Friday, 22nd November 2024

Delhi assembly election : ಹರಿಯಾಣದ ಕೋಪ ; ಡೆಲ್ಲಿಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡದಿರಲು ಆಪ್‌ ನಿರ್ಧಾರ

Delhi assembly elections

ನವದೆಹಲಿ: ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Delhi assembly election) ಆಮ್ ಆದ್ಮಿ ಪಕ್ಷ (AAP) ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳದೇ ಇರಲು ನಿರ್ಧರಿಸಿದೆ. ಹರಿಯಾಣ ಚುನಾವಣೆಯಲ್ಲಿ ತಮ್ಮನ್ನು ಕಡೆಗಣಿಸಿದ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಆಪ್‌ ನಾಯಕರು ಡೆಲ್ಲಿಯಲ್ಲಿ ಏಕಾಂಗಿ ಹೋರಾಟ ನಡೆಸಲು ಮುಂದಾಗಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಗೆಲುವಿಗೆ ಕಾಂಗ್ರೆಸ್‌ನ ಅತಿಯಾದ ಆತ್ಮವಿಶ್ವಾಸವೇ ಕಾರಣ ಎಂದು ಆಪ್ ಹೇಳಿಕೊಂಡಿದೆ. “ಹುಂಬ ” ಕಾಂಗ್ರೆಸ್ ಮತ್ತು “ದುರಹಂಕಾರಿ” ಬಿಜೆಪಿ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತೇವೆ ಎಂದು ಪಕ್ಷದ ವಕ್ತಾರರು ಬುಧವಾರ ಹೇಳಿದ್ದಾರೆ.

ದೆಹಲಿಯಲ್ಲಿ ಎಎಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಅತಿಯಾದ ಆತ್ಮವಿಶ್ವಾಸದ ಕಾಂಗ್ರೆಸ್ ಮತ್ತು ದುರಹಂಕಾರಿ ಬಿಜೆಪಿ ವಿರುದ್ಧ ಏಕಾಂಗಿಯಾಗಿ ಹೋರಾಡಲು ನಾವು ಸಮರ್ಥರಾಗಿದ್ದೇವೆ” ಎಂದು ಎಎಪಿ ವಕ್ತಾರೆ ಪ್ರಿಯಾಂಕಾ ಕಕ್ಕರ್ ಹೇಳಿದ್ದಾರೆ. ಕಾಂಗ್ರೆಸ್ ಮೈತ್ರಿ ಪಾಲುದಾರರನ್ನು ಗೌರವಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಹರಿಯಾಣದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶಕ್ಕೆ ಅತಿಯಾದ ಆತ್ಮವಿಶ್ವಾಸವೇ ಕಾರಣ ಎಂದು ಹೇಳಿದ್ದಾರೆ.

“ಕಳೆದ 10 ವರ್ಷಗಳಿಂದ ದೆಹಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. ಆದರೂ ಲೋಕಸಭಾ ಚುನಾವಣೆಯಲ್ಲಿ ಎಎಪಿ ಕಾಂಗ್ರೆಸ್‌ಗೆ ಮೂರು ಸ್ಥಾನಗಳನ್ನು ನೀಡಿತ್ತು. ಆದರೂ ಹರಿಯಾಣದಲ್ಲಿ ಮಿತ್ರಪಕ್ಷಗಳನ್ನು ಒಟ್ಟಿಗೆ ಕರೆದೊಯ್ಯುವ ಅಗತ್ಯವಿಲ್ಲ ಎಂದು ಅವರು ನಿರ್ಧರಿಸಿದ್ದರು ” ಎಂದು ವಕ್ತಾರರು ಹೇಳಿದ್ದಾರೆ.

ಹರಿಯಾಣದಲ್ಲಿ ಮೈತ್ರಿ ಮಾಡಿಕೊಳ್ಳುವ ಇಂಡಿಯಾ ಬ್ಲಾಕ್‌ನ ಎಲ್ಲಾ ಪ್ರಯತ್ನಗಳನ್ನು ಕಾಂಗ್ರೆಸ್ ವಿಫಲಗೊಳಿಸಿತ್ತು. ಮಿತ್ರಪಕ್ಷವನ್ನು ತಮ್ಮೊಂದಿಗೆ ಕರೆದೊಯ್ಯುವ ಅಗತ್ಯವಿಲ್ಲ ಎಂದು ಭಾವಿಸಿತ್ತು ಎಂದು ಕಕ್ಕರ್ ಹೇಳಿದ್ದಾರೆ. ಹರಿಯಾಣದಲ್ಲಿ ಎಎಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು, ಅಲ್ಲಿ ಕಾಂಗ್ರೆಸ್ 10 ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ಗೆದ್ದಿತ್ತು.

ಇದನ್ನೂ ಓದಿ: Haryana Election: ಹರಿಯಾಣದಲ್ಲಿ ಬಿಜೆಪಿ ಗೆಲುವಿನ ಹಿಂದಿದ್ದ ಶಕ್ತಿ ಧರ್ಮೇಂದ್ರ ಪ್ರಧಾನ್

ಹರಿಯಾಣದಲ್ಲಿ ಆಡಳಿತ ಬಿಜೆಪಿ ಪಕ್ಷವು 48 ಸ್ಥಾನಗಳೊಂದಿಗೆ ಸತತ ಮೂರನೇ ಅವಧಿಯಲ್ಲಿ ಗೆದ್ದರೆ ಕಾಂಗ್ರೆಸ್ 37 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಏಕಾಂಗಿಯಾಗಿ ಸ್ಪರ್ಧಿಸಿದ್ದ ಎಎಪಿ ಹರಿಯಾಣದಲ್ಲಿ ಯಾವುದೇ ಸ್ಥಾನಗಳನ್ನು ಗಳಿಸಲು ವಿಫಲವಾಗಿದೆ. ಮತ ಹಂಚಿಕೆಯಲ್ಲಿ ಕಾಂಗ್ರೆಸ್‌ ಗೆದ್ದಿದ್ದರೂ ಮುಖಾಮುಖಿ ಸ್ಪರ್ಧೆಯಲ್ಲಿ ಹಿನ್ನಡೆ ಕಂಡಿತು. ಇತರ ಪಕ್ಷಗಳು ಕಾಂಗ್ರೆಸ್‌ ಮತಗಳನ್ನು ಹಾಳು ಮಾಡಿದವು. ಹೀಗಾಗಿ ಕಾಂಗ್ರೆಸ್ 17 ಸ್ಥಾನಗಳನ್ನು ಕಳೆದುಕೊಂಡಿದೆ ಎಂದು ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿದೆ.