Sunday, 17th November 2024

Valmiki corporation scam: ವಾಲ್ಮೀಕಿ ನಿಗಮ ಅಕ್ರಮದಲ್ಲಿ ಬಿ.ನಾಗೇಂದ್ರ ಮಾಸ್ಟರ್‌ ಮೈಂಡ್‌; ಚುನಾವಣೆಗೂ ಹಣ ದುರ್ಬಳಕೆ!

Valmiki corporation scam

ಬೆಂಗಳೂರು: ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಜಾರಿ ನಿರ್ದೇಶನಾಲಯವು ಇದೀಗ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ (Prosecution Complaint) ಸಲ್ಲಿಸಿದೆ. ಚಾರ್ಜ್‌ಶೀಟ್‌ನಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರೇ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಉಲ್ಲೇಖ ಮಾಡಲಾಗಿದ್ದು, ನಿಗಮದ ಸುಮಾರು 20.19 ಕೋಟಿ ರೂ. ಹಣವನ್ನು ಬಳ್ಳಾರಿ ಲೋಕಸಭೆ ಚುನಾವಣೆ ಪ್ರಚಾರಕ್ಕೆ ದುರ್ಬಳಕೆ ಮಾಡಿದ್ದು, ಮಾಜಿ ಸಚಿವರ ವೈಯಕ್ತಿಕ ಖರ್ಚಿಗೆ ಬಳಸಲಾಗಿದೆ ಎಂದು ಇಡಿ (Valmiki corporation scam) ಮಾಹಿತಿ ನೀಡಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ಇಡಿ ಮಾಹಿತಿ ಹಂಚಿಕೊಂಡಿದೆ. ವಾಲ್ಮೀಕಿ ನಿಗಮ ಅಕ್ರಮ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದರಿಂದ ಮಾಜಿ ಸಚಿವ ಬಿ.ನಾಗೇಂದ್ರರ ತಲೆದಂಡವೂ ಆಗಿತ್ತು. ಇದೀಗ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರೇ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಉಲ್ಲೇಖ ಮಾಡಲಾಗಿದೆ.

ಸತ್ಯನಾರಾಯಣ ವರ್ಮ, ಇಟಕಾರಿ ಸತ್ಯನಾರಾಯಣ, ಜೆ.ಜಿ.ಪದ್ಮನಾಭ, ನಾಗೇಶ್ವರ್ ರಾವ್, ನೆಕ್ಕೆಂಟಿ ನಾಗರಾಜ್ ಮತ್ತು ವಿಜಯ್ ಕುಮಾರ್ ಗೌಡ ಸೇರಿದಂತೆ 24 ಮಂದಿಯ ಸಹಾಯದಿಂದ ಈ ಹಗರಣ ನಡೆದಿದ್ದು, ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಪ್ರಾಥಮಿಕ ಆರೋಪಿ ಮತ್ತು ಮಾಸ್ಟರ್ ಮೈಂಡ್ ಎಂದು ಹೆಸರಿಸಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ.

ಬಿ ನಾಗೇಂದ್ರ ಅವರ ಪ್ರಭಾವದಿಂದ ನಿಗಮದ ಖಾತೆಯನ್ನು ಅನುಮತಿಯಿಲ್ಲದೆ ಎಂಜಿ ರಸ್ತೆಯ ಶಾಖೆಗೆ ವರ್ಗಾಯಿಸಲಾಗಿದೆ ಎಂಬುದು ತನಿಖೆಯಲ್ಲಿ ಕಂಡುಬಂದಿದೆ. ಹಣದ ಅಕ್ರಮ ವರ್ಗಾವಣೆಯಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಯನ್ನು ಬೆಂಬಲಿಸಲು ಹಾಗೂ ಬಿ ನಾಗೇಂದ್ರ ಅವರ ವೈಯಕ್ತಿಕ ವೆಚ್ಚಕ್ಕಾಗಿ 20.19 ಕೋಟಿ ರೂ.ಗಳನ್ನು ಬಳಸಲಾಗಿದೆ ಎಂದು ಇಡಿ ಹೇಳಿದೆ.

ಈ ಸುದ್ದಿಯನ್ನೂ ಓದಿ | Delhi assembly election : ಹರಿಯಾಣದ ಕೋಪ ; ಡೆಲ್ಲಿಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡದಿರಲು ಆಪ್‌ ನಿರ್ಧಾರ

ನಾಗೇಂದ್ರ ಅವರ ಸೂಚನೆ ಮೇರೆಗೆ ಹಣವನ್ನು ನಿರ್ವಹಿಸುತ್ತಿದ್ದ ವಿಜಯ್ ಕುಮಾರ್ ಗೌಡ ಅವರ ಮೊಬೈಲ್ ಫೋನ್‌ನಿಂದ ಚುನಾವಣಾ ವೆಚ್ಚದ ವಿವರಗಳನ್ನು ಪಡೆಯಲಾಗಿದೆ. ಹಗರಣ ಬೆಳಕಿಗೆ ಬಂದ ನಂತರ ರಾಜೀನಾಮೆ ನೀಡಿದ ಬಿ.ನಾಗೇಂದ್ರ ಅವರು ತಮ್ಮ ಮೊಬೈಲ್ ಫೋನ್‌ಗಳನ್ನು ನಾಶಪಡಿಸಿದ್ದಾರೆ. ಅಷ್ಟೇ ಅಲ್ಲದೇ ಉಳಿದವರಿಗೆ ಈ ಪ್ರಕರಣದಲ್ಲಿ ಮೌನವಾಗಿರುವಂತೆ ಸೂಚನೆ ನೀಡಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಇಡಿ ತಿಳಿಸಿದೆ.