Friday, 22nd November 2024

Haryana Election Result: ಹರಿಯಾಣ ಫಲಿತಾಂಶದ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ: ರಾಹುಲ್‌ ಗಾಂಧಿ

Haryana Election Result

ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ (Haryana Election Result) ತಮ್ಮ ಪಕ್ಷಕ್ಕೆ ಎದುರಾದ ಅನಿರೀಕ್ಷಿತ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗ(Election Commission)ಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ʼʼಜಮ್ಮು ಮತ್ತು ಕಾಶ್ಮೀರದ ಜನತೆಗೆ ಧನ್ಯವಾದಗಳು. ರಾಜ್ಯದಲ್ಲಿನ ಇಂಡಿ ಒಕ್ಕೂಟದ ಗೆಲುವು ಸಂವಿಧಾನಕ್ಕೆ ಸಂದ ಜಯ. ಪ್ರಜಾಪ್ರಭುತ್ವದ ಸ್ವಾಭಿಮಾನದ ಗೆಲುವು. ಹರಿಯಾಣದ ಅನಿರೀಕ್ಷಿತ ಫಲಿತಾಂಶದ ಬಗ್ಗೆ ಅವಲೋಕನ ನಡೆಸುತ್ತೇವೆ. ಹಲವು ವಿಧಾನ ಕ್ಷೇತ್ರಗಳಲ್ಲಿ ಕಂಡು ಬಂದ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಹರಿಯಾಣದ ಜನತೆಗೆ ಅಭಿನಂದನೆ ಅರ್ಪಿಸುತ್ತಿದ್ದೇವೆ. ಜತೆಗೆ ದಣಿವರಿಯದೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೂ ಧನ್ಯವಾದಗಳು. ಹಕ್ಕಿಗಾಗಿ, ಸಾಮಾಜಿಕ, ಆರ್ಥಿಕ ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ಸತ್ಯದ ಪರವಾಗಿ ನಿರಂತರ ಧ್ವನಿ ಎತ್ತಲಿದ್ದೇವೆʼʼ ಎಂದು ಅವರು ಎಕ್ಸ್‌ (ಹಿಂದಿನ ಟ್ವಿಟರ್‌)ನಲ್ಲಿ ಬರೆದುಕೊಂಡಿದ್ದಾರೆ.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಯನ್ನು ತಲೆಕೆಳಗೆ ಮಾಡಿ ಸತತ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕೇಸರಿ ಪಕ್ಷ ಇಲ್ಲಿ 48 ಸ್ಥಾನಗಳನ್ನು ಗೆದ್ದುಕೊಂಡರೆ ಕಾಂಗ್ರೆಸ್‌ 37 ಸ್ಥಾನಕ್ಕೆ ಸೀಮಿತವಾಗಿದೆ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ 42 ಸ್ಥಾನಗಳನ್ನು ಗೆದ್ದಿದೆ. ಎನ್‌ಸಿಯ ಮಿತ್ರಪಕ್ಷ ಕಾಂಗ್ರೆಸ್ 6 ಸ್ಥಾನಗಳಲ್ಲಿ ಜಯ ದಾಖಲಿಸಿದೆ. ಬಿಜೆಪಿ 29 ಸ್ಥಾನಗಳಲ್ಲಿ ಗೆಲುವಿನ ಮುದ್ರೆ ಒತ್ತಿದೆ.

ಹರಿಯಾನ ಫಲಿತಾಂಶದ ಬಗ್ಗೆ ಕಾಂಗ್ರೆಸ್‌ ಅಸಮಾಧಾನ

ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ ಮತ್ತು ಇದು ಸ್ವೀಕಾರಾರ್ಹವಲ್ಲ ಎಂದಿದೆ. ಈ ಫಲಿತಾಂಶ ಪ್ರಜಾಪ್ರಭುತ್ವದ ಸೋಲು ಎಂದು ಕಾಂಗ್ರೆಸ್‌ ವಕ್ತಾರ ಪವನ್ ಖೇರಾ ಅಭಿಪ್ರಾಯಪಟ್ಟಿದ್ದಾರೆ. “ಫಲಿತಾಂಶಗಳು ಅನಿರೀಕ್ಷಿತ ಮತ್ತು ಅವು ಸ್ವೀಕಾರಾರ್ಹವಲ್ಲ. ಈ ರೀತಿಯ ಅಭಿಪ್ರಾಯ ನಿರಂತರವಾಗಿ ಕೇಳಿ ಬರುತ್ತಿವೆ. ಹಿಸಾರ್, ಮಹೇಂದ್ರಗಢ ಮತ್ತು ಪಾಣಿಪತ್ ಮೂರು ಜಿಲ್ಲೆಗಳ ನಮ್ಮ ಅಭ್ಯರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದಾರೆʼʼ ಎಂದು ಅವರು ಹೇಳಿದ್ದಾರೆ.

“ಇದು ಪ್ರಜಾಪ್ರಭುತ್ವದ ಸೋಲು. ನಾವು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾವು ದೂರುಗಳನ್ನು ಪರಿಶೀಲಿಸುತ್ತಿದ್ದೇವೆ. ನಮ್ಮ ಅಭ್ಯರ್ಥಿಗಳು ಅಲ್ಲಿನ ಚುನಾವಣಾ ಅಧಿಕಾರಿಗಳಿಗೆ ದೂರು ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗಕ್ಕೆ ವಸ್ತು ಸ್ಥಿತಿಯ ಮನವರಿಕೆ ಮಾಡುತ್ತೇವೆ. ಹರಿಯಾಣದಲ್ಲಿ ಇಂತಹ ಅನಿರೀಕ್ಷಿತ ಫಲಿತಾಂಶ ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಮತ್ತು ಇದನ್ನು ನಂಬಲು ಸಾಧ್ಯವಿಲ್ಲ. ಈ ಬಗ್ಗೆ ನಾವೆಲ್ಲರೂ ಆಶ್ಚರ್ಯಚಕಿತರಾಗಿದ್ದೇವೆʼʼ ಎಂದು ಅವರು ತಿಳಿಸಿದ್ದಾರೆ.

ಎಕ್ಸಿಟ್‌ ಪೋಲ್‌ ಸಮೀಕ್ಷೆಯಂತೆಯೇ ಮತ ಎಣಿಕೆಯ ಆರಂಭದಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿತ್ತು. ಬಿಜೆಪಿ ಹ್ಯಾಟ್ರಿಕ್‌ ಕನಸು ನುಚ್ಚುನೂರಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ಮರಳಲಿದೆ ಎಂದೇ ಹೇಳಲಾಗಿತ್ತು. ಆದರೆ ಕೆಲ ಹೊತ್ತಿನಲ್ಲೇ ಚಿತ್ರಣ ಸಂಪೂರ್ಣ ಬದಲಾಯಿತು.

ಈ ಸುದ್ದಿಯನ್ನೂ ಓದಿ: Haryana Election Results 2024: ಬಿಜೆಪಿ 20 ಸ್ಥಾನ ಗೆದ್ದರೆ ಹೆಸರು ಬದಲಾಯಿಸುತ್ತೇನೆ; ಟ್ರೋಲ್‌ಗೆ ಗುರಿಯಾಯ್ತು ಕಾಂಗ್ರೆಸ್‌ ನಾಯಕಿಯ ಸವಾಲು