ಬೆಳಗಾವಿ: ಚಿತ್ರದುರ್ಗದ ರೇಣುಕಾಸ್ವಾಮಿ (Renuka swamy murder case) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ (Actor Darshan) ಗ್ಯಾಂಗ್‌ನ 14ನೇ ಆರೋಪಿ ಪ್ರದೋಷ್‌ನನ್ನು ಬೆಳಗಾವಿ ಜೈಲಿನಿಂದ ಬೆಂಗಳೂರಿಗೆ (Bengaluru news) ಶಿಫ್ಟ್ ಮಾಡಲಾಗಿದೆ. ಆದರೆ ದರ್ಶನ್‌ಗೆ ಸದ್ಯಕ್ಕೆ ಬಳ್ಳಾರಿ ಜೈಲೇ ಗತಿಯಾಗಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಿನ್ನೆ ಬಿಗಿ ಭದ್ರತೆಯಲ್ಲಿ ಪೊಲೀಸರು ಪ್ರದೋಷ್‌ನನ್ನು ಶಿಫ್ಟ್ ಮಾಡಿದ್ದಾರೆ. ಆಗಸ್ಟ್ 28 ರಂದು ಬೆಳಗಾವಿ ಹಿಂಡಲಗಾ ಜೈಲಿಗೆ ಆರೋಪಿಯನ್ನು ಕರೆ ತರಲಾಗಿತ್ತು. 44 ದಿನಗಳ ಬಳಿಕ ಮತ್ತೆ ಪರಪ್ಪನ ಅಗ್ರಹಾರಕ್ಕೆ ಪ್ರದೋಷ್‌ನನ್ನು ಶಿಫ್ಟ್ ಮಾಡಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ ವಿಚಾರವಾಗಿ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ದರ್ಶನ್ ಸೇರಿ ಹಲವರನ್ನು ರಾಜ್ಯದ ವಿವಿಧ ಜೈಲಿಗೆ ಶಿಫ್ಟ್ ಮಾಡಿದ್ದ ಪೊಲೀಸರು ಪ್ರದೋಷ್‌ನನ್ನು ಬೆಳಗಾವಿಗೆ ಶಿಫ್ಟ್ ಮಾಡಿದ್ದರು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಸಿಗರೇಟ್ ಸೇದುತ್ತಾ ಕಾಫಿ ಕುಡಿಯುತ್ತಿದ್ದ ಫೋಟೋಗಳು ಜೈಲಿನಿಂದ ಲೀಕ್ ಆಗಿದ್ದವು. ಇದು ವೈರಲ್ ಆದ ಹಿನ್ನೆಲೆಯಲ್ಲಿ ಪ್ರಕರಣದ ಎಲ್ಲ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಶಿಫ್ಟ್ ಮಾಡಲಾಗಿತ್ತು. ಅದರಂತೆ ಪ್ರದೋಷ್‌ನನ್ನು ಬೆಳಗಾವಿ ಜೈಲಿಗೆ ಕಳುಹಿಸಲಾಗಿತ್ತು.
ತನ್ನನ್ನು ಮತ್ತೆ ಬೆಂಗಳೂರಿನ ಜೈಲಿಗೆ ಶಿಫ್ಟ್ ಮಾಡಿ ಎಂದು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಪ್ರದೋಷ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಆರೋಪಿಯನ್ನು ವಾಪಸ್ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡುವಂತೆ ಆದೇಶ ಬಂದಿತ್ತು. ನ್ಯಾ. ಎಂ ನಾಗಪ್ರಸನ್ನ ಅವರ ಪೀಠದಿಂದ ಆದೇಶ ಬಂದಿದ್ದು, 24ನೇ ಎಸಿಎಂಎಂ ಆದೇಶ ಪ್ರಶ್ನಿಸಿ ಪ್ರದೋಷ್ ಕಡೆಯ ವಕೀಲರು ಅರ್ಜಿ ಸಲ್ಲಿಸಿದ್ದರು. ಜೈಲಿನಲ್ಲಿ ದರ್ಶನ್ ಜೊತೆ ಪ್ರದೂಷ್ ಕಾಣಿಸಿಕೊಂಡಿಲ್ಲ. ಕಠಿಣ ಸಂದರ್ಭಗಳಲ್ಲಿ ಮಾತ್ರ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಬಹುದು ಎಂದು ಪ್ರದೋಷ್ ಪರ ವಕೀಲರು ವಾದ ಮಾಡಿದ್ದರು.
ಅರ್ಜಿ ವಿಚಾರಣೆ ನಡೆಸಿ ವಾಪಸ್ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡುವಂತೆ ಆದೇಶ ನೀಡಲಾಗಿದೆ. ಈ ಆದೇಶ ಪ್ರದೋಷ್ಗೆ ಮಾತ್ರ ಅನ್ವಯ, ಬೇರೆ ಆರೋಪಿಗಳಿಗೆ ಅನ್ವಯವಾಗಲ್ಲ ಎಂದು ಆದೇಶ ನೀಡಲಾಗಿದೆ.
ಇದನ್ನೂ ಓದಿ: Actor Darshan: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ; ನಾಳೆಯಾದ್ರೂ ಸಿಗುತ್ತಾ ಬೇಲ್?