Friday, 22nd November 2024

ಬೆಂಗಳೂರಿನಲ್ಲಿ ಎಫ್‌-16 ಫೈಟರ್‌ ಜೆಟ್‌ ಹಾರಿಸಿದ್ದ ರತನ್‌ ಟಾಟಾ; 70 ವರ್ಷದಲ್ಲಿಯೂ ಕುಗ್ಗದ ಉತ್ಸಾಹ ನೋಡಿ ಬೆರಗಾಗಿತ್ತು ದೇಶ

Ratan Tata Death

ಮುಂಬೈ: ಭಾರತದ ಹೆಮ್ಮೆಯ ಉದ್ಯಮಿ ರತನ್‌ ಟಾಟಾ ನಿಧನ ಹೊಂದಿದ್ದಾರೆ (Ratan Tata Death). ಅನಾರೋಗ್ಯದ ಹಿನ್ನೆಲೆಯಲ್ಲಿ ಅಕ್ಟೋಬರ್‌ 6ರಂದು ಮುಂಬೈಯ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಅಕ್ಟೋಬರ್‌ 9ರಂದು ಕೊನೆಯುಸಿರೆಳೆದರು. ಅಂತಿಮ ದರ್ಶನಕ್ಕಾಗಿ ಅವರ ಪಾರ್ಥೀವ ಶರೀರವನ್ನು ದಕ್ಷಿಣ ಮುಂಬೈಯ ರಾಷ್ಟ್ರೀಯ ಲಲಿತಾ ಕಲಾ ಕೇಂದ್ರದಲ್ಲಿ ಇರಿಸಲಾಗಿದ್ದು, ಅಪರಾಹ್ನ 3.30ರವರೆಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಬಳಿಕ ಪಾರ್ಥೀವ ಶರೀರವನ್ನು ವರ್ಲಿ ಚಿತಾಗಾರಕ್ಕೆ ಕೊಂಡೊಯ್ದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಉದ್ಯಮದ ಹೊರತಾಗಿ ತಮ್ಮ ಕೊಡುಗೈ ದಾನದಿಂದಲೂ ಜನಪ್ರಿಯರಾಗಿರುವ ರತನ್‌ ಟಾಟಾ ಹಿಂದೊಮ್ಮೆ ಬೆಂಗಳೂರಿನಲ್ಲಿ ಎಫ್‌-16 ಫೈಟರ್‌ ಜೆಟ್‌ (F-16 Fighter Jet) ಹಾರಿಸಿ ಅಚ್ಚರಿ ಮೂಡಿಸಿದ್ದರು.

2007ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ವೈಮಾನಿಕ ಪ್ರದರ್ಶನ (Aero India Show) ಏರ್ಪಡಿಸಲಾಗಿತ್ತು. ಈ ವೇಳೆ ಯಾರೂ ಊಹಿಸದ ಅಚ್ಚರಿಯೊಂದು ಎದುರಾಯಿತು. 70 ವರ್ಷದ ರತನ್‌ ಟಾಟಾ ಅವರು ತಮ್ಮ ಇಳಿ ವಯಸ್ಸನ್ನೂ ಲೆಕ್ಕಿಸದೆ ಗಂಟೆಗೆ 2,000 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಚಲಿಸಬಲ್ಲ ಎಫ್‌-16 ಫೈಟರ್‌ ಜೆಟ್‌ ಅನ್ನು ಹಾರಿಸಿದ್ದರು. ಇದನ್ನು ಅಮೆರಿಕ ರಕ್ಷಣಾ ಗುತ್ತಿಗೆದಾರ ಲಾಕ್ಹೀಡ್ ಮಾರ್ಟಿನ್ (Lockheed Martin) ಕಮಾಂಡ್ ಮಾಡಿದ್ದರು. ರತನ್‌ ಟಾಟಾ ಸಹ-ಪೈಲಟ್ ಆಗಿದ್ದರು. ಈ ವಯಸ್ಸಿನಲ್ಲೂ ಚಿಮ್ಮುವ ಅವರ ಉತ್ಸಾಹ ನೋಡಿ ಅನೇಕರು ಬೆರಗಾಗಿದ್ದರು.

ಟಾಟಾ ಅವರು ಜೆಟ್ ಮತ್ತು ಹೆಲಿಕಾಪ್ಟರ್‌ಗಳನ್ನು ಹಾರಿಸಲು ಪರವಾನಗಿಗಳನ್ನು ಹೊಂದಿದ್ದರು. ಹೀಗಾಗಿ ಯುದ್ಧ ವಿಮಾನದ ಸಹ-ಪೈಲಟ್ ಮಾಡುವ ಅವಕಾಶವನ್ನು ಬಳಸಿಕೊಂಡರು. ಅನುಭವಿ ಲಾಕ್ಹೀಡ್ ಮಾರ್ಟಿನ್ ಮಾರ್ಗದರ್ಶನದಲ್ಲಿ ಅವರು ಅರ್ಧ ಗಂಟೆಗಳ ಕಾಲ ಜೆಟ್‌ ಅನ್ನು ಮುನ್ನಡೆಸಿದ್ದರು. 500 ಅಡಿಗಳಷ್ಟು ಎತ್ತರದಲ್ಲಿ ಹಾರಾಡಿದ್ದ ಅವರು ಬಳಿಕ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.

ಟಾಟಾ ಅವರಿಗೆ ಮಾರ್ಗದರ್ಶನ ನೀಡಿದ ಲಾಕ್ಹೀಡ್ ಮಾರ್ಟಿನ್ ಅವರು ಬಳಿಕ ಎನ್‌ಡಿಟಿವಿಯೊಂದಿಗೆ ಮಾತನಾಡಿ, ಈ ವೇಳೆ ಟಾಟಾ ಅವರು ಸಂಪೂರ್ಣವಾಗಿ ರೋಮಾಂಚನಗೊಂಡಿದ್ದರು ಎಂದು ಅನುಭವ ಹಂಚಿಕೊಂಡಿದ್ದರು. ಬಳಿಕ ಟಾಟಾ ಕಡೆಯಿಂದ ಲಾಕ್ಹೀಡ್ ಮಾರ್ಟಿನ್ ಅವರಿಗೆ ಎಫ್‌-16 ಫೈಟರ್‌ ಜೆಟ್‌ನ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಲಾಗಿತ್ತು. ಬಳಿಕ ಮತ್ತೊಮ್ಮೆ ಆಕಾಶದಲ್ಲಿ ಹಾರಿದ್ದರು. 2011ರಲ್ಲಿ ಅವರು ಬೋಯಿಂಗ್‌ ಎಫ್ -18 ಸೂಪರ್ ಹಾರ್ನೆಟ್‌ನಲ್ಲಿ ಸಂಚರಿಸಿದ್ದರು. ಎಫ್ -16ಗಿಂತ ದೊಡ್ಡದಾದ ಮತ್ತು ಹೆಚ್ಚು ಶಕ್ತಿಶಾಲಿಯಾದ ಎಫ್ -18ರಲ್ಲಿ ಹಾರಾಟ ನಡೆಸುವುದು ಕೂಡ ಟಾಟಾ ಅವರ ಕನಸಾಗಿತ್ತು.

ಈ ಸುದ್ದಿಯನ್ನೂ ಓದಿ: Ratan Tata Death: ರತನ್‌ ಟಾಟಾ ಕುರಿತು ತಿಳಿದುಕೊಳ್ಳಲೇ ಬೇಕಾದ ಸಂಗತಿಗಳಿವು

ರತನ್ ಟಾಟಾ ಸಾಮ್ರಾಜ್ಯದ ಉತ್ತರಾಧಿಕಾರಿ ಯಾರು?

ರತನ್‌ ಟಾಟಾ ಅವರ ಸೋದರ ಸೊಸೆ ಮಾಯಾ ಟಾಟಾ (Maya Tata) ಅವರು ಭಾರತದ ಅತ್ಯಂತ ಪ್ರತಿಷ್ಠಿತ ವ್ಯಾಪಾರ ಸಾಮ್ರಾಜ್ಯಗಳಲ್ಲಿ ಒಂದಾದ ಟಾಟಾ ಗ್ರೂಪ್‌ನ ಪರಂಪರೆಯನ್ನು ಮುಂದುವರಿಸಲಿದ್ದಾರೆ ಎನ್ನಲಾಗಿದೆ. ಕೇವಲ 34ನೇ ವಯಸ್ಸಿನಲ್ಲೇ ಈಗಾಗಲೇ ಟಾಟಾ ಗ್ರೂಪ್‌ನಲ್ಲಿ ಗಮನಾರ್ಹ ಕೆರಿಯರ್‌ ಎತ್ತರಕ್ಕೆ ಏರಿರುವವರು ಮಾಯಾ. ಸಂಸ್ಥೆಯ ಭವಿಷ್ಯವನ್ನು ಇವರು ಕಾಪಾಡಬಲ್ಲರು ಎಂಬುದು ಟಾಟಾ ಕುಟುಂಬದ ಅಭಿಮತ.