ನವದೆಹಲಿ: ಗಡಿ ನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘನೆ ಮಾಡಿ ನಾಗರೀಕರು ಹಾಗೂ ಯೋಧರ ಜೀವ ತೆಗೆದ ಘಟನೆಗೆ ಸಂಬಂಧಿಸಿದಂತೆ ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿಗೆ ಸಮನ್ಸ್ ಜಾರಿ ಮಾಡಿರುವ ಭಾರತ ಈ ಮೂಲಕ ಪಾಕಿಸ್ತಾನದ ದುರ್ವರ್ತನೆೆಗೆ ಪ್ರತಿಭಟನೆ ವ್ಯಕ್ತಪಡಿಸಿದೆ.
ಪಾಕಿಸ್ತಾನದ ಪಡೆಗಳು ಮುಗ್ಧ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುವುದನ್ನು ಭಾರತವು ತೀವ್ರವಾಗಿ ಖಂಡಿಸು ತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಸೇನೆ ನ.13ರಂದು ಕದನ ವಿರಾಮ ಉಲ್ಲಂಘನೆ ಮಾಡಿ ನಾಲ್ವರು ನಾಗರೀಕರು ಸಾವಿಗೆ ಕಾರಣವಾಗಿದೆ. 19 ಮಂದಿ ಗಾಂಭೀರವಾಗಿ ಗಾಯಗೊಂಡಿದ್ದಾರೆ. ಪಾಕಿಸ್ತಾನ ದುರ್ವರ್ತನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ರಾಯಭಾರಿ ಅಧಿಕಾರಿಗೆ ಸಮನ್ಸ ಜಾರಿಗೊಳಿಸಲಾಗಿದ್ದು, ತೀವ್ರ ಪ್ರತಿಭಟನೆ ವ್ಯಕ್ತಪಡಿಸಲಾಗಿದೆ. ಎಂದು ಸಚಿವಾಲಯ ಹೇಳಿದೆ.
ನಾಗರೀಕರ ಮೇಲೆ ಶಸ್ತ್ರಾಸ್ತ್ರಗಳು ಹಾಗೂ ಶೆಲ್ ಗಳ ಮೂಲಕ ದಾಳಿ ನಡೆಸಿ ಜಮ್ಮು ಮತ್ತು ಕಾಶ್ಮೀರದ ಶಾಂತಿ ಕದಡಲು ಹಾಗೂ ಹಿಂಸಾಚಾರ ಸೃಷ್ಟಿಸಲು ಪಾಕಿಸ್ತಾನ ಪ್ರಯತ್ನ ನಡೆಸಿರುವುದು ನಿಜಕ್ಕೂ ಶೋಚನೀಯ ಸಂಗತಿ ಎಂದು ತಿಳಿಸಿದೆ.
ಇದಕ್ಕೂ ಮುನ್ನ ಪಾಕಿಸ್ತಾನ ಹಲವು ಬಾರಿ ಕದನ ವಿರಾಮ ಉಲ್ಲಂಘನೆ ನಡೆಸಿತ್ತು. ಈ ದಾಳಿಗೆ ಪ್ರತೀಕಾರವಾಗಿ ದಾಳಿ ನಡೆಸಿದ್ದ ಭಾರತವು ಪಾಕ್ ಸೇನೆಯ 11 ಸೈನಿಕರನ್ನು ಹತ್ಯೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.