Friday, 22nd November 2024

Terror Attack: ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಯೋಧ ಶವವಾಗಿ ಪತ್ತೆ

Terror Attack

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ(Jammu and Kashmir)ದ ಅನಂತನಾಗ್ ಜಿಲ್ಲೆ (Anantnag district)ಯಲ್ಲಿ ಉಗ್ರರು ಅಪಹರಿಸಿದ್ದ ಯೋಧನ ಮೃತದೇಹ ಬುಧವಾರ (ಅಕ್ಟೋಬರ್‌ 9) ಪತ್ತೆಯಾಗಿದೆ. ಉಗ್ರರು ಮಂಗಳವಾರ (ಅಕ್ಟೋಬರ್‌ 8) ಇಬ್ಬರು ಯೋಧರನ್ನು ಅಪಹರಿಸಿದ್ದು, ಈ ಪೈಕಿ ಓರ್ವ ತಪ್ಪಿಸಿಕೊಂಡಿದ್ದರು. ಸೈನಿಕ ಪಡೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ತಂಡವು ಅಪಹರಣಕ್ಕೊಳಗಾದ ಸೈನಿಕನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ ವೇಳೆ ಮೃತದೇಹ ಪತ್ತೆಯಾಗಿದೆ (Terror Attack).

ʼʼಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ ಅರಣ್ಯ ಪ್ರದೇಶದಿಂದ ಪ್ರಾದೇಶಿಕ ಸೇನೆಯ ಇಬ್ಬರು ಜವಾನರನ್ನು ಭಯೋತ್ಪಾದಕರು ಅಪಹರಿಸಿದ್ದು, ಈ ಪೈಕಿ ಓರ್ವ ಯೋಧ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಾಪತ್ತೆಯಾದ ಸಿಬ್ಬಂದಿಯ ಮೃತದೇಹ ಇದೀಗ ಪತ್ತೆಯಾಗಿದೆʼʼ ಎಂದು ಮೂಲಗಳು ತಿಳಿಸಿವೆ.

ʼʼಟೆರಿಟೋರಿಯಲ್ ಆರ್ಮಿ (Territorial Army) ಸೈನಿಕ ಜವಾನ್ ಹಿಲಾಲ್ ಅಹ್ಮದ್ ಭಟ್ ಅವರ ಮೃತದೇಹವನ್ನು ಭದ್ರತಾ ಪಡೆ ಬುಧವಾರ ವಶಪಡಿಸಿಕೊಂಡಿವೆ. ಮಂಗಳವಾರ ಶಾ ಪ್ರದೇಶದಿಂದ ಹಿಲಾಲ್ ಅಹ್ಮದ್ ಭಟ್ ಅವರನ್ನು ಅಪಹರಿಸಲಾಗಿತ್ತು. ಮೃತದೇಹ ಅನಂತ್‌ನಾಗ್‌ನ ಉತ್ರಾಸೂದ ಸಾಂಗ್ಲಾನ್ ಅರಣ್ಯ ಪ್ರದೇಶದಿಂದ ವಶಪಡಿಸಿಕೊಳ್ಳಲಾಗಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಯೋಧನನ್ನು ಪತ್ತೆಹಚ್ಚಲು ಮಂಗಳವಾರ ಭದ್ರತಾ ಪಡೆಗಳು ಭಾರಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು. ಸದ್ಯ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೃತದೇಹದ ತುಂಬ ಗುಂಡಿನ ಗಾಯ ಕಂಡುಬಂದಿದೆ ಎನ್ನಲಾಗಿದೆ.

ಆಗಸ್ಟ್ 27ರಂದು ಭದ್ರತಾ ಪಡೆಗಳು ಅನಂತ್‌ನಾಗ್‌ ಜಿಲ್ಲೆಯಲ್ಲಿ ಮೂವರು ಭಯೋತ್ಪಾದಕರನ್ನು ಬಂಧಿಸಿದ್ದವು. ಪೊಲೀಸರು, ಸಿಆರ್‌ಪಿಎಫ್‌ ಮತ್ತು ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅನಂತ್‌ನಾಗ್‌ ಜಿಲ್ಲೆಯ ವೊಪ್ಜಾನ್ ಟ್ರೈ-ಜಂಕ್ಷನ್‌ನಲ್ಲಿ ಬಯೋತ್ಪಾದಕರು ಬಲೆಗೆ ಬಿದ್ದಿದ್ದರು. ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿತ್ತು. ಇದು 1 ಪಿಸ್ತೂಲ್, 2 ಗ್ರೆನೇಡ್‌ ಒಳಗೊಂಡಿತ್ತು.

ಕಳೆದ ವರ್ಷ ಆಗಸ್ಟ್‌ನಲ್ಲಿ ರಜೆಯಲ್ಲಿದ್ದ ಯೋಧರೊಬ್ಬರನ್ನು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಿಂದ ಅಪಹರಿಸಲಾಗಿತ್ತು. ಬಳಿಕ ಅವರನ್ನು ಪೊಲೀಸರು ಪತ್ತೆ ಹಚ್ಚಿದ್ದರು. 20ರ ವರ್ಷದ ಯೋಧ ವಾನಿ ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿರುವ ತಮ್ಮ ಮನೆಯ ಬಳಿ ನಾಪತ್ತೆಯಾಗಿದ್ದರು. ಅವರ ಕಾರು ಅನಾಥ ಸ್ಥಿಯಲ್ಲಿ ಪತ್ತೆಯಾಗಿತ್ತು. ಕಾರಿನಲ್ಲಿ ರಕ್ತದ ಕಲೆ ಕಂಡು ಬಂದ ಹಿನ್ನೆಲೆಯಲ್ಲಿ ಆತಂಕ ಮೂಡಿತ್ತು. ಕೆಲವು ದಿನಗಳ ಬಳಿಕ ಅವರನ್ನು ಪೊಲೀಸರು ಪತ್ತೆ ಹಚ್ಚಿದ್ದರು.

ಈ ಸುದ್ದಿಯನ್ನೂ ಓದಿ: Encounter: ಜಮ್ಮು & ಕಾಶ್ಮೀರದಲ್ಲಿ ಮತ್ತೊಂದು ಎನ್‌ಕೌಂಟರ್‌; ಭಯೋತ್ಪಾದಕ ಗುಂಪಿನ ಕಮಾಂಡರ್ ಸೇರಿ ಮೂವರನ್ನು ಸುತ್ತುವರಿದ ಸೇನೆ

ಅದಕ್ಕೂ ಮುನ್ನ 2019ರಲ್ಲಿ ಸೈನಿಕ ಯಾಸಿನ್ ಭಟ್ ಅಪಹರಣಕಾರರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡಿದ್ದರು. ಬುಡ್ಗಾಮ್‌ನ ಖಾಜಿಪೊರಾದಲ್ಲಿರುವ ತಮ್ಮ ಮನೆಗೆ ನುಗ್ಗಿದ ಭಯೋತ್ಪಾದಕರ ಕೈಯಿಂದ ಅವರು ಬಚಾವಾಗಿದ್ದರು. ಇನ್ನು 2020ರಲ್ಲಿ ಉಗ್ರರು ಟೆರಿಟೋರಿಯಲ್ ಆರ್ಮಿ ಯೋಧ ಶಾಕಿರ್ ಮಂಜೂರ್ ವೇಜ್ ಅವರನ್ನು ಅಪಹರಿಸಿದ್ದರು. 24 ವರ್ಷದ ಶಾಕಿರ್ ವೇಜ್ ದಕ್ಷಿಣ ಕಾಶ್ಮೀರದ ಶೋಪಿಯಾನ್‌ನ ಹರ್ಮಾನ್‌ನಲ್ಲಿರುವ ತಮ್ಮ ಮನೆಯ ಬಳಿ ನಾಪತ್ತೆಯಾಗಿದ್ದರು. ಒಂದು ವರ್ಷದ ನಂತರ ಸೆಪ್ಟೆಂಬರ್‌ನಲ್ಲಿ ಶಕೀರ್‌ನ ಶವ ಪತ್ತೆಯಾಗಿತ್ತು.