ರಾಜೇಂದ್ರ ಭಟ್ ಲೇಖನ: ಅವರಿಗೆ ಭಾರತ ರತ್ನ ಇನ್ನಾದರೂ ಸಿಗಬೇಕು
- ರಾಜೇಂದ್ರ ಭಟ್ ಕೆ.
Ratan Tata Death: ಭಾರತದ ಅತೀ ಶ್ರೇಷ್ಠ ಉದ್ಯಮಿಯಾದ ರತನ್ ಟಾಟಾ (ratan tata passed away) ನಮ್ಮನ್ನು ಅಗಲಿದ್ದಾರೆ. ಅವರಿಗೆ 87 ವರ್ಷ ಪ್ರಾಯ ಆಗಿತ್ತು. ಅವರಿಗೆ ಭಾರತರತ್ನ ಯಾವಾಗಲೋ ಸಿಗಬೇಕಿತ್ತು ಎಂಬ ಅಭಿಪ್ರಾಯ ಇಂದು ದೇಶದಾದ್ಯಂತ ಮತ್ತೆ ಗಟ್ಟಿಯಾಗಿ ಕೇಳಿ ಬರುತ್ತಿದೆ.
ಅವರ ಮಾನವೀಯ ಗುಣಗಳ ಬಗ್ಗೆ ಹತ್ತು ಹಲವು ಬಾರಿ ನಾನು ಬರೆದಿದ್ದೇನೆ. ಅವರು ತಮ್ಮ ಸಂಪತ್ತಿನ ಅರ್ಧ ಭಾಗವನ್ನು ಈಗಾಗಲೇ ದಾನ ಮಾಡಿ ಆಗಿದೆ! ಕೋರೋನ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಪರಿಹಾರ ನಿಧಿಗೆ 500 ಕೋಟಿ ರೂಪಾಯಿ ದಾನ ಮಾಡಿದ್ದು ಕೂಡ ಇನ್ನೂ ಮರೆತು ಹೋಗಿಲ್ಲ. ಟಾಟಾ ಎಂಬ ಅದ್ಭುತ ಬ್ರ್ಯಾಂಡನ್ನು ಜಗತ್ತಿನಾದ್ಯತ ವಿಸ್ತರಿಸಿದ ರತನ್ ಟಾಟಾ ಇನ್ನಿಲ್ಲ ಅಂದರೆ ನಂಬುವುದು ಕಷ್ಟ. ಜೀವನವಿಡೀ ಮದುವೆ ಆಗದೆ ಒಬ್ಬಂಟಿಯಾಗಿ ಬದುಕಿದ, ಆದರೆ ಹೇಗೆ ಬದುಕಬೇಕು ಎಂದು ಜಗತ್ತಿಗೆ ಸಾರಿದ ಉದ್ಯಮ ಸಂತ ಇಂದು ನಿರ್ಗಮಿಸಿದ್ದಾರೆ. ಟಾಟಾ ಸಮೂಹ ಸಂಸ್ಥೆಗಳಲ್ಲಿ ಉದ್ಯೋಗವನ್ನು ಮಾಡುತ್ತಿರುವ ಸಾವಿರಾರು ಮಂದಿಯ ಕಣ್ಣಲ್ಲಿ ಇಂದು ಆರ್ದ್ರತೆ ಜಿನುಗುವುದು ಖಂಡಿತ. ಏಕೆಂದರೆ ಅವರೆಲ್ಲರಲ್ಲಿ ಆ ಪ್ರೌಡ್ ಫೀಲಿಂಗ್ ಅವರು ತುಂಬಿ ಈ ಜಗತ್ತಿನಿಂದ ನಿರ್ಗಮಿಸಿದ್ದಾರೆ.
ಅವರ ಮಾನವೀಯ ಅಂತಕರಣದ ಬಗ್ಗೆ ನೂರಾರು ಉದಾಹರಣೆಗಳು ನಮಗೆ ದೊರೆಯುತ್ತವೆ. ಅವರ ಬಗ್ಗೆ ಒಂದು ಪುಸ್ತಕವನ್ನು ಬರೆಯುವಷ್ಟು ಮಾಹಿತಿ ಕಲೆಹಾಕಿ ಕೂತಿದ್ದೆ. ಅವರ ಮಾನವೀಯತೆಗೆ ಒಂದು ಶ್ರೇಷ್ಟವಾದ ಪುರಾವೆಯು ಇಲ್ಲಿದೆ.
ಅದು ಸಾಮಾನ್ಯ ಸನ್ಮಾನ ಆಗಿರಲಿಲ್ಲ!
ನಮ್ಮ ರತನ್ ಟಾಟಾ ಅವರ ಜೀವಮಾನದ ಸಾಧನೆಗಳನ್ನು ಪರಿಗಣಿಸಿ 2018ರಲ್ಲಿ ಸನ್ಮಾನ ಮಾಡಲು ಇಂಗ್ಲೆಂಡಿನ ರಾಜಕುಮಾರ ಚಾರ್ಲ್ಸ್ ಅವರನ್ನು ಇಂಗ್ಲೆಂಡಿಗೆ ಸ್ವತಃ ಫೋನ್ ಮಾಡಿ ಆಮಂತ್ರಿಸಿದ್ದರು. ಅದು ರಾಯಲ್ ರಾಜ ಮನೆತನದ ಬಂಕಿಂಗ್ ಹ್ಯಾಮ್ ಅರಮನೆಯಲ್ಲಿ ಏರ್ಪಾಡಾಗಿದ್ದ ಗೌರವದ ಸನ್ಮಾನ! ಪ್ರಿನ್ಸ್ ಚಾರ್ಲ್ಸ್ ಈ ಗೌರವದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಜಗತ್ತಿನ ನೂರಾರು ಅತೀ ಗಣ್ಯ ವ್ಯಕ್ತಿಗಳನ್ನು ಕರೆದಿದ್ದರು. ರತನ್ ಟಾಟಾ ಅವರು ಕೂಡ ಈ ಆಮಂತ್ರಣ ಸ್ವೀಕರಿಸಿ ಲಂಡನ್ನಿಗೆ ಹೊರಡುವ ತಯಾರಿ ಮಾಡುತ್ತಿದ್ದರು.
ಅವರನ್ನು ಇಂಗ್ಲೆಂಡಿನಲ್ಲಿ ಸ್ವಾಗತ ಮಾಡಿ ಅವರ ಆತಿಥ್ಯದ ವ್ಯವಸ್ಥೆಯನ್ನು ಮಾಡಲು ಚಾರ್ಲ್ಸ್ ಅವರಿಂದ ನಿಯುಕ್ತ ಆದವರು ಖ್ಯಾತ ಉದ್ಯಮಿಗಳು ಮತ್ತು ಅಂಕಣಕಾರರಾದ ಸುಹೇಲ್ ಸೇಥ ಅವರು. ಸುಹೇಲ್ ಅವರು ನಾಲ್ಕು ದಿನ ಮೊದಲೇ ಲಂಡನ್ನಿಗೆ ಹೋಗಿ ಟಾಟಾ ಅವರನ್ನು ಸ್ವಾಗತ ಮಾಡಲು ಸಿದ್ಧತೆ ಮಾಡುತ್ತಿದ್ದರು.
ಒಮ್ಮೆ ಸುಹೇಲ್ ಅವರು ಯಾವುದೋ ಒಂದು ಕೆಲಸದಲ್ಲಿ ಮುಳುಗಿದ್ದಾಗ ಅವರ ಮೊಬೈಲ್ ಫೋನ್ ಒಂದೇ ಸಮನೆ ಹೊಡೆದುಕೊಳ್ಳಲು ಆರಂಭ ಆಯಿತು. ಸುಹೆಲ್ ಸ್ವಲ್ಪ ಹೊತ್ತಿನ ನಂತರ ಮೊಬೈಲ್ ನೋಡಿದಾಗ ರತನ್ ಟಾಟಾ ಅವರ ಹನ್ನೊಂದು ಮಿಸ್ ಕಾಲ್ ಇತ್ತು!
ಒಂದು ಅದ್ಭುತ ಕಾರಣಕ್ಕೆ ರತನ್ ಟಾಟಾ ಇಂಗ್ಲೆಂಡಿಗೆ ಹೋಗಲಿಲ್ಲ!
ಯಾಕೆಂದು ಸುಹೇಲ್ ಗಾಬರಿ ಬಿದ್ದು ಟಾಟಾ ಅವರಿಗೆ ಮರು ಕಾಲ್ ಮಾಡಿದರು. ಕಾಲ್ ಕನೆಕ್ಟ್ ಆಯಿತು. ಅಂದು ರತನ್ ಟಾಟಾ ಅವರ ಧ್ವನಿ ನಡುಗುತ್ತಿತ್ತು.
ರತನ್ ಟಾಟಾ ಒಂದೇ ಉಸಿರಿಗೆ ಹೇಳುತ್ತಾ ಹೋದರು.
“ಸುಹೇಲ್ ಸಾರಿ. ನಿಮಗೆ ತೊಂದರೆ ಕೊಡುತ್ತಾ ಇದ್ದೇನೆ. ನಿಮಗೆ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಎರಡು ನಾಯಿಗಳಾದ ಟ್ಯಾಂಗೋ ಮತ್ತು ಟಿಟೋಗಳ ಪೈಕಿ ಒಂದು ಇಂದು ತೀವ್ರವಾಗಿ ಅಸ್ವಸ್ಥ ಆಗಿದೆ. ನಿಮಗೆ ಗೊತ್ತು ನಾನು ಎಷ್ಟು ಅವುಗಳನ್ನು ಪ್ರೀತಿ ಮಾಡುತ್ತೇನೆ ಎಂದು. ಇಂತಹ ಸಂಕೀರ್ಣ ಸನ್ನಿವೇಶದಲ್ಲಿ ನಾನು ನಾಯಿಗಳನ್ನು ಬಿಟ್ಟು ಲಂಡನ್ನಿಗೆ ಬರಲು ಸಾಧ್ಯ ಇಲ್ಲ. ನೀವಿದನ್ನು ದಯವಿಟ್ಟು ಪ್ರಿನ್ಸ್ ಚಾರ್ಲ್ಸ್ ಅವರಿಗೆ ತುರ್ತಾಗಿ ತಿಳಿಸಬೇಕು ಮತ್ತು ನಾನು ಅವರ ಕ್ಷಮೆಯನ್ನು ಕೇಳುತ್ತಿದ್ದೇನೆ ಎಂದು ಕೂಡ ತಿಳಿಸಬೇಕು” ಎಂದರು.
ರತನ್ ಟಾಟಾ ತನ್ನ ನಾಯಿಯ ಆರೈಕೆಯೇ ತನ್ನ ಆದ್ಯತೆ ಎಂದರು!
ಸುಹೇಲ್ ಅವರಿಗೆ ಏನು ಉತ್ತರ ಹೇಳಬೇಕು ಎಂದು ಗೊತ್ತಾಗಲಿಲ್ಲ. ಅವರು “ರತನ್ ಜಿ. ಇದು ಸಾಮಾನ್ಯವಾದ ಕಾರ್ಯಕ್ರಮ ಅಲ್ಲ. ಇಂಗ್ಲೀಷ್ ರಾಜಮನೆತನದ ಗೌರವದ ಕಾರ್ಯಕ್ರಮ. ಸ್ವತಃ ಪ್ರಿನ್ಸ್ ಚಾರ್ಲ್ಸ್ ಮುಂದೆ ನಿಂತು ಈ ಕಾರ್ಯಕ್ರಮ ಏರ್ಪಡಿಸುತ್ತಿದ್ದಾರೆ. ನೂರಕ್ಕೂ ಹೆಚ್ಚಿನ ವಿವಿಐಪಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದಾರೆ. ಸ್ವತಃ ಇಂಗ್ಲೆಂಡ್ ರಾಣಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದಾರೆ. ಆದ್ದರಿಂದ ನೀವು ನಾಯಿಗಳ ಬಗ್ಗೆ ಬೇರೇನಾದರೂ ವ್ಯವಸ್ಥೆಯನ್ನು ಮಾಡಿ ಲಂಡನ್ನಿಗೆ ಹೊರಡಬೇಕು ಎಂದು ವಿನಂತಿ ಮಾಡುತ್ತೇನೆ” ಎಂದರು.
ಆದರೆ ರತನ್ ಟಾಟಾ ತಮ್ಮ ನಿರ್ಧಾರವನ್ನು ಬಿಲ್ಕುಲ್ ಬದಲಾಯಿಸಲು ಒಪ್ಪಲಿಲ್ಲ. “ನಿಮಗೆ ಗೊತ್ತಿದೆ ನಾನು ನನ್ನ ನಾಯಿಗಳನ್ನು ಎಷ್ಟೊಂದು ಪ್ರೀತಿ ಮಾಡುತ್ತೇನೆ ಎಂದು. ದಯವಿಟ್ಟು ನನಗೆ ಒತ್ತಾಯ ಮಾಡಬೇಡಿ. ನನ್ನ ಪ್ರೀತಿಯ ಮಾತುಗಳನ್ನು ಪ್ರಿನ್ಸ್ ಚಾರ್ಲ್ಸ್ ಅವರಿಗೆ ವಿನೀತವಾಗಿ ತಲುಪಿಸಿ” ಅಂದು ಫೋನ್ ಇಟ್ಟರು.
ಪ್ರಿನ್ಸ್ ಚಾರ್ಲ್ಸ್ ಬೆರಗಾದರು ಅವರ ಮಾನವೀಯ ಅಂತಃಕರಣಕ್ಕೆ!
ಸುಹೇಲ್ ಅವರಿಗೆ ಈಗ ನಿಜವಾಗಿ ಉಭಯ ಸಂಕಟ ಆರಂಭ ಆಯಿತು. ಅವರು ಮರುದಿನವೇ ಮುಂಜಾನೆ ಬಂಕಿಂಗ್ ಹ್ಯಾಮ್ ಅರಮನೆಗೆ ಹೋದಾಗ ಅಲ್ಲಿ ಎಲ್ಲ ಸಿದ್ಧತೆಗಳೂ ಕೊನೆಯ ಹಂತದಲ್ಲಿ ಇದ್ದವು.
ಅವರು ಸಂಕೋಚದಿಂದ ಪ್ರಿನ್ಸ್ ಚಾರ್ಲ್ಸ್ ಮುಂದೆ ಹೋಗಿ ಟಾಟಾ ಹೇಳಿದ್ದನ್ನು ಪ್ರೀತಿಯಿಂದಲೆ ಹೇಳಿದರು. ಅದೇ ಕಾರಣವನ್ನು ಕೂಡ ನಿವೇದನೆ ಮಾಡಿಕೊಂಡರು. ಒಮ್ಮೆ ಚಾರ್ಲ್ಸ್ ಹಣೆಯ ಮೇಲೆ ನೆರಿಗೆಗಳು ಕಂಡುಬಂದವು. ತಕ್ಷಣ ಅವರ ಮೊದಲ ಉದ್ಗಾರ – That’s the man!
ನಂತರ ಪ್ರಿನ್ಸ್ ಚಾರ್ಲ್ಸ್ ಹೇಳಿದ್ದು ಇಷ್ಟು:
“ರತನ್ ಅವರಿಗೆ ಬರಲು ಆಗುವುದಿಲ್ಲ ಎಂದು ನೀವು ಹೇಳಿದಾಗ ನನಗೆ ಒಮ್ಮೆ ಬೇಜಾರು ಆಯಿತು. ಆದರೆ ಅವರು ನೀಡಿದ ಕಾರಣ ನೋಡಿ ನನಗೆ ಅವರ ಬಗ್ಗೆ ತುಂಬ ಹೆಮ್ಮೆ ಅನ್ನಿಸಿತು. ನನಗೆ ಅವರ ಬಗ್ಗೆ ಇರುವ ಗೌರವ, ಪ್ರೀತಿ ಇಮ್ಮಡಿ ಆಗಿದೆ. ನೋ ಪ್ರಾಬ್ಲಂ. ಈ ಕಾರ್ಯಕ್ರಮವನ್ನು ಮುಂದಕ್ಕೆ ಹಾಕೋಣ”
ಕೊನೆಗೂ ಆ ಕಾರ್ಯಕ್ರಮ ನಡೆಯಲಿಲ್ಲ!
ಕೊನೆಗೂ ರತನ್ ಟಾಟಾ ಆ ಕಾರ್ಯಕ್ರಮಕ್ಕೆ ಹೋಗಲಿಲ್ಲ ಮತ್ತು ಆ ಕಾರ್ಯಕ್ರಮವು ಮುಂದೆ ನಡೆಯಲೇ ಇಲ್ಲ!
ಟಾಟಾ ಒಮ್ಮೆ ತಮ್ಮ ಎರಡು ನಾಯಿಗಳ ಬಗ್ಗೆ ಮಾಡಿದ ಟ್ವೀಟ್ ಹೀಗಿದೆ – Tito and Tango seek nothing in return for their affection other than a little love and attention. I miss them terribly when I am away!
ಯಾರೂ ಸುಖಾಸುಮ್ಮನೆ ದೊಡ್ಡವರು ಆಗುವುದಿಲ್ಲ!
ಅವೆರಡೂ ರತನ್ ಟಾಟಾ ಸಾಕಿದ ಬೀದಿ ನಾಯಿಗಳು ಆಗಿದ್ದವು ಅಂದರೆ ನಿಮಗೆ ಇನ್ನೂ ಆಶ್ಚರ್ಯ ಆಗಬಹುದು!
ಟಾಟಾ ಅವರಿಗೆ ತಮ್ಮ ಜೀವನದ ಆದ್ಯತೆಗಳನ್ನು ನಿರ್ಧಾರ ಮಾಡಲು ಗೊತ್ತಿದೆ ಮತ್ತು ಅವರು ತಮ್ಮ ಆದ್ಯತೆಗಳಿಂದ ಒಂದಿಷ್ಟೂ ವಿಚಲಿತ ಆಗುವುದಿಲ್ಲ. ತಮ್ಮ ಕಂಪೆನಿಯ ಎಲ್ಲ ಉದ್ಯೋಗಿಗಳನ್ನೂ ಅವರು ಅದೇ ಮಾನವೀಯವಾದ ಅಂತಃಕರಣದಿಂದ ನೋಡಿಕೊಳ್ಳುತ್ತಾರೆ ಎಂದು ನನಗೆ ಅನೇಕರು ಹೇಳಿದ್ದಾರೆ. ಕೋರೋನಾ ತೀವ್ರ ಸಂಕಷ್ಟದ ಸಮಯದಲ್ಲಿ ಕೂಡ ರತನ್ ಟಾಟಾ ಯಾವುದೇ ತನ್ನ ಉದ್ಯೋಗಿಯನ್ನು ತೆಗೆದುಹಾಕಿಲ್ಲ ಅಥವಾ ವೇತನ ಕಡಿತ ಮಾಡಿಲ್ಲ! ಟಾಟಾ ಉದ್ಯೋಗಿಗಳಲ್ಲಿ ಆ ಪ್ರೌಡ್ ಫೀಲಿಂಗ್ ನಾನು ಹಲವು ಬಾರಿ ಗಮನಿಸಿದ್ದೇನೆ.
ಅಂದ ಹಾಗೆ ರತನ್ ಟಾಟಾ ಈವರೆಗೆ ಮದುವೆ ಆಗಿಲ್ಲ! ನಾನು ನಾಲ್ಕು ಬಾರಿ ಮದುವೆಯ ಹೊಸ್ತಿಲಿನತನಕ ಬಂದು ಭಯದಿಂದ ಹಿಂದೆ ಹೋಗಿದ್ದೆ ಎಂದವರು ತಮಾಷೆಗೆ ಹೇಳಿದ್ದಾರೆ!
ರತನ್ ಟಾಟಾ ಅವರಿಗೆ ಭಾರತ ರತ್ನ ದೊರೆಯಲಿ
87 ವರ್ಷಗಳ ಸಾರ್ಥಕ ಬದುಕು ಅವರದ್ದು. ಭಾರತ ಸರಕಾರ ಅವರಿಗೆ ಈಗಲಾದರೂ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಬೇಕು. ಆಗ ಆ ಪ್ರಶಸ್ತಿಗೆ ಒಂದು ಮೌಲ್ಯ ಬರುತ್ತದೆ. ಬೇರೆಲ್ಲಾ ಪದ್ಮ ಪ್ರಶಸ್ತಿಗಳು ಅವರಿಗೆ ದೊರೆತಾಗಿದೆ. ರತನ್ ಟಾಟಾ ಭಾರತದ ಉದ್ಯಮ ರಂಗದ ಓರ್ವ ಅದ್ಭುತ ಸಾಧಕ. ಅವರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ ಇರಲಿ.
ಇದನ್ನೂ ಓದಿ: Ratan Tata death: ಬಾಲಿವುಡ್ಗೂ ಕಾಲಿಟ್ಟಿದ್ದರು ರತನ್ ಟಾಟಾ: ನಿರ್ಮಿಸಿದ ಏಕೈಕ ಸಿನಿಮಾ ಯಾವುದು?