Monday, 25th November 2024

Actor Darshan: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ; ನಾಳೆಯಾದ್ರೂ ಸಿಗುತ್ತಾ ಬೇಲ್?

Actor Darshan

ಬೆಂಗಳೂರು: ನಟ ದರ್ಶನ್‌ (Actor Darshan) ಜಾಮೀನು ಅರ್ಜಿ ವಿಚಾರಣೆ ನಗರದ 57ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ಬುಧವಾರ ನಡೆದಿದ್ದು, ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಅ.10ಕ್ಕೆ ಮುಂದೂಡಿದ್ದಾರೆ. ಇನ್ನು ಅ.14ರಂದು ಎ1 ಪವಿತ್ರಾ ಗೌಡ ಹಾಗೂ ಎ8, ಎ11, ಎ12, ಎ13 ಜಾಮೀನು ಅರ್ಜಿ ಬಗ್ಗೆ ಕೋರ್ಟ್‌ ಆದೇಶ ಹೊರಡಿಸಲಿದೆ.

ನಾಳೆ ದರ್ಶನ್‌ ಪರ ವಾದ ಸಿ.ವಿ.ನಾಗೇಶ್‌ ವಾದ ಮಂಡಿಸಲಿದ್ದಾರೆ. ಇಂದು ಸಿ.ವಿ.ನಾಗೇಶ್‌ ಅವರ ವಾದಕ್ಕೆ ಪ್ರಸನ್ನಕುಮಾರ್‌ ಸುದೀರ್ಘ ಹಾಗೂ ಪ್ರಬಲ ವಾದ ಮಂಡಿಸಿದರು.

ಪೊಲೀಸರ ಪರ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್‌ ಅವರು, ಮರಣೋತ್ತರ ಪರೀಕ್ಷೆ ತಡವಾಗಿದೆ ಎಂಬ ಸಿ.ವಿ.ನಾಗೇಶ್‌ ವಾದ ಮಂಡಿಸಿದ್ದಾರೆ. ಆದರೆ, ಮೃತ ದೇಹ ಯಾರದ್ದು ಎಂದು ಗುರುತಿಸಿದರೆ ಮರಣೋತ್ತರ ಪರೀಕ್ಷೆ ನಡೆಸಬಹುದು, ಆದರೆ, ಎರಡು ದಿನಗಳಾದರೂ ಗುರುತು ಪತ್ತೆಯಾಗಿರಲಿಲ್ಲ. ರೇಣುಕಾಸ್ವಾಮಿ ಮುಖಕ್ಕೆ ನಾಯಿ ಕಚ್ಚಿರುವುದು ಬಿಟ್ಟು, ದೇಹದ ಎಲ್ಲಾ ಗಾಯಗಳೂ ಸಾವಿಗೆ ಮುನ್ನವೇ ಆಗಿವೆ. ಪ್ರಕರಣದ ತನಿಖೆಯಲ್ಲಿ ಪಾರದರ್ಶಕತೆ ಇದೆ ಎಂದು ಹೇಳಿದರು.

ಎ 13 ದೀಪಕ್ ವಿರುದ್ಧ ಕೊಲೆ, ಅಪಹರಣ ಆರೋಪವಿಲ್ಲ. ಕೇವಲ ಸಾಕ್ಷ್ಯ ನಾಶದ ಆರೋಪವಿದೆ. ಅವರಿಗೆ ಜಾಮೀನು ನೀಡಬಹುದು. ಇನ್ನು ಎ 8‌ ರವಿಶಂಕರ್ ಚಾಲಕನಾದರೂ ಕೊಲೆಯಲ್ಲಿ ಆತನ ಪಾತ್ರವಿದೆ.‌ ಹೀಗಾಗಿ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ8 ರವಿಶಂಕರ್‌ಗೆ ಜಾಮೀನು ನೀಡಬಾರದು ಕೋರಿದರು.

ದರ್ಶನ್‌ ಯಾವ ವಸ್ತುಗಳನ್ನು ತೋರಿಸಿದ್ದಾರೋ ಅದೇ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದರ್ಶನ್‌ ತೋರಿಸಿದ ಶೂಗಳನ್ನೇ ರಿಕವರಿ ಮಾಡಲಾಗಿದೆ. ಬಟ್ಟೆ ಒಗೆದ ಮೇಲೂ ರಕ್ತದ ಕಲೆಯಲ್ಲಿನ ಡಿಎನ್‌ಎಯನ್ನೂ ಪತ್ತೆ ಹಚ್ಚಬಹುದು. ಪವಿತ್ರಾ ಗೌಡ ಪ್ಯಾಂಟ್‌, ನಾಗರಾಜ್‌ ಟೀ ಶರ್ಟ್‌ನಲ್ಲೂ ರಕ್ತದ ಕಲೆ ಪತ್ತೆಯಾಗಿದೆ ಎಂದು ತಿಳಿಸಿದರು.

ದರ್ಶನ್‌ ಮನೆಯಲ್ಲಿ ಸಿಕ್ಕ ಹಣದ ಬಗ್ಗೆ ವಾದ ಮಂಡಿಸಿ, ದರ್ಶನ್ 40 ಲಕ್ಷ ಸಾಲ ಪಡೆದಿದ್ದಾರೆ ಎಂದು ಮೋಹನ್‌ ರಾಜ್‌ ಹೇಳುತ್ತಾರೆ. ಫೆಬ್ರವರಿಯಲ್ಲಿ ಪಡೆದು, ಮೇ ತಿಂಗಳಲ್ಲಿ ವಾಪಸ್‌ ನೀಡಿದ್ದೇವೆ ಎನ್ನುತ್ತಾರೆ. ಆದರೆ, ಸಾಕ್ಷಿ ನಾಶ ಮಾಡಲು ಹಣ ಪಡೆದಿದ್ದು ಎಂದು ದರ್ಶನ್‌ ಹೇಳಿರುವುದಾಗಿ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Omar bin Laden: ಒಸಾಮಾ ಬಿನ್ ಲಾಡೆನ್ ಪುತ್ರನನ್ನು ಗಡಿಪಾರು ಮಾಡಿದ ಫ್ರಾನ್ಸ್‌; ಕಾರಣವೇನು?

ಇನ್ನು ಕೆಲ ಸಹ ಆರೋಪಿಗಳು ದರ್ಶನ್‌ಗೆ ಮೊದಲೇ ಪರಿಚಯ. ಸುಪ್ರೀಂ ಕೋರ್ಟ್‌ ಹೇಳಿರುವ ಪ್ರಕಾರ ಕಾಲ್‌ ರೆಕಾರ್ಡ್ಸ್‌ ಕೂಡ ಮುಖ್ಯವಾಗುತ್ತವೆ. 96 ವಸ್ತುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಎರಡು ಮರದ ಕೊಂಬೆಯಲ್ಲಿ ರಕ್ತದ ಕಲೆ ಇಲ್ಲ ಎಂದು ಹೇಳಿದ್ದಾರೆ. ಆದರೆ, ಅವುಗಳಲ್ಲಿ ರಕ್ತದ ಕಲೆ ಇಲ್ಲವೆಂದರೆ, ಬೇರೆ ಯಾವುದರಲ್ಲೂ ರಕ್ತದ ಕಲೆ ಇಲ್ಲವೆಂದಲ್ಲ. ಕೃತ್ಯ ನಡೆದ ಸ್ಥಳ ವಿಶಾಲವಾಗಿದ್ದರಿಂದ ಮಹಜರು ಪ್ರಕ್ರಿಯೆ ತಡವಾಗಿದೆ ಎಂದು ತಿಳಿಸಿದರು. ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಸರು, ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು.