ಮುಂಬಯಿ: ಲೋಕಪ್ರಿಯ ಉದ್ಯಮಿ ರತನ್ ಟಾಟಾ (Ratan Tata Death, Ratan Tata passed away) ಅವರ ಅಂತ್ಯಸಂಸ್ಕಾರ ಅವರ ಎಲ್ಲ ಕುಟುಂಬಸ್ಥರು, ಉದ್ಯಮಬಂಧುಗಳ ಸಮ್ಮುಖದಲ್ಲಿ ನಡೆಯಲಿದೆ. ಆದರೆ ಟಾಟಾ ಸೇರಿರುವ ಪಾರ್ಸಿ ಧರ್ಮದಲ್ಲಿ ಹಿಂದೂ ವಿಧಾನದಂತೆ ಶವದ ದಹನ ಅಥವಾ ದಫನ ಮಾಡುವುದಿಲ್ಲ. ಇನ್ನೊಂದು ರೀತಿಯ ವಿಶಿಷ್ಟ ವಿಧಾನದಲ್ಲಿ ಸಂಸ್ಕಾರ ಮಾಡಲಾಗುತ್ತೆ.
ಪಾರ್ಸಿಗಳು, ಝೋರಾಸ್ಟ್ರಿಯನ್ ಧರ್ಮದ ಅನುಯಾಯಿಗಳು. ಸಾಂಪ್ರದಾಯಿಕವಾಗಿ ಇವರು “ದೋಖ್ಮೆನಾಶಿನಿ” ಅಥವಾ “ಟವರ್ ಆಫ್ ಸೈಲೆನ್ಸ್” ಎಂಬ ವಿಶಿಷ್ಟ ರೀತಿಯ ಅಂತ್ಯಕ್ರಿಯೆಯ ವಿಧಿ ಇವರಲ್ಲಿ ರೂಢಿ. ಈ ಆಚರಣೆಯಲ್ಲಿ ದೇಹಗಳನ್ನು ಹೂಳಲಾಗುವುದಿಲ್ಲ ಅಥವಾ ಸುಡುವುದಿಲ್ಲ. ಬದಲಾಗಿ, ಶವವನ್ನು ಟವರ್ ಆಫ್ ಸೈಲೆನ್ಸ್ (ದಖ್ಮಾ) ಎಂದು ಕರೆಯಲ್ಪಡುವ ರಚನೆಯ ಮೇಲೆ ಇರಿಸಲಾಗುತ್ತದೆ. ಅಲ್ಲಿ ದೇಹವನ್ನು ರಣಹದ್ದುಗಳು ಮತ್ತಿತರ ಪಕ್ಷಿಗಳು ತಿನ್ನುತ್ತವೆ. ಈ ಪ್ರಾಚೀನ ಸಂಪ್ರದಾಯ ಝೋರಾಸ್ಟ್ರಿಯನ್ ನಂಬಿಕೆಯಲ್ಲಿ ಬೇರೂರಿದೆ. ಬೆಂಕಿ ಮತ್ತು ಭೂಮಿ ಎರಡೂ ಪವಿತ್ರ. ಮೃತ ದೇಹಗಳ ಸಂಪರ್ಕದಿಂದ ಈ ಎರಡೂ ಕಲುಷಿತವಾಗಬಾರದು ಎಂಬುದು ಇವರ ನಂಬಿಕೆ.
ಮೊದಲು ಧಾರ್ಮಿಕ ಪ್ರಾರ್ಥನೆಗಳು ಮತ್ತು ಶವದ ಶುದ್ಧೀಕರಣ ನಡೆಯುತ್ತದೆ. ನಂತರ ದೇಹವನ್ನು “ನಾಸ್ಸೆಸಲರ್ಸ್” ಎಂದು ಕರೆಯಲ್ಪಡುವವರು ದಖ್ಮಾಗೆ ಒಯ್ಯುತ್ತಾರೆ. ದೇಹವನ್ನು ಹೀಗೆ ಪ್ರಕೃತಿಗೆ ಒಡ್ಡುವುದರಿಂದ, ಅದು ಪರಿಸರ ಸ್ನೇಹಿ ರೀತಿಯಲ್ಲಿ ಪಂಚಭೂತಗಳೊಂದಿಗೆ ಒಂದಾಗುತ್ತದೆ. ಮಾಂಸವನ್ನು ಹದ್ದುಗಳು ತಿನ್ನುತ್ತವೆ. ಮೂಳೆಗಳು ಇಲ್ಲಿನ ಗೋಪುರದೊಳಗಿನ ಕೇಂದ್ರ ಬಾವಿಗೆ ಬೀಳುತ್ತವೆ. ಆದರೆ ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ರಣಹದ್ದುಗಳ ಜನಸಂಖ್ಯೆಯ ಕುಸಿತದಿಂದಾಗಿ, ಶವದ ವಿಘಟನೆಯ ಪ್ರಕ್ರಿಯೆಯನ್ನು ವೇಗಗೊಳಿಸಲು ಸೌರ ಸಾಂದ್ರಕಗಳನ್ನು ಬಳಸುವುದು ಸೇರಿದಂತೆ ಆಧುನಿಕ ರೂಪಾಂತರಗಳನ್ನು ಮಾಡಲಾಗಿದೆ.
ಪಾರ್ಸಿಗಳು ಮರಣದಿಂದ ಭೌತಿಕ ದೇಹ ಮಲಿನವಾಗುತ್ತದೆ ಎಂದು ನಂಬುತ್ತಾರೆ. ಈ ಆಚರಣೆಯು ನೈಸರ್ಗಿಕ ಅಂಶಗಳನ್ನು ಸಂರಕ್ಷಿಸುತ್ತದೆ ಎನ್ನುತ್ತಾರೆ. ಈ ಪದ್ಧತಿಯನ್ನು ಇನ್ನೂ ಸಾಂಪ್ರದಾಯಿಕ ಪಾರ್ಸಿಗಳು ಅನುಸರಿಸುತ್ತಾರೆ. ಆದರೆ ಇದರ ಪ್ರಾಯೋಗಿಕ ಮತ್ತು ಪರಿಸರೀಯ ಸವಾಲುಗಳಿಂದಾಗಿ ಕೆಲವು ಕುಟುಂಬಗಳು ಈಗ ದಹನವನ್ನು ಆರಿಸಿಕೊಳ್ಳುತ್ತಿದ್ದಾರೆ. 1990ರ ನಂತರ, ರಣಹದ್ದುಗಳ ಸಂಖ್ಯೆಯಲ್ಲಿ ಇಳಿಮುಖವಾದ ಬಳಿಕ ಅನೇಕರು ವಿದ್ಯುತ್ ಚಿತಾಗಾರವನ್ನು ಬಳಸಲು ಪ್ರಾರಂಭಿಸಿದರು.
ಝೋರೊಸ್ಟ್ರಿಯನ್ ಧರ್ಮದಲ್ಲಿ, ಜೀವನವನ್ನು ಅಹುರಮಜ್ದಾ ಎಂಬ ಬೆಳಕನ್ನು ಪ್ರತಿನಿಧಿಸುವ ದೇವರಾಜ ಮತ್ತು ಅಹ್ರಿಮಾನ್ ಎಂಬ ಕತ್ತಲೆಯ ದೇವತೆಯ ನಡುವಿನ ನಿರಂತರ ಯುದ್ಧವಾಗಿ ನೋಡಲಾಗುತ್ತದೆ. ಒಬ್ಬ ವ್ಯಕ್ತಿ ಸತ್ತಾಗ ಅವರು ಇನ್ನು ಮುಂದೆ ಈ ಹೋರಾಟಕ್ಕೆ ಕೊಡುಗೆ ನೀಡಲು ಸಾಧ್ಯವಾಗುವುದಿಲ್ಲ. ಅವರ ದೇಹವನ್ನು ಕತ್ತಲಿನ ಪಡೆಗಳು ಪಡೆದಿವೆ ಎಂದು ಪರಿಗಣಿಸಲಾಗುತ್ತದೆ. ಈ ನಂಬಿಕೆಯು ಜೊರಾಸ್ಟ್ರಿಯನ್ ಸಾವಿನ ವಿಧಾನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಝೋರಾಸ್ಟ್ರಿಯನ್ ತತ್ವಶಾಸ್ತ್ರದಲ್ಲಿ ಬೆಂಕಿ, ಭೂಮಿ ಮತ್ತು ನೀರಿನ ಅಂಶಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಸತ್ತ ದೇಹದಲ್ಲಿನ ಕತ್ತಲೆಯು ಈ ಅಂಶಗಳನ್ನು ಕಲುಷಿತಗೊಳಿಸಬಹುದು. ಈ ಕಾರಣಕ್ಕಾಗಿ ಶವಗಳನ್ನು ಸಮಾಧಿ ಅಥವಾ ನೀರಿನಲ್ಲಿ ವಿಲೇವಾರಿ ಮಾಡುವುದನ್ನು ವಿರೋಧಿಸಲಾಗುತ್ತದೆ. ಬದಲಾಗಿ ಪಾರ್ಸಿಗಳು ಶವಗಳನ್ನು “ದಖ್ಮಾ” (ಮೌನದ ಗೋಪುರ) ದಲ್ಲಿ ಇರಿಸುತ್ತಾರೆ. ಅಲ್ಲಿ ದೇಹವನ್ನು ನೈಸರ್ಗಿಕವಾಗಿ ರಣಹದ್ದುಗಳು ತಿನ್ನುತ್ತವೆ ಅಥವಾ ಪ್ರಕೃತಿಯ ಶಕ್ತಿಗಳಿಂದ ಅವು ಕೊಳೆಯಬಹುದು.
ದೇಹವನ್ನು ರಣಹದ್ದುಗಳು ಸೇವಿಸುವಂತೆ ಮಾಡಿದರೆ ಇತರ ಜೀವಿಗಳಿಗೆ ದೇಹಪೋಷಣೆ ನೀಡಿದಂತೆ. ಇದು ವ್ಯಕ್ತಿ ಮಾಡಬಹುದಾದ ಅಂತಿಮ ದಾನ. ಈ ರೂಢಿಯು ಪ್ರಕೃತಿಯ ಮೇಲಿನ ಝೋರಾಸ್ಟ್ರಿಯನ್ ಗೌರವವನ್ನು ಮತ್ತು ಸಾವಿನ ನಂತರವೂ ಶುದ್ಧತೆಯನ್ನು ಕಾಪಾಡಿಕೊಳ್ಳುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.
ಇದನ್ನೂ ಓದಿ: Ratan Tata Death: ಪರೋಪಕಾರ ಕಲಿತಿದ್ದೇ ಟಾಟಾ ಕುಟುಂಬದಿಂದ; ಸುಧಾ ಮೂರ್ತಿ ಭಾವುಕ ನುಡಿ