Friday, 22nd November 2024

Vishweshwar Bhat Column: ಬೇಗಂ ನುಸ್ರತ್‌ ಭುಟ್ಟೋ ಭೇಟಿ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಭಾರತದಲ್ಲಿರುವ ಪಾಕಿಸ್ತಾನದ ರಾಯಭಾರಿ ಇಲ್ಲಿನ ಆಡಳಿತ ಪಕ್ಷದ ನಾಯಕರಿಗಿಂತ ಪ್ರತಿಪಕ್ಷಗಳ ನಾಯಕರನ್ನು ಭೇಟಿ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅವರು ಯಾರನ್ನೇ ಭೇಟಿ ಮಾಡಿದರೂ ಅದು ಸುದ್ದಿ ಯಾಗುತ್ತದೆ. ಪಾಕಿಸ್ತಾನ ತನ್ನ ರಾಯಭಾರಿ ಮೂಲಕ ಏನೋ ಮಾಡಲು ಹೊಂಚು ಹಾಕುತ್ತಿದೆ ಎಂಬ ಸಂದೇಶ ವನ್ನು ರವಾನಿಸಲು ಯಶಸ್ವಿಯಾಗುತ್ತದೆ.

ಆದರೆ ಸಾಮಾನ್ಯವಾಗಿ ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಇಂಥ ಯಾವ ಚಟುವಟಿಕೆಗಳನ್ನು ಮಾಡುವುದಿಲ್ಲ. ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ, ಕೆ.ನಟವರ ಸಿಂಗ್ ಅವರನ್ನು ಪಾಕಿಸ್ತಾನಕ್ಕೆ ರಾಯಭಾರಿಯಾಗಿ ಕಳಿಸಿದರು.

ಅವರು ಪಾಕಿಸ್ತಾನಕ್ಕೆ ಹೋಗುವ ಮುನ್ನ ಪ್ರಧಾನಿಯವರು ನಟವರ ಸಿಂಗ್ ಅವರನ್ನು ಕರೆದು, ದಿವಂಗತ ಜುಲ್ಫಿಕರ್ ಅಲಿ ಭುಟ್ಟೋ ಅವರ ಕುಟುಂಬದಿಂದ ದೂರ ಇರಬೇಕು ಎಂಬ ಸ್ಪಷ್ಟ ಸೂಚನೆಯನ್ನು ನೀಡಿದ್ದರು.
ಭುಟ್ಟೋ ಅವರನ್ನು ಗಲ್ಲಿಗೇರಿಸುವ ಸಂದರ್ಭದಲ್ಲಿ ಕ್ಷಮಾದಾನ ಮಾಡುವಂತೆ ಮೊರಾರ್ಜಿ ಪಾಕ್ ಸರಕಾರಕ್ಕೆ ಸೌಜನ್ಯಕ್ಕೂ ಮನವಿ ಮಾಡಿಕೊಳ್ಳಲಿಲ್ಲ. ಆದರೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಕ್ಷಮಾದಾನಕ್ಕೆ ಆಗ್ರಹಿಸಿದ್ದರು.

ಮೊರಾರ್ಜಿ ಬಳಿಕ ಇಂದಿರಾ ಪ್ರಧಾನಿಯಾದ ಕೆಲ ದಿನಗಳ ಬಳಿಕ ನಟವರ ಸಿಂಗ್ ದಿಲ್ಲಿಗೆ ಆಗಮಿಸಿ, ಪಾಕಿಸ್ತಾನ‌ ದಲ್ಲಿನ ಬೆಳವಣಿಗೆಗಳ ಬಗ್ಗೆ ನೂತನ ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟರು. ಭಾರತದಲ್ಲಿನ ರಾಯಭಾರಿ ಇಲ್ಲಿ ಪ್ರತಿಪಕ್ಷದ ನಾಯಕರು, ಪತ್ರಕರ್ತರು, ವಿವಾದಾಸ್ಪದ ವ್ಯಕ್ತಿಗಳು ಹೀಗೆ ಎಲ್ಲರನ್ನೂ ಮುಕ್ತವಾಗಿ ಭೇಟಿ ಮಾಡುತ್ತಾರೆ. ತಮಗೂ ಅಂಥ ಅವಕಾಶವನ್ನು ನೀಡಬೇಕು ಎಂದು ಇಂದಿರಾಗೆ ಹೇಳಿದಾಗ ಅವರು ತಕ್ಷಣ ಸಮ್ಮತಿಸಿದರು. ಪಾಕಿಸ್ತಾನಕ್ಕೆ ಮರಳಿದ ಬಳಿಕ ನಟವರ ಸಿಂಗ್, ಗಲ್ಲಿಗೇರಿಸಿದ ಜುಲ್ಫಿಕರ್ ಅಲಿ ಭುಟ್ಟೋ ಅವರ ವಿಧವೆ ಬೇಗಂ ನುಸ್ರತ್ ಭುಟ್ಟೋ ಅವರನ್ನು ಭೇಟಿಯಾಗಲು ನಿರ್ಧರಿಸಿದರು.

ಆದರೆ ಅವರನ್ನು ಅಷ್ಟು ಸುಲಭವಾಗಿ ಭೇಟಿ ಮಾಡುವಂತಿರಲಿಲ್ಲ. ಅಂದಿನ ಪಾಕ್ ಅಧ್ಯಕ್ಷ ಜಿಯಾ-ಉಲ್-ಹಕ್ ಎಲ್ಲರನ್ನೂ ಸಂದೇಹದಿಂದ ನೋಡುತ್ತಿದ್ದರು. ಜಿಯಾ ಅವರನ್ನು ಮುನ್ನೆಲೆಗೆ ತಂದವರೇ ಜುಲ್ಫಿಕರ್ ಭುಟ್ಟೋ. ಆದರೆ ತಮ್ಮನ್ನು ಯಾರು ಬೆಳೆಸಿದ್ದರೋ, ಅವರನ್ನೇ ಜಿಯಾ‌ ಗಲ್ಲಿಗೇರಿಸಿದ್ದರು. ನುಸ್ರತ್ ನಿವಾಸದ ಸುತ್ತ ಭಾರಿ ಕಣ್ಗಾವಲು ಇತ್ತು.

ಅವರನ್ನು ಯಾರೂ ಭೇಟಿ ಮಾಡದಂತೆ ತಾಕೀತು ಮಾಡಿದ್ದರು. ಅವರ ಪ್ರತಿ ಚಲನವಲನವನ್ನು ಬೇಹುಗಾರರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು. ಹಾಗೆ ನಟವರ ಸಿಂಗ್ ಅವರನ್ನೂ. ಸಿಂಗ್ ತಮ್ಮ ಸಹೋದ್ಯೋಗಿ ಸತ್ತಿ ಲಂಬಾ
ಅವರೊಂದಿಗೆ ಡಾ.ನಿಯಾಜಿ ಅವರನ್ನು ಗುಟ್ಟಾಗಿ ಭೇಟಿ ಮಾಡಿದರು. ಡಾ.ನಿಯಾಜಿ ಅವರು ಭುಟ್ಟೋ ಅವರ ದಂತ ವೈದ್ಯರಾಗಿದ್ದರು. ಅಷ್ಟೇ ಅಲ್ಲ, ಭುಟ್ಟೋ ಅವರ ಪಾಕಿಸ್ತಾನ ಪೀಪಲ್ಸ ಪಾರ್ಟಿಯ ಸದಸ್ಯರೂ ಆಗಿದ್ದರು. ದಂತ
ಪರೀಕ್ಷೆಯ ನೆಪದಲ್ಲಿ ನಟವರ ಸಿಂಗ್ ಡಾ.ನಿಯಾಜಿ ಅವರ ಕ್ಲಿನಿಕ್ ಗೆ ಹೋದರು.

ಆ ಸಂದರ್ಭದಲ್ಲಿ, ಬೇಗಂ ನುಸ್ರತ್ ಅವರನ್ನು ಭೇಟಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು. ಈ ಭೇಟಿಗೆ ಸಹಕರಿಸುವಂತೆ ಕೋರಿದರು. ಆದರೆ ಡಾ.ನಿಯಾಜಿ ಯಾವ ಭರವಸೆಯನ್ನೂ ನೀಡಲಿಲ್ಲ. ಆದರೆ ಪ್ರಾಮಾಣಿಕ
ಪ್ರಯತ್ನ ಮಾಡುತ್ತೇನೆ ಎಂದಷ್ಟೇ ಹೇಳಿದರು. ಆದರೆ ಕಾಲ ಕೂಡಿ ಬಂದಿರಲಿಲ್ಲ. 1981 ರ ಆಗ 21 ರಂದು ಬೇಗಂ ಜತೆ ಭೇಟಿ ನಿಗದಿಯಾಯಿತು. ಸಿಂಗ್ ಅವರು ತಮ್ಮ ಮತ್ತೊಬ್ಬ ಸಹೋದ್ಯೋಗಿ ಮಣಿ ಶಂಕರ ಅಯ್ಯರ್ ಜತೆ ಭಾರತದ ತ್ರಿವರ್ಣ ಧ್ವಜವಿರುವ ಕಾರಿನಲ್ಲಿ ಕರಾಚಿಯ ಕ್ಲಿಪ್ಟನ್ ಪ್ರದೇಶದಲ್ಲಿರುವ ಬೇಗಂ ನಿವಾಸಕ್ಕೆ ತೆರಳಿದರು. ಮನೆಯ ಮುಂದಿದ್ದ ದೊಡ್ಡ ಗೇಟ್ ನಿಧಾನವಾಗಿ ತೆರೆಯಿತು. ಬೇಗಂ ಮತ್ತು ಮಗಳು ಸನಮ, ಸಿಂಗ್ ಮತ್ತು ಅಯ್ಯರ್ ಅವರನ್ನು ಸ್ವಾಗತಿಸಿದರು. ಇಡೀ ಮನೆಯಲ್ಲಿ ಸೂತಕದ ವಾತಾವರಣ. ತಾಯಿ-ಮಗಳ ಮುಖದಲ್ಲಿ ಖಿನ್ನತೆ ಆವರಿಸಿಕೊಂಡಂತಿತ್ತು.

ಭುಟ್ಟೋ ಬದುಕಿದ್ದಾಗ ಸದಾ ಜಾಗತಿಕ ನಾಯಕರು, ಪಾಕಿಸ್ತಾನದ ಗಣ್ಯ ವ್ಯಕ್ತಿಗಳು ಮತ್ತು ರಾಜಕೀಯ ಧುರೀಣ ರಿಂದ ಗಿಜಿಗುಡುತ್ತಿದ್ದ ಆ ನಿವಾಸ, ಗೋರಿಯಂತೆ ಭಾಸವಾಗುತ್ತಿತ್ತು. ‘ಈ ದಿನಗಳಲ್ಲಿ ಯಾರೂ ನನ್ನನ್ನು ಭೇಟಿ ಮಾಡಲು ಬಯಸುವುದಿಲ್ಲ, ಹೀಗಿರುವಾಗ ನೀವು ಬಂದಿದ್ದು ಸಂತಸವನ್ನುಂಟು ಮಾಡಿದೆ’ ಎಂದು ಹೇಳುತ್ತಲೇ ಬೇಗಂ ಬರಮಾಡಿಕೊಂಡರು.

ಇದನ್ನೂ ಓದಿ: Vishweshwar Bhat Column: ಇಸ್ರೇಲ್ ಪ್ರತೀಕಾರ ತೆಗೆದುಕೊಂಡರೆ, ಅದೇಕೆ ಮಹಾಪರಾಧವಾಗಿ ಕಾಣುತ್ತದೆ?