Wednesday, 23rd October 2024

Ayudha Pooja: ಕೆಎಸ್‌ಆರ್‌ಟಿಸಿ ಬಸ್‌ಗಳ ಆಯುಧ ಪೂಜೆಗೆ ನೀಡುವ ಹಣ 100 ರಿಂದ 250 ರೂ.ಗೆ ಹೆಚ್ಚಳ

Ayudha Pooja

ಬೆಂಗಳೂರು: ನವರಾತ್ರಿಯಲ್ಲಿ ವಾಹನ, ವಸ್ತುಗಳಿಗೆ ಪೂಜೆ ಮಾಡುವುದು ಸಂಪ್ರದಾಯವಾಗಿ ಬಂದಿದೆ. ಅದೇ ರೀತಿ ಸಾರಿಗೆ ನಿಗಮಗಳ ಬಸ್‌ಗಳಿಗೂ (KSRTC Bus) ಆಯುಧ ಪೂಜೆ ಮಾಡಲು ನಿಗಮದಿಂದ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಆಯುಧ ಪೂಜೆಗೆಂದು (Ayudha Pooja) ಬಿಡುಗಡೆಯಾಗಿದ್ದ ಮೊತ್ತದ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದರಿಂದ ಪೂಜೆಗೆ ನೀಡುತ್ತಿದ್ದ ಮೊತ್ತವನ್ನು 100 ರಿಂದ 250ಕ್ಕೆ ಏರಿಸಿ ಕೆಎಸ್‌ಆರ್‌ಟಿಸಿ ಸುತ್ತೋಲೆ ಹೊರಡಿಸಿದೆ.

ಕಳೆದ ಕೆಲ ವರ್ಷಗಳಿಂದ ಕೆಎಸ್‌ಆರ್‌ಟಿಸಿಯಿಂದ ಸಾರಿಗೆ ಬಸ್‌ಗಳ ಆಯುಧ ಪೂಜೆಗೆಂದು 100 ರೂ. ನೀಡಲಾಗುತ್ತಿತ್ತು. ಈ ದುಬಾರಿ ದುನಿಯಾದಲ್ಲಿ ಇಷ್ಟು ಹಣ ಸಾಕಾಗುವುದೇ ಎಂಬುದಾಗಿ ಹಲವರು ಪ್ರಶ್ನಿಸಿದ್ದರು. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳ ಆಯುಧ ಪೂಜೆಗೆ ನೀಡುತ್ತಿದ್ದ ಹಣವನ್ನು 100 ರಿಂದ 250ಕ್ಕೆ ಹೆಚ್ಚಿಸಲಾಗಿದೆ.

ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಯಾಂತ್ರಿಕ ಅಭಿಯಂತರರು ಸುತ್ತೋಲೆ ಹೊರಡಿಸಿದ್ದು, ಪ್ರತಿ ವರ್ಷವು ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಆಚರಣೆಯಲ್ಲಿರುವ ಆಯುಧ ಪೂಜೆಯ ದಿನದಂದು ನಿಗಮದ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ಸುಸ್ಥಿತಿಯಲ್ಲಿಟ್ಟು ಪೂಜೆ ಮಾಡುವುದು ಸಂಪುದಾಯವಾಗಿದ್ದು, ಈ ಮೊದಲು ವಿಭಾಗಗಳಲ್ಲಿ ಕಾರ್ಯಾಚರಣೆಯಲ್ಲಿರುವ ಪ್ರತಿ ಪ್ರಯಾಣಿಕ ಹಾಗೂ ಇಲಾಖಾ ವಾಹನದ ಪೂಜಾ ಕಾರ್ಯಕ್ಕೆ 100 ರೂ. ನಂತೆ ಮುಂಗಡ ಹಣ ಪಡೆದು ಸ್ವಚ್ಛತೆಯೊಂದಿಗೆ ವಾಹನಗಳ ಮತ್ತು ಯಂತ್ರೋಪಕರಣಗಳ ಪೂಜೆ ಮಾಡುವಂತೆ ಸೂಚಿಸಲಾಗಿತ್ತು.

ಆದರೆ, ವ್ಯವಸ್ಥಾಪಕ ನಿರ್ದೇಶಕರ ಆದೇಶದಂತೆ ವಿಭಾಗಗಳಲ್ಲಿ ಕಾರ್ಯಾಚರಣೆಯಲ್ಲಿರುವ ಪ್ರತಿ ಪ್ರಯಾಣಿಕ ಹಾಗೂ ಇಲಾಖಾ ವಾಹನದ ಪೂಜಾ ಕಾರ್ಯಕ್ಕೆ ದರವನ್ನು ಪರಿಷ್ಕರಿಸಿ 250 ರೂ. ಅನ್ನು ನಿಗದಿಪಡಿಸಿರುವುದರಿಂದ, ಅದರಂತೆ ಮುಂಗಡ ಹಣ ಪಡೆದು ಸ್ವಚ್ಛತೆಯೊಂದಿಗೆ ವಾಹನಗಳ ಹಾಗೂ ಯಂತ್ರೋಪಕರಣಗಳ ಪೂಜಾ ಕಾರ್ಯಾಗಳನ್ನು ಸಿಬ್ಬಂದಿ ನೆರವೇರಿಸಬೇಕು ಎಂದು ಸೂಚಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Navaratri Bangles Trend 2024: ನವರಾತ್ರಿ ಸಂಭ್ರಮಕ್ಕೆ ಜತೆಯಾದ 5 ಡಿಸೈನ್‌‌ನ ಕಲರ್‌ಫುಲ್‌ ಬ್ಯಾಂಗಲ್ಸ್

ಪೂಜೆ ಸಾಮಾಗ್ರಿ ಸೇರಿ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ನಿಗಮ ನೀಡುವ ಕೇವಲ 100 ರೂ.ನಲ್ಲಿ ಆಯುಧ ಪೂಜೆ ಮಾಡುವುದಾದರೂ ಹೇಗೆ ಎಂದು ಬಸ್‌ ಚಾಲಕ, ನಿರ್ವಾಹಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಈ ಹಿಂದೆ 2008 ರವರೆಗೂ ಪ್ರತಿ‌ ಬಸ್‌ಗೆ 10 ರೂ. ನೀಡಲಾಗುತ್ತಿತ್ತು. 2009 ರಲ್ಲಿ ಪ್ರತಿ ಬಸ್‌ಗೆ 30 ರೂ.ಗೆ ಏರಿಕೆ ಮಾಡಲಅಗಿತ್ತು. 2016 ರಲ್ಲಿ 50 ರೂ., 2017 ರಲ್ಲಿ 100 ಕ್ಕೆ ಏರಿಕೆ ‌ಮಾಡಲಾಗಿತ್ತು. ಇದೀಗ ಪ್ರತಿ‌ ಬಸ್‌ಗೆ ನೀಡುತ್ತಿದ್ದ ಮೊತ್ತವನ್ನು 100 ರೂ.ಗಳಿಂದ 250ಕ್ಕೆ ಹೆಚ್ಚಿಸಲು ಸಾರಿಗೆ ಹಾಗೂ ಮುಜರಾಯಿ ಸಚಿವರು ಆದೇಶಿಸಿದ್ದಾರೆ. ಅದರಂತೆ ಪರಿಷ್ಕೃತ ಆದೇಶ‌ ಹೊರಡಿಸಲಾಗಿದೆ.