ಪ್ಯಾರಿಸ್: ಅಲ್ ಖೈದಾ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್ ಲಾಡೆನ್ (Osama bin Laden)ನ ಪುತ್ರ ಒಮರ್ ಬಿನ್ ಲಾಡೆನ್ (Omar bin Laden)ಗೆ ದೇಶ ತೊರೆಯುವಂತೆ ಫ್ರೆಂಚ್ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿತ್ರ ಕಲಾವಿದನಾಗಿರುವ 43 ಒಮರ್ ಬಿನ್ ಲಾಡೆನ್ ಸೌದಿ ಅರೇಬಿಯಾದಲ್ಲಿ ಜನಿಸಿದರು. ಬಾಲ್ಯವನ್ನು ಅಲ್ಲೇ ಕಳೆದ ಅವರು ಬಳಿಕ ಕೆಲವು ಸಮಯ ಸುಡಾನ್ ಮತ್ತು ಅಫ್ಘಾನಿಸ್ಥಾನದಲ್ಲಿದ್ದರು. ತಮ್ಮ ತಂದೆಯಿಂದ 19 ವಯಸ್ಸಿನಲ್ಲೇ ದೂರವಾದ ಒಮರ್ ಬಿನ್ ಲಾಡೆನ್ 2016ರಿಂದ ಉತ್ತರ ಫ್ರಾನ್ಸ್‌ನ ನಾರ್ಮಂಡಿ (Normandy)ಯಲ್ಲಿ ವಾಸವಾಗಿದ್ದಾರೆ. ಅವರ ಜತೆ ಪತ್ನಿಯೂ ಇದ್ದಾರೆ. ಪತ್ನಿ ಬ್ರಿಟಿಷ್ ಪ್ರಜೆ ಎಂದು ಫ್ರಾನ್ಸ್‌ನ ಹೊಸ ಆಂತರಿಕ ಸಚಿವ ಬ್ರೂನೋ ರಿಟೇಲ್ಲಿಯೊ (Bruno Retailleau) ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ಮಾಹಿತಿ ನೀಡಿದ್ದಾರೆ.
🚨BIN LADEN'S SON BANNED FROM FRANCE OVER TERROR LINKS
— Mario Nawfal (@MarioNawfal) October 8, 2024
Omar Binladin, son of 9/11 mastermind Osama bin Laden, has been banned from entering France after sharing posts that allegedly glorified terrorism, announced French Interior Minister Bruno Retailleau.
Binladin, who left… pic.twitter.com/2HflpQiLeF
ಕಾರಣವೇನು?
ʼʼಒಮರ್ ಬಿನ್ ಲಾಡೆನ್ 2023ರಲ್ಲಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಭಯೋತ್ಪಾದನೆಯನ್ನು ಪ್ರತಿಪಾದಿಸುವ ಕಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಕಾರಣಕ್ಕೆ ದೇಶ ತೊರೆಯುವಂತೆ ಆದೇಶ ಹೊರಡಿಸಲಾಗಿದೆ” ಎಂದು ಬ್ರೂನೋ ರಿಟೇಲ್ಲಿಯೊ ತಿಳಿಸಿದ್ದಾರೆ. “ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ತೆಗೆದುಕೊಂಡ ಈ ನಿರ್ಧಾರದ ಕಾನೂನುಬದ್ಧತೆಯನ್ನು ನ್ಯಾಯಾಲಯಗಳು ದೃಢಪಡಿಸಿವೆ” ಎಂದೂ ಅವರು ಹೇಳಿದ್ದಾರೆ. ʼʼಒಮರ್ ಬಿನ್ ಲಾಡೆನ್ ಯಾವುದೇ ಕಾರಣಕ್ಕೂ ಫ್ರಾನ್ಸ್‌ಗೆ ಮರಳದಂತೆ ನಿಷೇಧ ಹೇರಲು ಸಹಿ ಹಾಕಿದ್ದೇನೆʼʼ ಎಂದು ಅವರು ವಿವರಿಸಿದ್ದಾರೆ. ಈ ಬಗ್ಗೆ ಅವರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಒಮರ್ ಬಿನ್ ಲಾಡೆನ್ ಈಗಾಗಲೇ ದೇಶ ತೊರೆದಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ʼʼ2023ರಲ್ಲಿ ಒಮರ್ ಬಿನ್‌ಲಾಡೆನ್ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಭಯೋತ್ಪಾದನೆಯನ್ನು ವಿಜೃಂಭಿಸುವ ರೀತಿಯಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಒಸಾಮಾ ಬಿನ್ ಲಾಡೆನ್‌ನ ಹುಟ್ಟಿದ ದಿನದಂದು ಒಮರ್ ಬಿನ್ ಲಾಡೆನ್ ಅಪ್ಪನ ನೆನಪನ್ನು ಹಂಚಿಕೊಂಡಿದ್ದರು. ಇದು ಫ್ರಾನ್ಸ್ ಸರ್ಕಾರದ ಗಮನ ಸೆಳೆದು ಗಡಿಪಾರು ಮಾಡಲು ಕಾರಣವಾಗಿದೆʼʼ ಎಂದು ವರದಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Viral News: ಮಾಲ್ಡೀವ್ಸ್‌ಗೆ ಸಹಾಯಹಸ್ತ ಚಾಚಿದ ಭಾರತ; ನಾವು ಭಿಕಾರಿಗಳು ಎಂದಿದ್ದೇಕೆ ಪಾಕಿಸ್ತಾನದ ವ್ಯಕ್ತಿ?
ಒಮರ್ ಬಿನ್ ಲಾಡೆನ್ ಈ ಹಿಂದೆ ಐದು ಬಾರಿ ವಿಚ್ಛೇದನ ಪಡೆದ ಮತ್ತು ತನಗಿಂತ ಎರಡು ದಶಕಗಳಿಗಿಂತ ಹೆಚ್ಚು ಹಿರಿಯರಾದ ಜೇನ್ ಫೆಲಿಕ್ಸ್-ಬ್ರೌನ್‌ನನ್ನು 2007ರಲ್ಲಿ ವರಿಸಿದ್ದರು. ಮದುವೆಯ ನಂತರ ಜೇನ್ ಫೆಲಿಕ್ಸ್-ಬ್ರೌನ್ ಹೆಸರು ಝೈನಾ ಮೊಹಮ್ಮದ್ ಎಂದು ಬದಲಾಗಿತ್ತು. ಒಮರ್ ಬಿನ್ ಲಾಡೆನ್ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ವಾಸಿಸಲು ಪ್ರಯತ್ನಿಸಿದ್ದರು. ಆದರೆ ಬ್ರಿಟಿಷ್ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಸೌದಿಯ ಉದ್ಯಮಿಯ ಪುತ್ರ ಒಸಾಮಾ ಬಿನ್ ಲಾಡೆನ್ ಸುಮಾರು ಎರಡು ಡಜನ್ ಮಕ್ಕಳನ್ನು ಹೊಂದಿದ್ದಾನೆ ಎನ್ನಲಾಗಿದೆ. ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್‌ನ ಬೃಹತ್ ಕಟ್ಟಡಗಳ ಮೇಲಿನ ದಾಳಿಗೆ ಕಾರಣವಾದ ಅಲ್ ಖೈದಾ ಭಯೋತ್ಪಾದನಾ ಸಂಘಟನೆಯ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ಸೇನೆ 2011ರಲ್ಲಿ ಹೊಡೆದುರುಳಿಸಿತ್ತು.