ತುಮಕೂರು: ನಗರದ ಸಿದ್ಧಗಂಗಾ ಆಸ್ಪತ್ರೆ ಇದೀಗ ಕೃತಕ ಬುದ್ಧಿಮತ್ತೆ (ಎಐ) ಸಹಾಯದಿಂದ ಕಾರ್ಯನಿರ್ವಹಿಸುವ ಯುನೈಟೆಡ್ ಇಮೇಜಿಂಗ್ ಸಂಸ್ಥೆಯ ಉತ್ಪನ್ನವಾದ ಎಂಆರ್ಐ ಘಟಕವನ್ನು ಸ್ಥಾಪಿಸಿದೆ. (Tumkur News) ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ನೂತನ ಘಟಕಕ್ಕೆ ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶ್ರೀಗಳು, ಉನ್ನತ ದರ್ಜೆಯ ಸೇವೆ ನೀಡುವಲ್ಲಿ ಎಂದೂ ರಾಜಿಯಾಗದ ನಮ್ಮ ಆಸ್ಪತ್ರೆ ಇದೀಗ ಎಂಆರ್ಐ (MRI) ಸೇವೆಯನ್ನೂ ಆರಂಭಿಸಿರುವುದು ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ತೀರ್ಮಾನಗಳಿಗೆ ಶೀಘ್ರವಾಗಿ ನೆರವಾಗಲಿದೆ. ಒಂದೇ ಸೂರಿನಡಿ ಎಲ್ಲಾ ರೀತಿಯ ಸೌಕರ್ಯಗಳು ಒದಗಿಸುವ ಮೂಲಕ ಜನರಿಗೆ ಮತ್ತಷ್ಟು ಆರೋಗ್ಯದ ಭರವಸೆ ನೀಡಲು ಇದು ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಯಲಯದ ಕಾರ್ಯಕಾರಿ ನಿರ್ದೇಶಕ ಡಾ.ಸಚ್ಚಿದಾನಂದ ಮಾತನಾಡಿ, ಯಾವುದೇ ಆಸ್ಪತ್ರೆ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಆ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳ ಚೇತರಿಕೆಯಲ್ಲಿ ಗಮನಾರ್ಹ ಬೆಳವಣಿಗೆ ಕಾಣುತ್ತದೆ. ಇದೀಗ ಎಂಆರ್ಐ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ರೋಗಿಗಳ ಚಿಕಿತ್ಸೆ ನೀಡುವ ವಿಷಯದಲ್ಲಿ ನಮ್ಮ ಬದ್ಧತೆಯನ್ನು ಹೆಚ್ಚಿಸಿಕೊಂಡಿದ್ದೇವೆ ಎಂದರು.
ಈ ಸುದ್ದಿಯನ್ನೂ ಓದಿ | PM Modi : ಮಹಾರಾಷ್ಟ್ರದಲ್ಲಿ 7,600 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ
ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಸ್. ಪರಮೇಶ್ ಮಾತನಾಡಿ, ಜನರಿಗೆ 24 ಗಂಟೆಯೂ ತುರ್ತು ಸೇವೆ ನೀಡುವ ನಮ್ಮ ಆಸ್ಪತ್ರೆಯಲ್ಲಿ ಈಗಾಗಲೇ ನಾವು ಎಲ್ಲಾ ರೀತಿಯ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿದೆ, ಇದೀಗ ಎಂಆರ್ಐ ಸೇವೆ ಆರಂಭಿಸಿರುವುದು ಆಸ್ಪತ್ರೆಯ ವೈದ್ಯಕೀಯ ಸೌಕರ್ಯಗಳಲ್ಲಿ ಪರಿಪೂರ್ಣತೆ ಸಾಧಿಸುವಂತೆ ಮಾಡಿದೆ. ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ರಿಯಾಯಿತಿ ದರದಲ್ಲಿ ಎಂಆರ್ಐ ಪರೀಕ್ಷೆ ದೊರೆಯಲಿದ್ದು ಇಂದಿನಿಂದಲೇ ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ ಎಂದರು.
ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಶಾಲಿನಿ ಮಾತನಾಡಿ, ಯಾವುದೇ ದೈಹಿಕ ಸಮಸ್ಯೆಗಳ ಕುರಿತು ಸ್ಪಷ್ಟತೆ ಪಡೆಯಲು ಹಾಗೂ ಕೂಲಂಕುಷವಾಗಿ ಅಧ್ಯಯನ ಮಾಡಲು ಎಂಆರ್ಐ ತಂತ್ರಜ್ಞಾನ ಬಹಳಷ್ಟು ಅನುಕೂಲಕರ. ಇದು ವೈದ್ಯರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವುದರ ಜತೆಗೆ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೂ ನೆರವಾಗಲಿದೆ ಎಂದರು.
ಈ ಸುದ್ದಿಯನ್ನೂ ಓದಿ | Flower and Fruits Price: ವಿಜಯದಶಮಿಗೆ ಕೌಂಟ್ ಡೌನ್ ಆರಂಭ; ಹಬ್ಬಕ್ಕೆ ಹೂವು-ಹಣ್ಣು ಬಲು ದುಬಾರಿ!
ವೈದ್ಯಕೀಯ ಅಧೀಕ್ಷಕ ಡಾ. ನಿರಂಜನಮೂರ್ತಿ,ಸಿಇಓ ಡಾ.ಸಂಜೀವಕುಮಾರ್, ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ, ರೇಡಿಯಾಲಜಿಸ್ಟ್ಗಳಾದ ಡಾ. ಧೃವ, ಡಾ. ಪ್ರಸಾದ್, ಡಾ. ತಿಲಕ್, ಡಾ. ಸಮೀಹ ಹಾಗೂ ಇತರರು ಉಪಸ್ಥಿತರಿದ್ದರು.