Sunday, 17th November 2024

Pakistan nationals: ಮತ್ತೆ 10 ಅಕ್ರಮ ಪಾಕ್‌ ನಿವಾಸಿಗಳ ಬಂಧನ; ಮತಪ್ರಚಾರವೇ ಇವರ ಗುರಿ!

Pakistan nationals

ಆನೇಕಲ್: ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಇನ್ನಷ್ಟು ಪಾಕಿಸ್ತಾನಿ ಪ್ರಜೆಗಳನ್ನು (Pakistan nationals) ಬೆಂಗಳೂರು ಪೊಲೀಸರು (Banglore police, Bangalore Crime news) ಹೆಡೆಮುರಿ ಕಟ್ಟಿದ್ದಾರೆ. ದೆಹಲಿ, ರಾಜಸ್ತಾನ ಹಾಗೂ ದೇಶದ ಹಲವೆಡೆ ಹೆಸರು ಬದಲಿಸಿಕೊಂಡು ನೆಲೆಸಿದ್ದ ಪಾಕಿಸ್ತಾನದ ಆರು ಮಹಿಳೆಯರು ಸೇರಿ ಹತ್ತು ಜನರನ್ನು ಜಿಗಣಿ ಪೊಲೀಸರು ಮಂಗಳವಾರ ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ.

ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 18ಕ್ಕೆ ಏರಿದಂತಾಗಿದೆ. ಜಿಗಣಿ ಮತ್ತು ಬೆಂಗಳೂರಿನ ಪೀಣ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಏಳು ಜನರನ್ನು ಪೊಲೀಸರು ಈಚೆಗೆ ಬಂಧಿಸಿದ್ದರು. ಭಾರತದಲ್ಲಿ ನೆಲೆಸಲು ಇವರಿಗೆ ನೆರವು ನೀಡಿದ್ದ ಕಿಂಗ್‌ಪಿನ್‌ ಪರ್ವೇಜ್‌ ಅಹಮದ್‌ ಎಂಬಾತನನ್ನು ಮೂರು ದಿನದ ಹಿಂದೆ ಪೊಲೀಸರು ಬೆಂಗಳೂರು ರೈಲು ನಿಲ್ದಾಣದಲ್ಲಿ ಬಂಧಿಸಿದ್ದರು.

ತನಿಖೆ ವೇಳೆ ಈತ ನೀಡಿದ ಮಾಹಿತಿ ಆಧರಿಸಿ ಆನೇಕಲ್‌ ಉಪವಿಭಾಗದ ಡಿವೈಎಸ್‌ಪಿ ಮೋಹನ್‌ ಕುಮಾರ್‌ ಮತ್ತು ಜಿಗಣಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌ ನೇತೃತ್ವದ ಜಿಗಣಿ ಪೊಲೀಸರ ತಂಡ ಈಚೆಗೆ ದೆಹಲಿ, ರಾಜಸ್ತಾನ ಮತ್ತು ಉತ್ತರ ಪ್ರದೇಶಕ್ಕೆ ತೆರಳಿತ್ತು. ಮೆಹನೂರ್‌, ನುಸ್ರತ್‌, ಫರ್ಜಾನಾ, ರುಕ್ಸಾನಾ, ಅಮೀದಾ, ನೌಸಾನ್‌ (ಎಲ್ಲರೂ ಮಹಿಳೆಯರು) ಮತ್ತು ಫರ‍್ಹಾಜ್‌, ಸಫೀಕ್‌ ರೆಹಮಾನ್‌, ಸೈಫ್‌ ಅಲಿ, ಸಲೀಂ ಖಾನ್‌ ಬಂಧಿತರು.

ಇವರಲ್ಲಿ ಐವರು ದೆಹಲಿಯಲ್ಲಿ, ಮೂವರು ರಾಜಸ್ತಾನದ ಅಜ್ಮೀರ್‌ನಲ್ಲಿ ಮತ್ತು ಮತ್ತೊಬ್ಬ ಉತ್ತರ ಪ್ರದೇಶದಲ್ಲಿ ವಾಸವಾಗಿದ್ದ. ಬಂಧಿತರೆಲ್ಲರೂ ಮೆಹದಿ ಫೌಂಡೇಷನ್‌ ಧರ್ಮಗುರು ಯೂನಸ್‌ ಅಲ್ಗೋರ್‌ ಪ್ರವಚನಗಳ ಪ್ರಚಾರಕರು ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲರನ್ನೂ ಬುಧವಾರ ಬಿಗಿ ಭದ್ರತೆಯಲ್ಲಿ ಆನೇಕಲ್‌ ಸರ್ಕಾರಿ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ತಪಾಸಣೆ ನಡೆಸಲಾಯಿತು. ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎಲ್ಲರನ್ನೂ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆನೇಕಲ್‌ ತಾಲ್ಲೂಕಿನ ರಾಜಾಪುರದ ಅನಘ ಬಡಾವಣೆಯಲ್ಲಿ ಒಂದೇ ಕುಟುಂಬದ ನಾಲ್ವರು ಮತ್ತು ಬೆಂಗಳೂರಿನ ಪೀಣ್ಯದಲ್ಲಿ ಒಂದೇ ಕುಟುಂಬದ ಮೂವರನ್ನು ಜಿಗಣಿ ಪೊಲೀಸರು ವಾರದ ಹಿಂದೆ ಬಂಧಿಸಿದ್ದರು.

ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ ಪ್ರಜೆಗಳ ಬೇಟೆ ಮುಂದುವರಿಸಿರುವ ಜಿಗಣಿ ಪೊಲೀಸರು ಶೀಘ್ರದಲ್ಲಿಯೇ ಇನ್ನೂ ಹತ್ತು ಪಾಕಿಸ್ತಾನಿಯರನ್ನು ಬಂಧಿಸುವ ಸಾಧ್ಯತೆ ಇದೆ. ಪರ್ವೇಜ್‌ ಅಹಮದ್‌ ತನಿಖೆ ಮುಂದುವರೆದಿದ್ದು ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ. ಬಂಧಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸ್‌ ಮೂಲಗಳ ತಿಳಿಸಿವೆ.

2007ರಲ್ಲಿ ಭಾರತಕ್ಕೆ ನುಸುಳಿ ಬಂದಿರುವ ಪಾಕಿಸ್ತಾನದ 63 ಪ್ರಜೆಗಳು ಹೆಸರು ಬದಲಿಸಿಕೊಂಡು ಬೇರೆ, ಬೇರೆ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಇವರಲ್ಲಿ ಬಹುತೇಕರು ಪರ್ವೇಜ್‌ ಅಹಮದ್‌ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ನೆರೆಯ ಬಾಂಗ್ಲಾದೇಶದ ಮೂಲಕ ಭಾರತದೊಳಗೆ ನುಸುಳಿ ಬರುವ ಪಾಕಿಸ್ತಾನ ಪ್ರಜೆಗಳಿಗೆ ಶಾಶ್ವತವಾಗಿ ಇಲ್ಲಿ ಉಳಿಯಲು ಅನುಕೂಲವಾಗುವಂತೆ ಪರ್ವೇಜ್‌ ಅಹಮದ್‌ ಅವರಿಗೆ ಆಧಾರ್‌ ಕಾರ್ಡ್‌, ಪಾಸ್‌ಪೋರ್ಟ್‌ ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆಯಲು ನೆರವಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Pakistani Arrest: ಬೆಂಗಳೂರಿನಲ್ಲಿದ್ದ ಪಾಕಿಸ್ತಾನಿ ಪ್ರಜೆ ಸೇರಿ ನಾಲ್ವರು ವಿದೇಶೀಯರ ಬಂಧನ