Friday, 22nd November 2024

Women’s T20 World Cup : ಮಹಿಳೆಯರ ತಂಡಕ್ಕೆ ಲಂಕಾ ವಿರುದ್ಧ 82 ರನ್ ಜಯ, ಸೆಮೀಸ್‌ ಆಸೆ ಜೀವಂತ

Women's T20 World Cup

ಬೆಂಗಳೂರು: ಮಹಿಳೆಯರ ಟಿ20 ವಿಶ್ವ ಕಪ್‌ನ ಲೀಗ್ ಹಂತದಲ್ಲಿ (Women’s T20 World Cup) ಭಾರತ ತಂಡ ಎರಡನೇ ಗೆಲುವು ದಾಖಲಿಸಿದೆ. ನೆರೆಯ ಶ್ರೀಲಂಕಾ ತಂಡದ ವಿರುದ್ಧ ಅಮೋಘ 82 ರನ್ ವಿಜಯ ದಾಖಲಿಸುವ ಮೂಲಕ ಸೆಮಿಫೈನಲ್ ಅವಕಾಶವನ್ನು ಜೀವಂತವಾಗಿಸಿಕೊಂಡಿದೆ. ಭಾರತ ಪರ ಬ್ಯಾಟಿಂಗ್‌ನಲ್ಲಿ ಸ್ಮೃತಿ ಮಂಧಾನ (50 ರನ್‌, 38 ಎಸೆತ, 4ಫೋರ್‌, 1 ಸಿಕ್ಸರ್ ) ಹಾಗೂ ಹರ್ಮನ್‌ಪ್ರೀತ್ ಕೌರ್‌ (52 ರನ್‌, 27 ಎಸೆತ, 8 ಫೋರ್ ಹಾಗೂ 1 ಸಿಕ್ಸರ್‌) ಭಾರತ ಪರ ಬ್ಯಾಟಿಂಗ್‌ನಲ್ಲಿ ಗೆಲುವಿನ ರೂವಾರಿ ಎನಿಸಿಕೊಂಡರು. ಬೌಲಿಂಗ್‌ನಲ್ಲಿ ತಲಾ 3 ವಿಕೆಟ್ ಪಡೆದ ಅರುಂಧತಿ ರೆಡ್ಡಿಹಾಗೂ ಆಶಾ ಶೋಭನಾ ಮಿಂಚಿದರು.

ಈ ಗೆಲುವು ಭಾರತ ತಂಡಕ್ಕೆ ಟಿ20 ವಿಶ್ವ ಕಪ್ ಇತಿಹಾಸದಲ್ಲಿ ದೊರಕಿದ ಗರಿಷ್ಠ ರನ್‌ಗಳ ಅಂತರದ ಗೆಲುವು. ಈ ಹಿಂದೆ 2014ರಲ್ಲಿ ಬಾಂಗ್ಲಾದೇಶ ವಿರುದ್ಧ 79 ರನ್‌ಗಳ ಗೆಲುವು ದಾಖಲಿಸಿತು. ಲಂಕಾ ವಿರುದ್ಧದ ದೊಡ್ಡ ಮೊತ್ತದ ಗೆಲುವು ಭಾರತದ ರನ್‌ರೇಟ್ ಹೆಚ್ಚಳಕ್ಕೆ ಕಾರಣವಾಯಿತು. ಪಾಕ್ ತಂಡವನ್ನು ಹಿಂದಿಕ್ಕಲು ನೆರವಾಯಿತು.

ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟ್‌ ಮಾಡಿ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 172 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಶ್ರೀಲಂಕಾ ತಂಡ 19.5 ಓವರ್‌ಗಳಲ್ಲಿ 90 ರನ್‌ಗೆ ಆಲ್ಔಟ್ ಆಯಿತು. ಈ ಗೆಲುವಿನೊಂದಿಗೆ ಎ ಗುಂಪಿನಲ್ಲಿರುವ ಭಾರತ ಬಳಗ ಆಡಿರುವ 3 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಬಳಿಕ 2 ನೇ ಸ್ಥಾನ ಪಡೆದುಕೊಂಡಿದೆ.

ಭಾರತ ಪೇರಿಸಿದ್ದ ಬೃಹತ್ ರನ್‌ಗಳಿಗೆ ಪ್ರತಿಯಾಗಿ ಬ್ಯಾಟ್ ಮಾಡಿದ ಲಂಕಾ ಬಳಗ 6 ರನ್‌ಗೆ 3 ವಿಕೆಟ್ ನಷ್ಟ ಮಾಡಿಕೊಂಡು ಹೀನಾಯ ಸ್ಥಿತಿ ತಲುಪಿತು. ಬಳಿಕ ಕವಿಶಾ (21 ರನ್‌) ಹಾಗೂ ಅನುಷ್ಕಾ (20) ರನ್ ಸ್ವಲ್ಪ ಹೊತ್ತು ಆಡಿದರು. ಆದರೆ, ಉಳಿದ ಆಟಗಾರರು ಹೆಚ್ಚು ಹೊತ್ತು ಆಡದ ಕಾರಣ ಸೋಲುಂಟಾಯಿತು. ಆರಂಭದಿಂದಲೂ ಲಂಕಾ ಬ್ಯಾಟರ್‌ಗಳನ್ನು ಕಾಡಿದ ಭಾರತೀಯ ಬೌಲಿಂಗ್ ಪಡೆ ದೊಡ್ಡ ಅಂತರ ಗೆಲುವಿನ ಖಾತರಿ ಕೊಟ್ಟಿತು. ರೇಣುಕಾ ಸಿಂಗ್ 2 ವಿಕೆಟ್ ಪಡೆದರೆ ಶ್ರೇಯಾಂಕಾ ಪಾಟೀಲ್ ಹಾಗೂ ದೀಪ್ತಿ ಶರ್ಮಾ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ: IND vs BAN : ಭಾರತಕ್ಕೆ86 ರನ್‌ಗಳ ಭರ್ಜರಿ ಜಯ; ಟಿ20 ಸರಣಿ ಕೈವಶ

ಸ್ಮೃತಿ, ಹರ್ಮನ್ ಭರ್ಜರಿ ಬ್ಯಾಟಿಂಗ್‌

ಮಾಡು ಇಲ್ಲವೇ ಮಡಿ ಎಂಬ ಹಂತದಲ್ಲಿದ್ದ ಭಾರತ ತಂಡಕ್ಕೆ ಆರಂಭದಿಂದಲೇ ಬ್ಯಾಟರ್‌ಗಳು ನೆರವಾದರು. ಶಫಾಲಿ ವರ್ಮಾ 43 ರನ್ ಬಾರಿಸಿ ಸ್ಮೃತಿ ಜತೆ ಸೇರಿಕೊಂಡು ಮೊದಲ ವಿಕೆಟ್‌ಗೆ 98 ರನ್ ಬಾರಿಸಿದರು. ಬಳಿಕ ಬಂದ ಹರ್ಮನ್ ಪ್ರೀತ್ ಸಿಂಗ್ ಕೂಡ ಹೊಡೆಬಡಿಯ ಬ್ಯಾಟಿಂಗ್ ಮಾಡಿದರು. ಕೊನೆಯಲ್ಲಿ ಜೆಮಿಮಾ 10 ಎಸೆತಕ್ಕೆ 16 ರನ್ ಬಾರಿಸಿ ಭಾರತ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವಾದರು.