ಮುಂಬಯಿ: ಅಗಲಿದ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರತನ್ ಟಾಟಾ (Ratan Tata) ಅವರಿಗೆ ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್(Sachin Tendulkar) ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಭಾವುಕ ಶ್ರದ್ಧಾಂಜಲಿ ಹೇಳಿದ್ದಾರೆ. ರತನ್ ಟಾಟಾ ಜತೆಗಿನ ಫೋಟೊ ಹಂಚಿಕೊಂಡು ಸಚಿನ್ ಕಂಬನಿ ಮಿಡಿದಿದ್ದಾರೆ. ನಿಮ್ಮ ಆ ನಗು ಎಂದಿಗೂ ಶಾಶ್ವತ ಎಂದು ಬರೆದುಕೊಂಡಿದ್ದಾರೆ.
ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ರತನ್ ಟಾಟಾ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ತಡರಾತ್ರಿ ನಗರದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ರಕ್ತದೊತ್ತಡದಲ್ಲಿ ಕುಸಿತದ ಹಿನ್ನೆಲೆಯಲ್ಲಿ ತಪಾಸಣೆಗಾಗಿ ಸೋಮವಾರ ರತನ್ ಟಾಟಾ ಮುಂಬಯಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಉದ್ಯಮ ಕ್ಷೇತ್ರದ ಅದ್ವಿತೀಯ ಸಾಧನೆಗಾಗಿ ಅವರು 2000ದಲ್ಲಿ ಪದ್ಮಭೂಷಣ, 2008ರಲ್ಲಿ ಪದ್ಮವಿಭೂಷಣ ಪುರಸ್ಕಾರಗಳಿಂದ ಗೌರವಿಸಲ್ಪಟ್ಟಿದ್ದರು.
ಇದೇ ವರ್ಷದ ಮೇ ತಿಂಗಳಲ್ಲಿ ಸಚಿನ್ ಅವರು ರತನ್ ಟಾಟಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು. ಈ ಭೇಟಿಯ ಬಳಿಕ ಸಚಿನ್ ʼಭಾನುವಾರ ತುಂಬಾನೇ ಸ್ಮರಣೀಯವಾಗಿತ್ತು, ಏಕೆಂದರೆ ನನಗೆ ಜನಪ್ರಿಯ ಉದ್ಯಮಿ ರತನ್ ಟಾಟಾ ಅವರೊಂದಿಗೆ ಸಮಯ ಕಳೆಯಲು ಒಂದೊಳ್ಳೆಯ ಅವಕಾಶ ಸಿಕ್ಕಿತು. ನಾವು ಇಬ್ಬರು ಆಟೋಮೊಬೈಲ್‌ಗಳ ಬಗ್ಗೆ ನಮ್ಮ ಪರಸ್ಪರ ಪ್ರೀತಿ, ಸಮಾಜಕ್ಕೆ ಒಳ್ಳೆಯ ಕೆಲಸಗಳ ಬಗ್ಗೆ ನಮ್ಮ ಬದ್ಧತೆ, ವನ್ಯಜೀವಿ ಸಂರಕ್ಷಣೆಗಾಗಿ ಉತ್ಸಾಹ ಮತ್ತು ನಮ್ಮ ಇತರೆ ಸ್ನೇಹಿತರ ಬಗ್ಗೆ ಅನೇಕ ಕಥೆಗಳು ಮತ್ತು ಒಳನೋಟಗಳನ್ನು ಹಂಚಿಕೊಂಡಿದ್ದೇವೆ. ಈ ರೀತಿಯ ಸಂಭಾಷಣೆಗಳು ತುಂಬಾನೇ ಅಮೂಲ್ಯವಾದವು ಮತ್ತು ನಮ್ಮ ಭಾವೋದ್ರೇಕಗಳು ನಮ್ಮ ಜೀವನದಲ್ಲಿ ತರಬಹುದಾದ ಸಂತೋಷ ಮತ್ತು ಪ್ರಭಾವವನ್ನು ನಮಗೆ ನೆನಪಿಸುತ್ತವೆ. ಇದು ನಾನು ಯಾವಾಗಲೂ ನಗುವಿನೊಂದಿಗೆ ನೆನಪಿಸಿಕೊಳ್ಳುವ ದಿನವಾಗಿರುತ್ತದೆ” ಎಂದು ಬರೆದುಕೊಂಡಿದ್ದರು. ಅಂದು ಮಾಡಿದ ಈ ಪೋಸ್ಟ್ ಅನ್ನು ಸಚಿನ್ ಮತ್ತೆ ರೀ ಪೋಸ್ಟ್ ಮಾಡುವ ಮೂಲಕ ರತನ್ ಟಾಟಾ ಜತರೆ ಕಳೆದ ದಿನಗಳನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. ಸಚಿನ್ ಅವರು ರತನ್ ಟಾಟಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಕೂಡ ಪಡೆದಿದ್ದಾರೆ. ಈ ವಿಡಿಯೊ ಕೂಡ ವೈರಲ್ ಆಗಿದೆ.
ಇದನ್ನೂ ಓದಿ Ratan Tata Death: ರತನ್ ಟಾಟಾ ಕುರಿತು ತಿಳಿದುಕೊಳ್ಳಲೇ ಬೇಕಾದ ಸಂಗತಿಗಳಿವು
“ಅವರೊಂದಿಗೆ ಸಮಯ ಕಳೆಯುವ ಭಾಗ್ಯ ನನಗೆ ಸಿಕ್ಕಿತ್ತು, ಆದರೆ ಅವರನ್ನು ಭೇಟಿಯಾಗದ ಲಕ್ಷಾಂತರ ಜನರು ಇಂದು ನಾನು ಅನುಭವಿಸುವ ಅದೇ ದುಃಖವನ್ನು ಅನುಭವಿಸುತ್ತಾರೆ. ಏಕೆಂದರೆ ಅವರ ಪ್ರಭಾವವೇ ಹಾಗೆ. ಪ್ರಾಣಿಗಳ ಮೇಲಿನ ಪ್ರೀತಿಯಿಂದ ಲೋಕೋಪಕಾರದವರೆಗೆ, ತಮ್ಮನ್ನು ತಾವು ಕಾಳಜಿ ವಹಿಸುವ ಸಾಧನವಿಲ್ಲದವರನ್ನು ನಾವು ಕಾಳಜಿ ವಹಿಸಿದಾಗ ಮಾತ್ರ ನಿಜವಾದ ಪ್ರಗತಿಯನ್ನು ಸಾಧಿಸಬಹುದು ಎಂದು ಅವರು ತೋರಿಸಿದರು. ಶಾಂತಿಯಿಂದ ವಿಶ್ರಾಂತಿ ಪಡೆಯಿರಿ, ಶ್ರೀ ಟಾಟಾ. ನೀವು ನಿರ್ಮಿಸಿದ ಸಂಸ್ಥೆಗಳು ಮತ್ತು ನೀವು ಸ್ವೀಕರಿಸಿದ ಮೌಲ್ಯಗಳ ಮೂಲಕ ನಿಮ್ಮ ಪರಂಪರೆಯು ಮುಂದುವರಿಯುತ್ತದೆ” ಎಂದು ಸಚಿನ್ ಭಾವುಕ ಟ್ವೀಟ್ ಮಾಡಿದ್ದಾರೆ.