Friday, 1st November 2024

Vettaiyan Movie Review: ಮತ್ತೊಮ್ಮೆ ತೆರೆ ಮೇಲೆ ಅಬ್ಬರಿಸಿದ ರಜನಿಕಾಂತ್‌; ʼವೆಟ್ಟೈಯಾನ್‌ʼ ಚಿತ್ರ ಹೇಗಿದೆ?

Vettaiyan Movie Review

ಚೆನ್ನೈ: ತಲೈವಾ ರಜನಿಕಾಂತ್‌ (Rajinikanth) ಅಭಿಮಾನಿಗಳು ಬಹು ದಿನಗಳಿಂದ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ಮತ್ತು ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ (Amitabh Bachchan) ಬರೋಬ್ಬರಿ 33 ವರ್ಷಗಳ ಬಳಿಕ ತೆರೆ ಹಂಚಿಕೊಂಡಿರುವ ʼವೆಟ್ಟೈಯಾನ್‌ʼ (Vettaiyan) ಸಿನಿಮಾ ಬಿಡುಗಡೆಯಾಗಿದೆ. ಟಿ.ಜಿ.ಜ್ಞಾನವೇಲ್‌ (TG Gnanavel) ನಿರ್ದೇಶನದ ಈ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಕಂಡಿದ್ದು, ರಜನಿಕಾಂತ್‌ ಅಭಿಮಾನಿಗಳು ತಮ್ಮ ತಲೈವಾನನ್ನು ಬೆಳ್ಳಿ ಪರದೆ ಮೇಲೆ ಕಂಡು ಹುಚ್ಚೆದ್ದು ಕುಣಿದಿದ್ದಾರೆ. ಬೆಳಗ್ಗಿನಿಂದಲೇ ಹಲವೆಡೆ ಹೌಸ್‌ಫುಲ್‌ ಪ್ರದರ್ಶನ ಕಂಡ ʼವೆಟ್ಟೈಯಾನ್‌ʼನ ವಿಮರ್ಶೆ ಹೊರಬಿದ್ದಿದೆ. ಚಿತ್ರ ನೋಡಿದ ಅನೇಕರು ಎಕ್ಸ್‌ (ಹಿಂದಿನ ಟ್ವಿಟರ್‌) ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ (Vettaiyan Movie Review).

ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಅದ್ಧೂರಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ಫಹಾದ್‌ ಫಾಸಿಲ್‌, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್‌, ದುಶಾರಾ ವಿಜಯನ್‌, ರಾವ್‌ ರಮೇಶ್‌, ರೋಹಿಣಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲಿಯೂ ರಜನಿಕಾಂತ್‌, ಅಮಿತಾಭ್‌ ಬಚ್ಚನ್‌ ಮತ್ತು ಫಹಾದ್‌ ಫಾಸಿಲ್‌ ಜಿದ್ದಿಗೆ ಬಿದ್ದವರಂತೆ ನಟಿಸಿದ್ದು, ಅಭಿಮಾನಿಗಳು ಇವರ ಎಂಟ್ರಿಗೆ ಶಿಳ್ಳೆ ಹೊಡೆಯುತ್ತಿದ್ದಾರೆ.

ಹೇಗಿದೆ ಚಿತ್ರ?

ಬಹುತೇಕರು ರಜನಿಕಾಂತ್‌ ಅವರ ನಟನೆ, ಸ್ಟೈಲ್‌ ಅನ್ನು ಹೊಗಳಿದ್ದಾರೆ. ʼʼವೆಟ್ಟೈಯಾನ್‌ʼ ಮೊದಲಾರ್ಧ ʼಜೈಲರ್‌ʼ ಸಿನಿಮಾ ಥರನೇ ಇದೆ. ಚಿತ್ರಕಥೆ ಗಮನ ಸೆಳೆಯುತ್ತದೆ, ಫಹಾದ್‌ ಫಾಸಿಲ್‌ ನಟನೆ ಅದ್ಭುತ. ತಲೈವರ್‌ ರಜನಿಕಾಂತ್‌ ಚಿಂದಿ ಉಡಾಯಿಸಿದ್ದಾರೆʼʼ ಎಂದು ಒಬ್ಬರು ಬರೆದುಕೊಂಡಿದ್ದಾರೆ. ʼʼಅದ್ಭುತ ಚಿತ್ರ. ʼಜೈಲರ್‌ʼ ಸಿನಿಮಾದ ಕೊಲೆ ರಹಸ್ಯವನ್ನು ತನಿಖೆ ಮಾಡಿದರೆ ಏನಾಗಬಹುದು? ಅದುವೇ ʼವೆಟ್ಟೈಯಾನ್‌ʼ. ರಜನಿಕಾಂತ್‌, ಫಹಾದ್‌ ಫಾಸಿಲ್‌ ನಟನೆ ಚಿಂದಿʼʼ ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಕೆಲವರಂತೂ ದ್ವಿತಿಯಾರ್ದಕ್ಕಿಂತ ಮೊದಲಾರ್ದವೇ ಚೆನ್ನಾಗಿದೆ ಎಂದು ಅಬಿಪ್ರಾಯಪಟ್ಟಿದ್ದಾರೆ. ʼʼವೆಟ್ಟೈಯಾನ್‌ʼ ಚಿತ್ರವು ರಜನಿಕಾಂತ್‌ ಅಭಿಮಾನಿಗಳನ್ನು ಮಾತ್ರವಲ್ಲದೆ ಕುಟುಂಬವಾಗಿ ವೀಕ್ಷಿಸುವ ಎಲ್ಲರನ್ನೂ ತೃಪ್ತಿಪಡಿಸುತ್ತದೆ. ಮತ್ತೊಂದು ಬ್ಲಾಕ್‌ಬಸ್ಟರ್‌ಗೆ ಸಿದ್ಧರಾಗಿʼʼ ಎಂದು ಮತ್ತೊಬ್ಬರು ಹೇಳಿದ್ದಾರೆ.

ʼʼಇದು ಉತ್ತಮ ಕಥೆಯನ್ನು ಹೊಂದಿದೆ. ಆದಾಗ್ಯೂ ಚಿತ್ರಕಥೆ ನಿಧಾನವಾಗಿದೆ. ಮೊದಲಾರ್ಧ ಕ್ರೈಂ ಥ್ರಿಲ್ಲರ್ ಆದರೆ ದ್ವಿತೀಯಾರ್ಧವು ಡ್ರಾಮಾವಾಗಿ ಬದಲಾಗುತ್ತದೆ. ಆದರೆ ಮೊದಲಿನ ವೇಗವನ್ನು ಉಳಿಸಿಕೊಳ್ಳಲು ವಿಫಲವಾಗುತ್ತದೆ ಮತ್ತು ಒಂದು ಹಂತದ ನಂತರ ಉಪದೇಶ ಆರಂಭವಾಗಿ ಸಾಕ್ಷ್ಯಚಿತ್ರದಂತೆ ಭಾಸವಾಗುತ್ತದೆ. ಇದು ಅತ್ತ ಕಮರ್ಷಿಯಲ್‌ ಚಿತ್ರವೂ ಅಲ್ಲ ಇತ್ತ ಭಾವನಾತ್ಮಕ ಚಿತ್ರವೂ ಅಲ್ಲ. ಕೆಲವು ದೃಶ್ಯಗಳು ಮಾತ್ರ ಕಾಡುತ್ತವೆʼʼ ಎಂದು ಒಬ್ಬರು ದೀರ್ಘವಾಗಿ ಬರೆದುಕೊಂಡಿದ್ದಾರೆ.

ʼʼಜೈಲರ್‌ʼ ಸಿನಿಮಾಕ್ಕಿಂತ ಈ ಚಿತ್ರ ಚೆನ್ನಾಗಿದೆʼʼ ಎಂದಿದ್ದಾರೆ ಮತ್ತೊಬ್ಬರು. ʼʼಅನೀರಿಕ್ಷಿತ ತಿರುವಿನೊಂದಿಗೆ ಸಾಗುವ ಮೊದಲಾರ್ಧ ಚೆನ್ನಾಗಿದೆʼʼ ಎಂದಿದ್ದಾರೆ ಮಗದೊಬ್ಬರು. ʼʼಮೊದಲಾರ್ಧದ 20 ನಿಮಿಷ ರಜನಿಕಾಂತ್‌ ಮತ್ತು ಅವರ ಮಾಸ್‌ ಅವತಾರವನ್ನು ಕಣ್ತುಂಬಿಕೊಳ್ಳಬಹುದು. ಅರ್ಧ ಗಂಟೆಯ ನಂತರ ಕುತೂಹಲಭರಿತ ತನಿಖೆಯ ದೃಶ್ಯ ಆರಂಭವಾಗುತ್ತದೆ. ಅನಿರುದ್ಧ ರವಿಚಂದರ್‌ ಅವರ ಬಿಜಿಎಂ ಮತ್ತು ಸಂಗೀತ ಸೂಪರ್. ಭಾವತಾತ್ಮಕ ದೃಶ್ಯ ಕಾಡುತ್ತದೆ. ದುಶಾರಾ ಪಾತ್ರ ಕಥೆಗೆ ತಿರುವು ನೀಡುತ್ತದೆ. ಫಹಾದ್‌ ಫಾಸಿಲ್‌ ಪಾತ್ರ ಮಜವಾಗಿದೆ. ಕುತೂಹಲ ಮೂಡಿಸಿ ಮೊದಲಾರ್ಧ ಕೊನೆಯಾಗುತ್ತದೆʼʼ ಎಂದು ಅಭಿಮಾನಿಯೊಬ್ಬ ಬರೆದಿದ್ದಾರೆ. ಬಹುತೇಕರು ಬಿಜಿಎಂ, ಸಂಗೀತವನ್ನು ಮೆಚ್ಚಿದ್ದಾರೆ. ಅದರಲ್ಲಿಯೂ ʼಮನಸಿಲಾಯೋʼ ಹಾಡು ಹಲವರ ಗಮನ ಸೆಳೆದಿದೆ. ಒಟ್ಟಿನಲ್ಲಿ ಸಾಧಾರಣ ಪ್ರತಿಕ್ರಿಯೆ ಪಡೆದುಕೊಂಡಿದ್ದರೂ ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ದೂಳೆಬ್ಬಿಸಲಿದೆ ಎನ್ನುವ ಲೆಕ್ಕಾಚಾರವಿದೆ.

ಈ ಸುದ್ದಿಯನ್ನೂ ಓದಿ: Rajinikanth: ʼವೆಟ್ಟೈಯಾನ್ʼ ಚಿತ್ರಕ್ಕಾಗಿ ದಾಖಲೆಯ ಸಂಭಾವನೆ ಪಡೆದ ರಜನಿಕಾಂತ್‌; ಜೇಬಿಗಿಳಿಸಿದ್ದು ಎಷ್ಟು ಕೋಟಿ ರೂ.?