Saturday, 23rd November 2024

KUWJ Conference: ತುಮಕೂರಿನಲ್ಲಿ ನವೆಂಬರ್‌ನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ

KUWJ Conference

ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿರುವ ರಾಜ್ಯ ಪತ್ರಕರ್ತರ ಸಮ್ಮೇಳನ (KUWJ Conference) ಹಾಗೂ ಸುವರ್ಣ ಕರ್ನಾಟಕ ಸಂಭ್ರಮದ ಪ್ರಯುಕ್ತ ನವಂಬರ್ ತಿಂಗಳಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಆಯೋಜನೆ ಮಾಡಲು ನಿರ್ಧಾರ ಕೈಗೊಳ್ಳಲಾಯಿತು.

ತುಮಕೂರು ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ್ ತಗಡೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಸಮ್ಮುಖದಲ್ಲಿ, ಜಿಲ್ಲಾ ಪತ್ರಕರ್ತರ ಸಂಘದ ಚಿ.ನಿ. ಪುರುಷೋತ್ತಮ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಯಿತು.

ಸಭೆಯಲ್ಲಿ ರಾಜ್ಯ ಸಮ್ಮೇಳನ ಅಚ್ಚುಕಟ್ಟಾಗಿ ನಡೆಸಲು ಸಾಧಕ-ಬಾಧಕಗಳನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಯಿತು. ಬಳಿಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಅವರನ್ನು ಭೇಟಿ ಮಾಡಿ ಈ ಸಂಬಂಧ ಚರ್ಚಿಸಲಾಯಿತು. ಈ ವೇಳೆ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಸುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು. ತುಮಕೂರಿನಲ್ಲಿ ನೂತನವಾಗಿ ಕ್ರೀಡಾಂಗಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಪತ್ರಕರ್ತರಿಗೆ ತುಮಕೂರಿನ ಕ್ರೀಡಾಂಗಣ ಪರಿಚಯಿಸುವ ದೃಷ್ಟಿಯಿಂದ ಒಂದು ದಿನದ ಕ್ರೀಡಾಕೂಟವನ್ನು ಸಮ್ಮೇಳನದ ಪೂರ್ವವಾಗಿ ನಡೆಸಲು ಜಿಪಂ ಸಿಇಒ ಜಿ. ಪ್ರಭು ಅವರೊಂದಿಗೆ ಚರ್ಚೆ ನಡೆಸಿ ತೀರ್ಮಾನಿಸಲಾಯಿತು.

ಈ ಸುದ್ದಿಯನ್ನೂ ಓದಿ | World Mental Health Day 2024: ವಿಶ್ವ ಮಾನಸಿಕ ಆರೋಗ್ಯ ದಿನ; ಆಫೀಸ್‌‌ಗಳು ಪ್ರೆಷರ್ ಕುಕ್ಕರ್‌‌ಗಳಾಗದಿರಲಿ!

ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಅವರನ್ನು ಭೇಟಿ ಮಾಡಿ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಮತ್ತು ಕ್ರೀಡಾಕೂಟಕ್ಕೆ ಸಹಕಾರ ಕೋರಲಾಯಿತು. ಬಳಿಕ ಮಹಾತ್ಮ ಗಾಂಧೀ ಕ್ರೀಡಾಂಗಣ ವೀಕ್ಷಿಸಿ ಕ್ರೀಡಾಧಿಕಾರಿಗಳ ಜತೆಗೆ ಚರ್ಚಿಸಲಾಯಿತು.

ದಸರಾ ಹಬ್ಬದ ನಂತರ ಈ ಸಂಬಂಧ ಸಭೆ ನಡೆಸಿ ಅಂತಿಮ‌ ತೀರ್ಮಾನ ಕೈಗೊಳ್ಳಲು ರಾಜ್ಯಧ್ಯಕ್ಷ ಶಿವಾನಂದ್ ತಗಡೂರು ಅವರು ಜಿಲ್ಲಾಧ್ಯಕ್ಷ ಚಿ.ನಿ.‌ಪುರುಷೋತ್ತಮ್ ಅವರಿಗೆ ಸೂಚಿಸಿದರು.

ಈ ಸುದ್ದಿಯನ್ನೂ ಓದಿ | Mysuru Dasara 2024: ಮೈಸೂರು ದಸರೆಗೆ ಹೋದರೆ ಈ ತಿನಿಸುಗಳನ್ನು ಸವಿಯಲು ಮರೆಯಬೇಡಿ!

ಈ ಸಂದರ್ಭದಲ್ಲಿ ಅಖಿಲ‌ ಭಾರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಂ. ಸತೀಶ್, ಸದಸ್ಯರಾದ ಟಿ.ಎನ್. ಮಧುಕರ್, ಅನುಶಾಂತರಾಜ್, ರಾಜ್ಯಮಂಡಳಿ ಸದಸ್ಯರಾದ ಸಿದ್ದಲಿಂಗಸ್ವಾಮಿ, ಜಿಲ್ಲಾಉಪಾಧ್ಯಕ್ಷ ಶಾನ ಪ್ರಸನ್ನಮೂರ್ತಿ, ನಿರ್ದೇಶಕರಾದ ಶಂಕರ್, ರವೀಂದ್ರ, ರೇಣುಕಾ ಪ್ರಸಾದ್ ಸೇರಿದಂತೆ ಮತ್ತಿತರರು ಇದ್ದರು.