Wednesday, 23rd October 2024

Ratan Tata Death: ಭಾರತ ರತ್ನ ಪ್ರಶಸ್ತಿಗೆ ಮಹಾರಾಷ್ಟ್ರ ಸರ್ಕಾರದಿಂದ ರತನ್‌ ಟಾಟಾ ಹೆಸರು ಪ್ರಸ್ತಾವ

Ratan Tata Death

ಮುಂಬೈ: ನಿಧನ ಹೊಂದಿರುವ ಕೈಗಾರಿಕೋದ್ಯಮಿ, ಟಾಟಾ ಗ್ರೂಪ್‌ನ ಮುಖ್ಯಸ್ಥರಾಗಿದ್ದ ರತನ್‌ ಟಾಟಾ ಅವರ ಹೆಸರನ್ನು ದೇಶದ ಅತ್ಯುನ್ನತ ಭಾರತ ರತ್ನ (Bharat Ratna) ಪ್ರಶಸ್ತಿಗೆ ಪ್ರಸ್ತಾವಿಸಲು ಮಹಾರಾಷ್ಟ್ರ ಸರ್ಕಾರ ಇಂದು ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಿದೆ. ಜತೆಗೆ ಟಾಟಾ ಅವರಿಗೆ ಸಂತಾಪ ಸೂಚಿಸುವ ಪ್ರಸ್ತಾವನೆಯನ್ನೂ ಅಂಗೀಕರಿಸಿದೆ. ರತನ್ ಟಾಟಾ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲು ಇರಿಸಲಾಗಿರುವ ಮುಂಬೈಯ ಎನ್‌ಸಿಪಿಎಗೆ ಎಲ್ಲ ಪಕ್ಷಗಳ ನಾಯಕರು ತೆರಳಿ ಅಂತಿಮ ನಮನ ಸಲ್ಲಿಸಿದ್ದಾರೆ (Ratan Tata Death).

ʼʼಸಂಪುಟ ಸಭೆಯಲ್ಲಿ ಸಂತಾಪ ಸೂಚಕ ನಿರ್ಣಯವನ್ನು ಅಂಗೀಕರಿಸಲಾಯಿತು. ಕೈಗಾರಿಕೋದ್ಯಮಿ ದಿವಂಗತ ರತನ್ ಟಾಟಾ ಅವರಿಗೆ ಭಾರತ ರತ್ನ ನೀಡಬೇಕೆಂದು ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನೂ ಸಂಪುಟ ಅಂಗೀಕರಿಸಿತುʼʼ ಎಂದು ಮೂಲಗಳು ತಿಳಿಸಿವೆ. ಟಾಟಾ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ ಪದ್ಮ ವಿಭೂಷಣ, ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮ ಭೂಷಣ ಪ್ರಶಸ್ತಿಯನ್ನು ಈಗಾಗಲೇ ನೀಡಲಾಗಿದೆ.

ಉದ್ಯಮಶೀಲತೆಯು ಸಮಾಜದ ಬೆಳವಣಿಗೆಗೆ ಪರಿಣಾಮಕಾರಿ ಮಾರ್ಗ. ಹೊಸ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ದೇಶವನ್ನು ಪ್ರಗತಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯಬಹುದುʼʼ ಎಂದು ನಿರ್ಣಯದ ವೇಳೆ ಅಭಿಪ್ರಾಯಪಡಲಾಗಿದೆ. ʼʼದೇಶ ಮತ್ತು ಸಮಾಜಕ್ಕೆ ಬದ್ಧರಾಗಿದ್ದ ದೂರದೃಷ್ಟಿಯ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಕೈಗಾರಿಕಾ ವಲಯ ಮತ್ತು ಸಮಾಜದ ಉನ್ನತಿಯಲ್ಲಿ ಟಾಟಾ ಅವರ ಪಾತ್ರಕ್ಕೆ ಸಾಟಿಯಿಲ್ಲ. ಉನ್ನತ ನೈತಿಕತೆ, ಪಾರದರ್ಶಕ ಮತ್ತು ಸ್ವಚ್ಛ ವ್ಯವಹಾರ ಆಡಳಿತವನ್ನು ಶಿಸ್ತಿನಿಂದ ಅನುಸರಿಸುವ ಮೂಲಕ ಅವರು ಎಲ್ಲ ಸವಾಲುಗಳನ್ನು ನಿಭಾಯಿಸಿದರು” ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ರತನ್‌ ಟಾಟಾ ದಂತಕಥೆಯಾಗಿದ್ದರು: ಎಲ್‌.ಕೆ. ಅಡ್ವಾಣಿ

ʼʼಟಾಟಾ ಅವರು ಭಾರತೀಯ ಉದ್ಯಮದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರು ನಿಜವಾಗಿಯೂ ಸ್ಫೂರ್ತಿ. ಅವರೊಂದಿಗೆ ಹಲವು ಸಂದರ್ಭಗಳಲ್ಲಿ ಸಂವಹನ ನಡೆಸಲು ನನಗೆ ಅವಕಾಶ ಸಿಕ್ಕಿತುʼʼ ಎಂದು ಬಿಜೆಪಿ ನಾಯಕ ಎಲ್‌.ಕೆ. ಅಡ್ವಾಣಿ ಸ್ಮರಿಸಿಕೊಂಡಿದ್ದಾರೆ. “ರಾಷ್ಟ್ರವು ರತನ್ ಟಾಟಾ ಅವರಿಗೆ ಋಣಿಯಾಗಿ ಉಳಿಯುತ್ತದೆ – ಅವರು ನಿಜವಾಗಿಯೂ ದಂತಕಥೆಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳುʼʼ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಟಾಟಾ ಗ್ರೂಪ್‌ ಅಧ್ಯಕ್ಷರಾಗಿ ಸುಮಾರು ಎರಡೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ ರತನ್‌ ಟಾಟಾ, 2012ರಲ್ಲಿ ತಮ್ಮ 75ನೇ ಜನ್ಮದಿನದಂದೇ ನಿವೃತ್ತಿ ಹೊಂದಿದ್ದರು. ರತನ್ ಟಾಟಾ ಅವರು 1937ರ ಡಿಸೆಂಬರ್ 28ರಂದು ಜನಿಸಿದರು. ಉದ್ಯಮದ ಹೊರತಾಗಿ ಅವರು ತಮ್ಮ ಸಾಮಾಜಿಕ ಕಾರ್ಯಗಳಿಂದಲೂ ಚಿರಪರಿಚಿತರಾಗಿದ್ದಾರೆ. ರತನ್‌ ಟಾಟಾ ಅವರು 1990ರಿಂದ 2012ರವರೆಗೆ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದರು. 2016ರ ಅಕ್ಟೋಬರ್‌ನಿಂದ 2017ರ ಫೆಬ್ರವರಿ ತನಕ ಮಧ್ಯಂತರ ಅಧ್ಯಕ್ಷರಾಗಿದ್ದರು. ಟಾಟಾ ಗ್ರೂಪ್‌ನ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷರಾಗಿ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಸ್ಟಾರ್ಟ್‌ ಅಪ್‌ಗಳಿಗೂ ಉತ್ತೇಜನ ನೀಡುವ ಅವರು ಇದುವರೆಗೆ ಸುಮಾರು 30ಕ್ಕೂ ಅಧಿಕ ಸ್ಟಾರ್ಟ್‌ ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Ratan Tata Death: ರತನ್‌ ಟಾಟಾ ಅಂತ್ಯಕ್ರಿಯೆ ಹೇಗೆ ನಡೆಯುತ್ತೆ? ಪಾರ್ಸಿಗಳ ಅಂತ್ಯಸಂಸ್ಕಾರ ವಿಧಾನವೇ ವಿಭಿನ್ನ!