Wednesday, 23rd October 2024

Ratan Tata Death: ನಾಲ್ವರ ಜೊತೆ ಪ್ರಣಯ, ಮದುವೆಯಾಗಲು ಭಯ! ಇದು ರತನ್‌ ಟಾಟಾ ಖಾಸಗಿ ಕಥೆ

ratan tata (1)

ಮುಂಬಯಿ: ನಿನ್ನೆ ರಾತ್ರಿ ತೀರಿಕೊಂಡ ಸಜ್ಜನ ಉದ್ಯಮಿ ರತನ್‌ ಟಾಟಾ (Ratan Tata Death, Ratan Tata Passes Away) ಅವರ ಖಾಸಗಿ ಜೀವನ ವರ್ಣಮಯವಾಗಿತ್ತು. ಅವರು ಮದುವೆಯಾಗಿರಲಿಲ್ಲ. ಆದರೆ ನಾಲ್ವರ ಜೊತೆಗೆ ಒಬ್ಬರ ನಂತರ ಒಬ್ಬರಂತೆ ಪ್ರಣಯ ಸಂಬಂಧ ಹೊಂದಿದ್ದರು. ಭೀತಿ, ಅವರು ಮದುವೆಯಾಗದಂತೆ ತಡೆದಿತ್ತು ಎಂಬುದು ಅವರೇ ಹೇಳಿಕೊಂಡ ಮಾತು.

ಟಾಟಾ ಅವರ ಸ್ಮರಣೀಯ ವೃತ್ತಿಪರ ಸಾಧನೆಗಳ ಹೊರತಾಗಿಯೂ ಅವರ ಅವರ ವೈಯಕ್ತಿಕ ಜೀವನ ತುಂಬಾ ಮಂದಿಯಲ್ಲಿ ಕುತೂಹಲ ಕೆರಳಿಸಿದೆ. ಅಷ್ಟು ಶ್ರೀಮಂತರಾಗಿದ್ದೂ, ಲೋಕಪ್ರಿಯರಾಗಿದ್ದೂ ಅವಿವಾಹಿತರಾಗಿ ಉಳಿಯುವ ಅವರ ಆಯ್ಕೆ ಸೋಜಿಗದ್ದಾಗಿತ್ತು.

ಸಿಎನ್‌ಎನ್‌ಗೆ ನೀಡಿದ ಹಳೆಯ ಸಂದರ್ಶನದಲ್ಲಿ ರತನ್ ಟಾಟಾ, ತಾವು ನಾಲ್ಕು ಬಾರಿ ಪ್ರೀತಿಸಿದ್ದನ್ನು ನೆನಪಿಸಿಕೊಂಡಿದ್ದರು. ಪ್ರತಿ ಸಂದರ್ಭದಲ್ಲೂ ಅವರು ಮದುವೆಯ ವರೆಗೂ ಹೋಗಿದ್ದರಂತೆ. ಆದರೆ ಸಂದರ್ಭಗಳು ಯಾವಾಗಲೂ ಅವರನ್ನು ಹಿಂದೆ ಸರಿಯುವಂತೆ ಮಾಡಿದ್ದವು. ಅಮೆರಿಕದಲ್ಲಿ ವಾಸಿಸುತ್ತಿದ್ದಾಗ ಒಬ್ಬರನ್ನು ಪ್ರೀತಿಸುತ್ತಿದ್ದು, ಮದುವೆಯ ಹಂತದವರೆಗೂ ಹೋಗಿದ್ದರು. ಆದರೆ 1962 ರ ಇಂಡೋ-ಚೀನಾ ಸಂಘರ್ಷ ಎಲ್ಲವನ್ನೂ ಬದಲಾಯಿಸಿತು.

“ನಾನು ಯು.ಎಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಒಬ್ಬರು ನನ್ನೊಂದಿಗೆ ಅತ್ಯಂತ ಆಪ್ತರಾಗಿದ್ದರು. ನಾವು ಮದುವೆಯಾಗದ ಏಕೈಕ ಕಾರಣವೆಂದರೆ ನಾನು ಭಾರತಕ್ಕೆ ಹಿಂತಿರುಗಿದ್ದು. ಮದುವೆಯಾಗಿದ್ದರೆ ಅವಳು ನನ್ನನ್ನು ಅನುಸರಿಸಬೇಕಾಗಿತ್ತು. ಆದರೆ ಅದು ಇಂಡೋ-ಚೈನೀಸ್ ಸಂಘರ್ಷದ ವರ್ಷ. ಅಮೇರಿಕನ್ ಶೈಲಿಯ ಬದುಕಿನಲ್ಲಿ, ಹಿಮಾಲಯದಲ್ಲಿನ ಈ ಸಂಘರ್ಷವು ಒಂದು ಪ್ರಮುಖ ಯುದ್ಧವಾಗಿ ಕಂಡುಬಂತು. ಅವಳು ಭಾರತಕ್ಕೆ ಬರಲಿಲ್ಲ. ಅವಳು ಅಂತಿಮವಾಗಿ ಅಮೆರಿಕದಲ್ಲಿ ಬೇರೊಬ್ಬರನ್ನು ಮದುವೆಯಾದಳು” ಎಂದು ಟಾಟಾ ಹಂಚಿಕೊಂಡಿದ್ದರು.

ಪ್ರೀತಿಯಲ್ಲಿ ಬೀಳುತ್ತಿದ್ದರೂ ಏಕೆ ಮದುವೆಯಾಗಲಿಲ್ಲ ಎಂದು ಕೇಳಿದಾಗ, ಅವರ ನಿರ್ಧಾರಗಳಲ್ಲಿ ಭಯ ಪಾತ್ರವನ್ನು ವಹಿಸಿತ್ತು ಎಂದು ಟಾಟಾ ಒಪ್ಪಿಕೊಂಡರು. “ನಾನು ನಾಲ್ಕು ಬಾರಿ ಮದುವೆಯಾಗಲು ಗಂಭೀರವಾಗಿ ಸಿದ್ಧನಾಗಿದ್ದೆ. ಮತ್ತು ಪ್ರತಿ ಬಾರಿಯೂ, ಆ ಹಂತಕ್ಕೆ ಹತ್ತಿರವಾದಾಗ, ಭಯದಿಂದಲೇ ಹಿಂದೆ ಸರಿದಿದ್ದೇನೆ ಎಂದು ನಾನು ಭಾವಿಸುತ್ತೇನೆ. ಆದರೆ ಹಿನ್ನೋಟದಲ್ಲಿ ಅನೇಕ ಇತರರನ್ನು ನೋಡಿದಾಗ, ಹಾಗೆ ಮಾಡಿ ನಾನೇನೂ ತಪ್ಪು ಮಾಡಿಲ್ಲ ಎನಿಸಿದೆ. ಮದುವೆಯು ವಿಷಯಗಳನ್ನು ಹೆಚ್ಚು ಸಂಕೀರ್ಣಗೊಳಿಸುತ್ತಿತ್ತು.”

ಟಾಟಾ ಅವರ ಮಾಜಿ ಪ್ರೇಯಸಿ ಸಿಮಿ ಗರೆವಾಲ್, 2011ರಲ್ಲಿ ಒಂದು ಸಂದರ್ಶನದಲ್ಲಿ ತಾವು ರತನ್ ಟಾಟಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದುದನ್ನು ಒಪ್ಪಿಕೊಂಡರು. “ಅವರು ಪರಿಪೂರ್ಣ ವ್ಯಕ್ತಿ. ಹಾಸ್ಯ ಪ್ರಜ್ಞೆಯನ್ನು ಹೊಂದಿದವರು. ಅಸಾಧಾರಣ ಮತ್ತು ಪರಿಪೂರ್ಣ ಸಂಭಾವಿತ ವ್ಯಕ್ತಿ. ಹಣವು ಅವರ ಪ್ರೇರಕ ಶಕ್ತಿಯಾಗಿರಲಿಲ್ಲ” ಎಂದಿದ್ದರು.

ಖ್ಯಾತ ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ ರತನ್ ಟಾಟಾ ಅವರು ಬುಧವಾರ ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು. ರಕ್ತದೊತ್ತಡದಲ್ಲಿ ಹಠಾತ್ ಕುಸಿತವನ್ನು ಅನುಭವಿಸಿದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಟಾಟಾ ರಾತ್ರಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Ratan Tata Death: ಅಗಲಿದ ಗೆಳೆಯ ರತನ್‌ ಟಾಟಾಗೆ ಭಾವುಕ ವಿದಾಯ ಹೇಳಿದ ಮಾಜಿ ಪ್ರೇಯಸಿ ಸಿಮಿ ಗರೆವಾಲ್‌