Wednesday, 23rd October 2024

Vishweshwar Bhat Column: ಹೀಗಿದ್ದರು ರತನ್‌ ಟಾಟಾ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿದ್ದ, ರಾಷ್ಟ್ರದ ಹೆಮ್ಮೆಯ ಉದ್ಯಮಿ ರತನ್ ನವಲ್ ಟಾಟಾ ನಿಧನಕ್ಕೆ ಜಗತ್ತಿನಾದ್ಯಂತ ಶೋಕ ಸಂದೇಶಗಳು ಹರಿದು ಬಂದಿರುತ್ತಿವೆ. ನಮ್ಮ ದೇಶದಲ್ಲಿ ಶ್ರೀಮಂತ ಉದ್ಯಮಿಗಳನ್ನು ಖಳನಾಯಕನಂತೆ ನೋಡುವ ಅಭ್ಯಾಸವಿದೆ. ಅವರನ್ನು ’ಬಂಡವಾಳಶಾಹಿಗಳು’ ಎಂದು ಜರೆಯುತ್ತಾರೆ. ಆದರೆ ರತನ್ ಟಾಟಾ ವಿಷಯದಲ್ಲಿ ಈ ಯಾವ ಹೀಗಳಿಕೆ, ಮೂದಲಿಕೆಗಳು ಅವರ ನಿಧನದ ಬಳಿಕ ಅಲ್ಲ, ಅವರು ಬದುಕಿರುವಾಗಲೂ ಕೇಳಿ ಬಂದಿರಲಿಲ್ಲ.

ಒಂದು ಆದರ್ಶ ಸಿದ್ಧಾಂತಕ್ಕೆ ಕಟಿಬದ್ಧವಾಗಿ, ಮೌಲ್ಯಗಳನ್ನು ಇಟ್ಟುಕೊಂಡು ಭಾರತದಂಥ ದೇಶದಲ್ಲಿ ಬಿಜಿನೆಸ್ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟ ಟಾಟಾ ಸಂಸ್ಥೆಯ ಭವ್ಯ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸಿ ದವರು ರತನ್ ಟಾಟಾ.

ಉದ್ಯಮಿಗಳೆಂದರೆ ’ರಾಜಕಾರಣಿಗಳ ಹಣದ ಥೈಲಿಗಳು’ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ನೆಲೆಸಿರುವ ದಿನಗಳಲ್ಲಿ ಉತ್ತಮ ಸಿದ್ಧಾಂತಗಳನ್ನು ಪ್ರತಿಪಾದಿಸುವ ಮೂಲಕವೂ ಬಿಜಿನೆಸ್ ಮಾಡಿ ಯಶಸ್ವಿಯಾಗಬಹುದು ಎಂಬುದನ್ನು ಟಾಟಾ ಸಾಬೀತುಪಡಿಸಿದವರು. ಸಾಮಾನ್ಯವಾಗಿ ಯಾವುದೇ ಹೊಸ ಉದ್ಯಮ ಆರಂಭಿಸುವಾಗ, ಪರವಾನಿಗಿ, ಭೂಮಿ ಮತ್ತು ಇನ್ನಿತರ ಸವಲತ್ತುಗಳನ್ನು ಪಡೆಯಲು ಉದ್ಯಮಿಗಳಿಂದ ರಾಜಕಾರಣಿಗಳು ’ಮಾಮೂಲು’ ನಿರೀಕ್ಷಿಸುತ್ತಾರೆ.

ಆದರೆ ಈ ವಿಷಯದಲ್ಲಿ ರತನ್ ಟಾಟಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ’ಮಾಮೂಲು’ ಕೊಡುವುದನ್ನೂ ನಿಲ್ಲಿಸಿಬಿಟ್ಟರು. ಟಾಟಾ ಸಂಸ್ಥೆ ತಮ್ಮ ರಾಜ್ಯದಲ್ಲಿ ಬಂದು ಬಂಡವಾಳ ಹೂಡುವುದು ತಮಗೆ ಲಾಭವೆಂದು ಭಾವಿಸಿ ಅವರು ಕೇಳಿದ ಎಲ್ಲ ಸವಲತ್ತುಗಳನ್ನೂ ರಾಜಕಾರಣಿಗಳು ಒದಗಿಸಿಕೊಡುತ್ತಿದ್ದರು. ಟಾಟಾ ಸಂಸ್ಥೆ ಉದ್ಯಮ ಆರಂಭಿಸುವುದು ಯಾವುದೇ ರಾಜ್ಯಕ್ಕೆ ಪ್ರತಿಷ್ಠೆಯ ವಿಷಯವಾಗಿತ್ತು. ಟಾಟಾ ಎಂದೂ ತಮ್ಮ ರಾಜಕೀಯ ನಿಲುವನ್ನು ಸಾರ್ವಜನಿಕವಾಗಿ ಪ್ರಕಟಪಡಿಸಿದವರಲ್ಲ. ಹಾಗೆಂದು ಅವರಿಗೆ ಎಲ್ಲ ರಾಜಕೀಯ ಪಕ್ಷಗಳಲ್ಲೂ
ಸ್ನೇಹಿತರಿದ್ದರು. ರಾಜಕಾರಣಿಗಳ ಸಖ್ಯ ಬಯಸಲು ಉದ್ಯಮಿಗಳು ಇನ್ನಿಲ್ಲದ ಕಸರತ್ತು ಮಾಡುವುದು ಹೊಸತೇ ನಲ್ಲ. ಆದರೆ ರಾಜಕಾರಣಿಗಳು ರತನ್ ಟಾಟಾ ಸಖ್ಯಕ್ಕಾಗಿ ಹಾತೊರೆಯುತ್ತಿದ್ದರು.

ಹಾಗೆಯೇ ದೇಶದ ಗಣ್ಯ ವ್ಯಕ್ತಿಗಳು ಕೂಡ ರತನ್ ಟಾಟಾ ಸ್ನೇಹ-ಸಾಮೀಪ್ಯ ಬಯಸುತ್ತಿದ್ದರು. ಆ ಮನುಷ್ಯನಲ್ಲಿ ಅಂಥ ಆಕರ್ಷಣೆ ಇತ್ತು. ಟಾಟಾ ಒಂದು ಆದರ್ಶ ಮೌಲ್ಯದ ಸಂಕೇತವಾಗಿದ್ದರು. ಟಾಟಾ ಅವರನ್ನು ಯಾರಾದರೂ ಭೇಟಿ ಮಾಡಬಹುದಿತ್ತು. ಅವರು ನವಉದ್ಯಮಿಗಳ ಜತೆ ಸಾಕಷ್ಟು ಸಮಯ ಕಳೆಯುತ್ತಿದ್ದರು. ನವ ಉದ್ಯಮಿಗಳು ಬಂಡವಾಳ ಅಪೇಕ್ಷಿಸಿದರೆ, ರತನ್ ಟಾಟಾ ಆ ಉದ್ಯಮದ ಬೇಕು-ಬೇಡಗಳನ್ನು ನೋಡಿ, ಬಂಡವಾಳ ಹೂಡಿ ಪ್ರೋತ್ಸಾಹಿಸುತ್ತಿದ್ದರು. ರತನ್ ಟಾಟಾ ಸಹಾಯ ನಿರೀಕ್ಷಿಸಿ ಯಾರೇ ಅವರನ್ನು ಭೇಟಿ ಮಾಡಿದರೂ, ಖಾಲಿ ಕೈಯಲ್ಲಿ ಕಳಿಸುತ್ತಿರಲಿಲ್ಲ.

ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನಲ್ಲಿರುವ ನರವಿeನ ಕೇಂದ್ರದ ಮುಖ್ಯಸ್ಥರು ರತನ್ ಅವರನ್ನು ಭೇಟಿಯಾಗಿ, ಅಲ್ಜೈಮೈರ್ ಕಾಯಿಲೆಗೆ ಸಂಬಂಧಿಸಿದಂತೆ‌ ಸಂಶೋಧನೆಗೆ ಧನಸಹಾಯ ಬಯಸಿದಾಗ, ಅವರು ವೈಯಕ್ತಿಕವಾಗಿ 75 ಕೋಟಿ ರುಪಾಯಿಗಳನ್ನು ನೀಡಿದ್ದರು. ರತನ್ ಟಾಟಾ ಅವರಿಗೆ ಸಂದರ್ಶನವೊಂದರಲ್ಲಿ, ‘ನಿಮಗೆ ನಿಮ್ಮ ಯಾವ ಗುಣ ಅಥವಾ ಅಭ್ಯಾಸ ಇಷ್ಟವಾಗುತ್ತದೆ ಮತ್ತು ಇಷ್ಟವಾಗುವುದಿಲ್ಲ’ ಎಂದು ಕೇಳಿದಾಗ, ‘ಹಲ್ಲಿನಲ್ಲಿ ಉಗುರು ಕಡಿಯುವುದು’ ಎಂದು ಮುಕ್ತವಾಗಿ ಹೇಳಿದ್ದರು. ‘ನನಗೆ ಉಗುರು ಕಡಿಯದೇ ಯೋಚನೆ ಮಾಡುವುದಕ್ಕೆ ಬರುವುದಿಲ್ಲ. ನನ್ನ ತಲೆಯಲ್ಲಿ ಗಂಭೀರವಾದ ಯೋಚನೆ ಹಾದು ಹೋಗುತ್ತಿದ್ದಂತೆ, ನಾನು ಕೈ ಉಗುರು ಕಡಿಯಲು ಆರಂಭಿಸುತ್ತೇನೆ. ಇದು ಕೆಟ್ಟ ಅಭ್ಯಾಸ ಎಂಬುದು ನನಗೆ ಮನವರಿಕೆ ಆಗಿದೆ. ಆದರೆ ಅದನ್ನು ಬಿಡಲು ಸಾಧ್ಯವಾಗಿಲ್ಲ. ಆದರೆ ಉಗುರು ಕಡಿದ ಬಳಿಕ ಕೈಯನ್ನು ಸ್ವಚ್ಛಗೊಳಿಸಿಕೊಳ್ಳುತ್ತೇನೆ. ಈ ಅಭ್ಯಾಸದಿಂದ ನನಗೆ ಅನುಕೂಲವೇ ಆಗಿದೆ. ನಾನು ಉಗುರು ಕಡಿಯುತ್ತಿದ್ದರೆ, ನನ್ನ ಸ್ವಭಾವ ಗೊತ್ತಿದ್ದವರು ನನ್ನನ್ನು ಡಿಸ್ಟರ್ಬ್ ಮಾಡುವುದಿಲ್ಲ’ ಎಂದು ಉತ್ತರಿಸಿದ್ದರು. ರತನ್ ಟಾಟಾ ನಿಧನಕ್ಕೆ ಜಗತ್ತಿನೆಡೆಗಳಿಂದ ಶೋಕ ಹರಿದು ಬರುತ್ತಿರುವುದು ಅವರ ಮೇರು ವ್ಯಕ್ತಿತ್ವಕ್ಕೆ ನಿದರ್ಶನ.

ಇದನ್ನೂ ಓದಿ: Vishweshwar Bhat Column: ಡೇಲ್‌ ಕಾರ್ನೇಗಿಯ ಮಹಾಕೃತಿ