ಪ್ಯಾರಿಸ್: ಕ್ಲೇ ಕೋರ್ಟ್ ಕಿಂಗ್, 22 ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ರಫೆಲ್ ನಡಾಲ್(Rafael Nadal) ತಮ್ಮ ಟೆನಿಸ್ ವೃತ್ತಿ ಬದುಕಿಗೆ ತೆರೆ ಎಳೆಯಲು ನಿರ್ಧರಿಸಿದ್ದಾರೆ. 38 ವರ್ಷದ ನಡಾಲ್ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ನಿವೃತ್ತಿ ಘೋಷಿಸಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ದೀರ್ಘ ಸಮಯದಿಂದ ಟೆನಿಸ್ ಅಂಗಣದಿಂದ ಹೊರಗುಳಿದಿದ್ದ ನಡಾಲ್ ಹಲವು ಬಾರಿ ಕಮ್ಬ್ಯಾಕ್ ಮಾಡುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ನವೆಂಬರ್ 8 ರಿಂದ ಆರಂಭವಾಗುವ ಡೆವಿಸ್ ಕಪ್ ಅವರ ಪಾಲಿಗೆ ಕೊನೆಯ ಟೂರ್ನಿಯಾಗಿದೆ.
“ನಾನು ವೃತ್ತಿಪರ ಟೆನಿಸ್ನಿಂದ ನಿವೃತ್ತಿಯಾಗುತ್ತಿದ್ದೇನೆ. ನಾನೇ ನನಗೊಂದು ಅವಕಾಶ ನೀಡಲು ಹಲವು ಬಾರಿ ಪ್ರಯತ್ನಿಸಿದೆ ಆದರೆ, ಇದಕ್ಕೆ ನನ್ನ ದೇಹ ಸ್ಪಂದಿಸಲಿಲ್ಲ. ಕಳೆದ 2 ವರ್ಷಗಳ ಕಾಲ ನಾನು ಗಾಯದಿಂದ ಹಲವು ಶಸ್ತ್ರಚಿಕಿತ್ಸೆಗೆ ಒಳಗಾದೆ. ಇನ್ನು ನನ್ನ ದೇಹಕ್ಕೆ ಗಾಯವನ್ನು ಸಹಿಸುವುದು ಕಷ್ಟ ಎನ್ನುವುದು ಅರಿವಿಗೆ ಬಂದು ನನ್ನ ನೆಚ್ಚಿನ ಟೆನಿಸ್ ಬ್ಯಾಟ್ ಅನ್ನು ಬದಿಗಿಡುವ ಸಮಯ ಬಂದಿದೆ. ಇದು ನನ್ನ ಪಾಲಿಗೆ ನಿಸ್ಸಂಶಯವಾಗಿ ಕಠಿಣ ನಿರ್ಧಾರವಾಗಿದೆ. ಆದರೆ ಈ ಜೀವನದಲ್ಲಿ ಪ್ರತಿಯೊಂದಕ್ಕೂ ಪ್ರಾರಂಭ ಮತ್ತು ಅಂತ್ಯವಿದೆ” ಎಂದು ಬರೆದುಕೊಂಡು ನಡಾಲ್ ನಿವೃತ್ತಿ ಪ್ರಕಟಿಸಿದರು.
ಹಸಿರು ಅಂಗಣಕ್ಕೆ ಹೋಲಿಸಿದರೆ ಆವೆಮಣ್ಣಿನ ಗಟ್ಟಿ ಅಂಗಣದಲ್ಲಿ ಆಡುವುದು ತುಸು ಕಷ್ಟ. ಚೆಂಡು ಸುಲಭವಾಗಿ ಪುಟಿದೇಳದೇ ನಿಧಾನಗತಿಯಲ್ಲಿ ಚಿಮ್ಮುವುದರಿಂದ ಆಟಗಾರ ಆ ಲಯಕ್ಕೆ ತನ್ನನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಈ ಮರ್ಮವನ್ನು ಚೆನ್ನಾಗಿ ಅರಿತುಕೊಂಡಿರುವುದೇ ನಡಾಲ್ ಯಶಸ್ಸಿಗೆ ಕಾರಣ. ಅವರು ಒಟ್ಟು 14 ಫ್ರೆಂಚ್ ಓಪನ್ ಕಿರೀಟ ಗೆದ್ದಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಕ್ಲೇ ಕೋರ್ಟ್ ಕಿಂಗ್ ಎಂದು ಕರೆಯುವುದು. ಫ್ರೆಂಚ್ ಓಪನ್ನಲ್ಲಿ 2005ರಲ್ಲಿ ರಫೆಲ್ ನಡಾಲ್ ಕಣಕ್ಕೆ ಇಳಿಯುವುದರೊಂದಿಗೆ ಈ ಟೂರ್ನಿಯಲ್ಲಿ ಸ್ಪೇನ್ ಯುಗ ಅರಂಭವಾಯಿತು.
ಕಳೆದ ತಿಂಗಳು, ನಡಾಲ್ ಲೇವರ್ ಕಪ್ 2024 ರಿಂದ ಹಿಂದೆ ಸರಿದಿದ್ದರು, ಇದು ವೃತ್ತಿಪರರಾಗಿ ಕೋರ್ಟ್ನಲ್ಲಿ ಅವರ ಅಂತಿಮ ಟೂರ್ನಿಯಾಗಿತ್ತು. ಪ್ಯಾರಿಸ್ 2024 ರ ಒಲಂಪಿಕ್ಸ್ ನಂತರ, ನಡಾಲ್ ಅವರು 2024 ಕ್ಕೆ ಲೇವರ್ ಕಪ್ ಅವರ ಮುಂದಿನ ಪಂದ್ಯವೆಂದು ದೃಢಪಡಿಸಿದ್ದರು. ಆದರೆ ಆಡಿರಲಿಲ್ಲ. ನಡಾಲ್ ಋತುವಿನಲ್ಲಿ 12-7 ಪಂದ್ಯಗಳ ದಾಖಲೆಯನ್ನು ಹೊಂದಿದ್ದಾರೆ.