Sunday, 24th November 2024

ವಿಶ್ವೇಶ್ವರ ಭಟ್‌ ಲೇಖನ: ಸಾಕು ನಾಯಿಯ ಅನಾರೋಗ್ಯದಿಂದಾಗಿ ಪ್ರಿನ್ಸ್ ಚಾರ್ಲ್ಸ್ ಸಮಾರಂಭಕ್ಕೆ ಹೋಗದ ರತನ್ ಟಾಟಾ!

ratan tata 5
  • ವಿಶ್ವೇಶ್ವರ ಭಟ್‌

Ratan Tata Death: ಇತ್ತೀಚೆಗೆ ಉದ್ಯಮಿ ಮತ್ತು ಅಂಕಣಕಾರ ಸುಹೇಲ್ ಸೇಥ್ ಅವರ ಸಂದರ್ಶನದ ಸಣ್ಣ ತುಣುಕೊಂದನ್ನು ನೋಡುತ್ತಿದ್ದೆ. ಅವರು ಈ ದೇಶದ ಗಣ್ಯ ಉದ್ಯಮಿಗಳಲ್ಲೊಬ್ಬರಾದ ರತನ್ ಟಾಟಾ ಬಗ್ಗೆ ಮಾತಾಡುತ್ತಿದ್ದರು. ನಾಲ್ಕು ವರ್ಷ(2018)ಗಳ ಹಿಂದೆ, ಲಂಡನ್ ನ ಬಕಿಂಗ್ ಹ್ಯಾಮ್ ಅರಮನೆಯಲ್ಲಿ, ರಾಜಕುಮಾರ ಚಾರ್ಲ್ಸ್ ಅವರು ರತನ್ ಟಾಟಾ ಅವರಿಗೆ ಜೀವಮಾನದ ಸಾಧನೆಗಾಗಿ ಒಂದು ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಆ ಕಾರ್ಯಕ್ರಮಕ್ಕಾಗಿ ಸಕಲ ಏರ್ಪಾಟುಗಳಾಗಿದ್ದವು. ಚಾರ್ಲ್ಸ್ ಅವರು ಗಣ್ಯರನ್ನೆಲ್ಲ ಆಹ್ವಾನಿಸಿದ್ದರು. ಕಾರ್ಯಕ್ರಮಕ್ಕಿಂತ ನಾಲ್ಕು ದಿನಗಳ ಮೊದಲು, ಸುಹೇಲ್ ಸೇಥ್ ಸಹ ಲಂಡನ್ ತಲುಪಿದ್ದರು. ಚಾರ್ಲ್ಸ್ ಅವರಿಗೆ ಸಹಕರಿಸುವುದಕ್ಕಾಗಿ ಸೇಥ್ ಅವರನ್ನು ಕರೆಯಿಸಿಕೊಂಡಿದ್ದರು.

ಲಂಡನ್ ವಿಮಾನ ನಿಲ್ದಾಣದಲ್ಲಿಳಿದು ಲಗೇಜ್ ಅನ್ನು ಕಲೆಕ್ಟ್ ಮಾಡಿಕೊಳ್ಳುವ ಸಂದರ್ಭದಲ್ಲಿ, ಸೇಥ್ ಅವರ ಮೊಬೈಲ್ ಒಂದೇ ಸಮನೆ ರಿಂಗ್ ಆಗುತ್ತಿತ್ತು. ಆದರೆ ಕೋಟಿನ ಜೇಬಿನಲ್ಲಿದ್ದ ಮೊಬೈಲ್ ನ್ನು ನೋಡಲು ಅವರಿಗೆ ಸಾಧ್ಯವಾಗಿರಲಿಲ್ಲ. ನಂತರ ಮೊಬೈಲ್ ತೆರೆದು ನೋಡಿದರೆ, ರತನ್ ಟಾಟಾ ಅವರು ಹನ್ನೊಂದ್ ಮಿಸ್ಡ್ ಕಾಲ್ ಕೊಟ್ಟಿದ್ದರು. ಸೇಥ್ ಗೆ ಆಶ್ಚರ್ಯ! ಇದೇಕೆ ರತನ್ ಒಂದೇ ಸಮನೆ ಫೋನ್ ಮಾಡುತ್ತಿದ್ದಾರೆ ಎಂದು ತುಸು ಗಾಬರಿಯಾಯಿತು. ತಕ್ಷಣ ಅಲ್ಲಿಂದಲೇ ರತನ್ ಟಾಟಾ ಅವರಿಗೆ ಫೋನ್ ಮಾಡಿದರು.

ಆಗ ಇನ್ನೊಂದು ತುದಿಯಲ್ಲಿ ರತನ್ ಟಾಟಾ ಮಾತಾಡುತ್ತಿದ್ದರು – ‘ಸುಹೇಲ್, ನಿಮಗೆ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಎರಡು ನಾಯಿಗಳಾದ ಟ್ಯಾಂಗೋ ಮತ್ತು ಟಿಟೋ ಪೈಕಿ ಒಂದು ತೀವ್ರ ಅಸ್ವಸ್ಥವಾಗಿದೆ. ನಿಮಗೆ ಗೊತ್ತು, ನಾನು ಈ ಎರಡು ನಾಯಿಗಳನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು. ಇಂಥ ಸನ್ನಿವೇಶದಲ್ಲಿ ನಾನು ಈ ನಾಯಿಗಳನ್ನು ಬಿಟ್ಟು ಲಂಡನ್ ಕಾರ್ಯಕ್ರಮಕ್ಕೆ ಬರಲಾರೆ. ನೀವು ನನ್ನನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸಿದ್ದೇನೆ. ಈ ವಿಷಯವನ್ನು ನಿಮಗೆ ತುರ್ತಾಗಿ ತಿಳಿಸಬೇಕು ಎಂಬ ಕಾರಣಕ್ಕೆ ನಾನು ನಿಮಗೆ ನಿರಂತರವಾಗಿ ಫೋನ್ ಮಾಡಿದೆ. ಈ ವಿಷಯವನ್ನು ಪ್ರಿನ್ಸ್ ಚಾರ್ಲ್ಸ್ ಅವರಿಗೆ ತಿಳಿಸಿಬಿಡಿ.’

ಸೇಥ್ ಗೆ ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ‘ರತನ್, ನಿಮ್ಮ ಜೀವಮಾನದ ಸಾಧನೆಯನ್ನು ಪರಿಗಣಿಸಿ ಈ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ. ಅದನ್ನು ಏರ್ಪಡಿಸಿದವರು ಮತ್ಯಾರೂ ಅಲ್ಲ, ರಾಜಕುಮಾರ ಚಾರ್ಲ್ಸ್. ಇದು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ನೂರಾರು ಆಯ್ದ ಗಣ್ಯ, ಅತಿ ಗಣ್ಯ ವ್ಯಕ್ತಿಗಳೆಲ್ಲಾ ಈ ಸಮಾರಂಭಕ್ಕೆ ಆಗಮಿಸಲಿದ್ದಾರೆ. ಇನ್ನು ನಾಲ್ಕು ದಿನಗಳಿವೆಯಷ್ಟೇ. ಅದೂ ಈ ಕಾರ್ಯಕ್ರಮ ನೆರವೇರುವುದು ಬಕಿಂಗ್ ಹ್ಯಾಮ್ ಅರಮನೆಯಲ್ಲಿ. ನಿಶ್ಚಿತವಾಗಿಯೂ ರಾಣಿ ಕೂಡ ಪಾಲ್ಗೊಳ್ಳಲಿದ್ದಾರೆ. ಇಂಥ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ ಆಗಿದೆ. ಹೀಗಿರುವಾಗ, ಕೊನೆ ಕ್ಷಣದಲ್ಲಿ ನೀವು ಹೀಗೆ ಹೇಳಿದರೆ ಹೇಗೆ?’ ಎಂದು ಸೇಥ್ ಕೇಳಿದರು.

ಆಗ ರತನ್ ಟಾಟಾ ಖಡಾಖಡಿ ದನಿಯಲ್ಲಿ ಹೇಳಿದರು – ‘ಸುಹೇಲ್, ಇಲ್ಲ.. ನಾನು ಇಂಥ ಸ್ಥಿತಿಯಲ್ಲಿ ನನ್ನ ನಾಯಿಯನ್ನು ಬಿಟ್ಟು ಬರಲಾರೆ. ಈ ಕುರಿತು ಸಾಕಷ್ಟು ಯೋಚಿಸಿಯೇ ಈ ತೀರ್ಮಾನಕ್ಕೆ ಬಂದಿದ್ದೇನೆ. ಈ ಕಾರಣದಿಂದ ನಾನು ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಬರಲು ಆಗುತ್ತಿಲ್ಲ ಎಂಬುದನ್ನು ರಾಜಕುಮಾರ ಚಾರ್ಲ್ಸ್ ಅವರನ್ನು ಖುದ್ದಾಗಿ ಭೇಟಿ ಮಾಡಿ ಹೇಳಿ.’

ಟಾಟಾ ಜತೆ ಮಾತಾಡಿ ಪ್ರಯೋಜನ ಇಲ್ಲ ಎಂದು ಸುಹೇಲ್ ಸೇಥ್ ಗೆ ಮನವರಿಕೆಯಾಯಿತು. ಕಾರಣ ರತನ್ ಟಾಟಾ ತಮ್ಮ ನಾಯಿಗಳನ್ನು ಎಷ್ಟು ಪ್ರೀತಿಸುತ್ತಾರೆ ಮತ್ತು ಅವುಗಳನ್ನು ಎಷ್ಟು ಹಚ್ಚಿಕೊಂಡಿದ್ದಾರೆ ಎಂಬುದು ಅವರಿಗೆ ಗೊತ್ತಿತ್ತು. ಆದರೆ ಈ ಸುದ್ದಿಯನ್ನು ಚಾರ್ಲ್ಸ್ ಅವರಿಗೆ ಹೇಗೆ ಹೇಳುವುದು? ಅವರು ಏನು ಭಾವಿಸಬಹುದು? ಕೊನೆ ಕ್ಷಣದಲ್ಲಿ ಕಾರ್ಯಕ್ರಮ ಅಡಸಲು-ಬಡಸಲು ಆಗುವುದನ್ನು ಅವರು ಹೇಗೆ ಸ್ವೀಕರಿಸಬಹುದು? ಹೆಜ್ಜೆ ಹೆಜ್ಜೆಗೆ ಶಿಷ್ಟಾಚಾರ ಪಾಲಿಸುವ ಅರಮನೆಯ ಅಧಿಕಾರಿಗಳು ಸೇರಿದಂತೆ ಚಾರ್ಲ್ಸ್, ಕೊನೆ ಕ್ಷಣದ ಈ ಯಡವಟ್ಟಿನ ಬಗ್ಗೆ ತಪ್ಪಾಗಿ ಭಾವಿಸದೇ ಇರ್ತಾರಾ?… ಈ ಎಲ್ಲಾ ಪ್ರಶ್ನೆಗಳು ಸುಹೇಲ್ ಸೇಥ್ ಮನಸ್ಸಿನಲ್ಲಿ ಹಾದು ಹೋದವು. ಆದರೆ ರತನ್ ಹೇಳಿದ ಸಂದೇಶವನ್ನು ಚಾರ್ಲ್ಸ್ ಅವರಿಗೆ ತಿಳಿಸಲೇ ಬೇಕಿತ್ತು.

ಮರುದಿನ ಸುಹೇಲ್ ಸೇಥ್ ಬಕಿಂಗ್ ಹ್ಯಾಮ್ ಅರಮನೆಗೆ ಹೋಗಿ, ಚಾರ್ಲ್ಸ್ ಅವರನ್ನು ಭೇಟಿ ಮಾಡಿ, ತೀರಾ ಸಂಕೋಚದಿಂದ ರತನ್ ಟಾಟಾ ಬರಲಾಗುತ್ತಿಲ್ಲ ಎಂದು ಹೇಳಿದರಲ್ಲದೇ, ಅದಕ್ಕೆ ಕಾರಣವನ್ನೂ ತಿಳಿಸಿದರು. ಅದನ್ನು ಕೇಳಿದ ಚಾರ್ಲ್ಸ್ ಅವರ ಮೊದಲ ಉದ್ಗಾರ – ‘That’s the man.’

ನಂತರ ಚಾರ್ಲ್ಸ್ ಹೇಳಿದರು – ‘ರತನ್ ಗೆ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ ಎಂಬುದನ್ನು ಕೇಳಿ ಒಂದು ಕ್ಷಣ ನನಗೆ ಅತೀವ ನಿರಾಸೆಯಾಯಿತು. ಆದರೆ ಅದಕ್ಕೆ ಅವರು ನೀಡಿದ ಕಾರಣ ಕೇಳಿ ಅವರ ಬಗ್ಗೆ ನನಗೆ ಇನ್ನಷ್ಟು ಗೌರವ, ಪ್ರೀತಿ ಮತ್ತು ಅಭಿಮಾನ ಹೆಚ್ಚಿತು. ಈ ಕಾರಣದಿಂದಲೇ ರತನ್ ಉಳಿದೆಲ್ಲರಿಗಿಂತ ಭಿನ್ನ. ನನ್ನ ಕಣ್ಣಲ್ಲಿ ಅವರು ಇನ್ನಷ್ಟು ದೊಡ್ಡವರಾಗಿದ್ದಾರೆ. ನೋ ಪ್ರಾಬ್ಲಮ್, ಕಾರ್ಯಕ್ರಮವನ್ನು ಮುಂದೂಡೋಣ.’

ಕೊನೆಗೂ, ರತನ್ ಆ ಕಾರ್ಯಕ್ರಮಕ್ಕೆ ಹೋಗಲಿಲ್ಲ ಮತ್ತು ಆ ಕಾರ್ಯಕ್ರಮ ನಡೆಯಲಿಲ್ಲ.

ರತನ್ ಬಗ್ಗೆ ಸುಹೇಲ್ ಆ ಸಂದರ್ಶನದಲ್ಲಿ ಹೇಳಿದ್ದು – ‘ಟಾಟಾ ಸಂಸ್ಥೆ ಉಳಿದೆಲ್ಲ ಕಂಪೆನಿಗಳಿಗಿಂತ ಮಾನವೀಯವಾಗಿದೆ ಹಾಗೂ ಭಿನ್ನವಾಗಿದೆ ಎಂಬುದಕ್ಕೆ ಇಂಥ ಅಂತಃಕರಣದ ವ್ಯಕ್ತಿಗಳ ನಾಯಕತ್ವ ಅದಕ್ಕಿದೆ ಎಂಬುದೇ ಕಾರಣ. ನಾಯಕತ್ವ ಅಂದ್ರೆ ನಾಯಕನಾದವನು ಏನು ಮಾಡುತ್ತಾನೆ ಎಂಬುದಲ್ಲ. ಆತ ಯಾವುದರಲ್ಲಿ ನಂಬಿಕೆ ಇಟ್ಟುಕೊಂಡಿದ್ದಾನೆ ಎಂಬುದು. ನಾಯಕನಾದವನು ಯಾವುದರಲ್ಲಿ ನಂಬಿಕೆ ಇಟ್ಟುಕೊಂಡಿದ್ದಾನೆ ಮತ್ತು ಯಾವುದನ್ನು ಮಾಡುತ್ತಾನೆ ಎಂಬ ಈ ಎರಡು ಸಂಗತಿಗಳು ಕಂಪನಿಯ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಹೌಸ್ ಆಫ್ ಟಾಟಾವನ್ನು ಇಂಥ ಉದಾತ್ತ ಆಶಯಗಳಿಂದ ಕಟ್ಟಲಾಗಿದೆ.’

ಹತ್ತು ವರ್ಷಗಳ ಹಿಂದೆ, ರತನ್ ಟಾಟಾ ಅವರ ಒಂದು ಟ್ವೀಟ್ ನ ಸ್ಕ್ರೀನ್ ಶಾಟ್ ತೆಗೆದುಕೊಂಡು, ನಾನು ಸೇವ್ ಮಾಡಿ ಇಟ್ಟುಕೊಂಡಿದ್ದೇನೆ. ಜನೆವರಿ 18, 2012 ರಂದು ರತನ್ ಟ್ವೀಟ್ ಮಾಡಿದ್ದರು – ‘Tito and Tango seek nothing in return for their affection other than love and attention. I miss them terribly when I am away.’

ರತನ್ ಜಾಗದಲ್ಲಿ ಬೇರೆ ಯಾರೇ ಇದ್ದರೂ ಚಾರ್ಲ್ಸ್ ಏರ್ಪಪಡಿಸಿದ ಆ ಕಾರ್ಯಕ್ರಮಕ್ಕೆ ನಿಶ್ಚಿತವಾಗಿ ಹೋಗುತ್ತಿದ್ದರು. ಆದರೆ ತಮ್ಮ ಸಾಕು ನಾಯಿ ಅನಾರೋಗ್ಯಕ್ಕೆ ತುತ್ತಾಗಿದೆಯೆಂದು, ಇಂಗ್ಲೆಂಡಿನ ರಾಜಕುಮಾರ ಸಂಘಟಿಸಿದ ಸನ್ಮಾನ ಸಮಾರಂಭಕ್ಕೆ ಹೋಗದೇ, ನಾಯಿಯ ಜತೆಯಲ್ಲೇ ಇದ್ದು ಅದರ ಆರೈಕೆ ಮಾಡಲು ನಿರ್ಧರಿಸಿದ ರತನ್ ಅದೆಂಥ ಮಾನವಂತರಿದ್ದಿರಬಹುದು?! ಯಾರೂ ಸುಖಾಸುಮ್ಮನೆ ದೊಡ್ಡವರು ಎಂದು ಎನಿಸಿಕೊಳ್ಳುವುದಿಲ್ಲ.

(ರತನ್ ಟಾಟಾ ಕುರಿತು ನಾನು ಎರಡು ವರ್ಷಗಳ ಹಿಂದೆ ಬರೆದ ಲೇಖನ)