಾಯ, ಆಹಾರ, ಬೆಸ್ಕಾಂ, ಪೋಲಿಸ್ ಮತ್ತು ಗ್ರಾಮ ಪಂಚಾಯತಿ ಇಲಾಖೆಗಳ  ಅಧಿಕಾರಿಗಳೊಟ್ಟಿಗೆ ನಂದಿ ಗ್ರಾಮಪಂಚಾಯತಿ ವ್ಯಾಪ್ತಿಯ ಸಿಂಗಾಟಿಕದಿರೇನಹಳ್ಳಿ, ಮಡುಕು ಹೊಸಹಳ್ಳಿ(ಗಾಂಧಿಪುರ), ಸುಲ್ತಾನ್ ಪೇಟೆ, ಬೈರನಾಯಕನಹಳ್ಳಿ ಮತ್ತು ನಂದಿ ಗ್ರಾಮಗಳಿಗೆ ಭೇಟಿ ಕೊಟ್ಟು ಗಮನ ಸೆಳೆದ ಶಾಸಕ ಪ್ರದೀಪ್ ಈಶ್ವರ್ ತಾವು ಭೇಟಿ ನೀಡಿದ ಗ್ರಾಮಗಳ ಮನೆ ಮನೆಗೂ ತೆರಳಿ ಅವರ ಕುಂದುಕೊರತೆ, ಸಮಸ್ಯೆಗಳನ್ನು ಆಲಿಸಿದರು.

ಈ ವೇಳೆ ಗ್ರಾಮಸ್ಥರು ತಾವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಾದ ರಸ್ತೆ,ಚರಂಡಿ,,ಕಲ್ಯಾಣಿ ಸ್ವಚ್ಛತೆ,ಸ್ಮಶಾನಕ್ಕೆ ಜಾಗ, ಸ್ಮಶಾನಕ್ಕೆ ರಸ್ತೆ ಒತ್ತುವರಿ , ವಿದ್ಯುತ್, ಜಮೀನು ಖಾತೆ , ಪಿಂಚಣಿ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಖುದ್ಧಾಗಿ ಶಾಸಕರ ಗಮನಕ್ಕೆ ತಂದರು. ಶಾಸಕರು ತಮ್ಮ ಜತೆಗಿದ್ದ ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳ ಗಮನಕ್ಕೆ ತಂದ ಶಾಸಕರು ತುರ್ತಾಗಿ ಪರಿಹರಿಸುವಂತೆ ನಿರ್ದೇಶನ ನೀಡಿದರು.

ಸೋಮವಾರ ನಂದಿ ಗ್ರಾಮದಲ್ಲಿ ಸಾರ್ವಜನಿಕರೊಂದಿಗೆ ಅಹವಾಲು ಆಲಿಸಿದ ನಂತರ  ಮಾಧ್ಯಮಗಳೊಂದಿಗೆ ಮಾತನಾಡಿದರು.  ನಾನು ನನ್ನ ಜನರನ್ನು ಭೇಟಿ ಮಾಡಿ ಸಮಸ್ಯೆ ಆಲಿಸುವ ಕೆಲಸ ಮಾಡುತ್ತಿದ್ದು ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಂದಿ ಗ್ರಾಮಕ್ಕೆ ಬರಲೇಬೇಕು ಎಂದು ನಿರ್ಧರಿಸಿ ಬಂದಿದ್ದೇನೆ. ನಮ್ಮ ಊರಿಗೆ ನಮ್ಮ ಶಾಸಕರು ಕಾರ್ಯಕ್ರಮದ ಮೂಲಕ ಪ್ರತಿ ಹಳ್ಳಿಗೂ ಅಧಿಕಾರಿಗಳ ಜೊತೆ ಭೇಟಿ ಕೊಟ್ಟು ಗ್ರಾಮಸ್ಥರು ಕಷ್ಟ ಸುಖ ಕೇಳಿ ಅಲ್ಲೆ ಬಗೆಹರಿಸುವ ಕೆಲಸಕ್ಕೆ ಪ್ರಾಮಾಣಿಕವಾಗಿ ಕೈಹಾಕಿದ್ದೇನೆ.ಇದನ್ನೆಲ್ಲಾ ಕಾಳಜಿಯಿಂದ ಮಾಡುತ್ತಿದ್ದೇನೆ ವಿನಃ ಕಾಟಾಚಾರಕ್ಕೋ ಪ್ರಚಾರಕ್ಕೋ ಮಾಡುತ್ತಿಲ್ಲ.ಈಗ ಯಾವುದೇ ಚುನಾವಣೆಗಳೂ ಇಲ್ಲ, ಯಾರನ್ನೋ ಓಲೈ ಸಲು ಮಾಡುತ್ತಿಲ್ಲ. ನನ್ನ ಆರಿಸಿದ ಜನರ ಋಣ ತೀರಿಸಲು ಮಾಡುತ್ತಿದ್ದೇನೆ ಎಂದರು.

ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಸ್ವಾತಂತ್ರ‍್ಯ ಬಂದಾಗಿನಿAದ ದಲಿತರಿಗೆ ಕನಿಷ್ಟ ಸ್ಮಶಾನಕ್ಕೆ ಜಾಗಗಳಿಲ್ಲ. ಜಾಗಗಳಿರು ವೆಡೆ ಬಲಾಢ್ಯರು ಒತ್ತುವರಿ ಮಾಡಿ ಕೊಂಡಿದ್ದಾರೆ.ಅದರ ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನು ನೀರು ನೈರ್ಮಲ್ಯದಂತಹ ಸಮಸ್ಯೆ ಪರಿಹಾರಕ್ಕೆ  ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಅದೇ ರೀತಿ ನಂದಿ ಗ್ರಾಮದ ಕೆರೆ ಕಟ್ಟೆಯಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ಜನ ತಿಳಿಸಿದ್ದು, ಶೀಘ್ರವೇ ದುರಸ್ತಿಗೆ ಸಣ್ಣ ನೀರಾವರಿ ಇಲಾಖಾಧಿಕಾರಿಗಳಿಗೆ  ತಿಳಿಸಿರುವುದಾಗಿ ಹೇಳಿದರು.

ಗ್ರಾಮೀಣ ಭಾಗದ ಬಡವರು ದಲಿತ,ಹಿಂದುಳಿದ, ಅಲ್ಪಸಂಖ್ಯಾತರು ಕಷ್ಟ ಪರಿಹಾರಕ್ಕೆ ಮುಂದಾಗಿದ್ದು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಉತ್ತಮ ಭವಿಷ್ಯ ಕೊಡಲು ಮುಂದಾಗಿದ್ದೇನೆ. ಈಗಾಗಲೇ ನಮ್ಮ ಸರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನಕ್ಕೆ ಆಸರೆಯಾಗಿದ್ದು, ೫ ವರ್ಷ ಮುಂದುವರೆಯಲಿವೆ ಎಂದರು.

ಈ ವೇಳೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಸುಧಾವೆಂಕಟೇಶ್, ಕೆ.ಎಲ್.ಶ್ರೀನಿವಾಸ್, ಡ್ಯಾನ್ಸ್ ಶ್ರೀನಿವಾಸ್, ಕಣಿತಹಳ್ಳಿ ವೆಂಕಟೇಶ್, ನಾಗಭೂಷಣ್,ಖೋಡೇಸ್ ವೆಂಕಟೇಶ್,ನ0ದಿ ಮೂರ್ತಿ, ಮುರಳಿ, ರಮೇಶ್,ಮಸೂದ್ ಪೆದ್ದಣ್ಣ,ಭಾಗ್ಯಮ್ಮ, ಅಲ್ಲು ಅನಿಲ್, ವಿನಯ್ ಬಂಗಾರಿ, ಕೋಲಾಟ್ಲು ರಾಮಚಂದ್ರ,ವಿವಿಧ ಇಲಾಖಾ ಅಧಿಕಾರಿಗಳು,ಮತ್ತಿತರರು ಇದ್ದರು.