Friday, 22nd November 2024

Ratan Tata Passed Away: ಭಾರತದ ಉದ್ಯಮ ಕ್ಷೇತ್ರದ ಸಜ್ಜನ ರತನ್ ಟಾಟಾ ಇನ್ನಿಲ್ಲ

ratan tata passed away

ನವದೆಹಲಿ: ಹಿರಿಯ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್ ಸಮೂಹದ ಮಾಜಿ ಅಧ್ಯಕ್ಷ ರತನ್ ಟಾಟಾ (Ratan Tata Passed Away) ಬುಧವಾರ ತಡರಾತ್ರಿ ತಮ್ಮ 86 ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಕ್ತದೊತ್ತಡದಲ್ಲಿ ಹಠಾತ್‌ ಇಳಿಕೆಯಾದ ಕಾರಣ ಸೋಮವಾರ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ತೀವ್ರ ನಿಗಾ ಘಟಕದಲ್ಲಿ ಗಂಭೀರ ಸ್ಥಿತಿಯಲ್ಲಿದ್ದರು. ರಾತ್ರಿ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ.

ಸೋಮವಾರ (ಅಕ್ಟೋಬರ್ 7) ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕೊನೆಯ ಹೇಳಿಕೆಯಲ್ಲಿ ಟಾಟಾ ಅವರು ತಮ್ಮ ಆರೋಗ್ಯದ ಕುರಿತ ಊಹಾಪೋಹಗಳಿಂದ ದೂರವಿರಲು ಜನರಿಗೆ ಮನವಿ ಮಾಡಿದ್ದರು. ತಮ್ಮ ಆರೋಗ್ಯದ ಬಗ್ಗೆ ಯಾವುದೇ ಆತಂಕವಿಲ್ಲ. ವಯೋಸಹಜ ಸಮಸ್ಯೆಗಳ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದೇನೆ ಎಂದು ಅವರು ಹೇಳಿದ್ದರು.

ದೂರದೃಷ್ಟಿಯ ಮತ್ತು ಜನೋಪಕಾರಿಯಾಗಿದ್ದ ರತನ್ ಟಾಟಾ ಅವರು ಮಾರ್ಚ್ 1991ರಿಂದ ಡಿಸೆಂಬರ್ 2012 ರವರೆಗೆ ಟಾಟಾ ಸನ್ಸ್ ಅಧ್ಯಕ್ಷರಾಗಿ ಟಾಟಾ ಗ್ರೂಪ್ ಅನ್ನು ಮುನ್ನಡೆಸಿದ್ದರು. ಈ ವೇಳೆ ಟಾಟಾ ಗ್ರೂಪ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಮಾರ್ಚ್ 31, 2024 ರ ಹೊತ್ತಿಗೆ ಟಾಟಾ ಸಮೂಲದ ಮೌಲ್ಯ 365 ಬಿಲಿಯನ್ ಡಾಲರ್ (ಸುಮಾರು 30.7 ಲಕ್ಷ ಕೋಟಿ ರೂ.) ಗಿಂತ ಹೆಚ್ಚಾಗಿದೆ.

ಟಾಟಾ ಗ್ರೂಪ್ ವೆಬ್ಸೈಟ್ ಪ್ರಕಾರ, 2023-24ರಲ್ಲಿ, ಟಾಟಾ ಕಂಪನಿಗಳು ಅಥವಾ ಉದ್ಯಮಗಳು ಒಟ್ಟಾಗಿ 165 ಬಿಲಿಯನ್ ಡಾಲರ್ (ಸುಮಾರು 13.9 ಲಕ್ಷ ಕೋಟಿ ರೂ.) ಆದಾಯ ಗಳಿಸಿವೆ. ಟಾಟಾ ಸ್ಟೀಲ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಟಾಟಾ ಮೋಟಾರ್ಸ್, ಇಂಡಿಯನ್ ಹೋಟೆಲ್ಸ್, ಏರ್ ಇಂಡಿಯಾ, ಜಾಗ್ವಾರ್ ಲ್ಯಾಂಡ್ ರೋವರ್, ಟೈಟಾನ್, ಇನ್ಫಿನಿಟಿ ರಿಟೇಲ್ (ಕ್ರೋಮಾ), ಟ್ರೆಂಟ್ (ವೆಸ್ಟ್ಸೈಡ್, ಜುಡಿಯೋ, ಜಾರಾ) ಸೇರಿದಂತೆ 30 ಕಂಪನಿಗಳು ಒಟ್ಟಾಗಿ 10 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ.

ಇದನ್ನು ಓದಿ : Ratan Tata: ರತನ್ ಟಾಟಾ ಎಲ್ಲ ಉದ್ಯಮಿಗಳಿಗಿಂತ ಭಿನ್ನವಾಗಿದ್ದರು! ಇಲ್ಲಿದೆ ನೋಡಿ ಅದಕ್ಕೆ ಕಾರಣಗಳು

ರತನ್ ಅವರ ಅಧಿಕಾರಾವಧಿಯಲ್ಲಿ, ಟಾಟಾ ಗ್ರೂಪ್‌ನ ಆದಾಯವು ಅನೇಕ ಪಟ್ಟು ಹೆಚ್ಚಾಗಿದೆ. 1991ರಲ್ಲಿ ಕೇವಲ 10,000 ಕೋಟಿ ರೂ.ಗಳ ವಹಿವಾಟು ಹೊಂದಿದ್ದ ಆದಾಯವು 2011-12 ರಲ್ಲಿ ಒಟ್ಟು 100.09 ಬಿಲಿಯನ್ ಡಾಲರ್‌ಗೆ ಏರಿತ್ತು ನಿವೃತ್ತಿಯ ನಂತರ, ಟಾಟಾ ತಮ್ಮ ಉತ್ತರಾಧಿಕಾರಿ ಸೈರಸ್ ಮಿಸ್ತ್ರಿ ಅವರೊಂದಿಗೆ ಬೋರ್ಡ್ ರೂಮ್ ಯುದ್ಧವನ್ನು ಎದುರಿಸಿದರು. ಮಿಸ್ತ್ರಿ ಅವರನ್ನು ಅಕ್ಟೋಬರ್ 24, 2016 ರಂದು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಯಿತು. ಜನವರಿ 2017 ರಲ್ಲಿ ಎನ್ ಚಂದ್ರಶೇಖರನ್ ಅವರಿಗೆ ಅಧಿಕಾರ ಹಸ್ತಾಂತರಿಸಿದ ನಂತರ ಅವರು ಗುಂಪಿನ ಮಧ್ಯಂತರ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.

ರತನ್ ಟಾಟಾಗೆ ಅವರಿಗೆ 2000 ರಲ್ಲಿ ಪದ್ಮಭೂಷಣ ಮತ್ತು 2008 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದೆ.