Wednesday, 23rd October 2024

Vishweshwar Bhat Column: ಯಾವುದೂ ಹಠಾತ್‌ ಸಂಭವಿಸುವುದಿಲ್ಲ, ಮುನ್ಸೂಚನೆ ನೀಡಿಯೇ ಬರುತ್ತದೆ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

ನೈಸರ್ಗಿಕ ಪ್ರಕೋಪವನ್ನು ಹೊರತುಪಡಿಸಿ, ಸಾಮಾನ್ಯವಾಗಿ ಯಾವ ಸಮಸ್ಯೆಯೂ ಏಕಾಏಕಿ ಸಂಭವಿಸುವುದಿಲ್ಲ. ಅದು ಸಂಭವಿಸುವುದಕ್ಕಿಂತ ಮುನ್ನ ಸಾಕಷ್ಟು ಸಂದೇಶಗಳನ್ನು, ಎಚ್ಚರಿಕೆಗಳನ್ನು ಕೊಟ್ಟಿರುತ್ತದೆ. ಆದರೆ ಬಹುತೇಕ ಸಂದರ್ಭದಲ್ಲಿ ನಾವು ಕಾಲಕಾಲಕ್ಕೆ ಆ ಎಚ್ಚರಿಕೆಯನ್ನು ನಿರ್ಲಕ್ಷಿಸುತ್ತೇವೆ ಅಥವಾ ಉಪೇಕ್ಷೆ ಮಾಡಿರುತ್ತೇವೆ. ‘ಅದೇನು ಮಹಾ? ನಾಳೆ ಮಾಡಿದರಾಯಿತು, ಮುಂದಿನ ವಾರ ಮಾಡಿದರಾಯಿತು’ ಎಂದು ಮುಂದೂಡುತ್ತೇವೆ.

ಇನ್ನು ಕೆಲವು ಸಂದರ್ಭಗಳಲ್ಲಿ, ‘ಇದು ನನ್ನ ಹೊರತಾಗಿ ಬೇರೆ ಯಾರಿಗೂ ಗೊತ್ತಿಲ್ಲ. ಒಂದು ವೇಳೆ ದುರಂತ ಸಂಭವಿಸಿದರೆ ಯಾರೂ ನನ್ನನ್ನು ಏನೂ ಮಾಡಲಾರರು. ಕಾರಣ ಬೇರೆ ಯಾರಿಗೂ ಇದು ನನಗೆ ಗೊತ್ತಿತ್ತು ಎಂಬ ಸಂಗತಿ ತಿಳಿದಿರುವುದಿಲ್ಲ’ ಎಂದು ಭಾವಿಸಿರುತ್ತಾರೆ. ಒಂದು ಸಮಸ್ಯೆ ಹತ್ತಾರು ರೀತಿಗಳಲ್ಲಿ ತನ್ನ ಕರಾಳ ಮುಖವನ್ನು ಪ್ರಕಟಪಡಿಸಿರುತ್ತದೆ. ಆದರೆ ಯಾರೂ ಅದನ್ನು ಗಂಭೀರವಾಗಿ ತೆಗೆದುಕೊಂಡಿರುವುದಿಲ್ಲ. ಈ ಮಾತು ಎಲ್ಲ ಸಂಸ್ಥೆ, ಸಂಘಟನೆ, ಕಂಪನಿ, ಸರಕಾರ, ವ್ಯವಸ್ಥೆಗೂ ಅನ್ವಯ. ಒಂದು ಸಮಸ್ಯೆ ಗಮನಕ್ಕೆ ಬಂದ ತಕ್ಷಣ ಕಾರ್ಯಪ್ರವೃತ್ತ ರಾದರೆ, ಅದೆಂಥ ಸ್ವರೂಪದ್ದೇ ಆದರೂ, ಪರಿಹರಿಸಬಹುದು. ಆ ಸಮಸ್ಯೆಯಿಂದ ಸಂಭವಿಸಬಹುದಾದ ದುರಂತ‌ ವನ್ನು ತಪ್ಪಿಸಬಹುದು.

ನೀವು ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ ಎಂದು ತಿರುವಿನಲ್ಲಿ ಹೊರಳಿದ ತಕ್ಷಣ ನಿಮಗೆ ಗೊತ್ತಾಗುತ್ತದೆ. ಯಾಕೋ ನಾನು ಹೋಗಬೇಕಾದ ಮಾರ್ಗ ಇದಲ್ಲ, ಹಿಂದಿನ ಸಲ ಈ ಹಾದಿಯಲ್ಲಿ ಹೋಗುವಾಗ ಇದು ಇರಲಿಲ್ಲ ಎಂದು ನಿಮಗೆ ಅನಿಸುತ್ತದೆ. ಆದರೂ ನೀವು ಅದನ್ನು ನಿರ್ಲಕ್ಷಿಸುತ್ತೀರಿ. ಒಂದು ವೇಳೆ ಅಲ್ಲಿ ಯಾರಾದರೂ ಇದ್ದವರ ಹತ್ತಿರ ಹೋಗಿ, ನೀವು ಹೋಗಬೇಕೆಂದಿರುವ ಊರಿನ ಮಾರ್ಗ ಕೇಳಿದ್ದರೂ ಆಗುತ್ತಿತ್ತು. ಆದರೂ ನೀವು ನನಗೆ ಗೊತ್ತು ಎಂದು ಯಾರನ್ನೂ ಕೇಳದೇ ಸಾಗುತ್ತಲೇ ಇರುತ್ತೀರಿ. ಬಹಳ ದೂರ ಕ್ರಮಿಸಿದ ಬಳಿಕ ನಿಮಗೆ ಹಾದಿ ತಪ್ಪಿದ್ದು ಗೊತ್ತಾಗುತ್ತದೆ. ‘ನೀವು ಬಹಳ ದೂರ ಬಂದುಬಿಟ್ಟಿರಿ. ನೀವು ಹೋಗಬೇಕೆಂದಿರುವ ಊರು ಈ ಮಾರ್ಗ ದಲ್ಲಿಲ್ಲ. ವಾಪಸ್ ಹೋಗಿ’ ಅಂತಾರೆ. ಈ ತಪ್ಪು ಹೇಗಾಯಿತು? ನೀವು ಆರಂಭದ ತಿರುವಿನಲ್ಲಿ ಎಡಕ್ಕೆ ಹೊರಳುವ ಬದಲು, ಬಲಕ್ಕೆ ಹೊರಳಿದಿರಿ. ನೀವು ಹೊರಳಿದ ಮಾರ್ಗ ಸರಿಯಾದುದಲ್ಲ ಎಂಬ ಸುಳಿವು ನಿಮಗೆ ಹಾಗೆ ಹೊರಳುವಾಗಲೇ ಸಿಕ್ಕಿತ್ತು ತಾನೇ? ಆದರೂ ಅದನ್ನು ಉದಾಸೀನ ಮಾಡಿದಿರಿ. ಹೀಗಾಗಿ ದಾರಿ ತಪ್ಪಿಸಿಕೊಂಡಿರಿ.

ಕೆಲ ವರ್ಷಗಳ ಹಿಂದೆ, ದಿಲ್ಲಿಯ ಗುರುಗ್ರಾಮದಲ್ಲಿರುವ ಹದಿನೆಂಟು ಮಹಡಿ ಅಪಾರ್ಟ್‌ಮೆಂಟಿನ ಲಿಫ್ಟ್ ಕುಸಿದು
ಬಿದ್ದು ನಾಲ್ವರು ಸತ್ತರು. ಲಿಫ್ಟ್ ಹದಿನಾರನೇ ಮಹಡಿಯಿಂದ‌ ಕೇಬಲ್ ಕಟ್ ಆಗಿ ಬಿದ್ದಿತ್ತು. ಲಿಫ್ಟ್ ಬಿದ್ದ ಪರಿಣಾಮ ಅದೆಷ್ಟು‌ ಭೀಕರವಾಗಿತ್ತೆಂದರೆ, ಅದರ ಮೇಲ್ಭಾಗ, ಕೆಳಭಾಗಕ್ಕೆ ಬಡಿದು ಅದರಲ್ಲಿದ್ದವರೆಲ್ಲ ಅಪ್ಪಚ್ಚಿಯಾಗಿದ್ದರು. ಲಿಫ್ಟಿನಿಂದ ಮೃತ ದೇಹಗಳನ್ನು ತೆಗೆಯಲು ಹದಿನಾರು ಗಂಟೆಗಳ ಹರಸಾಹಸ ಮಾಡಬೇಕಾಯಿತು. ಪೊಲೀಸರು ತನಿಖೆ ಆರಂಭಿಸಿದರು.

ಲಿಫ್ಟ್ ತಯಾರಿಕಾ ಕಂಪನಿಯ ಎಂಜಿನಿಯರುಗಳನ್ನು ಮತ್ತು ಆ ಅಪಾರ್ಟಮೆಂಟಿನ ನಿವಾಸಿಗಳನ್ನು ಕರೆಯಿಸಿ ದರು. ಆಗ ಪೊಲೀಸರಿಗೆ ಗೊತ್ತಾದ ಸಂಗತಿಯೆಂದರೆ, ಆ ಲಿಫ್ಟಿನ ಎರಡು ಕೇಬಲ್‌ಗಳು ಪರಸ್ಪರ ಉಜ್ಜಿಕೊಳ್ಳುತ್ತಿದ್ದವು. ಲಿಫ್ಟ್ ಒಂದು ನಿರ್ದಿಷ್ಟ ಮಹಡಿಯ ಸನಿಹ ಆಗಮಿಸುತ್ತಿರುವಾಗ ಉಜ್ಜಿಕೊಳ್ಳುತ್ತಿದ್ದುದರಿಂದ ಕರ್ಕಶವಾದ ಸದ್ದು ಬರುತ್ತಿತ್ತು. ಯಾರಿಗಾದರೂ ಲಿಫ್ಟ್ ನಲ್ಲಿ ಏನೋ ಸಮಸ್ಯೆ ಇದೆ ಎಂಬುದು ಗೊತ್ತಾಗುತ್ತಿತ್ತು.

ಈ ಬಗ್ಗೆ ಒಂದೆರಡು ಮಹಡಿಯಲ್ಲಿರುವ ನಿವಾಸಿಗಳು ಅಪಾರ್ಟ್‌ಮೆಂಟಿನ ಹಿತರಕ್ಷಣಾ ಸಮಿತಿ ಸದಸ್ಯರ ಗಮನ
ಸೆಳೆದರು. ‘ನಾವು ಲಿಫ್ಟ್ ಕಂಪನಿಯವರಿಗೆ ತಿಳಿಸುತ್ತೇವೆ. ಆ ಸಮಸ್ಯೆಯನ್ನು ಬಗೆಹರಿಸುತ್ತೇವೆ’ ಎಂದು ಹೇಳಿದರು. ಆದರೆ ಲಿಫ್ಟ್ ಕಂಪನಿಯವರಿಗೆ ತಿಳಿಸಲಿಲ್ಲ. ಈ ಮಧ್ಯೆ ಅಪಾಟ್ ಮೆಂಟ್ ಹಿತರಕ್ಷಣಾ ಸಮಿತಿಗೆ ಚುನಾವಣೆ ನಡೆಯಿತು.

ಹೊಸ ಸಮಿತಿ ಅಸ್ತಿತ್ವಕ್ಕೆ ಬಂದು, ಕಾರ್ಯಪ್ರವೃತ್ತರಾಗಲು ಸುಮಾರು ಒಂದು ತಿಂಗಳು ಹಿಡಿಯಿತು. ಈ ಅವಧಿ ಯಲ್ಲಿ ಯಾರೂ ಲಿಫ್ಟ್ ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸಲಿಲ್ಲ. ಆದರೆ ಅಪಾಯ ಕಾದು ಕುಳಿತಿತ್ತು. ಆ ಲಿಫ್ಟ್ ದಿನವೂ ಸಾವಿರಾರು ಸಲ ಮೇಲಕ್ಕೆ-ಕೆಳಕ್ಕೆ ಹೋಗುತ್ತಿತ್ತು. ಹಾಗೆ ಹೋಗುವಾಗ ಅದು ಕರ್ಕಶ ಸದ್ದನ್ನು ಮಾಡುತ್ತಿತ್ತು. ಅದನ್ನು ಎಲ್ಲರೂ ಕೇಳಿಸಿಕೊಂಡು ಸುಮ್ಮನಾಗುತ್ತಿದ್ದರು. ತುರ್ತು ಸಂದರ್ಭದಲ್ಲಿ ಫೋನ್ ಮಾಡಿ ಎಂದು ಲಿಫ್ಟ್ ಅನ್ನು ತಯಾರಿಸಿದ ಕಂಪನಿ ತನ್ನ ಫೋನ್ ನಂಬರ್ ನೀಡಿ, ಲಿಫ್ಟಿನ ಗೋಡೆಗೆ ಅಂಟಿಸಿತ್ತು. ಆದರೆ ಯಾರೂ, ಹೆಜ್ಜೆ ಹೆಜ್ಜೆಗೆ ನೀಡಿದ ಅಪಾಯದ ಸಂದೇಶಗಳನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.

ಸಮಸ್ಯೆ ಕಾಣಿಸಿಕೊಂಡು ಲಿಫ್ಟ್ ಹರಿದು ಬೀಳುವ ತನಕ ಮೂರು ತಿಂಗಳು ಹಿಡಿದಿತ್ತು. ಆದರೆ ಯಾರೂ ತಲೆ
ಕೆಡಿಸಿಕೊಳ್ಳಲಿಲ್ಲ. ಈ ಪ್ರಸಂಗ ಅನೇಕ ಸಂಸ್ಥೆ, ಕಂಪೆನಿಗಳಲ್ಲೂ ಕಾಣಬಹುದು. ಸಮಸ್ಯೆ ಉಲ್ಭಣವಾಗಿ, ಅಪಾಯ
ಸಂಭವಿಸುವ ತನಕ ಎಲ್ಲರೂ ಸುಮ್ಮನಿರುತ್ತಾರೆ. ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳು ಗ್ರಾಹಕರ
ಪ್ರತಿಕ್ರಿಯೆ ಮತ್ತು ಸಲಹೆಗಳಿಗೆ ಮಹತ್ವವನ್ನು ನೀಡುತ್ತವೆ. ಕಸ್ಟಮರ್ ಕೇರ್ ಸರ್ವಿಸ್ ಎಂಬುದು ಯಾವುದೇ ಸಂಸ್ಥೆಯ ಅವಿಭಾಜ್ಯ ಅಂಗ. ಈಗಂತೂ ಡಾಟಾ ಅನಾಲಿಟಿಕ್ಸ್ ಸಂಸ್ಥೆಗಳು ಗ್ರಾಹಕರ ಅಭಿಪ್ರಾಯವನ್ನು ಆಧರಿಸಿ, ಮಾರುಕಟ್ಟೆಯ ಭಾವನೆಗಳನ್ನು ಅಳೆಯುತ್ತಾರೆ.

ಯಾವ ಕಂಪನಿ ಗ್ರಾಹಕರ ಅಭಿಪ್ರಾಯ ಮತ್ತು ಸೇವೆಗಳಿಗೆ ಬೆಲೆ ಕೊಡುವುದಿಲ್ಲವೋ, ಅಪಾಯದ ಸಿಗ್ನಲ್ ಗಳನ್ನು ಗ್ರಹಿಸುವುದಿಲ್ಲವೋ, ಆ ಸಂಸ್ಥೆ ಬಹುಬೇಗ ಭಾರಿ ಬೆಲೆ ತೆರುವುದರಲ್ಲಿ ಸಂದೇಹವೇ ಇಲ್ಲ. ಈ ಮಾತನ್ನು ಹೇಳುವಾಗ ೨೦೦೯ ರಲ್ಲಿ ನಡೆದ ಒಂದು ಘಟನೆ ನೆನಪಿಗೆ ಬರುತ್ತದೆ. ಆ ವರ್ಷದ ಆಗಸ್ಟ್‌ನಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ದಲ್ಲಿ ಟೊಯೋಟಾ ಲೆಕ್ಸಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ನಾಲ್ವರು ಅಪಘಾತದಲ್ಲಿ ಅಸು ನೀಗಿದರು. ಕಾರಿನ ಎಕ್ಸಿಲರೇಟರ್ ಪ್ಯಾಡ್ ಜಾಮ್ ಆಗಿದ್ದೇ ಆ ದುರಂತಕ್ಕೆ ಕಾರಣ ಎಂಬ ಸಂಗತಿ ತನಿಖೆಯಿಂದ ಗೊತ್ತಾಯಿತು. ಗಂಟೆಗೆ ನೂರಾ ಇಪ್ಪತ್ತು ಮೈಲಿ ವೇಗದಲ್ಲಿ ಚಲಿಸುತ್ತಿದ್ದ ಕಾರಿನ ಚಾಲಕ ಎಕ್ಸಲರೇಟರ್ ಪ್ಯಾಡ್ ನಿಂದ ಕಾಲನ್ನು ತೆಗೆದರೂ, ಅದು ಜಾಮ್ ಆಗಿದ್ದರಿಂದ ಅದರ ವೇಗ ಕುಗ್ಗಲೇ ಇಲ್ಲ. ಆ ವೇಗದಲ್ಲಿ ಬ್ರೇಕ್ ಒತ್ತಿದ್ದರಿಂದ, ಕಾರು ಪಲ್ಟಿಯಾಗಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಬೆಂಕಿಯ ಉಂಡೆಯಾಯಿತು. ಸ್ಥಳದಲ್ಲಿಯೇ ಕಾರಿನಲ್ಲಿದ್ದ ನಾಲ್ವರೂ ನಿಧನರಾದರು.

ಅಪಘಾತ ಸಂಭವಿಸಿದ ರೀತಿ ತೀವ್ರ ಜಿಜ್ಞಾಸೆಯನ್ನು ಹುಟ್ಟು ಹಾಕಿತು. ಅದಾಗಿ ಕೆಲವು ದಿನಗಳಲ್ಲಿ ಅದೇ ಕಂಪನಿಯ ಮತ್ತೊಂದು ಕಾರು ಅದೇ ರೀತಿಯ ದುರಂತಕ್ಕೆ ತುತ್ತಾಯಿತು. ಇದು ಕಂಪನಿಯ ಅಧಿಕಾರಿಗಳ ನಿzಗೆಡಿಸಿತು. ತಕ್ಷಣ ಕಂಪನಿಯು ಅಮೆರಿಕದ ಬೇರೆ ಬೇರೆ ನಗರಗಳಲ್ಲಿದ್ದ ಸುಮಾರು ಅರವತ್ತು ಲಕ್ಷ ಕಾರುಗಳನ್ನು ವಾಪಸ್ ಕರೆಯಿಸಿಕೊಂಡಿತು. ಈ ಘಟನೆ ಅಮೆರಿಕದ ಮಾಧ್ಯಮಗಳಲ್ಲಿ ಸುಮಾರು ಒಂದು ತಿಂಗಳವರೆಗೆ ವರದಿಯಾಗಿ ಟೊಯೋಟಾ ಸಂಸ್ಥೆಗೆ ತೀವ್ರ ಮುಜುಗರ ಮತ್ತು ನಷ್ಟವನ್ನುಂಟು ಮಾಡಿತು.

ಇದರಿಂದ ಸಂಸ್ಥೆಗೆ ಕೋಟ್ಯಂತರ ಡಾಲರ್ ನಷ್ಟವಾಯಿತು. ಇದಕ್ಕೂ ಮುನ್ನ, ಟೊಯೋಟಾ ಕಂಪನಿಯ ಕಾರುಗಳ
ಎಕ್ಸಲೇಟರ್ ಪ್ಯಾಡ್ ಜಾಮ್ ಆಗುವ ಬಗ್ಗೆ ಕಂಪನಿಗೆ ಸುಮಾರು ಎರಡು ಸಾವಿರಕ್ಕೂ ಅಧಿಕ ದೂರುಗಳು ಬಂದಿ ದ್ದವು. ಸಾಮಾನ್ಯವಾಗಿ ಯಾವ ಕಾರು ತಯಾರಿಕಾ ಸಂಸ್ಥೆಗೂ ಅಷ್ಟೊಂದು ಪ್ರಮಾಣದ ದೂರುಗಳು ಬರುವುದಿಲ್ಲ. ಆದರೆ ಟೊಯೋಟಾ ಕಂಪನಿ ಆ ದೂರುಗಳ ಬಗ್ಗೆ ಯಾವ ಕ್ರಮವನ್ನೂ ಕೈಗೊಳ್ಳದೇ ನಿರ್ಲಕ್ಷಿಸಿಬಿಟ್ಟಿತು. 2005 ರಲ್ಲಿ ಟೊಯೋಟಾ ಕಂಪನಿ ಗುಣಮಟ್ಟ ನಿಯಂತ್ರಣ ಕುರಿತು ಉನ್ನತ ಮಟ್ಟದ ಕಾರ್ಯಪಡೆ (ಟಾಸ್ಕ್ ಪೋರ್ಸ್)ಯನ್ನು ರಚಿಸಿತ್ತು. ಆದರೆ ಅದಾದ ನಾಲ್ಕು ವರ್ಷಗಳ ನಂತರ, ಆ ಕಾರ್ಯಪಡೆಯನ್ನು ರದ್ದು ಮಾಡಿಬಿಟ್ಟಿತು.

‘ಗುಣಮಟ್ಟ ಎಂಬುದು ಸಂಸ್ಥೆಯ ರಚನೆ ಮತ್ತು ರಕ್ತದಲ್ಲಿಯೇ ಇರುವುದರಿಂದ ಅದಕ್ಕಾಗಿ ಪ್ರತ್ಯೇಕ ವಿಭಾಗ
ಬೇಕಾಗಿಲ್ಲ. ಪ್ರತಿಯೊಬ್ಬರಿಗೂ ಗುಣಮಟ್ಟದ ಬಗ್ಗೆ ಕಾಳಜಿ ಇರುವುದು ಮುಖ್ಯ, ಅದು ಯಾವುದೋ ಒಂದು ವಿಭಾಗದ ಹೊಣೆಗಾರಿಕೆ ಅಲ್ಲ ಎಂದು ತೀರ್ಮಾನಿಸಿದ ಸಂಸ್ಥೆ ಆ ವಿಭಾಗವನ್ನು ರದ್ದು ಮಾಡಿಬಿಟ್ಟಿತು. ‘ಗುಣಮಟ್ಟ
ನಿಯಂತ್ರಣ ಎಂಬ ಪ್ರತ್ಯೇಕ ವಿಭಾಗವಿದ್ದರೆ, ಅದು ಸಂಸ್ಥೆಯ ಅಭಿವೃದ್ಧಿಗೆ ತೊಡಕಾಗುತ್ತದೆ. ಸಂಸ್ಥೆ ಎಷ್ಟೇ ವೇಗದಿಂದ ಕೆಲಸ ಮಾಡಿದರೂ, ಈ ವಿಭಾಗವನ್ನು ದಾಟಿ ಹೋಗಬೇಕಾದ್ದರಿಂದ, ಉತ್ಪಾದನೆಯ ಗತಿ ಕುಂಠಿತ ವಾಗುತ್ತದೆ’ ಎಂದು ಕಂಪೆನಿಯ ಉನ್ನತ ಅಧಿಕಾರಿಗಳು ಯೋಚಿಸಿದ್ದರು.

ಇದರಿಂದ ಗ್ರಾಹಕರ ಸಲಹೆ, ಪ್ರತಿಕ್ರಿಯೆಗಳು ಸಂಸ್ಥೆಯ ಉನ್ನತ ಮಟ್ಟದಲ್ಲಿ ಇರುವವರಿಗೆ ಸಿಗುವುದು ನಿಂತು
ಹೋಯಿತು. ಸಂಸ್ಥೆಯ ಬಗೆಗಿನ ಕಹಿ ಸುದ್ದಿಯನ್ನು ಕೇಳಲು ಟೊಯೋಟಾ ಉನ್ನತ ಅಧಿಕಾರಿಗಳು ಸಿದ್ಧರಿರಲಿಲ್ಲ. ಈ ವಿಷಯದಲ್ಲಿ, ನೋಕಿಯಾ ಕಂಪನಿ ಮಾಡಿದ ತಪ್ಪನ್ನೇ ಟೊಯೋಟಾ ಕೂಡ ಮಾಡಿತ್ತು. ಇದರಿಂದ ಟೊಯೋಟಾ ಭಾರಿ ಬೆಲೆ ತೆತ್ತಿತ್ತು. 2010 ರಲ್ಲಿ ಅಮೆರಿಕದ ಶೇ. 31ರಷ್ಟು ಜನ, ಟೊಯೋಟಾ ಕಾರು ಸುರಕ್ಷಿತವಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದರು. ಇದು ಆ ಕಂಪನಿಯ ಕಾರು ಮಾರಾಟದ ಮೇಲೆ ಯಾರೂ ಊಹಿಸದ ಪರಿಣಾಮವನ್ನು ಬೀರಿತು. ಯಾವುದೇ ಸಂಸ್ಥೆಯ ಉನ್ನತ ಮಟ್ಟದಲ್ಲಿ ಬಹಳ ಬುದ್ಧಿವಂತರೇ ಕುಳಿತಿರುತ್ತಾರೆ ಎಂದು ಹೇಳಲು ಆಗುವುದಿಲ್ಲ.

ಎಕ್ಸಿಲರೇಟರ್ ಪ್ಯಾಡ್ ನಲ್ಲಿ ಸಮಸ್ಯೆ ಇದೆ ಎಂಬುದನ್ನು ಹೊಸ ಕಾರು ಮಾರುಕಟ್ಟೆಗೆ ಬಂದಾಗಲೇ ಗೊತ್ತಾಗಿತ್ತು. ಆದರೆ ಆ ಕಾರನ್ನು ರೂಪಿಸಿದ ಎಂಜಿನಿಯರುಗಳು ಮತ್ತು ಕಂಪನಿಯ ಉನ್ನತ ಅಧಿಕಾರಿಗಳು ಅದನ್ನು ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ. ಕಾರಣ ಅದನ್ನು ಅವರು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿದ್ದರು. ತಾವು ಬಹು ನಿರೀಕ್ಷೆಯಿಂದ ತಯಾರಿಸಿದ ಕಾರಿನಲ್ಲಿ ಯಾವ ದೋಷವೂ ಇರಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದರು. ಸಾವಿರಾರು ಜನ ನೀಡಿದ ಪ್ರತಿಕ್ರಿಯೆಗಳನ್ನು ಉದಾಸೀನ ಮಾಡಿಬಿಟ್ಟರು.

ನೋಕಿಯಾ ಕಂಪನಿ ಮಾಡಿದ ತಪ್ಪನ್ನೇ ಟೊಯೋಟಾ ಕೂಡ ಮಾಡಿತ್ತು ಎಂದು ಹೇಳಿದೆನಲ್ಲ.. ಎರಡು ಸಾವಿರದ
ಇಸವಿ ಆಸುಪಾಸಿನಲ್ಲಿ ನಿಮ್ಮಲ್ಲಿ ಮೊಬೈಲ್ ಫೋನ್ ಇದ್ದರೆ, ಅದು ನೋಕಿಯಾ ಕಂಪನಿಯ ಹ್ಯಾಂಡ್ ಸೆಟ್
ಆಗಿದ್ದಿರಲೇಬೇಕು. ಆ ಕಂಪನಿ ಜಾಗತಿಕ ಮೊಬೈಲ್ ಮಾರುಕಟ್ಟೆಯ ಶೇ.ಅರವತ್ತೈದರಷ್ಟನ್ನು ಪಾಲನ್ನು ಹೊಂದಿತ್ತು.

ನಾನು 2007 ರಲ್ಲಿ ನೋಕಿಯಾ ಪ್ರಧಾನ ಕಚೇರಿ ಇರುವ ಫಿನ್ಲೆಂಡಿನ ರಾಜಧಾನಿ ಹೆಲ್ಸಿಂಕಿಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಹೆಲ್ಸಿಂಕಿಯಲ್ಲಿ ಎಲ್ಲಿ ನೋಡಿದರೂ ನೋಕಿಯಾ ಜಾಹೀರಾತು ಫಲಕಗಳನ್ನು ಬಿಟ್ಟು ಬೇರೇನೂ ಕಾಣುತ್ತಿರಲಿಲ್ಲ. ಇಡೀ ರಾಜಧಾನಿಯೇ ಒಂದು ಕಂಪನಿಗೆ ಮಾರಾಟವಾಗಿದೆ ಎಂದು ಅಲ್ಲಿನ ಜನ ‘ಅಭಿಮಾನ’ದಿಂದ ಹೇಳುತ್ತಿದ್ದರು. ಆ ನಗರದಲ್ಲಿ ಉತ್ಪನ್ನವಾಗುವ ಮೊಬೈಲ್ ಫೋನ್ ಇಡೀ ಜಗತ್ತನ್ನು ತಲುಪಿತ್ತು. ಅಕ್ಷರಶಃ ನೋಕಿಯಾ ಮೊಬೈಲ್ ಸಾಮ್ರಾಜ್ಯದ ಅನಭಿಷಕ್ತ ದೊರೆ ಆಗಿತ್ತು.

ಆಪಲ್ ಐ-ನ್ ಮತ್ತು ಸ್ಯಾಮ್ ಸಂಗ್ ಮೊಬೈಲ್ ಫೋನ್ ಮಾರುಕಟ್ಟೆಗೆ ಬರುವ ಸೂಚನೆ ನೋಕಿಯಾಕ್ಕೆ ಸಿಕ್ಕಿತ್ತು.
ನೋಕಿಯಾ ಬಳಸುತ್ತಿದ್ದ ಸಿಂಬಿಯನ್ ಆಪರೇಟಿಂಗ್ ಸಿಸ್ಟಮ್ ಗಿಂತ, ಐಫೋನಿನ (iOS & iPhone Operating
System) ಆಪರೇಟಿಂಗ್ ಸಿಸ್ಟಮ್ ಹೆಚ್ಚು ಅಡ್ವಾನ್ಸ್ಡ್ ಆಗಿದೆ ಎಂಬುದನ್ನು ನೋಕಿಯಾ ಎಂಜಿನಿಯರುಗಳು ಆ ಸಂಸ್ಥೆಯ ಸಿಇಓ ಗಮನಕ್ಕೆ ತಂದರು. ಆಪಲ್ ಐಫೋನಿನ ಟಚ್ ಸ್ಕ್ರೀನ್ ತಂತ್ರಜ್ಞಾನ ಗೇಮ್ ಚೇಂಜರ್ ಎಂದು ಹೇಳಿದರೂ, ‘ನಮ್ಮನ್ನು ಯಾರೂ ಮಣಿಸಲು ಸಾಧ್ಯವಿಲ್ಲ. ಆಪಲ್ ಸಂಸ್ಥೆ ನಮ್ಮಿಂದ ಶೇ.ಹತ್ತರಷ್ಟು ಮಾರುಕಟ್ಟೆ ಪಾಲನ್ನು ಕಿತ್ತುಕೊಂಡರೂ, ನಾವು ವಿಶ್ವ ಮೊಬೈಲ್ ಮಾರುಕಟ್ಟೆಯ ಸಿಂಹಪಾಲನ್ನು ಹೊಂದಿ ರುತ್ತೇವೆ’ ಎಂದು ವಾದಿಸಿದರು.

‘ಅಪಾಯದ ಸಂಕೇತ ಸ್ಪಷ್ಟವಾಗಿ ಗೋಚರಿಸುತ್ತಿದೆ’ ಎಂದು ಸಿಬ್ಬಂದಿ ಬೊಬ್ಬೆ ಹೊಡೆದುಕೊಂಡರೂ ಯಾರೂ ಕೇಳಲಿಲ್ಲ. ತಾವೇ ‘ನಂಬರ್ ಒನ’ ಎಂಬ ಸೊಕ್ಕು ನೋಕಿಯಾ ಆಡಳಿತ ಮಂಡಳಿಯ ನೆತ್ತಿಗೇರಿಬಿಟ್ಟಿತ್ತು. ಈ ಕುರಿತು ಯಾರಾದರೂ ಮಾತಾಡಿದರೆ, ಅದನ್ನು ನೋಕಿಯಾ ವಿರೋಧಿ ಧೋರಣೆ ಎಂದು ಪರಿಗಣಿಸಲಾಗುವುದು ಎಂದು ಸಿಇಓ ಆದೇಶ ಹೊರಡಿಸಿಬಿಟ್ಟ.

ಅದಾಗಿ ಆರು ವರ್ಷಗಳಲ್ಲಿ ನೋಕಿಯಾ ಹೇಳಹೆಸರಿಲ್ಲದಂತಾಗಿ ಹೋಯಿತು. ಹೆಜ್ಜೆಹೆಜ್ಜೆಗೆ ಸಿಕ್ಕಿದ ಅಪಾಯದ
ಸಂಕೇತಗಳನ್ನು ಅಹಂಕಾರದಿಂದ ನೂಕಿಬಿಟ್ಟಿತು. 2013 ರಲ್ಲಿ ಆ ಸಂಸ್ಥೆಯನ್ನು ಮೈಕ್ರೋಸಾ- ಖರೀದಿಸಿತು.
ನೋಕಿಯವನ್ನು ಮೇಲಕ್ಕೆತ್ತಲು ಮೈಕ್ರೋಸಾಫ್ಟ್ ಇನ್ನಿಲ್ಲದ ಪ್ರಯತ್ನ ಮಾಡಿತು. ಉಹುಂ.. ಸಾಧ್ಯವಾಗಲೇ ಇಲ್ಲ.
ಅಹಂಕಾರವೇ ಆ ಸಂಸ್ಥೆಯನ್ನು ಸುಟ್ಟು ಹಾಕಿತ್ತು. One thorn of experience is worth a whole wilderness of warning ಎಂಬ ಮಾತಿದೆ. ಹಡಗು ಮುಳುಗುವ ಮುನ್ನ ಇಲಿಗಳಿಗೆ ಸೂಚನೆ ಸಿಗುತ್ತವೆಯಂತೆ.

ತಕ್ಷಣ ಅವು ಹಡಗಿನಿಂದ ಜಿಗಿದು ಪ್ರಾಣ ಉಳಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳುತ್ತವೆ. ಭೂಕಂಪ ಸಂಭವಿ ಸುವ ಮುನ್ನ ಭೂಮಿಯೊಳಗಿನ ಜೀವಿಗಳಿಗೆ ಅಪಾಯದ ಸಂಕೇತ ಸಿಗುತ್ತವೆ. ಅವು ತಾವಿರುವ ಜಾಗದಿಂದ ಹೊರಬಂದು ಭೂಮಿಯ ಮೇಲೆ ಚಲಿಸಲಾರಂಭಿಸುತ್ತವೆ. ನಮ್ಮ ದೇಹಕ್ಕೂ ಏಕಾಏಕಿ ಕಾಯಿಲೆ ಬರುವುದಿಲ್ಲ. ಅದು ಬರುವ ಮುನ್ನ ನಮ್ಮ ದೇಹಕ್ಕೆ ಸಾಕಷ್ಟು ಮುನ್ಸೂಚನೆಗಳನ್ನು ನೀಡುತ್ತದೆ. ಅದಕ್ಕಾಗಿ ಒಂದು ಮಾತನ್ನು ಹೇಳುತ್ತಾರೆ- Listen to your body ಅಂತ. ಹೃದಯಾಘಾತವೂ ಹಠಾತ್ ಸಂಭವಿಸುವುದಿಲ್ಲ.

ಅದಕ್ಕಿಂತ ಮುನ್ನ ಕೆಲವು ಸಿಗ್ನಲ್ ಗಳನ್ನು ನಮ್ಮ ದೇಹಕ್ಕೆ ಕಳಿಸಿರುತ್ತದೆ. ಆದರೆ ಅದನ್ನು ಗ್ರಹಿಸಲು ನಾವು
ವಿಫಲರಾಗಿರುತ್ತೇವೆ. ಹಾಗೆ ನಮ್ಮ ಕಾರು, ಫೋನ್, ಫ್ರಿಜ್, ಟಿವಿ, ಕಂಪ್ಯೂಟರ್, ನಲ್ಲಿ, ಶವರ್… ಏಕಾಏಕಿ ಕೆಟ್ಟು
ನಿಲ್ಲುವುದಿಲ್ಲ. ಅದಕ್ಕಿಂತ ಮುನ್ನ ಅವೂ ಮುನ್ಸೂಚನೆ‌ ನೀಡಿರುತ್ತವೆ.

ಈ ಸಿಗ್ನಲ್ ಗಳನ್ನು ಹೀರಿಕೊಳ್ಳುವ ನಮ್ಮ ಆಂಟೆನಾ ಯಾವತ್ತೂ ಜಾಗೃತವಾಗಿರಬೇಕು. ಇಲ್ಲದಿದ್ದರೆ ಅಪಾಯ
ತಪ್ಪಿದ್ದಲ್ಲ!

ಇದನ್ನೂ ಓದಿ: Vishweshwar Bhat Column: ಡೇಲ್‌ ಕಾರ್ನೇಗಿಯ ಮಹಾಕೃತಿ