ಬೆಂಗಳೂರು: ಭಾರತ ಭೇಟಿಯಲ್ಲಿರುವ ಮಾಲ್ಡೀವ್ಸ್ ಗಣರಾಜ್ಯದ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಝು (Mohamed Muizzu) ಇಂದು ಬೆಂಗಳೂರಿಗೆ (Bangalore news) ಆಗಮಿಸಿದರು. ಬೆಂಗಳೂರಿನಲ್ಲಿ ಇಂದು ಸಂಜೆ ಅವರು ಮಾಲ್ದೀವ್ಸ್ ಡಯಾಸ್ಪೋರಾವನ್ನು ಭೇಟಿಯಾಗಲಿದ್ದಾರೆ.
ನವದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಧ್ಯಕ್ಷ ಮುಯಿಝು ಮತ್ತು ಪ್ರಥಮ ಮಹಿಳೆ ಸಾಜಿದಾ ಮುಹಮ್ಮದ್ ಹಾಗೂ ಅವರ ನಿಯೋಗವನ್ನು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಇತರರು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸಹಿತ ಹಲವು ಗಣ್ಯರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮುಯಿಝು ಮೂರು ದಿನಗಳಿಂದ ಭಾರತದಲ್ಲಿದ್ದಾರೆ. ಭಾರತ ಪ್ರವಾಸದಲ್ಲಿರುವ ಮೊಹಮ್ಮದ್ ಮುಯಿಝು ಅವರನ್ನು ಸೋಮವಾರ (ಅಕ್ಟೋಬರ್ 7) ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ಮಾಡಿದರು. ನವದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಈ ನಾಯಕರು ಭೇಟಿಯಾದರು. ಭಾರತಕ್ಕೆ ತಮ್ಮ ಅಧಿಕೃತ ಭೇಟಿಗಾಗಿ ಭಾನುವಾರ ಬಂದಿಳಿದ ಮೊಹಮ್ಮದ್ ಮುಯಿಝು ಅವರು ಬಿಗಡಾಯಿಸಿರುವ ತಮ್ಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಭಾರತದ ಧನಸಹಾಯ ಯಾಚಿಸಿದ್ದಾರೆ ಹಾಗೂ ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ಯತ್ನಿಸುತ್ತಿದ್ದಾರೆ.
ಇದು ಭಾರತಕ್ಕೆ ಮುಯಿಝು ಅವರ ಮೊದಲ ದ್ವಿಪಕ್ಷೀಯ ಭೇಟಿ. ಆದರೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಜೂನ್ನಲ್ಲಿ ಇನ್ನಿತರ ಆರು ರಾಷ್ಟ್ರಗಳ ನಾಯಕರೊಂದಿಗೆ ನವದೆಹಲಿಗೆ ಬಂದಿದ್ದರು. ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯ ಕಠಿಣವಾದ ಹಂತದಲ್ಲಿರುವ ಹೊತ್ತಿನಲ್ಲಿ ಈ ಭೇಟಿ ಆಯೋಜಿಸಲಾಗಿದೆ.
ಇದನ್ನೂ ಓದಿ: Narendra Modi : ಭಾರತ ವಿರುದ್ಧದ ಅಂತಾರಾಷ್ಟ್ರೀಯ ಪಿತೂರಿಯಲ್ಲಿ ಕಾಂಗ್ರೆಸ್ ಭಾಗಿ; ಮೋದಿ ಆರೋಪ