ಬೆಂಗಳೂರು: ಜನಪ್ರಿಯ ಟಿವಿ ವಾಹಿನಿ ಉದಯ ಟಿವಿಯ (Udaya TV Kannada) ಮುಖ್ಯಸ್ಥ ಹಾಗೂ ಸಿನಿಮಾ ನಿರ್ಮಾಪಕರಾದ ಸೆಲ್ವಂ ಅವರು ಇಂದು ಬೆಳಗ್ಗೆ ಬೆಂಗಳೂರಿನ ಸ್ವಗೃಹದಲ್ಲಿ ಹೃದಯಾಘಾತದಿಂದ (heart Failure) ನಿಧನರಾಗಿದ್ದಾರೆ. ಸೆಲ್ವಂ ಅವರಿಗೆ 84 ವರ್ಷ ವಯಸ್ಸಾಗಿತ್ತು.
ನಾಳೆ ಚೆನ್ನೈಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸೆಲ್ವಂ ಅವರು ಸನ್ ಟಿವಿ ಸಂಸ್ಥೆಯ ಕನ್ನಡದ ಜನಪ್ರಿಯ ಮನರಂಜನಾ ವಾಹಿನಿಯಾದ ಉದಯ ಟಿವಿ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಇದಕ್ಕೂ ಮುನ್ನ ತಮಿಳಿನ ಮುರಸೋಳಿ, ದಿನಕರನ್ ಪತ್ರಿಕೆಗಳಲ್ಲಿ ಅವರು ಸಂಪಾದಕರಾಗಿದ್ದರು.
1994ರ ಜೂನ್ನಲ್ಲಿ ಉದಯ ಟಿವಿ ಸ್ಥಾಪನೆಯಾಗಿತ್ತು. ತಮಿಳುನಾಡಿನ ಚೆನ್ನೈನಲ್ಲಿ ಇದು ಪ್ರಸಾರ ಆರಂಭಿಸಿತ್ತು. ಇದನ್ನು ಸನ್ ಟಿವಿಯ ಅಧ್ಯಕ್ಷರಾದ ಕಲಾನಿಧಿ ಮಾರನ್ ಪ್ರಾರಂಭಿಸಿದರು. ಇದು ಕನ್ನಡದಲ್ಲಿ ಪ್ರಸಾರ ಆರಂಭಿಸಿದ ಮೊದಲ ಉಪಗ್ರಹ ವಾಹಿನಿ ಎಂಬ ಹೆಗ್ಗಳಿಕೆ ಹೊಂದಿದೆ.
ವೇಗವಾಗಿ ಬೆಳೆದ ಉದುಯ, 2000ರ ಮೇ ಹೊತ್ತಿಗೆ ಕರ್ನಾಟಕದ ಟಿವಿ ವಲಯದ 70% ಆದಾಯ ಹೊಂದಿತ್ತು. 2001ರಲ್ಲಿ ಅತ್ಯುತ್ತಮ ಕನ್ನಡ ಟಿವಿ ಚಾನೆಲ್ ಎಂದು ಇಂಡಿಯನ್ ಟೆಲಿವಿಷನ್ ಅಕಾಡೆಮಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. 2004ರವರೆಗೆ ಇದು ಉಚಿತ ಪ್ರಸಾರದ ಚಾನಲ್ ಆಗಿತ್ತು. ನಂತರ ಪಾವತಿ ಚಾನೆಲ್ ಆಗಿ ಮಾಡಲಾಯಿತು.
ಕಲಾನಿಧಿ ಮಾರನ್, ಎಸ್. ಸೆಲ್ವಂ ಮತ್ತು ಕಾವೇರಿ ಕಲಾನಿಧಿ ಇವರು ಉದಯ ಟಿವಿಯ ನಿರ್ದೇಶಕರಾಗಿದ್ದರು. ಎಸ್.ಸೆಲ್ವಂ ಅವರು ಉದಯ ಟಿವಿಯ ಬೆಂಗಳೂರು ಬ್ಯೂರೋದ ನಿರ್ದೇಶಕರೂ ಆಗಿದ್ದರು. ನವೆಂಬರ್ 2006ರಲ್ಲಿ ಅದರ ಮಾಲೀಕ ಕಲಾನಿಧಿ ಮಾರನ್, ಉದಯ ಟಿವಿ ಲಿಮಿಟೆಡ್ ಅನ್ನು ಸನ್ ಟಿವಿ ನೆಟ್ವರ್ಕ್ ಹಾಗೂ ಜೆಮಿನಿ ಟಿವಿ ಲಿಮಿಟೆಡ್ ಜೊತೆಗೆ ಸನ್ ಟಿವಿ ನೆಟ್ವರ್ಕ್ನಲ್ಲಿ ವಿಲೀನಗೊಳಿಸಿದರು.
ಇದನ್ನೂ ಓದಿ: Ratan Tata Death: ರತನ್ ಟಾಟಾ ಅಂತ್ಯಕ್ರಿಯೆ ಹೇಗೆ ನಡೆಯುತ್ತೆ? ಪಾರ್ಸಿಗಳ ಅಂತ್ಯಸಂಸ್ಕಾರ ವಿಧಾನವೇ ವಿಭಿನ್ನ!