Sunday, 24th November 2024

N S Bosaraju: ವಿಶ್ವ ಶಾಂತಿ ನೆಲೆಸಬೇಕಾದರೆ ಭಕ್ತಿ ಮತ್ತು ಶ್ರದ್ಧೆ ಮೇಲುಗೈ ಸಾಧಿಸಬೇಕು : ಸಚಿವ ಎಸ್ ಎನ್ ಬೋಸರಾಜು

ಚಿಕ್ಕಬಳ್ಳಾಪುರ : ಈ ಭೌತಿಕ ಜಗತ್ತಿನಲ್ಲಿ ಕ್ರೋಧ ಹಿಂಸೆ, ಅಶಾಂತಿ ಕಡಿಮೆಯಾಗಿ ವಿಶ್ವ ಶಾಂತಿ ನೆಲೆಸಬೇಕಾದರೆ ಭಕ್ತಿ ಮತ್ತು ಶ್ರದ್ಧೆ ಮೇಲುಗೈ ಸಾಧಿಸಬೇಕು ಎಂದು ಸಚಿವ ಎಸ್ ಎನ್ ಬೋಸರಾಜು ತಿಳಿಸಿದರು.

ನಮ್ಮ ಪುರಾಣ ಇತಿಹಾಸಗಳು ನಮ್ಮ ಸಂಸ್ಕೃತಿ, ಆಚಾರ ವಿಚಾರಗಳು ಸಾಗಿ ಬಂದ  ಹಾದಿಯನ್ನು ತಿಳಿಸುತ್ತವೆ. ನಂಬಿಕೆ ಮತ್ತು ಆಚರಣೆಗಳು ಬಲಗೊಳ್ಳುತ್ತಾ ಹೋದಂತೆ ಸಾಮರಸ್ಯ ಮೂಡುತ್ತದೆ. ಆಗ ವಿಶ್ವಶಾಂತಿ  ನೆಲೆಯಾ ಗುತ್ತದೆ. ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಹೋಮ ಯಾಗಾದಿಗಳು ಲೋಕಕಲ್ಯಾಣ ಮತ್ತು ವಿಶ್ವಶಾಂತಿಯ ಏಕ ಗುರಿಯನ್ನು ಹೊಂದಿವೆ. ಪರಂಪರೆಯನ್ನು ಉಳಿಸುವ ಮಹಾ ಕಾರ್ಯ ಮಹಾತ್ಮರಿಂದ  ಮಾತ್ರ ಸಾಧ್ಯ. ಅದಕ್ಕೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರೇ ದೃಷ್ಟಾಂತ. ಭಕ್ತಿ ಮತ್ತು ಶ್ರದ್ಧೆ ಮೇಲುಗೈ ಸಾಧಿಸಿದಾಗ  ವಿಶ್ವಶಾಂತಿ ತಾನಾಗಿಯೇ ಒಡ ಮೂಡುತ್ತದೆ, ಎಂದು ಕರ್ನಾಟಕ ರಾಜ್ಯ ಸರ್ಕಾರದ ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆಯ ಸಚಿವರಾದ ಎಸ್.ಎನ್ ಬೋಸರಾಜು ಹೇಳಿದರು.

ಅವರು ತಾಲೂಕಿನ  ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ದಸರಾ ಮಹೋತ್ಸವ, ನವರಾತ್ರಿ ಹೋಮ, ಮಹಾರುದ್ರ ಯಾಗ ವೇದಿಕೆಯಲ್ಲಿ, ಮೇಧಾ ದಕ್ಷಿಣಾಮೂರ್ತಿ ಮತ್ತು ಸರಸ್ವತಿ ಹೋಮದ ಪೂರ್ಣಹುತಿಯನ್ನು ನೆರವೇರಿಸಿ ಮಾತನಾಡಿದರು.

ಯಜ್ಞಾಧ್ಯಕ್ಷತೆ ಮತ್ತು ಮಹಾ ರುದ್ರಯಾಗ ಸಾನಿಧ್ಯ ವಹಿಸಿರುವ ಮಾನವೀಯತೆಯ ಸಂತ ಸದ್ಗುರು ಶ್ರೀ ಮಧು ಸೂದನ ಸಾಯಿ ಅವರು ತಮ್ಮ ಆಶೀರ್ವಚನದಲ್ಲಿ ಭಕ್ತಿಯಿಂದ  ಅರ್ಪಿಸಿದ ಪ್ರತಿಯೊಂದು ಸಕರ್ಮಗಳು ಯಾಗವೆನಿಸುತ್ತದೆ. ಒಳ್ಳೆಯ ಕಾರ್ಯಗಳು ಎಲ್ಲಿ ನಡೆಯುತ್ತಿದೆಯೋ ಅಲ್ಲಿ ಭಗತ್ ಕಾರ್ಯ ನಡೆದಂತೆ. ಪುಣ್ಯ ಕಾರ್ಯದಲ್ಲಿ  ಭಾಗವಹಿಸಿದಾಗ ಜೀವನ ಪಾವನವಾಗುತ್ತದೆ. ಸಂಸ್ಕಾರ ಸಂಸ್ಕೃತಿ ಪರಂಪರೆಯನ್ನು ರಕ್ಷಿಸಿ ಪೋಷಿಸುವುದು ಕೂಡ ಧರ್ಮವೆನಿಸುತ್ತದೆ. ತೋರಿಕೆಗೆ ಮಾಡುವ ಯಾವುದೇ ಕಾರ್ಯಗಳು ಸತ್ಫಲ ನೀಡಲಾರದು. ಸಾದಾಚಾರ, ಸಚ್ಚಿಂತನೆಯನ್ನು ಆಲಿಸಿ ಅನುಷ್ಠಾನಕ್ಕೆ ತರುವ ಸಂಸ್ಕೃತಿ ನಮ್ಮದು. ಇದನ್ನೇ ಗುರು ಶಿಷ್ಯ ಪರಂಪರೆ ಎಂದು ಕರೆಯುತ್ತಾರೆ. ಆಚಾರ ವಿಚಾರ ಸಂಸ್ಕಾರ ಸಂಸ್ಕೃತಿಗಳು ನಿಂತ ನೀರಾಗದೆ  ನಿರಂತರವಾಗಿ ಪ್ರವಹಿಸಬೇಕು. ಇದು ದೇಶದ ಸನಾತನ ಸಂಸ್ಕೃತಿಯ ತಿರಳು ಭಾರತದ ಸಂಸ್ಕೃತಿ ಆದರಣಿಯ, ಅನುಕರನೀಯ ಮತ್ತು ಆದರ್ಶ ಪ್ರಾಯವಾಗಿದೆ. ಆದರ್ಶವನ್ನು ಅನುಸರಿಸಿದಾಗ ಅದು ಎಲ್ಲರಿಗೂ ಪಸರಿಸಿ ಉಳಿದು ಬೆಳೆಯುತ್ತದೆ ಎಂಬುದಾಗಿ ಎಂದರು.

ಯಜ್ಞ ಸಭೆಯ ವೇದಿಕೆಯಲ್ಲಿ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ  ಕುಲಾಧಿಪತಿಗಳು ಉಪಸ್ಥಿತರಿದ್ದು  ಪ್ರಾಸ್ತಾವಿಕ ಉಪನ್ಯಾಸವಿತ್ತು ಗಣ್ಯ ಅಥಿತಿಗಳನ್ನು ಸಭೆಗೆ ಪರಿಚಯಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ರವೀಂದ್ರ ಸಭಾ ವೇದಿಕೆಯಲ್ಲಿ  ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು.

ನವರಾತ್ರಿಯ ಏಳನೆಯ ದಿನವಾದ ಬುಧವಾರ ಜಗತ್ತಿನ ಶಾಂತಿ ಮತ್ತು ಕಲ್ಯಾಣವನ್ನು  ಗುರಿಯಾಗಿಸಿಕೊಂಡು ನಡೆಯುವ  ಕಾರ್ಯಕ್ರಮ ಇದಾಗಿರುವುದರಿಂದ ಅದರ ಅಧಿದೇವತೆಯಾದ ಮಾತೆ ಕಾಳರಾತ್ರಿಯನ್ನು ವಿಶೇಷವಾಗಿ ಆರಾಧಿಸಲಾಯಿತು.

ಇಂದಿನಿAದ ಮೊದಲ್ಗೊಂಡು ವಿಜಯ ದಶಮಿಯವರೆಗೆ ಲೋಕ ಕಲ್ಯಾಣಾರ್ಥವಾಗಿ  ನಡೆಯಲಿರುವ ಮಹಾರುದ್ರ ಯಾಗ ಚಾಲನೆ ಪಡೆಯಿತು.ವಿಶ್ವ ಶಾಂತಿಯನ್ನು ಬಯಸಿ ಮಹಾರುದ್ರನಿಗೆ  ನವ ವಿಧ ಸೇವೆಯನ್ನು ಅರ್ಪಿಸಿ ವಿಶ್ವಕ್ಕೆ ಶಾಂತಿಯನ್ನು ಕರುಣಿಸಬೇಕೆಂದು ಪ್ರಾರ್ಥಿಸಲಾಯಿತು, ಸಂಪ್ರದಾಯ ರೀತ್ಯಾ ದುರ್ಗಾಧಕರು  ದುರ್ಗಾಮಾತೆಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಮಾನವೀಯ ಕಳಕಳಿಯಿಂದ ಮನುಕುಲದ ಉದ್ದಾರಕ್ಕಾಗಿ ತನ್ನನ್ನು ತೊಡಗಿಸಿಕೊಂಡು ವಿಶ್ವಕ್ಕೆ ಮಾದರಿಯಾಗಿ ರುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರನ್ನು ಯಜ್ಞ ವೇದಿಕೆಯಲ್ಲಿ ಸಚಿವರು ಸನ್ಮಾನಿಸಿ ಗೌರವಿಸಿದರು.

ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಯಾಗ ಸಭಾ ಸದನದಲ್ಲಿ ಸಹಸ್ರಾರು ಮಂದಿ  ಭಾಗವಹಿಸಿ ಪುಣ್ಯಕ್ಕೆ  ಭಾಜನರಾದರು.